Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಯೋಜನೆಗೆ ಕಾರಣ ಯಥೇಚ್ಛ ನೀರೋ, ಹಣವೋ?!

Saturday, 07.07.2018, 3:04 AM       No Comments

ರಾವತಿ ಕರ್ಮಕಾಂಡ ಎನ್ನುವುದು 50-60ರ ದಶಕದಲ್ಲಿ ಪತ್ರಿಕೆಗಳಲ್ಲಿ ನಿತ್ಯಶೀರ್ಷಿಕೆಯ ಸುದ್ದಿಯಾಗಿತ್ತು. ರಾಜ್ಯದ ಸಂಪೂರ್ಣ ಬೇಡಿಕೆ ಪೂರೈಸುವ ವಿದ್ಯುತ್ ಉತ್ಪಾದನಾ ಕೇಂದ್ರವಾಗಿ ಸರ್ಕಾರ ಕೈಗೆತ್ತಿಕೊಂಡಿದ್ದ ಶರಾವತಿ ಜಲವಿದ್ಯುತ್ ಯೋಜನೆ ಅನುಷ್ಠಾನದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ, ಕಳಪೆ ಕಾಮಗಾರಿ ಮುಂತಾದವು ಧಾರಾವಾಹಿಯಂತೆ ಪ್ರಕಟವಾಗುತ್ತಿದ್ದ ಸುದ್ದಿಗೆ ಹೂರಣವಾಗಿದ್ದವು. ಆಗ ಪ್ರಧಾನಿಯಾಗಿದ್ದ ಲಾಲ್ ಬಹಾದುರ್ ಶಾಸ್ತ್ರಿ, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಕೇಳಿಬಂದ ಹಗರಣಗಳ ಸುದ್ದಿಯ ಖುದ್ದು ಪರಿಶೀಲನೆಗೆ ಬಂದಿದ್ದರು. ಲಿಂಗನಮಕ್ಕಿ ಜಲಾಶಯದಿಂದ ತಲಕಳಲೆ ಬ್ಯಾಲೆನ್ಸಿಂಗ್ ರಿಸರ್ವಾಯರ್​ಗೆ ನೀರನ್ನು ಸಾಗಿಸುವ ಸುರಂಗದ ಕಾಮಗಾರಿ ನಡೆದಿದ್ದ ಸ್ಥಳಕ್ಕೂ ಅವರು ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ನಾನಾಗ ಜೋಗದ ಹೈಸ್ಕೂಲ್ ವಿದ್ಯಾರ್ಥಿ. ಅವರನ್ನು ನೋಡಲು ನಾವೆಲ್ಲ ಹೋಗಿದ್ದೆವು. ಕಾರಿನಿಂದ ಅವರು ಇಳಿದು ಅಡ್ಡಾಡಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು. ಅದೇ ಕಾರಿನಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಮಾತ್ರ ಕೆಳಗಿಳಿಯಲಿಲ್ಲ. ಕರ್ಮಕಾಂಡದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದ್ದುದರಿಂದ ಭದ್ರತಾ ಸಿಬ್ಬಂದಿ ಅವರಿಗೆ ಅಂಥ ಸೂಚನೆ ನೀಡಿದ್ದರೋ ಏನೋ ಗೊತ್ತಿಲ್ಲ. ಅದೆಲ್ಲ ಮರೆತುಹೋದ ಮಾತು ಎಂದುಕೊಂಡಿರುವಾಗಲೇ ದಶಕಗಳ ಬಳಿಕ ಮತ್ತೊಂದು ಕರ್ಮಕಾಂಡಕ್ಕೆ ಆ ಪುಟ್ಟನದಿ ನೆಪವಾಗುತ್ತಿದೆಯೇ ಎಂಬ ಅನುಮಾನಕ್ಕೆ ರೆಕ್ಕೆಪುಕ್ಕ ಬಲಿಯಲು ಆರಂಭಿಸಿದ್ದರೆ ಅದಕ್ಕೆ ಕಾರಣ ರಾಜ್ಯ ಸರ್ಕಾರದ ಮುಂದಿರುವ ಅವಾಸ್ತವಿಕವಾದೊಂದು ಪ್ರಸ್ತಾವ.

ಕುಡಿಯುವ ನೀರಿಗೆ ಪರದಾಡುತ್ತಿರುವ ಬೆಂಗಳೂರಿಗೆ ಆ ಅಗತ್ಯ ಪೂರೈಸುವ ಇತರೆಲ್ಲ ಮಾರ್ಗಗಳೂ ಮುಚ್ಚಿಹೋಗಿವೆ ಎಂದು ಭಾವಿಸಿರುವ ಸರ್ಕಾರ ಜನರನ್ನು ತಪ್ಪುದಾರಿಗೆ ಎಳೆಯುವ, ಆಡಳಿತಾರೂಢರ ಮತ್ತು ಗುತ್ತಿಗೆದಾರರ ಹಿತಕಾಯುವ ಯೋಜನೆಯ ಕನಸನ್ನು ಮುಂದಿಟ್ಟು ‘ಅಜ್ಜಿಯನ್ನು ಸುಟ್ಟಂತೆಯೂ ಆಯಿತು, ಚಳಿ ಕಾಯಿಸಿಕೊಂಡಂತೆಯೂ ಆಯಿತು’ ಎಂಬ ಕೆಲಸಕ್ಕೆ ಹೊರಟಂತಿದೆ. ಬೆಂಗಳೂರಿಗೆ ಶರಾವತಿಯಿಂದ ನೀರನ್ನು ತರುವ ಪ್ರಸ್ತಾಪಿತ ಯೋಜನೆಯನ್ನು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ ನಂತರದಲ್ಲಿ ಸಮಚಿತ್ತದಲ್ಲಿ ಯೋಚಿಸುವವರೆಲ್ಲರ ತಲೆಯೂ ಬಿಸಿಯಾಗಿದ್ದು ವ್ಯಕ್ತವಾಗುತ್ತಿರುವ ಪ್ರತಿಭಟನೆಗಳು ಇದನ್ನು ಹೇಳುತ್ತಿವೆ.

ಇಷ್ಟಕ್ಕೂ ಏನು ಯೋಜನೆ ಇದು…? ತೀರ್ಥಹಳ್ಳಿ ತಾಲೂಕು ಅಂಬುತೀರ್ಥದಲ್ಲಿ ಹುಟ್ಟಿ ಪಶ್ಚಿಮಾಭಿಮುಖ ಸಾಗಿ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಶರಾವತಿ ಹರಿವು 253 ಕಿ.ಮೀ. ಮಾತ್ರ. ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆ ನದಿಯ ಜಲಾನಯನ ಪ್ರದೇಶ ಮಾತ್ರವಲ್ಲ ಅದು ಹರಿಯುವುದು ಕೂಡಾ ಈ 2 ಜಿಲ್ಲೆಗಳಲ್ಲೇ. ಜೋಗದಲ್ಲಿ 759 ಅಡಿ ಧುಮ್ಮಿಕ್ಕಿ ಸೃಷ್ಟಿಯಾಗಿರುವ ಜಲಪಾತ ವಿಶ್ವವಿಖ್ಯಾತ. 40ರ ದಶಕದಲ್ಲಿ ರೂಪುಗೊಂಡ ಮಹಾತ್ಮ ಗಾಂಧಿ ಜಲವಿದ್ಯುತ್ ಸ್ಥಾವರ, 60ರ ದಶಕದಲ್ಲಿ ಅಸ್ತಿತ್ವ ತಳೆದ ಶರಾವತಿ ಜಲವಿದ್ಯುದಾಗಾರ, ನಂತರದಲ್ಲಿ ಬಂದ ಶರಾವತಿ ಟೇಲ್​ರೇಸ್ ಯೋಜನೆ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವುದಕ್ಕೂ ಇದು ಹೆಸರುವಾಸಿ. ಲಿಂಗನಮಕ್ಕಿಯಲ್ಲಿ ಅದಕ್ಕೆ ಕಟ್ಟಿರುವ ಅಣೆಕಟ್ಟಿನ ಹಿಂದೆ ನೂರಾರು ಹಳ್ಳಿಗಳು ಜಲಸಮಾಧಿಯಾಗಿವೆ, ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡಿವೆ. ಎಷ್ಟೋ ಕುಟುಂಬಗಳ ಪುನರ್ವಸತಿ ಪ್ರಕ್ರಿಯೆ 70 ವರ್ಷ ಬಳಿಕವೂ ಪೂರ್ಣಗೊಂಡಿಲ್ಲ. ಈಗ ಈ ಜಲಾಶಯದ ನೀರನ್ನು ತಂದು ಬೆಂಗಳೂರಿಗರ ಬಾಯಾರಿಕೆ ತಣಿಸುವ ಸಾಹಸಕ್ಕೆ ಕೈಹಾಕುವ ಸೂಚನೆ ಉಪಮುಖ್ಯಮಂತ್ರಿಗಳ ಹೇಳಿಕೆಯಲ್ಲಡಗಿದೆ.

ಲಿಂಗನಮಕ್ಕಿಯಿಂದ ಬೆಂಗಳೂರು 450 ಕಿ.ಮೀ. ದೂರದಲ್ಲಿದ್ದು, ಜಲಾಶಯದ ಮಟ್ಟದಿಂದ ಬರೋಬ್ಬರಿ 1,000 ಅಡಿ ಎತ್ತರದಲ್ಲಿದೆ. ಬೆಂಗಳೂರು ಜಲಮಂಡಳಿಯ ಮಾಜಿ ಅಧ್ಯಕ್ಷ ಬಿ.ಎನ್.ತ್ಯಾಗರಾಜ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ವರದಿ ರೀತ್ಯ, ಶರಾವತಿ ನೀರನ್ನು ಹಾಸನ ಜಿಲ್ಲೆ ಯಗಚಿ ಜಲಾಶಯಕ್ಕೆ ಒಯ್ಯುವುದು ಮೊದಲ ಹಂತ. ಇಲ್ಲಿ ಸಂಗ್ರಹಗೊಳ್ಳುವ ನೀರನ್ನು ಬೆಂಗಳೂರು ಹೊರವಲಯದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸಹಜ ಗುರುತ್ವಾಕರ್ಷಣ ಶಕ್ತಿಯಲ್ಲಿ ಹರಿಸುವುದು ಯೋಜನೆಯ ಸ್ಥೂಲ ರೂಪರೇಖೆ. ಸರ್ಕಾರದ ಯೋಜನೆಗಳೆಲ್ಲವೂ ಕಾಗದದಲ್ಲಿ ಚೆನ್ನಾಗೇ ಇರುತ್ತವೆ. ವಾಸ್ತವದಲ್ಲಿ ಬಲಿಯಾಗುವುದು ಜನಹಿತ. ಶರಾವತಿ ಮುಳುಗಡೆ ಸಂತ್ರಸ್ತರ ಗೋಳಿಗೆ ಪುಟ್ಟ ಉದಾಹರಣೆಯೊಂದನ್ನು ನೋಡೋಣ. ಯಲ್ಲಾಪುರ/ಮುಂಡಗೋಡ ತಾಲೂಕುಗಳಲ್ಲಿ ಪುನರ್ವಸತಿ ಕಂಡುಕೊಂಡ ಕೆಲ ಸಂತ್ರಸ್ತರಿಗೆ ಸರ್ಕಾರವೇ ನೀಡಿದ ಜಮೀನಿನ ಮಾಲೀಕತ್ವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಅರಣ್ಯ ಇಲಾಖೆಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸದೆ ಕುಳಿತ ಆಡಳಿತ ಯಂತ್ರಕ್ಕೆ ಸಿಕ್ಕುಬಿದ್ದಿರುವ ರೈತರ ಒಂದು ಪೀಳಿಗೆ ಕನಸಿನಲ್ಲೇ ಕರಗಿಹೋಗಿದೆ. ಹೊಸನಗರ ತಾಲೂಕಿನಲ್ಲೂ ಇಂಥದೇ ಪರದಾಟ. ಇಂಥ ಘೊರಸ್ಥಿತಿ ಸೂಪಾ, ಆಲಮಟ್ಟಿ ಜಲಾಶಯದ ಮುಳುಗಡೆ ಸಂತ್ರಸ್ತರದು ಕೂಡಾ. ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ, ಸಚಿವರಾಗಿರುವ ಆರ್.ವಿ. ದೇಶಪಾಂಡೆ ಮುಂತಾದವರಿಗೆ ಈ ಗೋಳಿನಕತೆ ಸಂಪೂರ್ಣ ತಿಳಿದಿದೆ. 50-60 ವರ್ಷದಲ್ಲಿ ಬಂದುಹೋದ ಎಲ್ಲ ಸರ್ಕಾರಗಳೂ ಭರವಸೆ ನೀಡಿವೆ. ತುಮರಿ ಪ್ರದೇಶಕ್ಕೆ ಸಂಪರ್ಕ ಸೇತುವೆ ನಿರ್ವಿುಸುವ ಯೋಜನೆಗೆ ಹಣ ಇಲ್ಲ ಎನ್ನುವ ಸರ್ಕಾರಗಳು ಬೆಂಗಳೂರಿನ ಕುಡಿಯುವ ನೀರಿನ ಯೋಜನೆ ನೆಪದಲ್ಲಿ ಹಣದಹೊಳೆ ಹರಿಸುವ ಯತ್ನ ನಡೆಸಿರುವುದು ಈಗಿರುವ ವ್ಯವಸ್ಥೆಯಲ್ಲಿ ಅಚ್ಚರಿಯದೂ ಅಲ್ಲ, ವಿಪರ್ಯಾಸದ್ದೂ ಅಲ್ಲ.

ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಚನೆ ಇದೆಯೆಂದು ಹೇಳಿದ ಮೊದಲಿಗ ಪರಮೇಶ್ವರ್ ಅಲ್ಲ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲರು, ಅದಕ್ಕೂ ಪೂರ್ವದಲ್ಲಿ ಒಬ್ಬಿಬ್ಬರು ಉತ್ಸುಕ ಅಧಿಕಾರಿಗಳೂ ಈ ಮಾತನ್ನಾಡಿದ್ದರು. ಅವರೆಲ್ಲರ ಪ್ರಕಾರ ಶರಾವತಿಯಲ್ಲಿ ಹೇರಳ ನೀರಿದೆ, ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿ ನೀರು ಉಕ್ಕುಕ್ಕಿ ಹರಿದು ಸಮುದ್ರ ಸೇರಿ ವೃಥಾ ಪೋಲಾಗುತ್ತಿದೆ. ಪೋಲಾಗದಂತೆ ತಡೆಯಲು, ನೀರಿನ ಸದ್ವಿನಿಯೋಗ ಮಾಡಿಕೊಳ್ಳಲು ಬೆಂಗಳೂರಿಗೆ ಅದನ್ನು ಹರಿಸುವ ಯೋಜನೆ ಅಗತ್ಯವಿದೆ. ಹೌದೇ…? ನಿಜವೇ? 150 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಲಿಂಗನಮಕ್ಕಿ ಜಲಾಶಯದ್ದು. ಮಲೆನಾಡಿನಲ್ಲಿ ಮಳೆಗೆ ತೊಂದರೆಯಿಲ್ಲ ಎನ್ನುವುದು ಅನೇಕರ ಹುಸಿನಂಬಿಕೆ. ಉತ್ತರಕನ್ನಡ ಜಿಲ್ಲೆ ಜೊಯ್ಡಾ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಿರುವ ಸೂಪಾ ಅಣೆಕಟ್ಟೆ ನಿರ್ವಣವಾಗಿ 3 ದಶಕ ಕಳೆದಿದೆ. ಈ ಅವಧಿಯಲ್ಲಿ ಅದು ಭರ್ತಿಯಾಗಿದ್ದು 3 ಬಾರಿ ಮಾತ್ರ. ಲಿಂಗನಮಕ್ಕಿಯದೂ ಇದೇ ಹಣೆಬರಹ. ದಶಕಗಳ ಹಿಂದೆ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದಾಗ 10-15 ಮಳೆವರ್ಷದಲ್ಲಿ ಭರ್ತಿ ಆಗಿದ್ದರ ಆಚೆಗೆ ಜಲಾಶಯವೂ ನೀರನ್ನು ಬೇಡುತ್ತಿದೆ. ಕಳೆದ 8-9 ವರ್ಷದಲ್ಲಿ ಈ ಜಲಾಶಯ ತುಂಬಿಯೇ ಇಲ್ಲ. ವಿದ್ಯುತ್ ಉತ್ಪಾದಿಸಿದ ಬಳಿಕ ಹರಿದುಹೋಗುವ ನೀರನ್ನು ಬೆಂಗಳೂರಿಗೆ ತಂದರೆ ತಪ್ಪೇನು ಎಂಬ ವಾದವೂ ಇದೆ. ಹರಿದುಹೋಗುವ ನೀರು ಜಲಾಶಯ ಮಟ್ಟದಿಂದ 900 ಅಡಿಯಷ್ಟು ಕೆಳಕ್ಕೆ ಇರುತ್ತದೆ. ಈಗಾಗಲೇ ಜಲಾಶಯ ಮಟ್ಟದಿಂದ ಬೆಂಗಳೂರು 1,000 ಅಡಿ ಎತ್ತರದಲ್ಲಿದ್ದು ಅದು 1,900 ಅಡಿಗೆ ಹೆಚ್ಚುತ್ತದೆ. ಸುಮಾರು 200 ಕಿ.ಮೀ. ದೂರದಲ್ಲಿರುವ ಯಗಚಿ ಅಣೆಗೆ 1,900 ಅಡಿ ಕೆಳಗಿನಿಂದ ನೀರನ್ನು ಪಂಪ್ ಮಾಡುವುದಕ್ಕೆ ಬೇಕಾಗಿರುವ ವಿದ್ಯುತ್ ಎಷ್ಟು, ದಿನವೂ ಪಂಪ್ ಆಗಬೇಕಾಗಿರುವುದರಿಂದ 365 ದಿನವೂ ಅನಿಯಂತ್ರಿತ ವಿದ್ಯುತ್ ಪೂರೈಕೆ ಸಾಧ್ಯವೇ…? ತ್ಯಾಗರಾಜ ಸಮಿತಿ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವಂತಿದೆ.

200 ಕಿ.ಮೀ. ದೂರದ ಕೊಳವೆಮಾರ್ಗದಲ್ಲಿ ಎರಡು ಮೂರಾದರೂ ಬೃಹತ್ ಜಲಸಂಗ್ರಹಾಗಾರ ನಿರ್ವಿುಸಿ ಶೇಖರಿಸಿಟ್ಟ ನೀರನ್ನು ಪಂಪ್ ಮಾಡಬೇಕಾಗುತ್ತದೆ. ಅದಕ್ಕೆ ನೂರಾರು ಎಕರೆ ಜಾಗದ ಗಿಡಮರಗಳನ್ನು ಸವರಬೇಕಾಗುತ್ತದೆ. ಖಾಸಗಿ ಭೂಮಿಯಾಗಿದ್ದರೆ ಹೇರಳ ಹಣ ಕೊಟ್ಟು ಖರೀದಿಸಬೇಕಾಗುತ್ತದೆ. ಕಾವೇರಿ ತಟದ ತೊರೆಕಾಡನಹಳ್ಳಿಯಿಂದ ಕೇವಲ 88 ಕಿ.ಮೀ. ದೂರದ ಬೆಂಗಳೂರಿಗೆ ನೀರನ್ನು ಹರಿಸಲು ಬೆಂಗಳೂರು ಜಲಮಂಡಳಿ ಹೆಣಗುತ್ತಿರುವುದಕ್ಕೆ ಕಾರಣ, ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿ ರಾಜಧಾನಿ ನಗರ ಇರುವುದು. ನೀರನ್ನು ಅಷ್ಟೆತ್ತರಕ್ಕೂ ಪಂಪ್ ಮಾಡಬೇಕು. ವಿದ್ಯುತ್ ಬಂದ್ ಆಯಿತೆಂದರೆ ರಾಜಧಾನಿಗೆ ನೀರೂ ಬಂದ್. ವಾಸ್ತವ ಹೀಗಿರುವಾಗ ಬೆಂಗಳೂರೆಲ್ಲಿ… ಲಿಂಗನಮಕ್ಕಿಯೆಲ್ಲಿ…? ಈ ಯೋಜನೆ ರೂವಾರಿ ತ್ಯಾಗರಾಜ ಹೇಳುವಂತೆ ಲಿಂಗನಮಕ್ಕಿಯಿಂದ ಬೆಂಗಳೂರಿಗೆ 30 ಟಿಎಂಸಿ ನೀರನ್ನು ವರ್ಷ ವರ್ಷವೂ ಹರಿಸುವ ಈ ಯೋಜನೆಯ ಅಂದಾಜುವೆಚ್ಚ 12,500 ಕೋಟಿ ರೂಪಾಯಿ. ಸರ್ಕಾರದ ಯಾವುದಾದರೂ ಯೋಜನೆ ಅಂದಾಜುವೆಚ್ಚದಲ್ಲಿ ಪೂರ್ಣಗೊಂಡಿರುವ ನಿದರ್ಶನ ಇದೆಯೆ?

ಉಪಮುಖ್ಯಮಂತ್ರಿ ತುಮಕೂರು ಜಿಲ್ಲೆಯವರು. ಹೇಮಾವತಿಯಿಂದ ತುಮಕೂರಿಗೆ ನೀರನ್ನು ತಂದಷ್ಟು ಸುಲಭದ ಕೆಲಸ ಅಲ್ಲ ಶರಾವತಿಯನ್ನು ಬೆಂಗಳೂರಿಗೆ ತರುವುದು. ಯೋಜನೆಯ ಪ್ರಸ್ತಾವವನ್ನು ಡಿಸಿಎಂ ಸಾರ್ವಜನಿಕಗೊಳಿಸಿದ ಬಳಿಕ ತೀವ್ರವಿರೋಧ ಎದುರಾಗಿದೆ. ಈ ಪ್ರಸ್ತಾವದ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದ ನಿಲುವಾಗಲೀ, ಇಂಧನ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮನಸ್ಸಾಗಲೀ ಸಾರ್ವಜನಿಕವಾಗಿಲ್ಲ. ಪ್ರಮುಖ ವಿರೋಧ ಪಕ್ಷ ಬಿಜೆಪಿ ಮೌನಕ್ಕೆ ಶರಣಾಗಿದೆ!

ಲಿಂಗನಮಕ್ಕಿಯೇನೂ ಶರಾವತಿಗೆ ಹೊಸ ಅಣೆಕಟ್ಟೆಯಲ್ಲ. 1939ರಷ್ಟು ಹಿಂದೆಯೇ ಹಿರೇಭಾಸ್ಕರ ಎಂಬಲ್ಲಿ (ಮಡೆನೂರು ಡ್ಯಾಂ) ಅಣೆಕಟ್ಟೆ ನಿರ್ವಿುಸಲಾಗಿತ್ತು. ಜೋಗದಲ್ಲಿ ಆಗಷ್ಟೇ ನಿರ್ವಣವಾಗಿದ್ದ ಮಹಾತ್ಮ ಗಾಂಧಿ ಜಲವಿದ್ಯುತ್ ಸ್ಥಾವರಕ್ಕೆ ನೀರನ್ನು ಬಳಸಲಾಗುತ್ತಿತ್ತು. ವಿದ್ಯುತ್ ಬೇಡಿಕೆ ಹೆಚ್ಚುತ್ತ ಹೋದಂತೆ ಲಿಂಗನಮಕ್ಕಿಯಲ್ಲಿ ಬೃಹತ್ ಡ್ಯಾಂ ನಿರ್ವಣವಾಯಿತು. ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಭರ್ತಿಯಾಗುತ್ತ ಹೋದಂತೆ ನೂರಾರು ಹಳ್ಳಿಗಳ ಜತೆಗೆ ಮಡೆನೂರು ಡ್ಯಾಮೂ ಮುಳುಗಿಹೋಯಿತು. ಈ ಡ್ಯಾಂ ನಿರ್ವಣವಾದಾಗ ಅನೇಕ ಮುಳುಗಡೆ ಸಂತ್ರಸ್ತರು ಅಣೆಕಟ್ಟೆಯಿಂದ ಕೆಳಕ್ಕೆ ಮನೆಮಾರು ಮಾಡಿಕೊಂಡಿದ್ದರು. ಲಿಂಗನಮಕ್ಕಿ ಅಣೆಕಟ್ಟು ಏರುತ್ತ ಹೋದಂತೆ ಮುಳುಗಡೆ ಸಂತ್ರಸ್ತರು ಖಾಲಿಮಾಡಬೇಕಾಯಿತು. ಅಲ್ಲೇ ಉಳಿದರೆ ಮುಳುಗಿ ಸಾಯಬೇಕು, ಬೇರೆಡೆ ಹೋದರೆ ಅನ್ನವಿಲ್ಲದ ಸ್ಥಿತಿಗೆ ಒಗ್ಗಿಕೊಳ್ಳಬೇಕೆಂಬ ಸಂಕಟವನ್ನು ಡಿ.ಕೆ. ಶಿವಕುಮಾರ್​ರಂಥ ಸಚಿವರು ‘ತ್ಯಾಗ’ ಎಂದು ಕರೆಯುತ್ತಾರೆ. ನಿಜ, ಬೆಂಗಳೂರು ಈಗ 1,30,00,000 ಜನಸಂಖ್ಯೆಯ ನಗರ. ಮುಂದೆ ರಾಜಧಾನಿಯಲ್ಲಿ ನೀರಿಗೆ ಹೊಡೆದಾಟ ಬಡಿದಾಟ ನಡೆಯಬಹುದಾದ ಲಕ್ಷಣ ಈಗಲೇ ಗೋಚರವಾಗುತ್ತಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ, ಮೈ, ಜಾನುವಾರು, ಕಾರು ತೊಳೆಯಲೂ, ಹೂಗಿಡಗಳಿಗೆ ಎರೆಯಲೂ ಕಾವೇರಿಯೇ ಬೇಕು. ಜಗತ್ತಿನ ಇನ್ಯಾವ ನಗರದಲ್ಲೂ ಕುಡಿಯುವ ನೀರನ್ನು ಇತರ ಕೆಲಸಕ್ಕೆ ಬಳಸುವ ಪದ್ಧತಿ ಇಲ್ಲ, ಬೆಂಗಳೂರಿನಲ್ಲಿ ಮಾತ್ರ ಅದಕ್ಕೆ ನಿಯಂತ್ರಣವಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕೇ ಹೊರತು ಅವಾಸ್ತವಿಕ ಯೋಜನೆಗಳ ಪ್ರಸ್ತಾವವನ್ನಲ್ಲ. ಅಂದಹಾಗೆ, ಜನರಾಡುತ್ತಿರುವ ಮಾತನ್ನು ಇಲ್ಲಿ ಉಲ್ಲೇಖಿಸಬಹುದಾದರೆ ಲಿಂಗನಮಕ್ಕಿಯಿಂದ ನೀರನ್ನು ತರುವ ಯತ್ನಕ್ಕೆ ನೀರು ಯಥೇಚ್ಛವಾಗಿದೆ ಎನ್ನುವುದು ಕಾರಣವಲ್ಲ, ಬದಲಿಗೆ ಯೋಜನೆ ಅನುಷ್ಠಾನದಲ್ಲಿ ಯಥೇಚ್ಛ ಹಣ ಇದೆ ಎನ್ನುವುದು!

Leave a Reply

Your email address will not be published. Required fields are marked *

Back To Top