More

  ಕುತೂಹಲದ ಹಂತಕ್ಕೆ ರಾಜ್ಯಸಭೆ ಚುನಾವಣೆ

  ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆ ಇದೀಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ನಾಲ್ಕನೇ ಸ್ಥಾನಕ್ಕೆ ಆಯ್ಕೆಯಾಗುವವರು ಯಾರು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಮಂಗಳವಾರ ಯಾರೊಬ್ಬರೂ ಹಿಂಪಡೆಯಲಿಲ್ಲ. ಕಾಂಗ್ರೆಸ್ ಅಜಯ್ ಮಾಕನ್, ಜಿ.ಸಿ. ಚಂದ್ರಶೇಖರ್, ನಾಸೀರ್ ಹುಸೇನ್, ಬಿಜೆಪಿಯ ನಾರಾಯಣಸಾ ಭಾಂಡಗೆ ಹಾಗೂ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಅಂತಿಮ ಕಣದಲ್ಲಿದ್ದಾರೆ. ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್​ಗೆ ಮೂರು ಹಾಗೂ ಬಿಜೆಪಿಗೆ ಒಂದು ಸ್ಥಾನ ಸುಲಭವಾಗಿ ಗೆಲ್ಲುವುದಕ್ಕೆ ಅವಕಾಶ ಇದೆ. ಆದರೆ, ಜೆಡಿಎಸ್​ನ ಕುಪೇಂದ್ರ ರೆಡ್ಡಿ ಕಣಕ್ಕೆ ಇಳಿದಿರುವುದರಿಂದ ಚುನಾವಣೆ ರಂಗೇರಿದೆ

  ಕುದುರೆ ವ್ಯಾಪಾರ?: 4 ಸ್ಥಾನಗಳಿಗೆ ಐವರು ಕಣದಲ್ಲಿರುವು ದರಿಂದ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಮಾಡಬೇಕಾಗುತ್ತದೆ ಎಂಬ ಚರ್ಚೆ ನಡೆದಿದೆ. ಒಬ್ಬ ಅಭ್ಯರ್ಥಿ ಗೆಲ್ಲಲು 45.8 ಮತಗಳ ಅಗತ್ಯವಿದೆ. ಕಾಂಗ್ರೆಸ್ ತನ್ನ ಶಾಸಕರು, ಮೂವರು ಪಕ್ಷೇತರರು ಚದುರದಂತೆ ನೋಡಿಕೊಂಡರೆ ಮೂವರು ಅಭ್ಯರ್ಥಿಗಳ ಗೆಲುವಿಗೆ ತೊಂದರೆ ಇಲ್ಲ.

  ಬಿಜೆಪಿಯ ಬಳಿಯಲ್ಲಿ ಮಾತ್ರ ಈಗ ಹೆಚ್ಚಿನ ಮತಗಳಿವೆ. ಬಿಜೆಪಿ ತನ್ನ ಅಭ್ಯರ್ಥಿಗೆ ಹಾಕಿಕೊಂಡ ನಂತರ 20 ಮತಗಳು ಉಳಿಯಲಿವೆ. ಬಿಜೆಪಿ ತನ್ನ ಅಭ್ಯರ್ಥಿಗೆ ಕನಿಷ್ಠ ಮೂರು ಮತಗಳನ್ನು ಹೆಚ್ಚುವರಿಯಾಗಿ ಹಾಕಿಕೊಂಡರೆ, 17 ಮತಗಳಷ್ಟೇ ಉಳಿಯಲಿವೆ. ಅದರ ಜತೆಗೆ ಜೆಡಿಎಸ್​ನ 19 ಮತಗಳು ಹಾಗೂ ಜನಾರ್ದನ ರೆಡ್ಡಿ ಸೇರಿದರೆ 37 ಮತಗಳಾಗುತ್ತವೆ. ಗೆಲುವಿಗೆ ಇನ್ನೂ 9 ಮತಗಳ ಅಗತ್ಯ ಬೀಳಳಿದೆ. ಕನಿಷ್ಠ 5 ಮತಗಳನ್ನು ಪಡೆದರೂ ಗೆಲುವು ಸಾಧಿಸಬಹುದು ಎಂಬುದು ರಾಜಕೀಯ ವಲಯದಲ್ಲಿ ನಡೆದಿರುವ ಚರ್ಚೆ.

  ಕುಮಾರಸ್ವಾಮಿ ಪ್ರಯತ್ನ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮೂವರು ಪಕ್ಷೇತರರು ಹಾಗೂ ಕಾಂಗ್ರೆಸ್​ನ ಕೆಲ ಶಾಸಕರನ್ನು ಸಂರ್ಪಸುವ ಪ್ರಯತ್ನ ಮಾಡಿದ್ದಾರೆ ಎಂಬ ಸುದ್ದಿಗಳಿವೆ. ಬಿಜೆಪಿ ನಾಯಕರು ಮಾತ್ರ ಮೌನವಾಗಿದ್ದಾರೆ. ಆದರೆ, ಜೆಡಿಎಸ್​ನಿಂದ ಯಾವುದೇ ಶಾಸಕರು ಚದುರದಂತೆ ನೋಡಿಕೊಳ್ಳುವ ಬಹುದೊಡ್ಡ ಹೊಣೆ ಕುಮಾರಸ್ವಾಮಿಯ ಮೇಲಿದೆ. ಏಕೆಂದರೆ ಲಭ್ಯ ಮಾಹಿತಿಯ ಪ್ರಕಾರ ಐದು ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ ಎಂಬ ಚರ್ಚೆ ವಿಧಾನಸೌಧದ ಮೊಗಸಾಲೆಯಲ್ಲಿ ನಡೆದಿದೆ.

  ಅಡ್ಡ ಮತದಾನ ಆಗುವುದೇ?: ಅಡ್ಡ ಮತದಾನ ನಡೆಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಬಹಿರಂಗ ಬಂಡಾಯ ಸಾರಿರುವ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಸಹ ಅಡ್ಡ ಮತದಾನಕ್ಕೆ ಹೋಗಲು ಹೆದರುತ್ತಿದ್ದಾರೆ. ಮತಪತ್ರವನ್ನು ಚುನಾವಣಾ ಏಜೆಂಟರಿಗೆ ತೋರಿಸಬೇಕು. ಅಡ್ಡ ಮತದಾನ ಮಾಡಿದಾಗ ಸ್ಪೀಕರ್ ಕೋರ್ಟ್​ನಲ್ಲಿ ಏನೇ ತೀರ್ಪು ಬಂದರೂ ಮುಂದೆ ಸುಪ್ರೀಂಕೋರ್ಟ್​ಗೆ ಹೋಗುತ್ತದೆ. ಹಾಗಾಗಿ ಬಿಜೆಪಿಯ ಬಂಡಾಯ ಶಾಸಕರು ಪಕ್ಷದ ವಿಪ್ ಉಲ್ಲಂಘನೆ ಮಾಡುವ ಸಾಧ್ಯತೆ ಇಲ್ಲವೆಂದೇ ಹೇಳಲಾಗುತ್ತಿದೆ.

  ಕಾಂಗ್ರೆಸ್ ಶಾಸಕರಿಗೂ ಭಯ: ಕಾಂಗ್ರೆಸ್​ನ ಶಾಸಕರಲ್ಲಿ ಕೆಲವರಿಗೆ ಅಧಿಕಾರ ಸಿಕ್ಕಿಲ್ಲವೆಂಬ ಅಸಮಾಧಾನ ಇದ್ದರೂ ಅಡ್ಡ ಮತದಾನಕ್ಕೆ ಸಿದ್ಧರಿಲ್ಲ. ಒಂದು ವೇಳೆ ಅಡ್ಡ ಮತದಾನ ಮಾಡಿದರೆ ಮುಂದೆ ನಾಲ್ಕು ವರ್ಷ ಕ್ಷೇತ್ರಕ್ಕೆ ನಯಾಪೈಸೆ ಅನುದಾನವೂ ಸಿಗುವ ಸಾಧ್ಯತೆ ಇಲ್ಲ. ಜತೆಗೆ ನಾಯಕರಾರು ಕ್ಷೇತ್ರದ ಕಡೆ ಸುಳಿಯುವುದಿಲ್ಲ. ರಾಜೀನಾಮೆ ಕೊಟ್ಟರೂ ಮತ್ತೆ ಚುನಾವಣೆ ಎದುರಿಸಲು ಕೋಟ್ಯಂತರ ರೂ. ಬೇಕಾಗುತ್ತದೆ. ಗೆಲ್ಲುವ ಗ್ಯಾರಂಟಿಯೂ ಇಲ್ಲ. ರಾಜಕೀಯವಾಗಿ ಮೂಲೆಗುಂಪಾಗುವ ಭಯ ಇರುತ್ತದೆ. ಇದರಿಂದಾಗಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನಕ್ಕೆ ಹೋಗುವ ಸಾಧ್ಯತೆ ಇಲ್ಲ ಎಂಬುದು ಪಕ್ಷದಲ್ಲಿನ ಅಭಿಪ್ರಾಯ.

  ರೆಸಾರ್ಟ್ ವಾಸ್ತವ್ಯ: ಚುನಾವಣೆ ಮುಂದಿನ ಮಂಗಳವಾರ (ಫೆ.27) ನಡೆಯುತ್ತಿದೆ. ಅಗತ್ಯ ಬಿದ್ದರೆ ಯಾವುದಾದರೂ ರೆಸಾರ್ಟ್​ಗೆ ಕರೆದುಕೊಂಡು ಹೋಗಿ ಮಂಗಳವಾರ ಒಟ್ಟಾಗಿ ಬಂದು ಮತ ಹಾಕಿಸುವ ಬಗ್ಗೆಯೂ ಕಾಂಗ್ರೆಸ್​ನಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿವೆ.

  ಮೈತ್ರಿ ಲೆಕ್ಕಾಚಾರವೇನು?

  • ಐದನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಮುಖಭಂಗ ಮಾಡುವುದು
  • ಮೂವರು ಪಕ್ಷೇತರರು ಹಾಗೂ ಕಾಂಗ್ರೆಸ್​ನಿಂದ ಕನಿಷ್ಠ 4 ಮತ ಸೆಳೆಯಲು ಪ್ರಯತ್ನ
  • ತಮ್ಮ ಮತಗಳ ಬುಟ್ಟಿಗೆ ಕಾಂಗ್ರೆಸ್ ಕೈ ಹಾಕದಂತೆ ಎಚ್ಚರವಹಿಸುವುದು
  • ಅಡ್ಡ ಮತದಾನ ಮಾಡಿದರೆ ತಕ್ಷಣ ನ್ಯಾಯಾಲಯ ಮೆಟ್ಟಿಲು ಹತ್ತಲು ಸಿದ್ಧತೆ

  ಕಾಂಗ್ರೆಸ್ ಪ್ರಯತ್ನ

  • ತಮ್ಮ ಮತಗಳು ಚದುರಂತೆ ನೋಡಿಕೊಳ್ಳುವುದು
  • ಎರಡನೇ ಪ್ರಾಶಸ್ಱ ಮತಗಳನ್ನು ಸರಿಯಾಗಿ ಹಂಚಿಕೆ ಮಾಡಿಕೊಳ್ಳುವುದು
  • ಪಕ್ಷೇತರರನ್ನು ಕಾಯ್ದಿರಿಸಿಕೊಳ್ಳುವುದು
  • ಅಗತ್ಯ ಬಿದ್ದರೆ ಶಾಸಕರನ್ನು ರೆಸಾರ್ಟ್​ಗೆ ಕರೆದುಕೊಂದು ಹೋಗುವುದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts