ಕಸಮುಕ್ತ ನಗರ ನಿರ್ಮಾಣ ನಮ್ಮ ಸಂಕಲ್ಪ

ವಿಜಯಪುರ: 2019ರ ಸ್ವಚ್ಛ ಸರ್ವೆಕ್ಷಣಾ ಸಮೀಕ್ಷೆಯಲ್ಲಿ ನಗರದ ಶ್ರೇಯಾಂಕ ಹೆಚ್ಚಿಸುವ ಸಂಕಲ್ಪದೊಂದಿಗೆ ‘ಸ್ವಚ್ಛ ನಗರ ನಮ್ಮ ಹೊಣೆ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ ಮಗಿಮಠ ತಿಳಿಸಿದರು.

ಬೀದಿ ನಾಟಕದಂಥ ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಅಭಿಯಾನವನ್ನು ಆಂದೋಲನದ ಮಾದರಿ ಅನುಷ್ಠಾನಗೊಳಿಸುತ್ತಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐತಿಹಾಸಕ ವಿಜಯಪುರ ಸ್ವಚ್ಛ ನಗರವಾಗಿ ರೂಪುಗೊಳ್ಳಬೇಕು. ಕಸಮುಕ್ತ ನಗರ ನಮ್ಮ ಆದ್ಯತೆಯಾಗಿದೆ. ಯುವಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಪ್ರತಿ 10 ವಾರ್ಡ್​ಗಳ ಪೌರ ಕಾರ್ವಿುಕರನ್ನು ಸೇರಿಸಿ ಒಂದು ವಾರ್ಡ್ ಆಯ್ಕೆ ಮಾಡಿ ಅಲ್ಲಿ ಮಧ್ಯಾಹ್ನ 2 ರಿಂದ 5 ರವರೆಗೆ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುತ್ತದೆ. ಜತೆಗೆ ಮನೆ-ಮನೆಗೆ ತೆರಳಿ ಕಸ ಸಂಗ್ರಹಣಾ ವಾಹನಗಳಿಗೆ ಕಸ ನೀಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜೈ ಭಾರತ ಮಾತೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದೆ ಎಂದರು.

ರಂಗೋಲಿ ಚಿತ್ತಾರ

ವಿವಿಧ ಬಡಾವಣೆಗಳ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬೀಳುವ ಜಾಗೆಗಳನ್ನು ಗುರುತಿಸಲಾಗಿದೆ. ಅಂಥ ಸ್ಥಳಗಳಲ್ಲಿ ಸುಂದರವಾದ ರಂಗೋಲಿ ಹಾಕಿ ಜನರನ್ನು ಆಕರ್ಷಿಸಲಾಗುತ್ತಿದೆ. ಆ ಮೂಲಕ ರಂಗೋಲಿ ಹಾಕಿದ ಜಾಗೆಯಲ್ಲಿ ಇನ್ನೊಮ್ಮೆ ಕಸ ಹಾಕಕೂಡದೆಂದು ಮನವರಿಕೆ ಮಾಡಲಾಗುತ್ತಿದೆ. ಈ ಕ್ರಮಕ್ಕೆ ಈಗಾಗಲೇ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಗಿಮಠ ತಿಳಿಸಿದರು.

ಪ್ರಾಯೋಗಿಕವಾಗಿ ರಾತ್ರಿ ಸಹ ಕಸ ಸಂಗ್ರಹಣೆ ಕಾರ್ಯ ಕೈಗೊಳ್ಳಲಾಗಿದೆ. ಆಝಾದ್ ರಸ್ತೆ, ಎಸ್.ಎಸ್. ರಸ್ತೆ, ಬಿಎಲ್​ಡಿಇ ರಸ್ತೆ ಮೊದಲಾದ ರಸ್ತೆಗಳಲ್ಲಿ ರಾತ್ರಿ ಕಸ ಸಂಗ್ರಹಣೆ ಮಾಡಲಾಗುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕಸ ಬೀಳುವುದು ಶೇ.50 ರಷ್ಟು ಕಡಿಮೆಯಾಗಿದೆ ಎಂದರು.

ಪಾಲಿಕೆ ಸದಸ್ಯ ಅಬ್ದುಲ್​ರಜಾಕ ಹೊರ್ತಿ, ರಾಹುಲ್ ಜಾಧವ, ಅಲ್ತಾಫ್ ಇಟಗಿ, ಆಯುಕ್ತ ಡಾ.ಔದ್ರಾಮ, ಪರಿಸರ ಅಭಿಯಂತರ ಎಸ್.ಆರ್. ಜಗದೀಶ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

585 ಲಕ್ಷ ರೂ. ಕ್ರಿಯಾಯೋಜನೆ

ನಗರದಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ನಿರ್ವಹಣೆ ಕೈಗೊಳ್ಳುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯಿಂದ 585 ಲಕ್ಷ ರೂ.ಗಳ ವಿಶೇಷ ಕ್ರಿಯಾಯೋಜನೆ ಮಂಜೂರಾಗಿದ್ದು, ಡಿಪಿಆರ್ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗುವುದು. 14 ನೇ ಹಣಕಾಸು ಆಯೋಗದ ಅನುದಾನದಲ್ಲಿ ಹೆಚ್ಚುವರಿ ಟ್ರ್ಯಾಕ್ಟರ್ ಹಾಗೂ ಆಟೋ ಟಿಪ್ಪರ್ ಖರೀದಿ ಮಾಡಲಾಗುವುದು ಎಂದು ಮಗಿಮಠ ತಿಳಿಸಿದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಬೀದಿನಾಯಿಗಳನ್ನು ಹೊರವಲಯಕ್ಕೆ ಬಿಡುವ ನಿಟ್ಟಿನಲ್ಲಿ ಅಗತ್ಯ ಚರ್ಚೆ ಕೈಗೊಂಡು ಬೀದಿ ನಾಯಿ ಹಾವಳಿ ನಿಯಂತ್ರಿಸಲು ಸಿದ್ಧತೆ ನಡೆದಿದೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆಗೂ ಪಾಲಿಕೆ ಅಧಿಕಾರಿಗಳು ವಿಶೇಷ ಯೋಜನೆ ರೂಪಿಸಿದ್ದಾರೆ.

ರಾಜಶೇಖರ ಮಗಿಮಠ, ಸ್ಥಾಯಿ ಸಮಿತಿ ಅಧ್ಯಕ್ಷ