Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ನಾಡಧ್ವಜದ ನಾನಾ ಆಯಾಮಗಳ ಕುರಿತು…

Saturday, 10.03.2018, 3:05 AM       No Comments

ರಾಜ್ಯ ಸರ್ಕಾರದ ಮನವಿ ಒಪ್ಪಿಕೊಳ್ಳುವ ಮೊದಲು ಕೆಲವು ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕಾಗುತ್ತದೆ. ಅದೆಲ್ಲವನ್ನೂ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಬೇಕು. ಇವಿಷ್ಟೇ ಅಲ್ಲದೆ ಇನ್ನೂ ಕೆಲವು ಅಗತ್ಯ ಪೂರೈಸಬೇಕಾಗುತ್ತದೆ. ಆ ಹೊತ್ತಿಗೆ ವರ್ಷಗಳೇ ಉರುಳಿ ಹೋಗಿರುತ್ತದೆ.

|ಎಂ.ಕೆ.ಭಾಸ್ಕರ ರಾವ್ 

ಈ ಸಲದ ಚುನಾವಣಾ ಅಜೆಂಡಾದಲ್ಲಿ ಬಹಳ ಪ್ರಮುಖವೆಂದು ಆಡಳಿತಾರೂಢ ಕಾಂಗ್ರೆಸ್ ಭಾವಿಸಿರುವ ಅಂಶಗಳಲ್ಲಿ ಬಹಳ ಮುಖ್ಯವಾದುದು ಕನ್ನಡ ಧ್ವಜ. ಕನ್ನಡಿಗರ ಅಸ್ಮಿತೆಯಾಗಿ ಕರ್ನಾಟಕಕ್ಕೆ ತನ್ನದೇ ಆದೊಂದು ಪ್ರತ್ಯೇಕ ಧ್ವಜ ಬೇಕೆಂಬ ಚೆಂಡನ್ನು ದೆಹಲಿಯಲ್ಲಿರುವ ಎನ್​ಡಿಎ ಸರ್ಕಾರದ ಅಂಗಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವಾನಿಸಿದ್ದು, ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದಾರೆ. ಒಂದೆರಡು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಅಗತ್ಯವೆನಿಸಿರುವ ಕತ್ತಿ ಗುರಾಣಿ ಮುಂತಾದ ಸಲಕರಣೆಗಳನ್ನು ಸಂಗ್ರಹಿಸುವುದಕ್ಕೆ ಏನೆಲ್ಲ ಬೇಕೋ ಆ ಎಲ್ಲ ಕಾರ್ಯಕ್ರಮಗಳನ್ನು ಒಂದೊಂದಾಗಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅದರಲ್ಲಿ ದೂರಗಾಮಿ ಪರಿಣಾಮ ಬೀರುವ ಸವಾಲುಗಳಲ್ಲಿ ಕನ್ನಡ ಧ್ವಜಕ್ಕೆ ಮನ್ನಣೆ ಪಡೆಯುವ ವಿಚಾರ ಸಹಜವಾಗಿಯೇ ಮುಂಚೂಣಿಯಲ್ಲಿದೆ.

ಕನ್ನಡ ಧ್ವಜ ಹೇಗಿರಬೇಕು, ಅದರ ವರ್ಣ ವಿನ್ಯಾಸ ಯಾವ ಸ್ವರೂಪದ್ದಾಗಿರಬೇಕು ಎಂಬಿತ್ಯಾದಿ ಅಂಶಗಳನ್ನು ಪರಿಶೀಲಿಸಲೆಂದೇ ಸರ್ಕಾರ ರಚಿಸಿದ್ದ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಕೊಟ್ಟು, ಸರ್ಕಾರ ಅದನ್ನು ಒಪ್ಪಿಕೊಂಡೂ ಆಗಿದೆ. ಅದಕ್ಕೆ ಮನ್ನಣೆ ಸಿಗಬೇಕಿರುವುದು ಕೇಂದ್ರ ಸರ್ಕಾರದಿಂದ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನ್ನಣೆ ಪಡೆಯಲು ಯತ್ನಿಸುವ ಮಾತನ್ನು ಮುಖ್ಯಮಂತ್ರಿ ಆಡಿದ್ದಾರೆ. ಪತ್ರ ಇಷ್ಟರಲ್ಲೇ ರವಾನೆಯಾಗುತ್ತದೆ, ಇದರಲ್ಲಿ ಯಾರಿಗೂ ಅನುಮಾನವಿಲ್ಲ. ಬಯಸಿರುವ ಮಾನ್ಯತೆ ಕೇಂದ್ರ ಸರ್ಕಾರದಿಂದ ಸಿಗಲಿದೆಯೇ ಎಂಬ ವಿಚಾರವಾಗಿ ಮಾತ್ರ ಎಲ್ಲರಲ್ಲೂ ಅನುಮಾನವಿದೆ.

ಜಮ್ಮು-ಕಾಶ್ಮೀರ ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲೂ ಅದರದೇ ಆದ ಧ್ವಜವಿಲ್ಲ. ಬೇರೆ ಯಾವುದೇ ರಾಜ್ಯ ಇಂಥ ಬೇಡಿಕೆ ಮಂಡಿಸಿದ್ದರೆ ಅಧಿಕೃತವಾಗಿ ಅದು ಗೊತ್ತಿಲ್ಲ. ಯಾವುದೇ ರಾಜ್ಯಕ್ಕೆ ಅದರದೇ ಆದೊಂದು ಪ್ರತ್ಯೇಕ ಧ್ವಜ ಇರಬಾರದೆಂದು ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ ಎಂಬ ಮಾತು ಕನ್ನಡ ಧ್ವಜಕ್ಕೆ ಆಗ್ರಹಪಡಿಸುತ್ತಿರುವ ವಲಯದಿಂದ ಕೇಳಿಬರುತ್ತಿದೆ. ಸ್ವತಃ ಮುಖ್ಯಮಂತ್ರಿಯೂ ಸಂವಿಧಾನವನ್ನು ಉಲ್ಲೇಖಿಸಿದ್ದಾರೆ. ಆದರೆ ಇಂಥ ಬೇಡಿಕೆ ರಾಜ್ಯವೊಂದರಿಂದ ಬಂದ ಮಾತ್ರಕ್ಕೆ ಅದಕ್ಕೆ ಮಾನ್ಯತೆ ನೀಡಬೇಕೆಂಬ ಸೂಚನೆಯೂ ಸಂವಿಧಾನದಲ್ಲಿಲ್ಲ. ಹಾಗಾಗಿ ಇದು ಸಂವೈಧಾನಿಕವಾದ ಪ್ರಶ್ನೆಗಿಂತ ಹೆಚ್ಚಾಗಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಂಭವವೇ ಹೆಚ್ಚು. ಕನ್ನಡ ಧ್ವಜ ಎನ್ನುವುದು ಕನ್ನಡಿಗರ ಭಾವನೆಗೆ ತೀರಾ ನಿಕಟವಾದುದು. ಧ್ವಜದ ಅಗತ್ಯ ಪ್ರತಿಪಾದಿಸುವವರಿಗೆ ಹೆಚ್ಚು ಆಪ್ತವಾಗುವ; ವಿರೋಧಿಸುವವರು ಅಥವಾ ಪ್ರತ್ಯೇಕ ಧ್ವಜಕ್ಕೆ ಅನುಮತಿ ನಿರಾಕರಿಸುವವರು ಕನ್ನಡ, ಕರ್ನಾಟಕ ವಿರೋಧಿಗಳಾಗಿಬಿಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಸ್ಥಳೀಯ ಕಾಂಗ್ರೆಸ್ ಸರ್ಕಾರ ಸಮಸ್ತ ಕನ್ನಡಿಗರ ಪರವಾಗಿ ಮಾಡಿಕೊಂಡ ಮನವಿಯನ್ನು ಕೇಂದ್ರ ಸರ್ಕಾರ ಒಪ್ಪದೇ ಇದ್ದಲ್ಲಿ ಬಿಜೆಪಿ, ಕರ್ನಾಟಕದಲ್ಲಿ ಜನರ ಆಕ್ರೋಶಕ್ಕೆ ಈಡಾಗುತ್ತದೆಂಬ ಭಾವನೆ ಇದೆ. ರಾಜಕಾರಣಕ್ಕೆ ಇಷ್ಟು ಸಾಲದೆ? ಹಾಗೆಂದೇ ಧ್ವಜ ಹಾರಾಡುವುದಕ್ಕೂ ಮೊದಲೇ ರಾಜಕಾರಣದ ‘ಹಾರಾಟ’ ಶುರುವಾಗಿದೆ.

ಕರ್ನಾಟಕದಲ್ಲಿ ಕನ್ನಡ ಧ್ವಜ ಇಲ್ಲ ಎಂದಲ್ಲ, ಆದರೆ ಅದನ್ನು ಕನ್ನಡ ಬಾವುಟ ಎಂದು ಕರೆಯಲಾಗುತ್ತಿದೆ. ಕನ್ನಡ ಚಳವಳಿ ಬೀಜಾಂಕುರವಾದ ಸಮಯದಲ್ಲಿ ಅಂದಿನ ನೇತಾರರಲ್ಲಿ ಒಬ್ಬರಾಗಿದ್ದ ಮ. ರಾಮಮೂರ್ತಿ ವಿನ್ಯಾಸಗೊಳಿಸಿದ ಹಳದಿ-ಕೆಂಪಿನ ಬಾವುಟ ಕನ್ನಡದ ಅಸ್ಮಿತೆಯ ಸಂಕೇತವಾಗಿ ಉಳಿದುಕೊಂಡು ಬಂದಿದೆ. ಕರ್ನಾಟಕದಲ್ಲಿ ಇಂದು ಸಾವಿರಕ್ಕೂ ಅಧಿಕ ಸಂಖ್ಯೆಯ ಕನ್ನಡಪರ ಸಂಘಟನೆಗಳಿವೆ. ಕೆಲವು ರಾಜ್ಯ ಮಟ್ಟದ ಸಂಘಟನೆಗಳು, ಹಲವು ಜಿಲ್ಲಾ ಮಟ್ಟದವು. ಇನ್ನು ರಾಜ್ಯಮಟ್ಟದ ಸಂಘಟನೆಗಳ ಸ್ಥಳೀಯ ಘಟಕಗಳು. ಇವುಗಳ ನಡುವೆ ಪರಸ್ಪರ ಭಿನ್ನಾಭಿಪ್ರಾಯ, ಕೆಲವು ಸಂಘಟನೆಗಳ ನಡುವೆ ವೈಯಕ್ತಿಕ ದ್ವೇಷ, ವೈಷಮ್ಯವಿರುವುದು ನಿಜ. ಆದರೆ ಅವೆಲ್ಲವೂ ತಮ್ಮ ಲಾಂಛನವಾಗಿ ರಾಮಮೂರ್ತಿ ಪ್ರಣೀತ ಕನ್ನಡ ಬಾವುಟವನ್ನು ತಕರಾರಿಲ್ಲದೆ ಒಪ್ಪಿಕೊಂಡಿವೆ ಎನ್ನುವುದೂ ಅಷ್ಟೇ ನಿಜ. 1965ರಲ್ಲಿ ಹುಟ್ಟಿದ ಕನ್ನಡ ಪಕ್ಷದ ಧ್ವಜವಾಗಿ ಕೆಂಪು-ಹಳದಿ ಕನ್ನಡ ಬಾವುಟ/ಧ್ವಜ ಅಸ್ತಿತ್ವಕ್ಕೆ ಬಂತು. ಆ ಪಕ್ಷ ಬಾಳಲಿಲ್ಲ. ಆದರೆ ಅದರ ಧ್ವಜ ಈ ಹೊತ್ತು ಕನ್ನಡ ಅಸ್ಮಿತೆಯ ಸಂಕೇತವಾಗಿದೆ. ಇದನ್ನೇ ಕನ್ನಡ ಚಳವಳಿಯ ನಾಯಕ ವಾಟಾಳ್ ನಾಗರಾಜ್ ಹೇಳಿದ್ದು. ಕನ್ನಡಿಗರು ಒಪ್ಪಿಕೊಂಡಿರುವ ಕನ್ನಡ ಬಾವುಟವನ್ನೇ ಕನ್ನಡ ಧ್ವಜವಾಗಿ ಅಂಗೀಕರಿಸಬೇಕೆಂದೂ ಅದರಲ್ಲಿ ಯಾವುದೇ ಬದಲಾವಣೆಯನ್ನೂ ತಾವು ಒಪ್ಪಿಕೊಳ್ಳುವುದಿಲ್ಲ ಎಂದೂ ಅವರು ಕಡ್ಡಿಮುರಿದಂತೆ ಹೇಳಿದ ಮಾತಿನ ಮಸಿ ಇನ್ನೂ ಆರಿಲ್ಲ. ವಾಟಾಳ್ ವಾದ ಕೇಳಿಸಿಯೇ ಇಲ್ಲ ಎಂಬಂತೆ ಬೇರೆ ವಿನ್ಯಾಸದ ಬಾವುಟವನ್ನು ಸರ್ಕಾರ ಸರ್ವಾನುಮತದಿಂದ ಒಪ್ಪಿಕೊಂಡಿದೆ. ಈಗಿರುವುದಕ್ಕಿಂತ ಭಿನ್ನವಾದ ಧ್ವಜಕ್ಕೆ ಸರ್ಕಾರ ಮುಂದಾದರೆ ರಾಜ್ಯದಲ್ಲಿ ರಕ್ತಪಾತವಾಗುತ್ತದೆಂಬ ವಾಟಾಳ್​ರ ಧಮ್ಕಿ ಏನಾಗಿದೆಯೋ ಗೊತ್ತಿಲ್ಲ, ಆದರೆ ಅವರು ಈ ಸುದ್ದಿ ಬಂದ ನಂತರದಲ್ಲಿ ತಮ್ಮ ವಿರೋಧವನ್ನು ದಾಖಲು ಮಾಡಿದ್ದಾರೆ.

ಕರ್ನಾಟಕದಲ್ಲಿ ಜನ ಒಪ್ಪಿಕೊಂಡಿದ್ದ ಕನ್ನಡ ಬಾವುಟಕ್ಕೆ ಮನ್ನಣೆ ನೀಡುವ ಕೆಲಸವನ್ನು ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿತ್ತು. ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜದ ಪಕ್ಕದಲ್ಲಿ ಅದಕ್ಕಿಂತ ಕಡಿಮೆ ಎತ್ತರದಲ್ಲಿ ಕನ್ನಡ ಧ್ವಜ ಹಾರಿಸುವ ಆದೇಶವನ್ನು ಅದು ಹೊರಡಿಸಿತ್ತು. ಆದರೆ ಅದರ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಈ ಸಂಬಂಧ ಕೋರ್ಟ್ ವಿವರಣೆಯನ್ನು ಕೇಳಿದ ಬಳಿಕ ಸರ್ಕಾರ ತನ್ನ ಆದೇಶವನ್ನು ಹಿಂತೆಗೆದುಕೊಂಡಿತ್ತು. ಕಾನೂನು ತಜ್ಞರ ಸಲಹೆಯನ್ನು ಪಡೆಯದೆ ಹೊರಡಿಸಿದ ಆದೇಶ, ಸದುದ್ದೇಶದ್ದೇ ಆಗಿದ್ದರೂ ಮಹತ್ವ ಕಳೆದುಕೊಂಡಿತು. ಈಗ ಸಿದ್ದರಾಮಯ್ಯ ಸರ್ಕಾರ, ಆದೇಶ ಹೊರಡಿಸುವ ಹೊಣೆಯನ್ನು ತನ್ನ ಮೈಮೇಲೆ ಹಾಕಿಕೊಂಡಿಲ್ಲ, ಕೇಂದ್ರಕ್ಕೆ ವಹಿಸಿ ಕೈ ತೊಳೆದುಕೊಳ್ಳಲು ಮುಂದಾಗಿದೆ. ಕೇಂದ್ರ ಸರ್ಕಾರವಾದರೂ ಏಕಾಏಕಿ ಈ ಬೇಡಿಕೆಯನ್ನು ಮಾನ್ಯ ಮಾಡಲು ಅವಕಾಶವಿದೆಯೇ…? ಇಲ್ಲ ಎನ್ನುತ್ತಾರೆ ಹಿರಿಯ ಕಾನೂನು ತಜ್ಞ, ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ. ಸಂವಿಧಾನದಲ್ಲಿ ಪ್ರತ್ಯೇಕ ಧ್ವಜ ಬೇಡ ಎಂದು ಹೇಳಿಲ್ಲ ಎನ್ನುವ ವಾದ ಸರಿ, ಆದರೆ ಅದೇ ಸಂವಿಧಾನದ ಅಡಿಯಲ್ಲಿ ಅಸ್ತಿತ್ವಪಡೆದಿರುವ ಧ್ವಜ ಸಂಹಿತೆ ಎನ್ನುವುದೊಂದಿದೆಯಲ್ಲ, ಅದು ಏನು ಹೇಳುತ್ತದೆ…? ಇದೆನ್ನೆಲ್ಲ ಸರ್ಕಾರ ರಚಿಸಿದ್ದ ಸಮಿತಿ ಕೂಲಂಕಷವಾಗಿ ಪರಿಶೀಲಿಸಿರುವ ಸಾಧ್ಯತೆ ಇದೆ. ಆದರೆ ಅದ್ಯಾವುದೂ ಸಾರ್ವಜನಿಕವಾಗಿಲ್ಲ. ಹಾಗಾಗಿ ಗೊಂದಲ ಉಳಿದುಕೊಂಡಿದೆ.

ರಾಜ್ಯ ಸರ್ಕಾರದ ಮನವಿ ಒಪ್ಪಿಕೊಳ್ಳುವ ಮೊದಲು ಕೆಲವು ನಿಯಮಗಳನ್ನು ಕೇಂದ್ರ ಸರ್ಕಾರ ಪರಿಪಾಲಿಸಬೇಕಾಗುತ್ತದೆ. ಒಂದು ವೇಳೆ ಕರ್ನಾಟಕ ಸರ್ಕಾರದ ಕೋರಿಕೆಯನ್ನು ಅದು ಒಪ್ಪಿಕೊಂಡರೂ ಒಂದು ಮುಹೂರ್ತದಲ್ಲಿ ಸರ್ಕಾರಿ ಆದೇಶ ಹೊರಡಿಸಿ ಕೋರಿಕೆಯನ್ನು ಮಾನ್ಯ ಮಾಡಲು ಅವಕಾಶವಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಈ ಬೇಡಿಕೆ ಚರ್ಚೆ ಆಗಬೇಕು; ಸಂವಿಧಾನ/ ಕಾನೂನು ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು; ಅವರ ಸಲಹೆ ಆಧರಿಸಿ ಪ್ರತ್ಯೇಕ ಧ್ವಜದ ಸಾಧಕ ಬಾಧಕ ವಿಶ್ಲೇಷಣೆ ಆಗಬೇಕು; ಅದಕ್ಕಾಗಿ ಸಂಪುಟ ಉಪ ಸಮಿತಿ ರಚನೆಯಾಗಬೇಕು; ಆ ಸಮಿತಿ ನಾಲ್ಕಾರು ಬಾರಿಯಾದರೂ ಸಭೆ

ಸೇರಿ ಚಿಂತನ ಮಂಥನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು; ಬೇರೆ ಯಾವುದಾದರೂ ರಾಜ್ಯ ಇಂಥ ಧ್ವಜದ ಬೇಡಿಕೆಯನ್ನು ಮಂಡಿಸಿದೆಯೇ ಅಥವಾ ಮಂಡಿಸುವ ಸಂಭಾವ್ಯವಿದೆಯೇ ಎನ್ನುವುದರ ಪರಾಮರ್ಶೆ

ಆಗಬೇಕು; ಅದೆಲ್ಲವನ್ನೂ ಪರಿಗಣಿಸಿ ಒಂದು ನಿರ್ಧಾರಕ್ಕೆ ಸರ್ಕಾರ ಬರಬೇಕು. ಸರ್ಕಾರ ಈ ಸಂಬಂಧದಲ್ಲಿ ಒಪ್ಪಿದ ನಂತರ ಆ ಆದೇಶಕ್ಕೆ ರಾಷ್ಟ್ರಪತಿ ಸಹಿ ಹಾಕಬೇಕು. ಇವಿಷ್ಟೇ ಅಲ್ಲದೆ ಇನ್ನೂ ಕೆಲವು ಅಗತ್ಯ ಪೂರೈಸಬೇಕಾಗುತ್ತದೆ. ಸಿದ್ದರಾಮಯ್ಯನವರು ಇಂದೇ ಪತ್ರ ಬರೆದರೂ ಈ ಎಲ್ಲ ನಿಯಮ ಪೂರೈಸುವ ಹೊತ್ತಿಗೆ ವರ್ಷಗಳೇ ಉರುಳಿ ಹೋಗಿರುತ್ತದೆ. ಇಷ್ಟಕ್ಕೂ ಪ್ರತ್ಯೇಕ ಧ್ವಜ ಎನ್ನುವುದು ಸರ್ಕಾರಗಳ ಆದ್ಯತೆ ಅಲ್ಲವೇ ಅಲ್ಲ.

ಕರ್ನಾಟಕದಲ್ಲಿ ಕನ್ನಡ ತನ್ನ ಬಲವನ್ನು ಕಳೆದುಕೊಳ್ಳುತ್ತಿದೆ. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಒಂದೊಂದಾಗಿ ಮುಚ್ಚುವ ಕೆಲಸ ಸರ್ಕಾರದಿಂದಲೇ ನಡೆಯುತ್ತಿದೆ. ಆಯಾ ರಾಜ್ಯದಲ್ಲಿ ಆಯಾ ಭಾಷೆಯೇ ಶಿಕ್ಷಣ ಮಾಧ್ಯಮವಾಗುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲವಾದ್ದರಿಂದ ತಿದ್ದುಪಡಿ ತರಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳಲ್ಲಿ ಯಾವುದೂ ನಿರೀಕ್ಷಿತ ಫಲ ನೀಡಿಲ್ಲ. ಕಳೆದ ವರ್ಷ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ್ದ ಸಿದ್ದರಾಮಯ್ಯ, ಇತರ ಸಮಾನ ಮನಸ್ಕ ರಾಜ್ಯಗಳೊಂದಿಗೆ ಸೇರಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದಿದ್ದರು. ಅದರ ನಂತರದ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು. ರಾಯಚೂರಿನಲ್ಲಿ ಆಡಿದ ಮಾತು ಹಾಗೇ ಹೋಯಿತು. ಈಗ ಕನ್ನಡಕ್ಕೆ ಪ್ರತ್ಯೇಕ ಧ್ವಜ ಕೊಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೊರಟಿದ್ದಾರೆ. ಆದರೆ ಅಷ್ಟು ಸುಲಭವಲ್ಲವಾದ್ದರಿಂದ ಕ್ರಮೇಣ ರಾಜಕೀಯ ಆವರಿಸುತ್ತದೆ. ‘ನಾವು ಪತ್ರ ಬರೆದಿದ್ದೇವೆ, ಕೇಂದ್ರ ಸರ್ಕಾರ ಪ್ರತಿಕ್ರಿಯಿಸುತ್ತಿಲ್ಲ’ ಎಂದು ಚುನಾವಣಾ ಭಾಷಣಗಳಲ್ಲಿ ಹೇಳುತ್ತಾರೆ. ಅತ್ತ ಬಿಜೆಪಿ ಇಕ್ಕಟ್ಟಿನಲ್ಲಿ ಸಿಕ್ಕಿದೆ. ಅಷ್ಟರಮಟ್ಟಿಗೆ ಸಿದ್ದರಾಮಯ್ಯ ಬಿಜೆಪಿಯನ್ನು ರಾಜಕೀಯವಾಗಿ ಒಂದೆರಡು ಹೆಜ್ಜೆ ಹಿಂದಕ್ಕೆ ಹಾಕಿದ್ದಾರೆ. ಇನ್ನು ಸಾಮಾನ್ಯ ಜನರ ದೃಷ್ಟಿಯಿಂದ ಹೇಳುವುದಾದರೆ ನಾವು ‘ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ಯ ಮಕ್ಕಳು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top