Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಗೆಲುವಿಗಾಗಿ ನಡೆದಿದೆ ಶತಾಯಗತಾಯ ಕಸರತ್ತು…

Saturday, 24.02.2018, 3:05 AM       No Comments

ರ್ನಾಟಕದ 14ನೇ ವಿಧಾನಸಭೆ ಐದು ವರ್ಷದ ಅವಧಿಯನ್ನು ನಿರಾತಂಕ ಸ್ಥಿತಿಯಲ್ಲಿ ಮುಗಿಸಿ 15ನೇ ವಿಧಾನಸಭೆಗೆ ಚುನಾಯಿತರಾಗಿ ಬರಲಿರುವ ನೂತನ ಶಾಸಕರ ಆಗಮನಕ್ಕೆ ಅಣಿಯಾಗುತ್ತಿದೆ. ರಾಜ್ಯದ ಇತಿಹಾಸದಲ್ಲಿ ಐದು ವರ್ಷ ಸತತ ಮುಖ್ಯಮಂತ್ರಿಯಾಗಿದ್ದು ಪುನಃ ಆ ಹುದ್ದೆಗೆ ಮರಳಿದ ಮೊದಲಿಗ ದೇವರಾಜ ಅರಸು. ಸಿದ್ದರಾಮಯ್ಯ ಐದು ವರ್ಷಗಳ ಅವಧಿಯನ್ನು ಪೂರೈಸಿದ್ದಾರೆ. ಈ ಹಿರಿಮೆ ಮುಂದಿಟ್ಟುಕೊಂಡೇ ಅವರೀಗ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಸಜ್ಜಾಗಿದ್ದಾರೆ. ವಿಧಾನ ಕಲಾಪದ ಕೊನೆಯ ದಿವಸ ಶಾಸಕ, ಸಚಿವರಾದಿಯಾಗಿ ಹಾಜರಿದ್ದ ಬಹುತೇಕರು ಪರಸ್ಪರ ಬೀಳ್ಕೊಂಡರು. ಕೆಲವರ ಮುಖದಲ್ಲಿ ಹೀಗೇ ಇದೇ ಸ್ಥಳದಲ್ಲಿ ಮತ್ತೆ ಮುಖಾಮುಖಿಯಾಗುವ ವಿಶ್ವಾಸ ತುಳುಕುತ್ತಿದ್ದರೆ ಬಹುತೇಕರು ಬೇಡಬೇಡವೆಂದರೂ ಮುಖದಲ್ಲಿ ಇಣುಕುತ್ತಿದ್ದ ಆತಂಕವನ್ನು ಮುಚ್ಚಿಟ್ಟುಕೊಳ್ಳುವ ಯತ್ನ ನಡೆಸಿದ್ದು ಢಾಳವಾಗಿತ್ತು.

ಕೆಲವರಲ್ಲಿ ಪುಟಿದ ವಿಶ್ವಾಸಕ್ಕೆ ಮುಖ್ಯ ಕಾರಣಗಳಲ್ಲಿ ಪಕ್ಷ ತನಗೇ ತನ್ನ ಕ್ಷೇತ್ರದಲ್ಲೇ ಟಿಕೆಟ್ ಕೊಡುತ್ತದೆ ಎನ್ನುವುದು ಒಂದು. ಈ ಸಲವೂ ಗೆದ್ದು ಬರುತ್ತೇನೆ ಎನ್ನುವುದು ಇನ್ನೊಂದು. ಕಳಾಹೀನ ಮುಖದಲ್ಲಿರುವ ಶಾಸಕರಿಗೂ ಕಾಡಲು ಎರಡು ಕಾರಣಗಳಿವೆ. ಟಿಕೆಟ್ ಸಿಗದೇ ಇರಬಹುದು ಎನ್ನುವುದು ಮೊದಲ ಕಾರಣ. ಸಿಕ್ಕರೂ ಗೆಲ್ಲುವುದು ಕಷ್ಟವಾಗಬಹುದು ಎನ್ನುವುದು ಇನ್ನೊಂದು ಕಾರಣ. ಶಾಸಕ ಸ್ಥಾನಮಾನ ತಂದಿಡುವ ಸುಖ ಅಂಥಿಂಥದ್ದಲ್ಲ. ಒಮ್ಮೆ ಶಾಸಕರಾದರೆ ತಮ್ಮ್ಮ ಕ್ಷೇತ್ರದಲ್ಲಿ ಅವರೇ ಇಂದ್ರ ಚಂದ್ರ. ಅಂಥ ಹುದ್ದೆಯನ್ನು ತಮ್ಮ ಕೈಯಲ್ಲೇ ಇಟ್ಟುಕೊಳ್ಳುವುದಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ಮಾಡುವುದಕ್ಕೆ ಅವರೀಗ ಕ್ಷೇತ್ರಗಳತ್ತ ಹೊರಳಿದ್ದಾರೆ. ಅಧಿಕಾರದಲ್ಲಿದ್ದ ಐದು ವರ್ಷದ ಅವಧಿಯಲ್ಲಿ ಜನರಿಗೆ ಉತ್ತರ ಕೊಡಬೇಕಾದ ಜರೂರು ಬಹುತೇಕ ಶಾಸಕರನ್ನು ಕಾಡಿರಲಿಲ್ಲ. ಕ್ಷೇತ್ರದ ಜನಕ್ಕೆ ತನ್ನದು ಉತ್ತರದಾಯಿತ್ವವಿದೆ ಎಂದು ಭಾವಿಸಿರುವ ಶಾಸಕರು ನಮ್ಮಲ್ಲಿ ವಿರಳವಾದರೂ ಇದ್ದಾರೆ. ಅಂಥವರಿಗೆ ಜನರನ್ನು ಎದುರಿಸುವುದು ಸಮಸ್ಯೆಯಲ್ಲ.

ಒಮ್ಮೆ ಗೆದ್ದ ನಂತರದಲ್ಲಿ ಜನರನ್ನು ಕಾಲುಕಸದಂತೆ ಕಂಡ ಶಾಸಕರಿಗೆ ಮಾತ್ರ ಕಷ್ಟ ಕ್ಷೇತ್ರದಲ್ಲಿ ಕಾಲಿಡುತ್ತಿದ್ದಂತೆಯೇ ಮುಳ್ಳು ಚುಚ್ಚಿದ ಅನುಭವದೊಂದಿಗೆ ಕಾಡುತ್ತದೆ. ರಾಮಕೃಷ್ಣ ಹೆಗಡೆ, 1983ರಲ್ಲಿ ಮುಖ್ಯಮಂತ್ರಿಯಾದ ನಂತರದಲ್ಲಿ ಕೆಲವು ಶಾಸಕರನ್ನುದ್ದೇಶಿಸಿ ‘ಈ ರೀತಿಯವರು ಬ್ರಿಗೇಡ್ ರೋಡ್ ಶಾಸಕರಿದ್ದಂತೆ’ ಎಂದಿದ್ದರು. ಗ್ರಾಮಾಂತರ ಪ್ರದೇಶದಿಂದ ಆಯ್ಕೆಯಾಗಿ ಬಂದು ಬೆಂಗಳೂರಿನ ಬೆರಗು ಥಳಕು ಬಳುಕಿನಲ್ಲಿ ಕ್ಷೇತ್ರದ ದುರವಸ್ಥೆಯನ್ನು ಮರೆಯುವವರು ಎಂಬರ್ಥದಲ್ಲಿ ಅವರು ವ್ಯಾಖ್ಯಾನ ಮಾಡಿದ್ದರು. ಆ ಸಂದರ್ಭದಲ್ಲಿ ಹೆಗಡೆ ಮಾತನ್ನು ಹಲವರು ಟೀಕಿಸಿದ್ದರು. ಆದರೆ ಆ ಕೆಲವು ಶಾಸಕರ ಕಾರ್ಯವೈಖರಿಯನ್ನು ನೋಡುತ್ತ ಹೋದಂತೆ ಹೆಗಡೆ ಮಾತಿನಲ್ಲಿದ್ದ ಸತ್ಯದ ದರ್ಶನವಾಗಿತ್ತು. ಬ್ರಿಗೇಡ್ ರೋಡ್ ಶಾಸಕರು ಈಗಲೂ ಇದ್ದಾರೆ. ಹೆಗಡೆ ಪೂರ್ವದಲ್ಲೂ ಇದ್ದರು. ಅವರೇಕೆ ಹಾಗೆ ಆಗುತ್ತಾರೆ, ಜನಕ್ಕೆ ಹತ್ತಿರವಾಗಿರುವುದರ ಲಾಭದ ಅರಿವಿದ್ದೂ ಯಾಕೆ ಸಾಮಾನ್ಯರಿಂದ ದೂರ ಕಾಯ್ದುಕೊಳ್ಳುವುದಕ್ಕೆ ಮುಂದಾಗುತ್ತಾರೆ? ನಮ್ಮ ಪ್ರಜಾಪ್ರಭುತ್ವದಲ್ಲಿ ಉತ್ತರ ಸಿಗದ ಅನೇಕ ಪ್ರಶ್ನೆಗಳಲ್ಲಿ ಇದು ಕೂಡ ಒಂದು. ಹಣ ಚೆಲ್ಲಿದರೆ ಗೆದ್ದು ಬರಬಹುದೆಂಬ ಜನತಂತ್ರ ವಿರೋಧಿ ನಿಲುವೇ ಅವರನ್ನು ಕಾಯುತ್ತಿದೆಯೇ ಹೇಗೆ…?

ನೊಬೆಲ್ ಪ್ರಶಸ್ತಿ ಪುರಸ್ಕೃತ ಬರಹಗಾರ ವಿ.ಎಸ್. ನೈಪಾಲ್ ‘ಇಂಡಿಯಾ: ಥೌಸಂಡ್ ಮ್ಯುಟಿನೀಸ್ ನೌ’ ಎಂಬ ಕೃತಿಯಲ್ಲಿ ಭಾರತದ ರಾಜಕಾರಣವನ್ನು ವಿಶ್ಲೇಶಿಸುವುದಕ್ಕೆ ಆರಿಸಿಕೊಂಡ ರಾಜಕಾರಣಿಗಳಲ್ಲಿ ಕರ್ನಾಟಕದ ಎಂ.ಪಿ.ಪ್ರಕಾಶ್ ಒಬ್ಬರು. ಇದು 80ರ ದಶಕದ ಮಾತು. ಆಗ ಪ್ರಕಾಶ್ ಸಚಿವರಾಗಿದ್ದರು. ಭಾರತದ ರಾಜಕಾರಣಕ್ಕೂ ಜಗತ್ತಿನ ಇತರ ಮುಂದುವರಿದ ದೇಶಗಳ ರಾಜಕಾರಣಕ್ಕೂ ಬಹಳ ದೊಡ್ಡ ವ್ಯತ್ಯಾಸವಿರುವುದು ಜೀವನಶೈಲಿಯಲ್ಲಿ. ವಿದೇಶಗಳಲ್ಲಿ ಮಂತ್ರಿಗೂ ಮಾಜಿಗೂ ವ್ಯತ್ಯಾಸವಿರುವುದಿಲ್ಲ. ಇಲ್ಲಿ ಹಾಗಲ್ಲ ಒಬ್ಬರು ಮಂತ್ರಿಯಾಗುತ್ತಿದ್ದಂತೆ ದೇವರಾಗಿಬಿಡುತ್ತಾರೆ. ಮಾಜಿಯಾದ ಕ್ಷಣದಲ್ಲೇ ಅವರು ಅಪ್ರಯೋಜಕರಾಗುತ್ತಾರೆ. ಮಣೆ, ಮನ್ನಣೆ ಹೇಗೆ ಬಂತೆಂದು ಗೊತ್ತಾಗದಂತೆ ಅವು ಹೋಗಿದ್ದೂ ಗೊತ್ತೇ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಇಲ್ಲಿಯ ರಾಜಕಾರಣಿಗಳು ಶತಾಯಗತಾಯ ಅಧಿಕಾರಕ್ಕೆ ಅಂಟಿಕೊಂಡಿರಲು ಬಯಸುತ್ತಾರೆ ಎಂಬ ಅಭಿಪ್ರಾಯವನ್ನು ಪ್ರಕಾಶ್ ವ್ಯಕ್ತಪಡಿಸುತ್ತಾರೆ.

ಅಧಿಕಾರ ಜನರ ಸೇವೆಗಾಗಿ ಒದಗಿ ಬಂದಿರುವ ಅವಕಾಶ ಎಂದು ಭಾರತದ ಬಹುತೇಕ ರಾಜಕಾರಣಿಗಳು ಭಾವಿಸುವುದಿಲ್ಲ. ಕರ್ನಾಟಕವೂ ಈ ಮಾತಿಗೆ ಅಪವಾದವಲ್ಲ. ಶಾಸಕ ಅಥವಾ ಸಂಸದ ಆಗಿದ್ದ ಸಮಯದಲ್ಲಿ ಜನಪ್ರತಿನಿಧಿಗಳ ಒಡ್ಡೋಲಗ ವೈಭವ ಯಾವ ರೀತಿಯಲ್ಲಿರುತ್ತದೆ ಎನ್ನುವುದಕ್ಕೆ ಪುಟ್ಟದೊಂದು ನಿದರ್ಶನ- ಸುಮಾರು 30 ವರ್ಷದ ಹಿಂದಿನ ಮಾತು. ಚುನಾವಣೆಯನ್ನು ಗೆದ್ದಿದ್ದ ರಾಜಕಾರಣಿಯೊಬ್ಬರು ವಿಶ್ರಮಿಸುತ್ತಿದ್ದಲ್ಲಿಗೆ ಬಂದ ಗುತ್ತಿಗೆದಾರರೊಬ್ಬರು ಕೈ ಮುಗಿದರು. ತಮ್ಮಿಂದ ಯಾವ ಸಹಾಯವನ್ನು ಬೇಕಾದರೂ ಕೇಳಬಹುದೆಂದು ನಿವೇದಿಸಿಕೊಂಡ ಅವರು ಜನಪ್ರತಿನಿಧಿಯ ಮುಂದಿದ್ದ ಟೀಪಾಯ್ ಮೇಲೆ ಕಾರು ಕೀ ಇಟ್ಟು ಒಪ್ಪಿಸಿಕೊಳ್ಳಿರೆಂದರು. ಜನಪ್ರತಿನಿಧಿ ಯಾವ ಸಂಕೋಚವೂ ಇಲ್ಲದೆ ಅದನ್ನು ಕಿಸೆಗೆ ಹಾಕಿಕೊಂಡರು. ಆ ಕಾಲದಲ್ಲಿ ಐಷಾರಾಮಿ ಸಂಕೇತವಾಗಿದ್ದ ಕಂಟೆಸ್ಸಾ ಕಾರು. ಚುನಾಯಿತರಾಗುವುದೇ ತಡ ಇಂಥ ನೂರಾರು ಸುಖ ಸೌಲಭ್ಯಗಳು ತಾನಾಗೇ ಬಂದು ಬೀಳುತ್ತವೆ. ಯಾರು ಗೆಲ್ಲುತ್ತಾರೋ ಅವರಿಗೆ ಒಪ್ಪಿಸಲು ಕಾರು ತಂದಿದ್ದ ಆ ಗುತ್ತಿಗೆದಾರ ಮಿಕ ಬಲೆಗೆ ಬಿದ್ದ ಖುಷಿಯಲ್ಲಿ ಜಾಗ ಖಾಲಿ ಮಾಡಿದ. ನಮ್ಮ ಶಾಸಕರು ಈ ಚುನಾವಣೆಯಲ್ಲಿ ಗೆದ್ದರೆ ಇಂಥ ಹತ್ತಾರು ಸೌಲಭ್ಯ ಮರುಕಳಿಸುತ್ತವೆ. ಸೋತರೆ… ಅದೇ ಸಗಣಿ ಗಂಜಲ ನಾತ ಭರಿತ ಹಳ್ಳಿ ರಸ್ತೆಗಳಲ್ಲಿ ಅಡ್ಡಾಡಬೇಕು. ಎಲ್ಲಕ್ಕೂ ತಮ್ಮ ಕಿಸೆಯಿಂದಲೇ ಖರ್ಚು ಮಾಡಬೇಕು. ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎದ್ದು ನಿಂತು ಬರಮಾಡಿಕೊಳ್ಳುವ ಅಧಿಕಾರಿ, ನೌಕರರು ಕಾಣಿಸರು, ಐಬಿಯಲ್ಲಿ ಮೋಜು ಮಸ್ತಿಗೆ ಎಲ್ಲ ಸೌಕರ್ಯ ಒದಗಿಸುತ್ತಿದ್ದವರು ಮಾಜಿಯನ್ನು ತೊರೆದು ಹಾಲಿಯತ್ತ ಹೋಗುವುದನ್ನು ನೋಡುವ ಹಿಂಸೆ ಬೇರೆ. ಮಕ್ಕಳು ಬಂಧುಗಳು, ಬೆಂಬಲಿಗರು ಮಾಡುವ ಪುಂಡಾಟಿಕೆಗೆ ರಕ್ಷಣೆ ಪಡೆಯುವ ಮಾರ್ಗಗಳೂ ಬಂದ್ ಆಗಿಬಿಡುವ ಅನಾಹುತಕ್ಕೂ ಮಾಜಿಗಳು ಸಾಕ್ಷಿಯಾಗಬೇಕಾಗುತ್ತದೆ.

ಚುನಾಯಿತ ಶಾಸಕರ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ವಿವಿಧ ಅಭಿವೃದ್ಧಿಗೆ ಸರ್ಕಾರ ಕನಿಷ್ಟ ಎರಡೂವರೆ ಸಾವಿರ ಕೋಟಿ ರೂಪಾಯಿ ನೀಡುತ್ತದೆ. ಬಜೆಟ್​ನಲ್ಲಿ ಕಾಣಿಸುವ ಅಭಿವೃದ್ಧಿ ವೆಚ್ಚದ ಭಾಗವಾಗಿ ಎಲ್ಲ 224 ಕ್ಷೇತ್ರಕ್ಕೂ ಈ ಅಗಾಧ ಮೊತ್ತ ತಾರತಮ್ಯವಿಲ್ಲದೆ ತನ್ನಿಂತಾನೇ ಹರಿದುಬರುತ್ತದೆ. ಇದಲ್ಲದೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ. ಶಾಸಕರು ಮುಖ್ಯಮಂತ್ರಿಯ ಆಪ್ತ ಬಳಗದಲ್ಲಿದ್ದರೆ, ಆಡಳಿತ ಪಕ್ಷದವರಾಗಿದ್ದರೆ ನೂರಿನ್ನೂರು ಕೋಟಿ ಅಧಿಕ ಬರುವ ಸಾಧ್ಯತೆಯೂ ಇದೆ. ಅಜಮಾಸು ಮೂರು ಸಾವಿರ ಕೋಟಿಯಲ್ಲಿ ಕ್ಷೇತ್ರದಲ್ಲಿ ಬಾಕಿ ಕೆಲಸ ಯಾವುದೂ ಉಳಿಯದಂತೆ ಅಭಿವೃದ್ಧಿ ಮಾಡಲು ಅವಕಾಶವನ್ನು ವ್ಯವಸ್ಥೆಯೇ ಕಲ್ಪಿಸಿದೆ. ಹೀಗಿದ್ದೂ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿಯೇ ಉಳಿದಿದೆ ಏಕೆ…? ಕೆಲವರಂತೂ ಆರು, ಏಳು ಬಾರಿ ಶಾಸಕರಾಗಿ ಸತತ ಎಂಬಂತೆ ಗೆದ್ದು ಬಂದ ನಿದರ್ಶನವೂ ಇದೆ. ಅಲ್ಲೆಲ್ಲ ಶಾಸಕರಿಗೆ ಕ್ಷೇತ್ರದ ಬಹುತೇಕರು ಪರಿಚಿತರೇ ಆಗಿರುತ್ತಾರೆ. ಈ ಪರಿಚಯ ಅವರ ಪುನಃ ಪುನಃ ಗೆಲುವಿಗೆ ಕಾರಣವಾದಂತೆ ಅಭಿವೃದ್ಧಿಗೆ ಕಾರಣವಾಗುತ್ತಿಲ್ಲವೇಕೆ…? ಅಭಿವೃದ್ಧಿ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದವರಿಗೆ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆಂಬ ಮಾತಿದೆ. ಬಹುತೇಕ ಸಂದರ್ಭಗಳಲ್ಲಿ ಈ ಮಾತು ನಿಜವಾಗಿಲ್ಲ. ಏಕೆಂದರೆ ಗೆಲ್ಲುವ ಕಲೆ ರಾಜಕಾರಣಿಗಳಿಗೆ ಸಿದ್ಧಿಸಿದಂತೆ ಸೋಲಿಸುವ ಕಲೆ ಮತದಾರರಿಗೆ ಕರಗತವಾಗಿಲ್ಲ. ಮೇ 30ರ ಹೊತ್ತಿಗೆ ಹೊಸ ಸರ್ಕಾರ ಬರಬೇಕಿರುವುದರಿಂದ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಬಹುದೆನ್ನಲಾಗಿದೆ. ಪ್ರಸಕ್ತ ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ತ್ರಿಪುರಾದಲ್ಲಿ ಫೆ.18ರಂದು ಮತದಾನ ನಡೆದಿದ್ದರೆ, ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆಗೆ ಫೆ.27ರಂದು ಮತದಾನ ನಡೆಯಲಿದೆ. ಗುಜರಾತಿನಲ್ಲಿ ಬಹಳ ಕಷ್ಟದಿಂದ ಅಧಿಕಾರಕ್ಕೆ ಮರಳಿರುವ ಬಿಜೆಪಿಗೂ, ಹರಸಾಹಸ ಮಾಡಿಯೂ ಸೋತ ಕಾಂಗ್ರೆಸ್​ಗೂ ಈ ಮೂರೂ ರಾಜ್ಯಗಳ ಚುನಾವಣೆ ಗೆಲ್ಲುವುದು ಮಹತ್ವದ್ದಾಗಿದೆ.

2018ರ ಕೊನೆಯೊಳಗಾಗಿ ಅಂದರೆ ನವೆಂಬರ್​ನಲ್ಲಿ ಕಾಂಗ್ರೆಸ್ ಆಡಳಿತವಿರುವ ಮಿಜೋರಾಂ ವಿಧಾನಸಭೆಗೆ; ಬಿಜೆಪಿ ಆಡಳಿತವಿರುವ ಛತ್ತೀಸ್​ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆಗೆ ಡಿಸೆಂಬರ್​ನಲ್ಲಿ ಚುನಾವಣೆ ನಡೆಯಬೇಕಿದೆ. ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಗಳಿಸುವ ಧಾವಂತದಲ್ಲಿರುವ ಕಾಂಗ್ರೆಸ್, ಬಿಜೆಪಿಗೆ ಸ್ಥಳೀಯ ಗೆಲುವು ನಂತರದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಬುತ್ತಿಯಾಗಿ ನೆರವಾಗುವ ಸಾಧ್ಯತೆ ಇದೆಯೆಂದೇ ಗೆಲ್ಲಲು ಶತಾಯಗತಾಯ ಯತ್ನ ನಡೆಯುತ್ತದೆ. ಕರ್ನಾಟಕ ಖಂಡಿತವಾಗಿಯೂ ಗುಜರಾತಲ್ಲ. ಅಲ್ಲಿ ಕಣದಲ್ಲಿ ಮುಖ್ಯವಾಗಿದ್ದುದು ಎರಡೇ ಪಕ್ಷ. ಆದರೆ ಕರ್ನಾಟಕದಲ್ಲಿ ಈ ಎರಡೂ ಪಕ್ಷಗಳ ಓಟಕ್ಕೆ ನಿಯಂತ್ರಣ ಒಡ್ಡುವ ರೀತಿಯಲ್ಲಿ ಜೆಡಿಎಸ್ ಇದೆ. ಕಳೆದ ಚುನಾವಣೆಯನ್ನು ತುಲನೆ ಮಾಡಿ ನೋಡಿದರೆ ಒಂದು ವಾಸ್ತವ ರಾಚುತ್ತದೆ. ಸಿದ್ದರಾಮಯ್ಯನವರು ಏನೇ ಸಮರ್ಥಿಸಿಕೊಂಡರೂ ಆಡಳಿತ ವಿರೋಧಿ ನಿಲುವು ಆ ಪಕ್ಷದ ತಲೆನೋವನ್ನು ಹೆಚ್ಚಿಸಿದೆ. ಒಳಜಗಳದಲ್ಲಿ ಕಂಗಾಲಾಗಿರುವ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ ಎಂಬಂತಾಗಿರುವುದು ಜನರಿಗೂ ಗೊತ್ತಾಗಿದೆ. ಹಾಗಾಗಿ ಈ ಎರಡೂ ಪಕ್ಷಗಳಲ್ಲಿ ಸರಳ ಬಹುಮತ (113 ಸ್ಥಾನ) ಪಡೆಯುವ ವಿಚಾರದಲ್ಲೇ ಒಳ ಅನುಮಾನವಿದೆ. ಈ ಅನುಮಾನವನ್ನು ತನ್ನ ಪರವಾಗಿ ನಗದು ಮಾಡಿಕೊಳ್ಳುವ ದಿಸೆಯಲ್ಲಿ ಜೆಡಿಎಸ್ ಹೊರಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ತಿಂಗಳ ಮೂರನೇ ರ‍್ಯಾಲಿ ದಾವಣಗೆರೆಯಲ್ಲಿ ನಡೆಯಲಿದೆ. ಚುನಾವಣಾ ಪ್ರಚಾರದ ಭಾಗವಾಗಿ ಅವರು ನಡೆಸಲಿರುವ ರ್ಯಾಲಿಗಳು ಅಲ್ಲಿ ಸೇರುವ ಜನರನ್ನು ಮತಗಳನ್ನಾಗಿ ಪರಿವರ್ತಿಸಲಿವೆಯೇ ಎನ್ನುವುದನ್ನು ನೋಡಬೇಕು. ಇದೇ ಮಾತು ಎಐಸಿಸಿ ಅಧ್ಯಕ್ಷ ರಾಹುಲ್​ರು ನಡೆಸುತ್ತಿರುವ ಸಭೆ, ರೋಡ್ ಶೋ, ಸಂವಾದಕ್ಕೂ ಅನ್ವಯಿಸುತ್ತದೆ. ಈ ಇಬ್ಬರು ನಾಯಕರ ಅಬ್ಬರದ ಪ್ರವಾಸ, ಪ್ರಚಾರಕ್ಕೆ ಭಿನ್ನವಾಗಿ ಎಚ್.ಡಿ. ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ನಡೆಸಿರುವ ಜನ ಸಂಪರ್ಕ ಯಾತ್ರೆ ಈಗ ನಡೆದಿರುವ ರಾಜಕೀಯ ಚದುರಂಗದಲ್ಲಿ ಯಾವ ದಾಳವನ್ನು ಯಾವ ದಾರಿಯಲ್ಲಿ ನಡೆಸಲಿದೆ ಎನ್ನುವ ಸಹಜ ಕುತೂಹಲ ಕೆರಳಿಸಿದೆ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top