Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಅಂಕವಿಲ್ಲ, ಪರದೆಯಿಲ್ಲ ಇದು ಕರ್-ನಾಟಕ!

Saturday, 15.09.2018, 2:04 AM       No Comments

ರ್ನಾಟಕ ಎಂಬ ಪದದಲ್ಲಿ ನಾಟಕವೂ ಇದೆ. ರಾಜ್ಯದಲ್ಲಿ ಇದೀಗ ನಡೆದಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಇದೆಂಥ ನಾಟಕ ಎಂದೆನಿಸದಿರದು. ಚುನಾವಣಾಪೂರ್ವದಲ್ಲಿ ಉತ್ತರ ದಕ್ಷಿಣ ಧ್ರುವಗಳಾಗಿ ಕಾದಾಡಿದ ಜೆಡಿಎಸ್ ಮತ್ತು ಕಾಂಗ್ರೆಸ್ ಅನುಕೂಲಸಿಂಧು ರಾಜಕಾರಣದ ಭಾಗವಾಗಿ ಒಂದಾದವು. ಸಮ್ಮಿಶ್ರ ಸರ್ಕಾರದ ರಚನೆಯೂ ಆಯಿತು. ಅಲ್ಲಿಂದ ಮುಂದಕ್ಕೆ ಅಭಿವೃದ್ಧಿ ರಾಜಕೀಯ ಶುರುವಾಗಬೇಕು. ಸರ್ಕಾರವೆಂಬ ಚಕ್ಕಡಿಯ ಒಂದು ಕಡೆಯ ನೊಗವನ್ನು ಎಚ್.ಡಿ. ಕುಮಾರಸ್ವಾಮಿ, ಮತ್ತೊಂದನ್ನು ಜಿ.ಪರಮೇಶ್ವರ ಹೊತ್ತಿದ್ದಾರೆ. ಚಕ್ರ ತಿರುಗುತ್ತದೆ, ಬಂಡಿ ಚಲಿಸುತ್ತದೆ ಎಂದು ಕಾದವರಿಗೆ ಕಾದಿದ್ದಷ್ಟೇ ಅನುಭವಕ್ಕೆ ದಕ್ಕಿದೆ. ಬಂಡಿ ಚಲಿಸದೇ ಇರುವುದಕ್ಕೆ ಕಾರಣ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಪಕ್ಷಗಳೇ ಎನ್ನುವುದು ವಿಪರ್ಯಾಸ. ಅತ್ಯಧಿಕ ಶಾಸಕರನ್ನು ಹೊಂದಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯದಲ್ಲಿ ಅಸಹಜವಾದುದೇನೂ ಇಲ್ಲ. ಆದರೆ ಈ ಎರಡು ಪಕ್ಷಗಳ ಮೈತ್ರಿ ರಾಜಕಾರಣದಲ್ಲಿ ಸಹಜವಾದುದು ಕಾಣಿಸುತ್ತಿಲ್ಲ. ಚುನಾವಣೆ ಮುಗಿದು ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ತಿಂಗಳಾಗುತ್ತ ಬಂದಿದೆ. ಆಡಳಿತ ಪಕ್ಷಗಳಲ್ಲಿ ನಡೆಯುತ್ತಿರುವ ಆಟ ದೊಡ್ಡ (ಕರ್) ನಾಟಕದಂತೆ ಭಾಸವಾಗುತ್ತಿದೆ. ಉಭಯ ಪಕ್ಷಗಳಲ್ಲಿ ಯಾರು ಯಾರನ್ನು ಯಾವಾಗ ಯಾಕಾಗಿ ಹಣಿಯುತ್ತಾರೆ; ಹಣಿಯಬಯಸುತ್ತಾರೆ ಎನ್ನುವುದು ಗೊತ್ತಾಗದ ಸ್ಥಿತಿ ಕರ್-ನಾಟಕದ ಮುಖ್ಯ ಕಥಾ ಸಾರಾಂಶವಾಗಿದೆ.

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಎಲ್​ಡಿ ಬ್ಯಾಂಕ್​ಗೆ ನಡೆದ ಚುನಾವಣೆ ಮತ್ತು ಅದರಲ್ಲಿ ಆಸಕ್ತಿ ವಹಿಸಿದ ಮೂವರು ಕಾಂಗ್ರೆಸ್ ಶಾಸಕರೇ ಈ ಹೊತ್ತಿನ ರಾಜಕೀಯ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿರುವುದು ಆಡಳಿತ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ನಿಚ್ಚಳ ನಿದರ್ಶನ. ಬೆಳಗಾವಿ ಜಿಲ್ಲೆಯನ್ನು ತಮ್ಮ ಹಿಡಿತದಲ್ಲಿಯೇ ಉಳಿಸಿಕೊಳ್ಳಬೇಕೆಂಬ ತಹತಹ ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವು ಮುಖಂಡರಲ್ಲಿದೆ. ಬಿಜೆಪಿ ಮುಖಂಡರಾದ ಉಮೇಶ ಕತ್ತಿ, ಕಾಗೆ, ಅಂಗಡಿ, ಬಾಲಚಂದ್ರ ಜಾರಕಿಹೊಳಿ ಮುಂತಾದವರು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಶಾಸಕರಾದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ‘ಇದು ನಮ್ಮ ಜಿಲ್ಲೆ, ಅನ್ಯರು ಮೂಗು ತೂರಿಸುವುದನ್ನು ಸಹಿಸೆವು’ ಎಂದು ನೇರವಾಗೇ ಹೇಳುತ್ತಾರೆ. ಆ ಮಾತಿಗೆ ಎದುರಾಡುವವರು ಈವರೆಗೂ ಯಾರೂ ಆ ಪಕ್ಷದಲ್ಲಿರಲಿಲ್ಲ. ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕೆ ಇಳಿದು 51 ಸಾವಿರಕ್ಕೂ ಅಧಿಕ ಮತಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಜಯಿಸಿದ ಕ್ಷಣದಿಂದಲೇ ಜಾರಕಿಹೊಳಿ ಸಹೋದರರಲ್ಲಿ ಕಾಲ ಕೆಳಗಿನ ನೆಲ ಅದುರುತ್ತಿರುವುದರ ಅನುಭವ ಆಗಿದ್ದು ಸುಳ್ಳಿರಲಾರದು. ಲಕ್ಷ್ಮಿ ವಿರುದ್ಧ ಈ ಸಹೋದರರಲ್ಲಿ ರಾಜಕೀಯ ಹಗೆತನದ ಬೀಜಾಂಕುರವಾಗಿ ಇದೀಗ ಯಾರೂ ಬಗ್ಗಿಸಲಾಗದ ಮರವಾಗಿ ಅದು ಬೆಳೆದಿದೆ. ಮಾತ್ರವಲ್ಲ ಸಮ್ಮಿಶ್ರ ಸರ್ಕಾರದ ಹಡಗು ಹೊಯ್ದಾಡುವಂತೆ ಮಾಡಿದೆ.

ಪಿಎಲ್​ಡಿ ಬ್ಯಾಂಕ್, ಒಂದು ಸಣ್ಣ ಆದರೆ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಪ್ರಭಾವವುಳ್ಳ ಸಂಸ್ಥೆ. ನಿರ್ದೇಶಕರು ನಂತರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಸರ್ವಾನುಮತದಿಂದ ಆಯ್ಕೆ ಆಗಬೇಕೆನ್ನುವುದು ಅಲಿಖಿತ ನಿಯಮ. ಈ ನಿಯಮ ಜಾರಿಗೆ ತಂದವರು ಜಾರಕಿಹೊಳಿ ಸಹೋದರರೇ. ಸರ್ವಾನುಮತದ ಆಯ್ಕೆ ಎನ್ನುವುದು ಒಂದು ರೀತಿಯ ರಾಜಕೀಯ ತಂತ್ರಗಾರಿಕೆ. ಬೆಳಗಾವಿ ಜಿಲ್ಲೆಯನ್ನು ಕಬ್ಜಾದಲ್ಲಿಟ್ಟುಕೊಳ್ಳಲು ಹೊರಟಿರುವ ಜಾರಕಿಹೊಳಿ ಸಹೋದರರಿಗೆ ಯಾರು ಬೇಕೋ ಅವರನ್ನು ಆಯ್ಕೆ ಮಾಡುವುದು, ಯಾರು ಬೇಡವೋ ಅವರನ್ನು ದೂರವಿಡುವುದೇ ಈ ತಂತ್ರಗಾರಿಕೆ. ಸಹೋದರರು ಹೇಳಿದಂತೆಯೇ ಸಾಗಿ ಬಂದ ಪರಂಪರೆಗೆ ಕುತ್ತು ಎದುರಾದುದು ಲಕ್ಷ್ಮಿ ಹೆಬ್ಬಾಳ್ಕರ್ ಸೆಡ್ಡು ಹೊಡೆದ ನಂತರದಲ್ಲಿ. ಈ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಬೇಕಾದ ಅನಿವಾರ್ಯವನ್ನು ಶಾಸಕಿ ಸೃಷ್ಟಿಸಿದಾಗ, ಸಹೋದರರಲ್ಲಿ ‘ತಾನೇ ಸಾಕಿದಾ ಗಿಣಿ ಕಚ್ಚಿತಲ್ಲೋ’ ಎಂಬ ಭಾವನೆ ಮೂಡಿರಬೇಕು. ಜಾರಕಿಹೊಳಿ ಕುಟುಂಬದ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ (ಅರಭಾವಿ ಕ್ಷೇತ್ರ); ಕಾಂಗ್ರೆಸ್​ನ ರಮೇಶ ಹಾಗೂ ಸತೀಶ ಜಾರಕಿಹೊಳಿ (ಕ್ರಮವಾಗಿ ಗೋಕಾಕ್ ಮತ್ತು ಯಮಕನಮರಡಿ ಕ್ಷೇತ್ರ) ಪರ್ಮನೆಂಟ್ ಶಾಸಕರು. ಸತೀಶ ಜಾರಕಿಹೊಳಿ ಈ ಮೊದಲು ಜೆಡಿಎಸ್​ನಲ್ಲಿದ್ದರು. ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಬಂದಾಗ ಅವರನ್ನು ಹಿಂಬಾಲಿಸಿಕೊಂಡು ಬಂದ ಕೆಲವರಲ್ಲಿ ಸತೀಶ್ ಕೂಡ ಒಬ್ಬರು. ಲಕ್ಷ್ಮಿ, ಕಾಂಗ್ರೆಸ್​ನಿಂದ ಹೊಸದಾಗಿ ಆಯ್ಕೆಯಾಗಿರುವ ಮಹತ್ವಾಕಾಂಕ್ಷಿ ಶಾಸಕಿ. ಸದ್ಯ ರಾಜಕಾರಣದಲ್ಲಿ ಎದ್ದಿರುವ ಬಗ್ಗಡದ ಸೂತ್ರದ ದಾರ ಈ ಮೂವರು ಕೈ ಶಾಸಕರ ಕೈಯಲ್ಲಿದೆ.

ಲಕ್ಷ್ಮಿ ಅಂದುಕೊಂಡಂತೆಯೇ ನಡೆದಿದ್ದಲ್ಲಿ ಪ್ರಸ್ತುತ ಅವರು ಸಚಿವೆಯಾಗಬೇಕಿತ್ತು. ರೈಲನ್ನು ಅವರು ಸದ್ಯಕ್ಕೆ ತಪ್ಪಿಸಿಕೊಂಡಿದ್ದಾರೆ. ಒಂದು ರೈಲು ತಪ್ಪಿತೆಂದ ಮಾತ್ರಕ್ಕೆ ಪ್ರಯಾಣವೇ ಸ್ಥಗಿತಗೊಂಡಂತೇನೂ ಅಲ್ಲ. ಆ ಅರಿವು ಲಕ್ಷ್ಮಿಯವರಲ್ಲಿದೆ. ಅದೇನೇ ಇರಲಿ, ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್​ನ ರಾಜ್ಯ, ರಾಷ್ಟ್ರ ವರಿಷ್ಠರಲ್ಲಿ ಸಂತೋಷ ತಂದಿರಬಹುದಾದ ಘಟನೆ ಲಕ್ಷ್ಮಿ ಜಯ. ಆದರೆ ಆ ಜಯವೇ ಜಿಲ್ಲಾ ಮಟ್ಟದ ಕಾಂಗ್ರೆಸ್ ವಲಯದಲ್ಲಿ ತಳಮಳ ಸೃಷ್ಟಿಸಿದೆ. ಬೆಳಗಾವಿ ಜಿಲ್ಲಾ (ಕಾಂಗ್ರೆಸ್) ರಾಜಕೀಯ ಜಾರಕಿಹೊಳಿ ಸಹೋದರರ ಕೈಯಲ್ಲೇ ಯಾಕಾಗಿ ಇರಬೇಕು ಎಂಬ ಪ್ರಶ್ನೆಯನ್ನು ಲಕ್ಷ್ಮಿ ಮುಂದಿಟ್ಟಾಗ ಅದು ಕೆಲವರಿಗೆ ಮಾತ್ರವೇ ಪ್ರಶ್ನೆಯಾಗಿ ಕಂಡಿತು. ಆದರೆ ಜಾರಕಿಹೊಳಿ ಸಹೋದರರಿಗೆ ಮಾತ್ರ ಇದು ಸವಾಲಾಗಿ ಕಂಡಿತು. ಅದಕ್ಕೆಂದೇ ಅವರು ತಮ್ಮ ಶಕ್ತಿಯನ್ನು ಬಹಿರಂಗಪಡಿಸಲು ಹೊರಟಂತಿದೆ. ಅವರು ಹಾಕಿರುವ ಗುಟುರು ವಿಧಾನಸೌಧದ ಮೂರನೇ ಮಹಡಿಯನ್ನು ನಡುಗಿಸಲಾರಂಭಿಸಿದೆ.

ಬೆಳಗಾವಿ ಸಾಮ್ರಾಜ್ಯದಲ್ಲಿ ತಮ್ಮ ವಿರುದ್ಧ ಸೆಡ್ಡು ಹೊಡೆಯುವಷ್ಟು ಧೈರ್ಯ ಲಕ್ಷ್ಮಿಯಲ್ಲಿಲ್ಲ ಎನ್ನುವುದು ಜಾರಕಿಹೊಳಿ ಸಹೋದರರಿಗೆ ಗೊತ್ತಿದೆ. ಹಾಗಾದರೆ ಅವರಿಗೆ ತಿದಿ ಒತ್ತುತ್ತಿರುವವರು ಯಾರು ಎಂಬ ಅವರ ತಲಾಶ್ ಕೊನೆಗೊಂಡಿದ್ದು ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಕುಳಿತು ಕೈ ಆಡಿಸುತ್ತಿರುವ ರಾಜಕೀಯದಲ್ಲಿ. ಸಮ್ಮಿಶ್ರ ಸರ್ಕಾರದ ಅತ್ಯಂತ ಪ್ರಭಾವಿ ಸಚಿವ ಡಿಕೆಶಿ. ಅವರು ಆಡಿಸಿದಂತೆ ಲಕ್ಷ್ಮಿ ಆಡುತ್ತಿದ್ದಾರೆ ಎನ್ನುವುದು ಜಾರಕಿಹೊಳಿ ಸಹೋದರರ ಅನುಮಾನ. ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಹೊಂದಿರುವ ಪ್ರಭಾವವೇ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷರಾಗಲು ಕಾರಣವಾದ ಅಂಶ. ಇದು ಜಾರಕಿಹೊಳಿ ಸಹೋದರರಿಗೂ ಗೊತ್ತಿದೆ. ಲಕ್ಷ್ಮಿಯವರ ಹಿಂದೆ ನಿಂತು ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಆರೋಪವನ್ನು ಜಾರಕಿಹೊಳಿ ಸಹೋದರರು ನೇರವಾಗೇ ಮಾಡುತ್ತಿರುವುದರ ಹಿಂದೆ ಅವರದೇ ಆದ ಸಾಕ್ಷ್ಯಾಧಾರಗಳು ಇರಬಹುದು. ಇದು ಇಂದು ಸರ್ಕಾರ ಉರುಳಿಸುವ, ಉಳಿಸುವ ಸವಾಲು ಪ್ರತಿಸವಾಲಿನ ಹಂತಕ್ಕೆ ಬಂದು ನಿಂತಿದೆ.

ಜಾರಕಿಹೊಳಿ ಸಹೋದರರು ಪರಸ್ಪರ ಚರ್ಚೆ ಮಾಡುವುದು, ಒಬ್ಬೊಬ್ಬರಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾಯರನ್ನು ಭೇಟಿ ಮಾಡುವುದು, ‘ಸಮಸ್ಯೆ ಬಗೆಹರಿದಿದೆ’ ಎಂದು ರಾವ್ ಹೇಳುವುದು; ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರರನ್ನು ಭೇಟಿ ಮಾಡಿ ‘ಸರ್ಕಾರಕ್ಕೆ ಅಭದ್ರತೆ ಇಲ್ಲ’ ಎನ್ನುವುದು; ಜೆಡಿಎಸ್ ವರಿಷ್ಠ ದೇವೇಗೌಡರನ್ನು ಉಪ ಮುಖ್ಯಮಂತ್ರಿ ಪರಮೇಶ್ವರ್ ಭೇಟಿಯಾಗುವುದು; ನಂತರದಲ್ಲಿ ‘ಇಲ್ಲಸಲ್ಲದ ವದಂತಿಯನ್ನು ಮಾಧ್ಯಮ ಹರಡುತ್ತಿದೆಯೇ ಹೊರತೂ ಸರ್ಕಾರ ಆತಂಕದಲ್ಲಿಲ್ಲ’ ಎಂದು ಪರಮೇಶ್ವರ್ ಹೇಳುವುದು; 15-20 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಬಿಜೆಪಿ ವರಿಷ್ಠರು ಹೇಳುವುದು; ಶ್ರೀರಾಮುಲು ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆಂಬ ಸುದ್ದಿ ಬಿತ್ತರವಾಗುವುದು; ಜಾರಕಿಹೊಳಿ ಸಹೋದರರು ತಮ್ಮೆಲ್ಲ ಬೆಂಬಲಿಗರೊಂದಿಗೆ ಕಾಂಗ್ರೆಸ್​ನಿಂದ ಹೊರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಪಟ್ಟ ಕಟ್ಟುವ ಆಮಿಷವನ್ನು ಬಿಜೆಪಿ ನೀಡಿದೆ ಎಂಬ ವದಂತಿ ಹರಡುವುದು; ‘ಬಿಜೆಪಿ ಈ ಕಡೆಯಿಂದ ಶಾಸಕರನ್ನು ಸೆಳೆದರೆ ನಾವೂ ಅತ್ತಲಿಂದ ಐವರನ್ನು ಸೆಳೆಯುತ್ತೇವೆ, ಅವರೆಲ್ಲರೂ ಸಂಪರ್ಕದಲ್ಲಿದ್ದಾರೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಸ್ವತಃ ಹೇಳುವುದು; ಎಲ್ಲವೂ ಇತ್ಯರ್ಥವಾಗಿದೆ ಎಂದ ನಂತರವೂ ತಮ್ಮ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ಹಸ್ತಕ್ಷೇಪವನ್ನು ಸಹಿಸುವುದಿಲ್ಲವೆಂದು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಕಿ ಉಗುಳುವುದು; ತಾವು ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಮೂಗು ತೂರಿಸುತ್ತಿಲ್ಲ ಎಂದು ಡಿಕೆಶಿ ವಿವರಣೆ ನೀಡುವುದು; ದಸರಾ ಉತ್ಸವ ಸಮಿತಿ ಕಾರ್ಯಕಾರಿಯಲ್ಲಿ ಜೆಡಿಎಸ್ ಯಜಮಾನಿಕೆ ಮೆರೆಯುತ್ತಿದ್ದು ತಮ್ಮನ್ನು ಕಡೆಗಣಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್​ನ ಸಿ.ಪುಟ್ಟರಂಗ ಶೆಟ್ಟಿ ಉನ್ನತಾಧಿಕಾರ ಸಮಿತಿ ಸಭೆಯಿಂದ ಸಭಾತ್ಯಾಗ ಮಾಡುವುದು; ಯಾರಿಗೆ ಯಾರು ಏನೂ ಆಗಿರಬಹುದು ತಮ್ಮ ಮಟ್ಟಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಇದೇ ಸಚಿವ ಹೇಳುವುದು; ‘ಸಿದ್ದರಾಮಯ್ಯನವರನ್ನು ಹೊರಕ್ಕಿಟ್ಟು ಸರ್ಕಾರ ಉಳಿಯುವ ಮಾತೇ ಇಲ್ಲ’ ಎಂದು ಬೀದರ್ ಜಿಲ್ಲೆಯ ಶಾಸಕ ನಾರಾಯಣ ಪದೇಪದೆ ಗುಟುರು ಹಾಕುತ್ತಿರುವುದು; ಎಲ್ಲ ವಿದ್ಯಮಾನದ ಅರಿವಿದ್ದರೂ ಸಿದ್ದರಾಮಯ್ಯ ಗಾಢಮೌನಕ್ಕೆ ಶರಣಾಗಿರುವುದು… ಇವೆಲ್ಲ ಯಾವ ಸಂದೇಶವನ್ನು ಜನಕ್ಕೆ ರವಾನಿಸುತ್ತಿವೆ ಎನ್ನುವುದನ್ನು ಆಡಳಿತ ಪಕ್ಷಗಳು ಹೇಳಬೇಕು. ಅದನ್ನು ಕೇಳುವ ಅಧಿಕಾರ ಜನತೆಗೆ ಇದೆ.

ರಾಮಾಯಣ, ಮಹಾಭಾರತಗಳು ನೆನಪನ್ನು ಕೆಣಕುತ್ತಿವೆ. ಸೀತೆ ಕೇಂದ್ರಿತ ಕಥೆಯಲ್ಲಿ ರಾಮಾಯಣವೇ ನಡೆದುಹೋಯಿತು. ದ್ರೌಪದಿ ಕಾರಣವಾಗಿ ಮಹಾಭಾರತ ಘಟಿಸಿಹೋಯಿತು. ಇವು ಒಂದೆರಡು ಉದಾಹರಣೆಗಳು ಮಾತ್ರ. ಸಾವಿರಾರು ವರ್ಷದ ಇತಿಹಾಸದಲ್ಲಿ ಇಂಥ ಸಹಸ್ರ ಸಹಸ್ರ ಕಥೆ, ಉಪಕಥೆಗಳು ಬಂದು ಹೋಗಿವೆ. ಕರ್ನಾಟಕದ ರಾಜಕೀಯದಲ್ಲೂ ಇಂಥದೇ ಒಂದು ಕಥೆ ಅನಾವರಣವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸುತ್ತ ಈ ಕಥೆ ನಡೆಯುತ್ತಿದೆ. ಪುರುಷಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ರಾಜಕಾರಣಿಯೊಬ್ಬರು ಸೆಡ್ಡು ಹೊಡೆದು ನಿಂತಿರುವುದು ಸಣ್ಣ ಅಥವಾ ಉಪೇಕ್ಷಿಸಬಹುದಾದ ಬೆಳವಣಿಗೆಯಂತೂ ಅಲ್ಲ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top