ಹುತಾತ್ಮ ಯೋಧರ ಶವಪೆಟ್ಟಿಗೆ ಕೊಂಡೊಯ್ಯಲು ಹೆಗಲುಕೊಟ್ಟ ಗೃಹ ಸಚಿವ ರಾಜನಾಥ್​ ಸಿಂಗ್​

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರು ಹೆಗಲು ಕೊಟ್ಟಿದ್ದಾರೆ.

ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಇಂದು ಶ್ರೀನಗರಕ್ಕೆ ಭೇಟಿ ನೀಡಿ ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್​ ಸಿಂಗ್​ ಸಭೆ ನಡೆಸಿದರು. ಸಭೆಯ ನಂತರ ಶ್ರೀನಗರದಲ್ಲಿ ಹುತಾತ್ಮರಾದ 40 ಸಿಆರ್​ಪಿಎಫ್​ ಯೋಧರ ಪಾರ್ಥಿವ ಶರೀರಗಳಿಗೆ ಅಂತಿಮ ನಮನ ಸಲ್ಲಿಸಲಾಯಿತು. ರಾಜನಾಥ್​ ಸಿಂಗ್​ ಅವರು ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ನಂತರ ಯೋಧರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆಯನ್ನು ಕೊಂಡೊಯ್ಯಲು ತಾವೂ ಹೆಗಲು ಕೊಡುವ ಮೂಲಕ ಯೋಧರಿಗೆ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್​ ಸಿಂಗ್​ ಅವರು ನಮ್ಮ ವೀರ ಯೋಧರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ. ನಾನು ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿ ಅವರ ಕುಟುಂಬಸ್ಥರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕೊಡಲಿ ಎಂದು ಪ್ರಾರ್ಥಿಸಿದ್ದೇನೆ. ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜನಾಥ್​ ಸಿಂಗ್​ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್​ ಮಲಿಕ್​, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್​ ಗೌಬ, ಸಿಆರ್​ಪಿಎಫ್​ ಡಿಜಿ ಆರ್​.ಆರ್​. ಭಟ್ನಾಗರ್​, ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಭಾಗ್​ ಸಿಂಗ್​ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಏಜೆನ್ಸೀಸ್​)