ಪ್ರಹಸನವಾಗದಿರಲಿ ಪರಿಷತ್ ನಾಮಕರಣ

ಸಾಂಸ್ಕೃತಿಕ ಕ್ಷೇತ್ರದವರ ಅನುಭವವನ್ನು ಆಡಳಿತದಲ್ಲಿ ಬಳಸಿಕೊಳ್ಳುವುದು ಹಾಗೂ ಅದೊಂದು ಗೌರವ ತರುವ ಕ್ರಮ ಎಂಬ ನೆಲೆಯಲ್ಲಿ ನಾಮಕರಣ ಪದ್ಧತಿ ಜಾರಿಗೆ ಬಂತು. ಅನೇಕರ ನಾಮಕರಣ ಈ ಆದರ್ಶಕ್ಕೆ ಅನುಗುಣವಾಗಿ ಇದ್ದುದು ಹೌದಾದರೂ, ಕ್ರಮೇಣ ಇಲ್ಲೂ ರಾಜಕಾರಣದ ಸೋಂಕು ತಗುಲಿರುವುದು ವಿಪರ್ಯಾಸ.

| ಎಂ.ಕೆ. ಭಾಸ್ಕರ ರಾವ್

ವಿಧಾನಪರಿಷತ್ತಿಗೆ ನಾಮಕರಣ ಎಂಬ ಹೆಸರಿನಲ್ಲಿ ನಡೆಯುವ ಪ್ರಹಸನವನ್ನು ಜನ ಇನ್ನೆಷ್ಟು ಕಾಲ ನೋಡಬೇಕೋ ಗೊತ್ತಿಲ್ಲ. ಕರ್ನಾಟಕದ ವಿಧಾನಪರಿಷತ್ 75 ಸದಸ್ಯ ಬಲದ ಸದನ. ಇದರಲ್ಲಿ ನಾಮಕರಣದ ಮೂಲಕ ಭರ್ತಿಮಾಡಲು ಅವಕಾಶವಿರುವುದು 11 ಸ್ಥಾನಕ್ಕೆ ಮಾತ್ರ. ಈ ಸ್ಥಾನಗಳಿಗೆ ನಿರ್ದಿಷ್ಟ ಅರ್ಹತೆಯುಳ್ಳ ವರನ್ನು ಮಾತ್ರವೇ ನಾಮಕರಣ ಮಾಡಬೇಕೆಂಬ ನಿಯಮವಿದೆ. ಕೆಲ ದಶಕಗಳ ಹಿಂದಿನವರೆಗೆ ಯಥಾವತ್ ಎಂಬಂತೆ ಪಾಲನೆಯಾಗುತ್ತಿದ್ದ ನಿಯಮವನ್ನು ರಾಜ್ಯದ ಮೂರೂ ಮುಖ್ಯ ರಾಜಕೀಯ ಪಕ್ಷಗಳು ಕಾಲಕ್ರಮೇಣ ಗಾಳಿಗೆ ತೂರಿವೆ.

ಸಾಹಿತ್ಯಕ, ಸಾಂಸ್ಕೃತಿಕ ವಲಯಕ್ಕೆಂದೇ ವಿಶೇಷವಾಗಿ ಮೀಸಲಿಟ್ಟ ಈ ಸ್ಥಾನಗಳಿಗೆ ಆಡಳಿತ ಪಕ್ಷದ ಕಾರ್ಯಕರ್ತರನ್ನು, ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡ ‘ನಿಲಯದ ಕಲಾವಿದರನ್ನು’ ತುಂಬುವ ಅನಿಷ್ಟ ಪರಂಪರೆಯೊಂದು ಜಾರಿಗೆ ಬಂದಿದೆ. ಜನ ಸಾಮಾನ್ಯರ ಮಾತನ್ನು ಉಲ್ಲೇಖಿಸಬಹುದಾದರೆ ‘ರಾಜಕೀಯ ಪುನರ್ವಸತಿ ಕೇಂದ್ರ’ದ ಮಟ್ಟಕ್ಕೆ ವಿಧಾನಪರಿಷತ್​ನ ನಾಮಕರಣ ಸ್ಥಾನವನ್ನು ಇಳಿಸಲಾಗಿದೆ.

ಸ್ಥಳೀಯ ಸಂಸ್ಥೆಗಳಿಂದ, ವಿಧಾನಸಭೆಯಿಂದ, ಶಿಕ್ಷಕ ಕ್ಷೇತ್ರದಿಂದ, ಪದವೀಧರ ಕ್ಷೇತ್ರದಿಂದ ತಮಗೆ ಬೇಕಾದವರನ್ನು ಪರಿಷತ್​ಗೆ ಆರಿಸಿ ಕರೆಸಿಕೊಳ್ಳುವ ಅಧಿಕಾರ ರಾಜಕೀಯ ಪಕ್ಷಗಳಿಗಿದೆ. ಬರೋಬ್ಬರಿ 64 ಸ್ಥಾನಗಳು ಈ ಉದ್ದೇಶಕ್ಕೆ ಎಂಬಂತೆಯೇ ಇವೆ. ಬಡಪಾಯಿ ಎನ್ನಬಹುದಾದ ಸಾಹಿತ್ಯ, ಸಂಗೀತ, ರಂಗಭೂಮಿ, ಸಿನಿಮಾ ಮುಂತಾದ ಕಲಾಪ್ರಕಾರಗಳು ಒಳಗೊಂಡ ಸಾಂಸ್ಕೃತಿಕ ಕ್ಷೇತ್ರಕ್ಕೆ ಇರುವುದು ಕೆಲವೇ ಸ್ಥಾನ ಮಾತ್ರ. ಆ ವಲಯದವರು ತಾವಾಗೇ ಆಯ್ಕೆಯಾಗಿ ಬರುವ ಸಾಮರ್ಥ್ಯವಿಲ್ಲದವರು; ಆದರೆ ಅವರ ಅನುಭವ ಆಡಳಿತಕ್ಕೆ ಬೇಕಾಗುತ್ತದೆ; ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅವರಿಗೆ ಸದನದಲ್ಲಿ ಮಣೆ ಹಾಕುವುದು ಆಡಳಿತ ಪಕ್ಷಕ್ಕೆ ಮರ್ಯಾದೆ ತರುವ ಕ್ರಮ ಎಂಬಿತ್ಯಾದಿ ಹಿನ್ನೆಲೆಯಲ್ಲಿ ನಾಮಕರಣ ಪದ್ಧತಿ ಜಾರಿಗೆ ಬಂತು. ಆದರೆ ಆ ಕುರ್ಚಿಗಳಿಗೂ ರಾಜಕಾರಣದ ಸೋಂಕು ತಗುಲುವಂತೆ ಮಾಡಿರುವುದು ತರವಲ್ಲ. ದಶಕಗಳಿಂದ ಈ ಬಗೆಯ ಹುಚ್ಚಾಟ ನಡೆದುಕೊಂಡು ಬಂದಿದ್ದು ಈ ಅಪರಾಧದಲ್ಲಿ ಎಲ್ಲ ಪಕ್ಷಗಳದೂ ಸಮಸಮ ಪಾಲು.

ಆರ್. ಗುಂಡೂರಾಯರ ಆಡಳಿತ ಇಲ್ಲಿ ಸ್ಮರಣೆಗೆ ಬರುತ್ತದೆ. ತಮ್ಮ ಸರ್ಕಾರವನ್ನು ‘ಇಂದಿರಾ ಕೃಪಾಪೋಷಿತ ನಾಟಕ ಮಂಡಳಿ’ ಎಂದು ಬಹಿರಂಗವಾಗಿಯೇ ಕರೆದುಕೊಂಡವರು ರಾವ್. ಇಂದಿರಾ ಗಾಂಧಿ, ಅವರ ಮಗ ಸಂಜಯ್ ಗಾಂಧಿಯವರ ಕೃಪೆ, ಆಶೀರ್ವಾದವೇ ಗುಂಡೂರಾಯರನ್ನು ಮುಖ್ಯಮಂತ್ರಿ ಪಟ್ಟಕ್ಕೆ ತಂದಿತೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಮ್ಮ-ಮಗ ಹಾಕಿದ ಗೆರೆಯನ್ನು ರಾವ್ ಅಧಿಕಾರದಲ್ಲಿಷ್ಟು ದಿವಸವೂ ದಾಟಲಿಲ್ಲ. ತುರ್ತು ಪರಿಸ್ಥಿತಿ ನಂತರದ ಚುನಾವಣಾ ಪರಾಭವದಲ್ಲಿ ಇಂದಿರಾ, ವಿಳಾಸಹೀನ ಸ್ಥಿತಿ ಮುಟ್ಟಿದ್ದರು. ರಾಜಕೀಯ ಪುನರ್ಜನ್ಮ ಕೊಟ್ಟ ದೇವರಾಜ ಅರಸು, ಕ್ರಮೇಣ ಇಂದಿರಾಗೆ ಬೇಡವಾದರು. ಆಗ ನಡೆದ ಹಾವುಏಣಿ ಆಟದ ರಾಜಕೀಯದಲ್ಲಿ ಗುಂಡೂರಾವ್ ಅವರಿಗೆ ಲಾಟರಿ ಹೊಡೆದಂತೆ ಸಿಎಂ ಪಟ್ಟ ಒಲಿಯಿತು.

ಗುಂಡೂರಾಯರು ಹೈಕಮಾಂಡ್ ಸೂಚನೆಯನ್ನೋ ಆದೇಶವನ್ನೋ ಕನಸುಮನಸಿನಲ್ಲೂ ಕಡೆಗಣಿಸುವ ಪ್ರಶ್ನೆಯೇ ಇರಲಿಲ್ಲ. ಅಂಥ ದಿನಗಳಲ್ಲಿ ವಿಧಾನಪರಿಷತ್​ಗೆ ಇಬ್ಬರನ್ನು ನಾಮಕರಣ ಮಾಡಲಾಯಿತು. ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ಮತ್ತು ರಂಗಭೂಮಿ ಅಭಿನೇತ್ರಿ ಬಿ.ಜಯಮ್ಮ ಈ ಗೌರವಕ್ಕೆ ಪಾತ್ರರಾದವರು. ರಾಜಕೀಯಕ್ಕೆ ಸಂಬಂಧವೇ ಇಲ್ಲದಂತಿದ್ದ ಈ ಇಬ್ಬರನ್ನು ವಿಧಾನ ಪರಿಷತ್​ಗೆ ನಾಮಕರಣ ಮಾಡಿದ ಸುದ್ದಿ ಹೊರಬಿದ್ದಾಗ, ಗುಂಡೂರಾವ್ ಸರ್ಕಾರದ ಆಡಳಿತ ಶೈಲಿಯನ್ನು ಟೀಕಿಸುತ್ತಿದ್ದವರೂ ಮೆಚ್ಚಿ ತಲೆದೂಗಿದರು. ‘ಸರ್ಕಾರ ನನ್ನನ್ನು ನಾಮಕರಣ ಮಾಡಿದೆ. ಆದರೆ ನಾನು ಸದನದ ಒಳಗಾಗಲಿ ಹೊರಗಡೆಯಾಗಲಿ ಆಡಳಿತ ಪಕ್ಷದ ಸದಸ್ಯ ಅಲ್ಲ, ಸರ್ಕಾರ ತಪ್ಪು ಮಾಡಿದರೆ ನಾನು ಕೈಕಟ್ಟಿ ಕೂರುವುದೂ ಇಲ್ಲ’ ಎಂದು ನರಸಿಂಹಯ್ಯನವರು ಬಹಿರಂಗವಾಗೇ ಹೇಳಿದ್ದರು. ಅವರ ನೇಮಕ ಸುಲಭದ್ದಾಗಿರಲಿಲ್ಲ. ಸತ್ಯ ಸಾಯಿಬಾಬಾ ಮಾಡುತ್ತಿದ್ದರು ಎನ್ನಲಾದ ಪವಾಡಗಳ ಒಗಟನ್ನು ಒಡೆಯಲು ಹೊರಟಿದ್ದ ಎಚ್ಚೆನ್, ಪ್ರವಾಹದ ವಿರುದ್ಧ ಈಜುತ್ತಿದ್ದ ಕಾಲ ಅದಾಗಿತ್ತು. ರಾಷ್ಟ್ರಪತಿ, ಪ್ರಧಾನಿಯಾದವರೂ ಸಾಯಿಬಾಬಾ ಆಣತಿಯಂತೆ ನಡೆಯುತ್ತಾರೆ ಎಂಬ ಮಾತು ತೇಲುತ್ತಿದ್ದ ಸಮಯದಲ್ಲಿ ಹೈಕಮಾಂಡನ್ನು ಕೇಳದೆ ಈ ನಾಮಕರಣ ಮಾಡುವ ಧೈರ್ಯವನ್ನು ತೋರಿದವರು ಗುಂಡೂರಾಯರು. ಅವರ ಸಂಪುಟದ ಒಳಗೂ ಸಾಯಿಬಾಬಾ ಭಕ್ತರು ಇದ್ದರು. ಅವರನ್ನು ಕೂಡಾ ಗುಂಡೂರಾವ್ ಗಣನೆಗೆ ತೆಗೆದುಕೊಳ್ಳಲಿಲ್ಲ. ಆ ಸಂದರ್ಭದಲ್ಲಿ ಸಾಯಿಬಾಬಾರ ವಿರುದ್ಧ ತೊಡೆ ತಟ್ಟಿ ನಿಂತ ಯಾರನ್ನೇ ಆಗಲಿ, ಮೇಲ್ಮನೆಯಂಥ ಪ್ರತಿಷ್ಠಿತ ಸ್ಥಾನಕ್ಕೆ ನಾಮಕರಣ ಮಾಡುವುದಕ್ಕೆ ಎಂಟೆದೆಯ ಧೈರ್ಯ ಬೇಕಾಗಿತ್ತು.

ವಿಧಾನಪರಿಷತ್ ಕಲಾಪವನ್ನು ಒಂದು ದಿನವೂ ತಪ್ಪಿಸದೆ, ಕಲಾಪದಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದ ಎಚ್ಚೆನ್, ರಾಜಕೀಯ ಪಕ್ಷಗಳ ಅನೇಕ ಸದಸ್ಯರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದರು. ಪವಾಡದಂಥ ಮೂಢನಂಬಿಕೆಗಳ ವಿಚಾರದಲ್ಲಿ ಎಚ್ಚೆನ್ ಮಂಡಿಸುತ್ತಿದ್ದ ಪ್ರಖರ ವಿಚಾರಧಾರೆಯನ್ನು ಮೂಢನಂಬಿಕೆ ನಿಷೇಧಿಸುವ ಕಾಯ್ದೆಯನ್ನು ತರಲು ಮುಂದಾಗಿರುವ ಈಗಿನ ಸರ್ಕಾರ ಪುನರ್ಮನನ ಮಾಡಿಕೊಳ್ಳಬೇಕು. ಬಿ. ಜಯಮ್ಮನವರು ಎಚ್ಚೆನ್​ರಷ್ಟು ಕ್ರಿಯಾಶೀಲರಾಗಿರದಿದ್ದರೂ, ಅವರು ಸಭೆಯಲ್ಲಿ ಕುಳಿತೆದ್ದು ಹೋಗುವುದೇ ಒಂದು ಶೋಭಾಯಮಾನ ಸಂಗತಿಯಾಗಿತ್ತು. ರಂಗಭೂಮಿಗೆ ಸಂಬಂಧಿಸಿದಂತೆ ಯಾವುದಾದರೂ ಪ್ರಸ್ತಾಪವೋ, ಚರ್ಚೆಯೋ ನಡೆದಲ್ಲಿ ತಮಗೆ ತೋಚಿದಷ್ಟನ್ನು ಅವರು ಮಂಡಿಸುತ್ತಿದ್ದರು.

ರಾಮಕೃಷ್ಣ ಹೆಗಡೆಯವರ ಸರ್ಕಾರದ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಮಲ್ಲಿಕಾರ್ಜುನ ಮನಸೂರರ ನಾಮಕರಣವಾಯಿತು. ಅಧಿವೇಶನದ ಸಮಯದಲ್ಲಿ ಶಾಸಕರ ಭವನದ ಕೊಠಡಿಯಲ್ಲಿ ತಂಗಿರುತ್ತಿದ್ದ ಮನಸೂರರು, ಎಂದೂ ಕಲಾಪವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಸದನದ ಗಂಟೆ ಬಾರಿಸುವುದಕ್ಕೆ ಮೊದಲೇ ವಿಧಾನಪರಿಷತ್​ನ ಮೊಗಸಾಲೆಯಲ್ಲಿ ಅವರು ಕೂತಿರುತ್ತಿದ್ದರು. ಸದನ ನಡೆದಿದ್ದ ಒಂದು ಸಂದರ್ಭದಲ್ಲಿ ಪರಿಷತ್ ಮೊಗಸಾಲೆಯಲ್ಲಿ ಹರಟುತ್ತ ಕುಳಿತಿದ್ದಾಗ ‘ನನ್ನನ್ನು ಇಲ್ಲಿ ಯಾಕೆ ತಂದು ಕೂರಿಸಿದ್ದಾರೋ, ಗೊತ್ತಿಲ್ಲಪ್ಪಾ’ ಎಂದು ಮನಸೂರರು ನನ್ನೊಂದಿಗೆ ಹೇಳಿದ್ದರು. ‘ಇದು ಬಹಳ ಗೌರವದ ಸ್ಥಾನವಂತೆ, ಇರ್ಲಿ ಬಿಡ್ರೀ’ ಎಂದು ತಮ್ಮ ಪರಮಾಯಿಶಿಯ ಬೀಡಿ ದಮ್ಮನ್ನು ಎಳೆಯುತ್ತ ನಕ್ಕಿದ್ದರು. ಸಭಾ ಕಲಾಪದಲ್ಲಿ ಆಗೀಗ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಅವರು ಕೊಟ್ಟಿದ್ದು ಪರಿಷತ್​ನ ದಾಖಲೆಯಲ್ಲಿದೆ.

ಗುಂಡೂರಾಯರ ಸರ್ಕಾರ ಅಥವಾ ನಂತರದ ಹೆಗಡೆ ಸರ್ಕಾರ ಇಂಥ ನಾಮಕರಣ ಮಾಡುವುದಕ್ಕೆ ಪೂರ್ವದಲ್ಲಿಯೂ ನಂತರದಲ್ಲಿಯೂ ಸಂಸ್ಕೃತಿ, ಸಾಹಿತ್ಯ ಲೋಕದ ಅನೇಕರು ನಾಮಕರಣಗೊಂಡಿರುವ ದಾಖಲೆಯಿದೆ. ಜಯಮ್ಮ ನಾಮಕರಣಗೊಳ್ಳುವುದಕ್ಕೆ ಎಷ್ಟೋ ವರ್ಷ ಮೊದಲು ಅವರ ಪತಿ ಗುಬ್ಬಿ ವೀರಣ್ಣನವರು ನಾಮಕರಣಗೊಂಡಿದ್ದರು. ಕರ್ನಾಟಕ ಹಾಗೂ ಆಂಧ್ರ ಎರಡೂ ರಾಜ್ಯಗಳಲ್ಲಿ ರಂಗಭೂಮಿಯ ಧ್ರುವತಾರೆಯಾಗಿದ್ದ ವೀರಣ್ಣನವರನ್ನು ನಾಮಕರಣ ಮಾಡುವ ಮೂಲಕ ಅಂದಿನ ಸರ್ಕಾರ ತನ್ನ ಗೌರವವನ್ನು ಹೆಚ್ಚಿಸಿಕೊಂಡಿತ್ತು. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೆ.ಟಿ. ಭಾಷ್ಯಂ, ಅಕ್ಬರ ಅಲಿ, ಚಂದ್ರಶೇಖರ ಕಂಬಾರ, ಆರತಿ, ಶ್ರೀನಾಥ್, ದೊಡ್ಡರಂಗೇ ಗೌಡ, ಸಿದ್ದಲಿಂಗಯ್ಯ, ಜಯಮಾಲಾ…ಈ ಮೊದಲಾಗಿ ನಾಮಕರಣಗೊಂಡ ಅನೇಕರ ಪಟ್ಟಿ ಇದೆ. ಆದರೆ, ನಾಮಕರಣದ ಅವಕಾಶವನ್ನು ಸರ್ಕಾರಗಳು ನಿಯಮಕ್ಕೆ ವಿರುದ್ಧವಾಗಿ ಬಳಸಿಕೊಂಡ ನಿದರ್ಶನಗಳೂ ಹೇರಳ ಎನ್ನುವಷ್ಟಿದೆ. ಪ್ರಸ್ತುತ ಸಿ.ಎಂ. ಲಿಂಗಪ್ಪ, ಪಿ.ಆರ್. ರಮೇಶ್ ಹಾಗೂ ಕೊಂಡಜ್ಜಿ ಮೋಹನ್​ರ ಹೆಸರನ್ನು ನಾಮಕರಣಕ್ಕೆ ಶಿಫಾರಸು ಮಾಡಿರುವ ಸರ್ಕಾರ, ಸಮ್ಮತಿ ಮುದ್ರೆಯನ್ನೊತ್ತುವಂತೆ ಕೋರಿ ರಾಜ್ಯಪಾಲ ವಜುಭಾಯಿ ವಾಲಾರಿಗೆ ಕಳುಹಿಸಿದೆ. ರಾಜ್ಯಪಾಲರು ಅದನ್ನು ಒಪ್ಪಬಹುದು; ಹೆಚ್ಚಿನ ವಿವರಣೆ ಕೇಳಬಹುದು; ಶಿಫಾರಸು ನಿಯಮಕ್ಕನುಗುಣವಾಗಿಲ್ಲ ಎಂದೆನಿಸಿದರೆ ಸರ್ಕಾರ ಕಳುಹಿಸಿದ ಫೈಲುಗಳನ್ನು ಪರತ್ ಕಳಿಸಲೂಬಹುದು.

ಹಿಂದಿನ ಅನೇಕ ರಾಜ್ಯಪಾಲರು ನಾಮಕರಣದಂಥ ವಿಚಾರದಲ್ಲಿ ನಿಯಮವನ್ನು ಸದಾಕಾಲಕ್ಕೂ ಗಟ್ಟಿಯಾಗಿ ಹಿಡಿದು ನಿಂತ ನಿದರ್ಶನ ಕಡಿಮೆ. ಆಡಳಿತ ಪಕ್ಷದವರೇ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನ ಹಾಗೂ ರಾಜ್ಯಪಾಲರಿಗೆ ರಾಜ್ಯ ಸರ್ಕಾರಕ್ಕೆ ರಾಜಕೀಯವಾಗಿ ಆಗದ ಸಂದರ್ಭದಲ್ಲಿ ತೆಗೆದುಕೊಂಡ ನಿಲುವು ಬೇರೆ ಬೇರೆ ಆಗಿರುವ ಅನೇಕ ಸನ್ನಿವೇಶಗಳಿಗೆ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ. ಈಗಿನ ರಾಜ್ಯಪಾಲರು ಸರ್ಕಾರ ಕಳಿಸಿದ ಕೆಲವು ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ, ಜನ ಕೂಡಾ ಅಚ್ಚರಿಪಡುವಂತೆ ಕೆಲವು ಪ್ರಸ್ತಾಪಕ್ಕೆ ಸಹಿ ಹಾಕಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ವಿರೋಧವಾಗಿರುವ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರನ್ನು ‘ಕೇಂದ್ರದ ಏಜೆಂಟ್’ ಎಂದು ದೂರುವುದು ಸಾಮಾನ್ಯ. ಈಗ ಈ ಮೂವರ ನಾಮಕರಣಕ್ಕೆ ಒಪ್ಪದಿದ್ದರೆ ರಾಜ್ಯಪಾಲರ ವಿರುದ್ಧ ಈ ಟೀಕೆ ಬರಬಹುದು. ಕೆಲವು ತಿಂಗಳ ಹಿಂದೆ ಬಹಳ ಮುಖ್ಯವಾದ ಒಂದು ಹುದ್ದೆಗೆ ರಾಜ್ಯಪಾಲರ ಅನುಮತಿಯನ್ನು ಸರ್ಕಾರ ಬಯಸಿತ್ತು. ನಿರೀಕ್ಷಿತ ಅನುಮತಿ ದೊರೆಯಲಾರದು ಎಂಬ ಭಾವನೆ ಸಾರ್ವತ್ರಿಕವಾಗಿತ್ತು. ಆದರೆ ರಾಜ್ಯಪಾಲರು ಸಮ್ಮತಿ ಮುದ್ರೆ ಒತ್ತಿ ಆಡಳಿತ ಪಕ್ಷದವರ ಬಾಯನ್ನು ಬಂದ್ ಮಾಡಿದರು.

ಕೆಲವು ವರ್ಷ ಹಿಂದೆ ತುರುವೇಕೆರೆ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ ಚಿತ್ರನಟ ಜಗ್ಗೇಶ ಅವರನ್ನು ನಾಮಕರಣದ ಮೂಲಕ ವಿಧಾನಪರಿಷತ್​ಗೆ ಕರೆತರಲಾಯಿತು. ಅವರನ್ನು ಕಲಾವಿದ ಎಂದಾದರೂ ಕರೆಯಬಹುದಾಗಿತ್ತು. ಆದರೆ ನೂರಕ್ಕೆ ಇನ್ನೂರು ಪರ್ಸೆಂಟ್ ರಾಜಕಾರಣಿಯಾಗಿರುವ ವಿ.ಸೋಮಣ್ಣನವರ ನಾಮಕರಣಕ್ಕೆ ಏನು ವಿವರಣೆಯನ್ನು ಕೊಡಬಹುದು? ವಿಧಾನಸಭಾ ಚುನಾವಣೆಯಲ್ಲಿ ಸೋತ ಅವರಿಗೆ ಪುನರ್ವಸತಿ ಕಲ್ಪಿಸಲೆಂದೇ ಪರಿಷತ್​ಗೆ ನಾಮಕರಣ ಮಾಡಲಾಯಿತು. ವಿಪರ್ಯಾಸವೆಂದರೆ ಆಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಹಾಲಿ ಆಡಳಿತ ಪಕ್ಷ ಆಕ್ಷೇಪಿಸಿದ್ದು.

ಜಗ್ಗೇಶ್, ಸೋಮಣ್ಣ.. ಪ್ರಕರಣ ಎರಡು ಬಿಡಿ ಉದಾಹರಣೆ ಮಾತ್ರ; ಇಂಥ ನಿದರ್ಶನಗಳು ಪುಂಖಾನುಪುಂಖವಾಗಿ ಸಿಗುತ್ತವೆ. ಈ ವಿಚಾರದಲ್ಲಿ ಮೂರೂ ರಾಜಕೀಯ ಪಕ್ಷಗಳಲ್ಲಿ ಎಲ್ಲೂ ಇಲ್ಲದ ಒಮ್ಮತವಿದೆ. ನಾಮಕರಣಕ್ಕೆ ಅರ್ಹತೆ ಎನ್ನುವುದನ್ನು ಕಾಲಕಸದಂತೆ ಕಾಣುವ ರಾಜಕೀಯ ಪಕ್ಷಗಳು ಒಂದು ಒಳಒಪ್ಪಂದಕ್ಕೆ ಬಂದಲ್ಲಿ ಭವಿಷ್ಯದಲ್ಲಿ ಈ ವಿಷಯದಲ್ಲಿ ಗೊಂದಲ ಗೋಜಲು ತಪ್ಪಿಸಬಹುದು. ಅದೇನು ಗೊತ್ತಾ? ನಾಮಕರಣಕ್ಕೆ ಈಗಿರುವ ನಿಯಮದ ಬದಲು ಆಯಾ ಕಾಲದ ಆಡಳಿತ ಪಕ್ಷ ತನಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಳ್ಳುವುದು. ಎಲ್ಲ ಪಕ್ಷಗಳೂ ಇದನ್ನೇ ಮಾಡುತ್ತಿರುವುದರಿಂದ ಹಾಲಿ ನಿಯಮಕ್ಕೆ ತಿದ್ದುಪಡಿ ತರಲು ಬೇಕಾದ ಸಂಪೂರ್ಣ ಬೆಂಬಲ ಆಡಳಿತ ಪಕ್ಷಕ್ಕೆ ಸಿಕ್ಕೇ ಸಿಗುತ್ತದೆ. ನಿಯಮಕ್ಕೆ ತಿದ್ದುಪಡಿ ತರುವ ಅಧಿಕಾರ ರಾಜ್ಯಕ್ಕೆ ಇಲ್ಲವಾದರೆ ಕೇಂದ್ರಕ್ಕೆ ಇರುತ್ತದೆ. ಅಂಥ ಸಂದರ್ಭದಲ್ಲಿ ವಿಧಾನಮಂಡಲದ ಸರ್ವಾನುಮತದ ನಿರ್ಣಯ ಕಳಿಸಿದರೆ ಕೆಲಸ ಆಗುತ್ತದೆ. ವಿಧಾನಸಭೆಯ ಸರ್ವಾನುಮತದ ನಿರ್ಣಯದ ಮೂಲಕ ವಿಧಾನಪರಿಷತ್ತನ್ನೇ ರದ್ದುಪಡಿಸಲು ಅವಕಾಶವಿರುವ ದೇಶದಲ್ಲಿ ಇಂಥ ಚಿಕ್ಕಪುಟ್ಟ ನಿಯಮಾವಳಿಗಳು ಖಂಡಿತವಾಗಿಯೂ ಬದಲಾವಣೆಗೆ ಒಡ್ಡಿಕೊಂಡಿರುತ್ತವೆ.

ಈಗ ಸರ್ಕಾರ ಭರ್ತಿ ಮಾಡಲು ಹೊರಟಿರುವ ಮೂರು ಸ್ಥಾನಗಳು ಮೂರು ವರ್ಷದಿಂದ ಖಾಲಿಯಿವೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದವರಿಗೆ ಅಲ್ಲಿ ಅವಕಾಶ ಸಿಗಬಹುದೆಂಬ ಆಸೆಯೂ ಕೆಲವರಲ್ಲಿತ್ತು. ಇನ್ನು ಕೆಲವರಂತೂ ಯಾವ ರಾಜಕಾರಣಿಗೂ ಕಡಿಮೆ ಇಲ್ಲದವರಂತೆ ಬೆಂಗಳೂರಿನಿಂದ ದೆಹಲಿವರೆಗೂ ಲಾಬಿ ನಡೆಸಿದ್ದರು. ಖಾಲಿ ಇರುವ ಸ್ಥಾನಗಳನ್ನು ಭರ್ತಿಮಾಡುವುದೇ ಆಡಳಿತ ಪಕ್ಷ ಎದುರಿಸುವ ಗಂಭೀರ ಸಮಸ್ಯೆಗಳಲ್ಲಿ ಒಂದೆನಿಸಿರುವುದು ವಿಪರ್ಯಾಸದ ಬೆಳವಣಿಗೆ. ಆ ಸಮಸ್ಯೆಯನ್ನು ಆಡಳಿತ-ವಿರೋಧ ಪಕ್ಷಗಳು ಮನಸಾರೆ ಸಹಕಾರದೊಂದಿಗೆ ಕೈಜೋಡಿಸಿ ಒಂದೇ ಏಟಿಗೆ ನಿವಾರಿಸಿಕೊಳ್ಳಲು ಇದು ಒಂದು ಉತ್ತಮ ಅವಕಾಶ!

Leave a Reply

Your email address will not be published. Required fields are marked *