ರಾಜು- ರಂಜಿತಾಗೆ ಬೆಳ್ಳಿ ಕಡಗ

ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

ಪಟ್ಟಣದ ಶ್ರೀ ವೀರಭದ್ರೇಶ್ವರ ರಥೋತ್ಸವ ನಿಮಿತ್ತ ಜೈ ಹನುಮಾನ ಕುಸ್ತಿ ಕಮಿಟಿ ವತಿಯಿಂದ ಮೊದಲ ಬಾರಿಗೆ ಪಟ್ಟಣದಲ್ಲಿ ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಭಾರಿ ಬಯಲು ಜಂಗೀ ಕುಸ್ತಿ ಪಂದ್ಯಾವಳಿಯಲ್ಲಿ ಹರಿಹರದ ರಾಜು ಹಾಗೂ ಮಾಸೂರಿನ ರಂಜಿತಾ ವಿಜಯ ಮಾಲೆ ಧರಿಸಿದರು.

ದೆಹಲಿ, ಉತ್ತರ ಪ್ರದೇಶ, ಬೆಳಗಾವಿ, ಧಾರವಾಡ, ದಾವಣಗೆರೆ, ರಾಣೆಬೆನ್ನೂರ, ಶಿವಮೊಗ್ಗ, ಹರಿಹರ, ವಿಜಯಪುರ ಮತ್ತಿತರೆಡೆಯಿಂದ 200ಕ್ಕೂ ಹೆಚ್ಚು ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಅಂತಿಮ ಸೆಣಸಾಟದಲ್ಲಿ ಶಿವಮೊಗ್ಗದ ಶ್ರೀಕಾಂತರನ್ನು ಸೋಲಿಸುವ ಮೂಲಕ ಹರಿಹರದ ರಾಜು 5,000 ರೂ. ನಗದು ಮತ್ತು ಬೆಳ್ಳಿ ಕಡಗ ತಮ್ಮದಾಗಿಸಿಕೊಂಡರು.

ದಾವಣಗೆರೆ, ಜಗಳೂರ, ಮಾಸೂರು, ಕಾರವಾರ ಜಿಲ್ಲೆಯ ಆಳ್ವಾಸ ಮತ್ತು ಗದಗ ಭಾಗದಿಂದ 12ಕ್ಕೂ ಹೆಚ್ಚು ಮಹಿಳಾ ಕುಸ್ತಿಪಟುಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಮಹಿಳಾ ವಿಭಾಗದ ಅಂತಿಮ ಸೆಣಸಾಟದಲ್ಲಿ ಅರಸಾಪುರದ ರೇಖಾರನ್ನು ಸೋಲಿಸುವ ಮೂಲಕ ಮಾಸೂರಿನ ರಂಜಿತಾ ಬೆಳ್ಳಿ ಕಡಗ ಹಾಗೂ 2 ಸಾವಿರ ರೂ. ನಗದು ತಮ್ಮದಾಗಿಸಿಕೊಂಡರು.

ಇದಕ್ಕೂ ಮೊದಲು ಕುಸ್ತಿ ಕಮಿಟಿಯನ್ನು ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಪಂದ್ಯಾವಳಿಗೆ ಬೆಂಗಳೂರು ಹೈಕೋರ್ಟ್ ವಕೀಲ ದಿಗ್ವಿಜಯ ಹತ್ತಿ ಚಾಲನೆ ನೀಡಿದರು.

ಹನುಮಂತಪ್ಪ ಗೋಣೆಪ್ಪನವರ, ಬಸವರಾಜ ಬಾಗೋಡಿ, ಶಂಕ್ರಪ್ಪ ತಳವಾರ, ಬೀರಪ್ಪ ಸುಣಗಾರ ನಿರ್ಣಾಯಕರಾಗಿದ್ದರು.

ಕಮಿಟಿ ಅಧ್ಯಕ್ಷ ಮಾಲತೇಶ ಬೆಳಕೇರಿ, ಮಂಜು ತಳವಾರ, ಮನೋಜ ಗೋಣೆಪ್ಪನವರ, ನಿಂಗಪ್ಪ ಚಳಗೇರಿ, ಸುಭಾಷ ಹದಡೇರ, ಚಂದ್ರಶೇಖರ ಜಾಡರ್, ರಾಜು ಪವಾರ, ರವೀಂದ್ರ ಮುದಿಯಪ್ಪನವರ, ನರಸಿಂಹಪ್ಪ ಬೇವಿನಕಟ್ಟಿ, ನಾಗಣ್ಣ ಸಾಳುಂಕೆ, ಕಮಿಟಿ ಸದಸ್ಯರು ಇದ್ದರು.

Leave a Reply

Your email address will not be published. Required fields are marked *