Friday, 16th November 2018  

Vijayavani

Breaking News

ರಾಜಕೀಯ ಪಕ್ಷಗಳ ಪ್ರಣಾಳಿಕೆ ಪ್ರಹಸನ

Saturday, 05.05.2018, 3:05 AM       No Comments

ಪ್ರಣಾಳಿಕೆ ಆಧರಿಸಿ ಚರ್ಚೆ ನಡೆಯುವ ಪರಂಪರೆ ಕರ್ನಾಟಕದಲ್ಲಿಲ್ಲ. ಚುನಾವಣೆಗೆ ಇನ್ನು ಒಂದುವಾರವಿದೆ, ಎರಡು ವಾರವಿದೆ ಎನ್ನುವಾಗ ಪ್ರಣಾಳಿಕೆ ಬಿಡುಗಡೆ ಮಾಡುವುದು ಇಲ್ಲಿ ರೂಢಿಯಾಗಿದೆ. ನಾಮಪತ್ರ ಸಲ್ಲಿಕೆ ಶುರುವಾಗುವವರೆಗೂ ಅಭ್ಯರ್ಥಿಗಳೇ ಯಾರೆಂದು ನಿರ್ಣಯವಾಗದ ಸ್ಥಿತಿ ಎಲ್ಲ ಪಕ್ಷದಲ್ಲೂ ಇರುವಾಗ ಪ್ರಣಾಳಿಕೆ ಮಹತ್ವ ಪಕ್ಕಕ್ಕೆ ಸರಿಯುತ್ತದೆ.

ಕರ್ನಾಟಕ ವಿಧಾನಸಭೆ ಚುನಾವಣಾ ಕಣದಲ್ಲಿರುವ ಮೂರು ಮುಖ್ಯ ಪಕ್ಷಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಪ್ರಣಾಳಿಕೆಗಳನ್ನು ಜನರ ಮುಂದಿಟ್ಟಿವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಅದು ಮುಂದಿಟ್ಟಿರುವ ಕಾರ್ಯಕ್ರಮ, ಯೋಜನೆ, ನೀತಿ, ಸಿದ್ಧಾಂತ, ವಿಚಾರಕ್ಕಿಂತ ಬೇರೆ ಬೇರೆ ಕಾರಣಗಳಿಗಾಗಿ ಚರ್ಚೆಯ ವಸ್ತುವಾಗಿದೆ. ಇದೀಗ ಬಿಜೆಪಿ, ಕಾಂಗ್ರೆಸ್ ಮಾಡಿಕೊಂಡ ಭಾನಗಡಿಯಿಂದ ಎಚ್ಚೆತ್ತುಕೊಂಡು ಪ್ರಮಾದಮುಕ್ತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ಪ್ರಣಾಳಿಕೆ ಇನ್ನಷ್ಟೆ ಹೊರಬೀಳಬೇಕಿದೆ.

ಚುನಾವಣೆಯಲ್ಲಿ ಪ್ರಣಾಳಿಕೆಯ ಪಾತ್ರವೇನು ಮತ್ತು ಅದಕ್ಕಿರುವ ಮಹತ್ವವಾದರೂ ಏನು…? ಜನರ ಮುಂದಿಡುವ, ಅಧಿಕಾರಕ್ಕೆ ಬಂದಲ್ಲಿ ಅನುಷ್ಠಾನಗೊಳಿಸುವುದಾಗಿ ರಾಜಕೀಯ ಪಕ್ಷಗಳು ಹೇಳುವ ಭರವಸೆಗಳನ್ನು ಜನ ನಂಬುತ್ತಾರಾ…? ಅಸಲಿಗೆ ಪ್ರಣಾಳಿಕೆಯ ಪ್ರತಿ ಮತದಾರರಿಗೆಲ್ಲ ಮುಟ್ಟುತ್ತದಾ…? ಒಂದೊಮ್ಮೆ ಯಾರಿಗಾದರೂ ಆಕಸ್ಮಿಕವಾಗಿ ಸಿಕ್ಕಲ್ಲಿ ಅವರು ಅದನ್ನು ಗಂಭೀರವಾಗಿ ಓದುತ್ತಾರಾ…? ಮತದಾರರು ಪಕ್ಕಕ್ಕಿರಲಿ, ಆಯಾ ರಾಜಕೀಯ ಪಕ್ಷದ ಕಾರ್ಯಕರ್ತ, ಮುಖಂಡರಾದರೂ ತಮ್ಮದೇ ನಾಯಕರು ರೂಪಿಸಿದ ಚುನಾವಣಾ ಭರವಸೆ ಹೊತ್ತ ಹೊತ್ತಿಗೆಯ ಮೇಲೆ ಕಣ್ಣಾಡಿಸುತ್ತಾರಾ…? ಇದಕ್ಕೆಲ್ಲ ಉತ್ತರ, ಇಲ್ಲ ಎಂಬುದೊಂದೇ. ಸ್ವಾತಂತ್ರಾ್ಯನಂತರದಲ್ಲಿ ಮೊದಲ ಪ್ರಣಾಳಿಕೆ ಬಂದುದು ಆ ಹೊತ್ತಿಗೆಲ್ಲ ಅಧಿಕೃತವಾಗಿ ಆಡಳಿತ ಪಕ್ಷ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದ ಕಾಂಗ್ರೆಸ್ ಆಳ್ವಿಕೆಯಲ್ಲಿ. ಇದುವರೆಗೆ ಯಾವುದೇ ಪಕ್ಷವೂ ತಾನಿತ್ತ ಭರವಸೆಗಳನ್ನು ನೂರಕ್ಕೆ ನೂರರಷ್ಟು ಈಡೇರಿಸಿದ ಉದಾಹರಣೆಯಿಲ್ಲ. ಈ ಮಾತಿಗೆ 50-60 ವರ್ಷ ಕಾಲ ದೇಶ, ರಾಜ್ಯಗಳನ್ನು ಆಳಿದ ಕಾಂಗ್ರೆಸ್ ಸಹ ಹೊರತಾಗಿಲ್ಲ.

ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದ ದಿನಗಳಲ್ಲಿ ಕೊಟ್ಟ ಭರವಸೆಗಳಲ್ಲಿ ಅನೇಕವು ಇನ್ನೂ ಪ್ರಣಾಳಿಕೆಯ ಹಾಳೆಗಳ ನಡುವೆಯೇ ಅವಿತುಕೊಂಡಿವೆ ಎನ್ನುವುದನ್ನು ಗಮನಿಸಿದರೆ ಅಧಿಕಾರಕ್ಕೆ ಬಂದ, ಬರಬೇಕೆಂಬ ಹಂಬಲದಲ್ಲಿರುವ ರಾಜಕೀಯ ಪಕ್ಷಗಳ ಒಲವು ನಿಲುವು ಎಷ್ಟು ಎನ್ನುವುದು ಗೊತ್ತಾಗುತ್ತದೆ. ‘ಸರ್ವಜನ ಸುಖಾಯ, ಸರ್ವ ಜನ ಹಿತಾಯ’ ಎಂಬ ಧೋರಣೆ-ಆಶಯ ಕಾಂಗ್ರೆಸ್ ಹೊರಡಿಸಿದ ಮೊದಲ ಪ್ರಣಾಳಿಕೆಯಲ್ಲಿದೆ. ದೇಶದ ಜನ ಸಂಖ್ಯೆ 30-40 ಕೋಟಿ ಇದ್ದ ಸಮಯದಲ್ಲಿ ನೀಡಿದ ಭರವಸೆ ಅದು. ಈಗ 130 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಈ 21ನೇ ಶತಮಾನದಲ್ಲಿ ಎಷ್ಟು ಜನ ಹಿತವಾಗಿದ್ದಾರೆ, ಎಷ್ಟು ಜನ ಸುಖವಾಗಿದ್ದಾರೆ ಎನ್ನುವುದರ ಮೇಲೆ ಪಕ್ಷಿನೋಟ ಬೀರಿದರೆ ರಾಜಕೀಯ ಪಕ್ಷಗಳು ಪ್ರಣಾಳಿಕೆ ಹೆಸರಿನಲ್ಲಿ ಕಟ್ಟಿರುವ ಸುಳ್ಳಿನ ಸಾಮ್ರಾಜ್ಯ ಕಾಣಿಸುತ್ತದೆ.

ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಜ್ಯ ಜನತೆಗೆ ಪ್ರಣಾಳಿಕೆಯ ಮೂಲಕ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಹಸಿವುಮುಕ್ತ ಕರ್ನಾಟಕವೂ ಒಂದು. ಅದರ ಭಾಗವಾಗಿ ಬಂದುದು ಅನ್ನಭಾಗ್ಯ ಯೋಜನೆ. ಅದು ಯಶಸ್ವೀ ಕಾರ್ಯಕ್ರಮ ಎಂಬ ವಿಚಾರದಲ್ಲಿ ಎರಡು ಅಭಿಪ್ರಾಯ ಇರಲಾರದು. ಆದರೆ ಪಕ್ಷ ನೀಡಿದ ಬಹುತೇಕ ಭರವಸೆಗಳು ಗಾಳಿಯಲ್ಲಿ ಹೋದುದನ್ನು ರಾಜ್ಯ ಕಂಡಿದೆ. ಈ ಬಾರಿ ಅದು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತಾಗಿದೆ. ಮತ್ತೊಂದು ವಿಚಾರವೆಂದರೆ, ಪ್ರಣಾಳಿಕೆ ಕನ್ನಡವನ್ನು ಅಕ್ಷರಶಃ ಹರಾಜು ಹಾಕಿದೆ. ಕಾಂಗ್ರೆಸ್ ಸರ್ಕಾರ, ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸುವ ಕಾರ್ಯಕ್ರಮದ ಭಾಗವಾಗಿ ತೆಗೆದುಕೊಂಡ ನಿರ್ಧಾರ ರಾಜ್ಯಕ್ಕೆ ಅದರದೇ ಆದೊಂದು ಪ್ರತ್ಯೇಕ ಧ್ವಜ ಬೇಕೆಂಬ ನಿಲುವು. ಕನ್ನಡ ಭಾಷೆಗೆ ಆದ್ಯತೆ ಕೊಡದೆ ಬಾವುಟ ಹಿಡಿದು ಜೈ ಎಂದರೆ ಬರುವ ಭಾಗ್ಯವಾದರೂ ಏನು…?

ಕವಿಯೂ, ಕಾದಂಬರಿಕಾರರೂ ಆಗಿರುವ ಸರಸ್ವತಿ ಸಮ್ಮಾನ್ ಪುರಸ್ಕೃತ ವೀರಪ್ಪ ಮೊಯಿಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರು. ಅವರ ನೇತೃತ್ವದ ಸಮಿತಿ ಪ್ರಣಾಳಿಕೆ ಸಿದ್ಧಪಡಿಸಿದ್ದು ಇಂಗ್ಲಿಷ್​ನಲ್ಲಿ. ನಂತರದಲ್ಲಿ ಯಾವುದೋ ಕಾಪೋರೇಟ್ ಸಂಸ್ಥೆಗೆ ಅದನ್ನು ಕನ್ನಡಕ್ಕೆ ಭಾಷಾಂತರಿಸಲು ಗುತ್ತಿಗೆ ಕೊಡಲಾಯಿತು. ದೆಹಲಿಯಲ್ಲೋ ಮುಂಬೈಯಲ್ಲೋ ಇರುವ ಆ ಸಂಸ್ಥೆ ಗೂಗಲ್ ಭಾಷಾಂತರ ಸೌಲಭ್ಯ ಪಡೆದಿರಬೇಕೆಂದು ಯಾರೂ ಊಹಿಸಬಹುದು. ಕನ್ನಡದ ಒಂದು ಶಬ್ದವನ್ನು ಹತ್ತು ಸಂದರ್ಭಗಳಲ್ಲಿ ಹತ್ತು ಅರ್ಥದಲ್ಲಿ ನಾವು ಬಳಸುತ್ತೇವೆ. ಆದರೆ ನಿರ್ಜೀವ, ನಿರ್ಭಾವುಕ ಯಂತ್ರಗಳಿಗೆ ಅದು ಹೇಗೆ ಗೊತ್ತಾಗಬೇಕು…? ಪ್ರಣಾಳಿಕೆ ಬಿಡುಗಡೆಯಾದಾಗ ಅದು ಹೇಳ ಹೊರಟಿರುವ ಅಂಶಗಳು ಒತ್ತುವರಿಯಾಗಿ ತಪ್ಪುಗಳೇ ವಿಜೃಂಭಿಸಿತು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳೆಲ್ಲವನ್ನೂ ಈಡೇರಿಸಲು ಸಾಧ್ಯವಾಗದೇ ಇರಬಹುದು. ಆದರೆ ಹೇಳಬೇಕಾದುದನ್ನು ಸ್ವಚ್ಛ ತಿಳಿಗನ್ನಡದಲ್ಲಿ ಹೇಳಲು ಬಾರದೇ…? ಕನ್ನಡಕ್ಕೆ ತರ್ಜುಮೆ ಮಾಡಿದವರು ಪ್ರಣಾಳಿಕೆ ಸಮಿತಿಗೆ ಅದನ್ನು ತೋರಿಸದೇ ಮುದ್ರಣಕ್ಕೆ ಕಳಿಸಿದ್ದರಿಂದ ಭಾನಗಡಿಯಾಯಿತೆಂದು ಸಂದರ್ಶನವೊಂದರಲ್ಲಿ ಮೊಯಿಲಿ ಹೇಳಿದ್ದು ವರದಿಯಾಗಿದೆ.

ಕನ್ನಡದ ಬಹುತೇಕ ಬರಹಗಾರ ಬುದ್ಧಿಜೀವಿಗಳು ಈ ಹೊತ್ತು ಕರ್ನಾಟಕದಲ್ಲಿ ಆಡಳಿತ ಪಕ್ಷದೊಂದಿಗೇ ಇದ್ದಾರೆ. ಕೆಲವು ಬರಹಗಾರರು ಪಕ್ಷದ ಶಾಸಕರೂ ಸಂಸದರೂ ಆಗಿದ್ದಾರೆ. ಅಂಥವರಲ್ಲಿ ಒಬ್ಬಿಬ್ಬರನ್ನಾದರೂ ಸಮಿತಿಗೆ ಹಾಕಿಕೊಂಡಿದ್ದರೆ ಕನ್ನಡದಲ್ಲೇ ಪ್ರಣಾಳಿಕೆ ಸಿದ್ಧಪಡಿಸುವಂತೆ ಕೋರಿ ಜವಾಬ್ದಾರಿ ವಹಿಸಿದ್ದರೆ ಪಕ್ಷ ಇರಿಸುಮುರಿಸಿನಿಂದ ಪಾರಾಗಬಹುದಿತ್ತು. ಪ್ರಣಾಳಿಕೆಯ ಕನ್ನಡ ಪಾಠವನ್ನು ತಾವು ನೋಡುವುದಕ್ಕೆ ಮುನ್ನ ಮುದ್ರಣಕ್ಕೆ ಕಳಿಸಬಾರದೆಂದು ಮೊಯಿಲಿಯವರಾದರೂ ತಾಕೀತು ಮಾಡಬಹುದಿತ್ತು. ಆದರೆ ಆಗಿದ್ದೆಲ್ಲವೂ ಉಲ್ಟಾಪಲ್ಟಾ. ಪ್ರಣಾಳಿಕೆಯನ್ನೇ ಸರಿಯಾಗಿ ಸಿದ್ಧಪಡಿಸಲಾಗದವರು ಎಂಥ ಆಡಳಿತ ಕೊಟ್ಟಾರೆಂಬ ಮೂದಲಿಕೆ ಮಾತನ್ನು ಪಕ್ಷ ಕೇಳಬೇಕಾಗಿ ಬಂದುದಕ್ಕೆ ಖಂಡಿತವಾಗಿಯೂ ವಿರೋಧ ಪಕ್ಷದವರು ಕಾರಣ ಅಲ್ಲ!

ಇದೀಗ ಬಿಜೆಪಿ ಪ್ರಣಾಳಿಕೆ ಹೊರಕ್ಕೆ ಬಂದಿದೆ. ‘ಎಡ ಬದಿಯ ಎತ್ತಿನ ಮೇಲೆ ಬಾರುಕೋಲು ಸರಿದಾಡಿದರೆ ಬಲಗಡೆ ಎತ್ತು ಚುರುಕಾಗುತ್ತದೆ’ ಎಂಬ ಗಾದೆಮಾತು ಕನ್ನಡದಲ್ಲಿದೆ. ಕಾಂಗ್ರೆಸ್ ಪ್ರಣಾಳಿಕೆ ಅಪಹಾಸ್ಯಕ್ಕೆ ಈಡಾದುದು ಕಮಲ ಪಕ್ಷವನ್ನು ಎಚ್ಚರಿಸಿರಬೇಕು. ಬಿಜೆಪಿ ಪ್ರಣಾಳಿಕೆ ನಗೆಪಾಟಲಿಗೆ ಈಡಾಗದೇ ಇರುವುದಕ್ಕೆ ಆ ಎಚ್ಚರಿಕೆ ಕೆಲಸ ಮಾಡಿದ್ದು ಕಾರಣ ಎಂದು ಊಹಿಸಬಹುದು. ಬಲ್ಲ ಮೂಲಗಳು ನೀಡುವ ಮಾಹಿತಿಯ ರೀತ್ಯ ಬಿಜೆಪಿಯೂ ಇಂಗ್ಲಿಷಿನಲ್ಲೇ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಕನ್ನಡ ಅನುವಾದಕ್ಕೆ ದೆಹಲಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡುವ ಸಿದ್ಧತೆ ನಡೆಸಿತ್ತು. ಯಾವಾಗ ಕಾಂಗ್ರೆಸ್ ಪ್ರಣಾಳಿಕೆ ಧೂಳನ್ನೆಬ್ಬಿಸಿತೋ ಎಚ್ಚೆತ್ತು ಕಣ್ಣೊರೆಸಿಕೊಂಡ ಬಿಜೆಪಿ, ಸ್ಥಳೀಯವಾಗೇ ಅನುವಾದಕ್ಕೆ ಆದ್ಯತೆ ಕೊಟ್ಟು ಸಂಭಾವ್ಯ ಮುಖಭಂಗದಿಂದ ಪಾರಾಯಿತು. ಈ ಎರಡೂ ಪಕ್ಷಗಳು ದೆಹಲಿ ನಿಯಂತ್ರಿತ. ಅಂದಮಾತ್ರಕ್ಕೆ ಶುದ್ಧ ಕನ್ನಡಕ್ಕೆ ಆದ್ಯತೆ ಕೊಡಬಾರದೆಂಬ ನಿಯಮವೆಲ್ಲಿದೆ? ಕರ್ನಾಟಕದಲ್ಲಿ ಪ್ರಚಾರಕ್ಕೆ ಬರುವ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದ ಆರಂಭಕ್ಕೆ ಕನ್ನಡವನ್ನು ಬಳಸಿಕೊಳ್ಳುತ್ತಾರೆ. ಅದು ಜನರನ್ನು ಯಾವ್ಯಾವ ಕಾರಣಕ್ಕೆ ರಂಜಿಸುತ್ತದೆನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು ಶುರುವಾದುದು ಇಂದಿರಾ ಗಾಂಧಿ ಜಮಾನಾದಲ್ಲಿ. ರಾಜ್ಯಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಭಾಷೆಯಲ್ಲೇ ಸಭಿಕರನ್ನು ಒಲಿಸಿಕೊಳ್ಳುವ ತಂತ್ರವಾಗಿ ರೂಪುಗೊಂಡ ಕ್ರಮ ಇದು. ಇದೀಗ ಹಳೆಯ ಸವಕಲು ತಂತ್ರವಾಗಿದೆ. ಆ ಕ್ಷಣದಲ್ಲಿ ಜನ ಒಂದಿಷ್ಟು ಚಪ್ಪಾಳೆ ಹೊಡೆದು, ಶಿಳ್ಳೆ, ಕೇಕೆ ಹಾಕಬಹುದು. ಅದರಿಂದಾಚೆಗೆ…?

2013ಕ್ಕಿಂತ ಮೊದಲು ಐದು ವರ್ಷ ಬಿಜೆಪಿ ಆಡಳಿತವಿತ್ತಲ್ಲ. ಆ ಚುನಾವಣೆಯಲ್ಲಿ ಆ ಪಕ್ಷ ನೀಡಿದ ಭರವಸೆಗಳಲ್ಲಿ ಎಷ್ಟು ಕಾರ್ಯಕ್ರಮವಾಗಿ ಅನುಷ್ಠಾನಗೊಂಡವು ಎಂದು ಕೇಳಿದರೆ ತೊಂಭತ್ತು ಅಂಕ ಪಡೆಯುವ ಉತ್ತರ ಬರುವುದಿಲ್ಲ. ಹಾಗಂತ ಆ ಭರವಸೆಗಳು ಅರ್ಥಹೀನವಾಗಿರಲಿಲ್ಲ. ಅವುಗಳಲ್ಲಿ ಅನೇಕವು ಇನ್ನೂ ಅಮಲಿಗೆ ಬಂದಿಲ್ಲ. ಕಾಂಗ್ರೆಸ್ ಅವುಗಳನ್ನು ರಾಜಕೀಯ ಕಾರಣಕ್ಕಾಗಿ ಪಕ್ಕಕ್ಕೆ ಸರಿಸಿತು. ಈಗ ಪುನಃ ಬಿಜೆಪಿ ಅವುಗಳನ್ನು ಕೈಗೆತ್ತಿಕೊಳ್ಳಬೇಕಿತ್ತು. ಅಂದು ಜನಕ್ಕೆ ನೀಡಿದ ಭರವಸೆಗಳಿಗೆ ಪಕ್ಷ ಇಂದಿಗೂ ಬದ್ಧ ಎಂಬ ಸಂದೇಶವನ್ನು ರವಾನಿಸಬಹುದಾಗಿತ್ತು. ಅದೇಕೋ, ಬಿಜೆಪಿ ಪ್ರಣಾಳಿಕೆ ಸಮಿತಿ ಅತ್ತ ಅಷ್ಟಾಗಿ ಗಮನ ಹರಿಸಿದಂತಿಲ್ಲ. ಅಷ್ಟೆಲ್ಲ ತಪ್ಪುಗಳು ಇಲ್ಲ ಎಂಬುದಷ್ಟೇ ಅದರ ಅಗ್ಗಳಿಕೆಯಾಗಿರುವಂತಿದೆ.

ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿ ಎದ್ದು ಕಾಣಿಸುವ ಸಂಗತಿಯೊಂದನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನ್ನಿಸಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಪುಟ್ಟಣ್ಣಯ್ಯನವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿದೆ. ಉಳಿದ 223 ಕ್ಷೇತ್ರಗಳಲ್ಲಿ 15 ಮುಸ್ಲಿಂ ಅಭ್ಯರ್ಥಿಗಳನ್ನು ಅಲ್ಲಲ್ಲಿ ಕಣಕ್ಕಿಳಿಸಿದೆ. ಆದರೆ ಬಿಜೆಪಿಯ ಪಟ್ಟಿಯಲ್ಲಿ ಒಬ್ಬರೂ ಮುಸ್ಲಿಂ ಇಲ್ಲ. ಇದಕ್ಕೂ ಪ್ರಣಾಳಿಕೆಗೂ ಏನು ಸಂಬಂಧ ಎಂದು ಕೇಳಬಹುದು. ವಕ್ಪ್ ಆಸ್ತಿಯನ್ನು ರಾಜ್ಯದ ಉದ್ದಗಲಕ್ಕೆ ಪ್ರಭಾವಿಗಳು ಅತಿಕ್ರಮಿಸಿರುವ ವಿಚಾರವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ. ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸಮಿತಿ ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಕೊಟ್ಟಿರುವ ವರದಿಯ ರೀತ್ಯ 2.40 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ವಕ್ಪ್ ಆಸ್ತಿ ಅತಿಕ್ರಮಕ್ಕೆ ಒಳಗಾಗಿದೆ. ವರದಿ ಆಧರಿಸಿ, ಬಡ ಮುಸ್ಲಿಮರಿಗೆ ನ್ಯಾಯ ದೊರಕಿಸುವ ಭರವಸೆಯನ್ನು ಕಾಂಗ್ರೆಸ್ ನೀಡಬಹುದಾಗಿತ್ತು. ಯಾವ ಪ್ರಭಾವ ತಡೆಯಿತೋ, ಗೊತ್ತಿಲ್ಲ.

ಮುಸ್ಲಿಂವಿರೋಧಿ ಎಂಬ ಹಣೆಪಟ್ಟಿಗೆ ಒಳಗಾಗಿರುವ ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ, ನಿಜ. ಆದರೆ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಗಂಭೀರವಾಗಿ ಪರಿಗಣಿಸುವ ಭರವಸೆಯನ್ನು ಅದು ನೀಡಿದೆ. ಅಕ್ರಮ ಸ್ವಾಧೀನಕ್ಕೆ ಒಳಗಾಗಿರುವ ವಕ್ಪ್ ಆಸ್ತಿಯನ್ನು ಮರಳಿ ವಶಕ್ಕೆ ಪಡೆದು ವಕ್ಪ್ ಮಂಡಳಿ ವಶಕ್ಕೆ ಅದನ್ನೆಲ್ಲ ಒಪ್ಪಿಸುವ ಆಶ್ವಾಸನೆ ಬಿಜೆಪಿ ಪ್ರಣಾಳಿಕೆಯಲ್ಲಿದೆ. ಮುಸ್ಲಿಂ ಸಮುದಾಯಕ್ಕೆ ಈ ಎರಡರಲ್ಲಿ ಯಾವುದು ಹಿತವೆನ್ನಿಸುತ್ತದೋ ಗೊತ್ತಿಲ್ಲ. ಪ್ರಣಾಳಿಕೆ ಆಧರಿಸಿ ಚರ್ಚೆ ನಡೆಯುವ ಸತ್ಪರಂಪರೆ ಕರ್ನಾಟಕದಲ್ಲಿಲ್ಲ. ಚುನಾವಣೆಗೆ ಇನ್ನು ಒಂದುವಾರವಿದೆ, ಎರಡು ವಾರವಿದೆ ಎನ್ನುವಾಗ ಮಾಧ್ಯಮದವರನ್ನು ಮುಂದಿಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡುವುದು ಇಲ್ಲಿ ಪರಂಪರೆಯಾಗಿದೆ. ನಾಮಪತ್ರ ಸಲ್ಲಿಕೆ ಶುರುವಾಗುವವರೆಗೂ ಅಭ್ಯರ್ಥಿಗಳೇ ಯಾರೆಂದು ನಿರ್ಣಯವಾಗದ ಸ್ಥಿತಿ ಎಲ್ಲ ಪಕ್ಷದಲ್ಲೂ ಇರುವಾಗ ಪ್ರಣಾಳಿಕೆ ಮಹತ್ವ ಪಕ್ಕಕ್ಕೆ ಸರಿಯುತ್ತದೆ. ಚುನಾವಣೆ ಸಮಯದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಬೇಕೆನ್ನುವ ರಾಜಕೀಯ ಪಕ್ಷಗಳ ನಿಲುವು ‘ಕಟಕಟೆ ದೇವರಿಗೆ ಮರದ ಜಾಗಟೆ’ ಎಂಬ ಗಾದೆಯನ್ನು ನೆನಪಿಗೆ ತರುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top