|ಹರ್ಷವರ್ಧನ್ ಬ್ಯಾಡನೂರು
ಚಿತ್ರ: ರಾಜು ಜೇಮ್ಸ್ ಬಾಂಡ್
ನಿರ್ದೇಶನ: ದೀಪಕ್ ಮಧುವನಹಳ್ಳಿ
ನಿರ್ಮಾಣ: ಕಿರಣ್ ಮತ್ತು ಮಂಜುನಾಥ್
ತಾರಾಗಣ: ಗುರುನಂದನ್, ಮೃದುಲ, ಚಿಕ್ಕಣ್ಣ, ಅಚ್ಯುತ್ ಕುಮಾರ್, ಸಾಧು ಕೋಕಿಲ, ರವಿಶಂಕರ್, ತಬಲಾ ನಾಣಿ ಮತ್ತಿತರರು.
“ಫಸ್ಟ್ ರ್ಯಾಂಕ್ ರಾಜು’, “ರಾಜು ಕನ್ನಡ ಮೀಡಿಯಂ’ ಖ್ಯಾತಿಯ ಗುರುನಂದನ್ ಮೂರನೇ ಬಾರಿಗೆ ರಾಜು ಆಗಿರುವ ಚಿತ್ರ “ರಾಜು ಜೇಮ್ಸ್ ಬಾಂಡ್’. ದೀಪಕ್ ಮಧುವನಹಳ್ಳಿ ನಿರ್ದೇಶನದ ಈ ಆ್ಯಕ್ಷನ್ ರೊಮ್ಯಾಂಟಿಕ್ ಕಾಮಿಡಿಯಲ್ಲಿ ಗುರು ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಈ ಬಾರಿ ಕೊಂಚ ಹೆಚ್ಚೇ ದೇಹ ದಂಡಿಸಿರುವ ಅವರು ಡಾನ್ಸ್, ಫೈಟ್ಸ್ಗಳಲ್ಲೂ ಗಮನ ಸೆಳೆಯುತ್ತಾರೆ.
ಸುವರ್ಣಾಪುರದ ಎಂಎಲ್ಎ ಭೂತಯ್ಯ (ರವಿಶಂಕರ್), “ನೂರೋ, ಇನ್ನೂರೋ ಆಗಿದ್ರೆ ಬಿಟ್ಬಿಡ್ತಿದ್ದೆ. ಐದೋ, ಹತ್ತೋ ಸಾವಿರ ಆಗಿದ್ರೆ ಕೊಟ್ಬಿಡ್ತಿದ್ದೆ. ಕೋಟಿ, ಕೋಟಿ ಕಣ್ರೋ… 25 ಕೋಟಿ. ಬಿಡೋಕ್ಕಾಗುತ್ತಾ? ಕೊಡೋಕ್ಕಾಗುತ್ತಾ?’ ಎಂದು ಕಿರುಚಾಡುತ್ತಾನೆ. ನಿಮ್ದೇ ಬ್ಯಾಂಕ್ನಲ್ಲಿ ಆತ ಅಕ್ರಮವಾಗಿ ಕೂಡಿಟ್ಟಿದ್ದ 25 ಕೋಟಿ ದರೋಡೆಯಾಗಿರುವುದೇ ಅದಕ್ಕೆ ಕಾರಣ. ಆ ದರೋಡೆಗೆ ಕಾರಣ ಯಾರು? ಯಾಕೆ ದುಡ್ಡು ಕದ್ದಿರುತ್ತಾರೆ? ಭೂತಯ್ಯನಿಗೆ ಮತ್ತೆ ಹಣ ಸಿಗುತ್ತಾ? ಕಳ್ಳತನವಾದ ಹಣ ಏನಾಗುತ್ತೆ? ಎಂಬುದರ ಸುತ್ತ “ರಾಜು ಜೇಮ್ಸ್ ಬಾಂಡ್’ ಕಥೆ ಸಾಗುತ್ತದೆ.
ಟಿಆರ್ಪಿ ಅರ್ಥಾತ್ ಟಿಆರ್ ಪರಮೇಶ್ ಎಂಬ ನಿರೂಪಕನಾಗಿ ಚಿಕ್ಕಣ್ಣ, ರಾರಾ ಶಾಕಿಂಗ್ ಎಲೆಕ್ಟ್ರಿಕಲ್ಸ್ ಮಾಲೀಕ ರಾಮಕೃಷ್ಣನ ಪಾತ್ರದಲ್ಲಿ ಅಚ್ಯುತ್ ಕುಮಾರ್, ಅಮಲೇಶ್ವರಿ ಬಾರ್ ಆ್ಯಂಡ್ ರೆಸ್ಟೋರೆಂಟ್, ಬಾಲಬ್ರಹ್ಮಚಾರಿ ಶ್ರೀ ವಿಲಾಸಾನಂದ ಎಂಬ ಜ್ಯೋತಿಷಿಯಾಗಿ ತಬಲಾ ನಾಣಿ, ವೃತ್ತಿಪರ ಕಳ್ಳ ತೆನಾಲಿ ಪಾತ್ರದಲ್ಲಿ ಸಾಧು ಕೋಕಿಲ, ಎಂಎಲ್ಎ ಭೂತಯ್ಯನಾಗಿ ರವಿಶಂಕರ್ ನಟಿಸಿದ್ದು ಅವರ ಪಾತ್ರಗಳ ವಿಭಿನ್ನ ಹೆಸರು ಮಾತ್ರವಲ್ಲದೇ, ಕಾಮಿಡಿ ಟೈಮಿಂಗ್ ಮತ್ತು ಒನ್ಲೈನರ್ಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾರೆ. ಚೊಚ್ಚಲ ಚಿತ್ರದಲ್ಲೇ ನಾಯಕಿ ಮೃದುಲ ವಿದ್ಯಾ ಟೀಚರ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಕೆಲವೆಡೆ ಡಬಲ್ ಮೀನಿಂಗ್ ಅನ್ನಿಸಿದರೂ, ಕಾಮಿಡಿ ಚೆನ್ನಾಗಿ ಕೆಲಸ ಮಾಡಿದೆ. ಅನೂಪ್ ಸೀಳಿನ್ ಸಂಗೀತದಲ್ಲಿ “ಕಣ್ಮಣಿ’ ಹಾಡು ಕೇಳಲು, ನೋಡಲು ಅಂದವಾಗಿದೆ. “ಜೇಮ್ಸ್ ಬಾಂಡ್’ ಶೀರ್ಷಿಕೆಗೆ ತಕ್ಕಂತೆ ಇನ್ನೊಂದಿಷ್ಟು ಥ್ರಿಲ್ಲಿಂಗ್, ಸಸ್ಪೆನ್ಸ್ ಅಂಶಗಳಿದ್ದರೆ ಸಿನಿಮಾ ಪ್ರೇಕ್ಷಕರನ್ನು ಮತ್ತಷ್ಟು ಸೀಟಂಚಲ್ಲಿ ಕೂರಿಸುವ ಅವಕಾಶವಿತ್ತು. ಆದರೂ, ಕೆಲ ಕಾಲ ನಕ್ಕು ಎಂಜಾಯ್ ಮಾಡಲು “ರಾಜು ಜೇಮ್ಸ್ ಬಾಂಡ್’ ಮೋಸ ಮಾಡುವುದಿಲ್ಲ.