ನಾದಮಯ… ರಾಜ್​ಮಯ

ಏಪ್ರಿಲ್ ಎಂದರೆ ಡಾ. ರಾಜ್​ಕುಮಾರ್ ಅಭಿಮಾನಿಗಳಿಗೆ ತುಂಬ ವಿಶೇಷ. ಏ.12ರಂದು ಮೇರುನಟನ ಪುಣ್ಮಸ್ಮರಣೆ. ಏ.24ರಂದು ಅವರ ಜನ್ಮದಿನ. ಈ ಎರಡೂ ದಿನಗಳನ್ನು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಈ ನಡುವಿನ 12 ದಿನಗಳವರೆಗೆ ಅಣ್ಣಾವ್ರ ಕೆಲವು ಯಶಸ್ವಿ ಚಿತ್ರಗಳಿಗೆ ಸಂಬಂಧಿಸಿದ ಆಸಕ್ತಿಕರ ಲೇಖನಗಳನ್ನು ವಿಜಯವಾಣಿ ಪ್ರಕಟಿಸುತ್ತಿದೆ. ‘ಜೀವನ ಚೈತ್ರ’ ಸಿನಿಮಾ ಕುರಿತು ನಿರ್ದೇಶಕ ಎಸ್.ಕೆ. ಭಗವಾನ್ ಹಂಚಿಕೊಂಡ ವಿಷಯಗಳ ಅಕ್ಷರರೂಪ ಇಲ್ಲಿದೆ.

| ಮದನ್ ಬೆಂಗಳೂರು

ಡಾ. ರಾಜ್​ಕುಮಾರ್ ನಟಿಸಿದ ಸೂಪರ್​ಹಿಟ್ ಸಿನಿಮಾಗಳಲ್ಲಿ ‘ಜೀವನ ಚೈತ್ರ’ ಕೂಡ ಪ್ರಮುಖವಾದದ್ದು. ಬಾಕ್ಸ್ ಆಫೀಸ್​ನಲ್ಲಿ ಗೆಲ್ಲುವುದರ ಜತೆಗೆ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡ ಖ್ಯಾತಿ ಈ ಚಿತ್ರಕ್ಕೆ ಸಲ್ಲುತ್ತದೆ. ದೊರೆ-ಭಗವಾನ್ ಜಂಟಿಯಾಗಿ ನಿರ್ದೇಶಿಸಿದ ‘ಜೀವನ ಚೈತ್ರ’ ಗೆಲುವಿನ ಹಿಂದೆ ‘ನಾದಮಯ…’ ಹಾಡಿನ ಪಾತ್ರ ಮಹತ್ವದ್ದು ಎಂಬುದರಲ್ಲಿ ಅನುಮಾನವೇ ಇಲ್ಲ. ಇಂದಿಗೂ ಆ ಗೀತೆ ತನ್ನ ಚಾಮ್ರ್ ಉಳಿಸಿಕೊಂಡಿದೆ. ‘ನಾದಮಯ…’ ಹಾಡು ಚಿತ್ರಿತಗೊಂಡಿದ್ದರ ಹಿಂದೆ ಹಲವು ಆಸಕ್ತಿಕರ ಸಂಗತಿಗಳಿವೆ.

ಗೀತೆಯ ಆಡಿಯೋ ಅವತರಣಿಕೆ ಸಿದ್ಧಗೊಂಡಿತ್ತು. ಆದರೆ ಸಿನಿಮಾದಲ್ಲಿ ಆ ಹಾಡನ್ನು ಎಲ್ಲಿ ಸೇರಿಸುವುದು ಎಂಬುದೇ ಚಿತ್ರತಂಡಕ್ಕೆ ಗೊತ್ತಾಗಲಿಲ್ಲ. ಎಲ್ಲೆಂದರಲ್ಲಿ ತುರುಕಿದರೆ ಆಭಾಸ ಆಗುತ್ತದೆ. ಅದರಲ್ಲೂ ಕ್ಲೈಮ್ಯಾಕ್ಸ್​ನಲ್ಲಿ ಹಾಡು ಬಂದರೆ ಕಥೆಯ ವೇಗಕ್ಕೆ ಅಡ್ಡಿ ಉಂಟು ಮಾಡಿದಂತಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಯಾವ ಸನ್ನಿವೇಶಕ್ಕೆ ತಕ್ಕಂತೆ ಆ ಹಾಡನ್ನು ಸರಿಹೊಂದಿಸಬೇಕು ಎಂಬ ಬಗ್ಗೆ ರಾಜ್​ಕುಮಾರ್ ಸಹೋದರ ವರದಪ್ಪ, ಗೀತಸಾಹಿತಿ ಉದಯ್ ಶಂಕರ್, ನಿರ್ದೇಶಕರಾದ ದೊರೆ ಮತ್ತು ಭಗವಾನ್ ಚರ್ಚೆ ನಡೆಸುತ್ತಿದ್ದರು. ಚಿತ್ರರಂಗದಲ್ಲಿ ಅಪಾರ ಅನುಭವ ಹೊಂದಿರುವ ಈ ಘಟಾನುಘಟಿಗಳು ಸತತ ನಾಲ್ಕು ದಿನ ತಲೆ ಕೆಡಿಸಿಕೊಂಡರೂ ಉತ್ತರ ಸಿಗಲಿಲ್ಲ. ನಾಲ್ಕನೇ ದಿನ ಊಟದ ಸಮಯದಲ್ಲಿ ಎಲ್ಲರ ಮುಖವೂ ಕಳೆಗುಂದಿರುವುದನ್ನು ಗಮನಿಸಿದ ರಾಜ್​ಕುಮಾರ್ ಏನು ವಿಷಯ ಎಂದು ವಿಚಾರಿಸಿದರು. ಇರುವ ಸಮಸ್ಯೆಯನ್ನು ಅವರಿಗೆ ವಿವರಿಸಲಾಯಿತು. ಕೂಲಂಕಶವಾಗಿ ಕೇಳಿಸಿಕೊಂಡ ರಾಜ್, ಒಂದು ದಿನ ಸಮಯಾವಕಾಶ ಕೇಳಿದರು. ಮರುದಿನ ಬೆಳಗ್ಗೆ 10.30ರ ವೇಳೆಗೆ ಮತ್ತೆ ಚರ್ಚೆ ಶುರುವಾಯಿತು. ರಾತ್ರಿಯೆಲ್ಲ ಯೋಚಿಸಿ ಒಂದು ಐಡಿಯಾ ಸಿದ್ಧಪಡಿಸಿದ್ದರು ರಾಜ್. ಅದನ್ನು ಅವರು ವಿವರಿಸಿದ್ದು ಹೀಗೆ; ‘ಚಿತ್ರದಲ್ಲಿ ನನಗೆ ಜ್ಞಾಪಕ ಶಕ್ತಿ ಹೊರಟು ಹೋಗಿರುತ್ತದೆ. ನಾನು ಯಾರು ಎಂಬುದೇ ತಿಳಿದಿರುವುದಿಲ್ಲ. ಸನ್ಯಾಸಿಗಳ ಗುಂಪಿನಲ್ಲಿ ಸೇರಿಕೊಂಡು ಹೃಷಿಕೇಶ, ಹರಿದ್ವಾರ, ಹಿಮಾಲಯ ಮುಂತಾದೆಡೆ ಸಾಗುತ್ತೇನೆ. ಅಲ್ಲಿ ಸರಿಯಾಗಿ ಊಟ ಸಿಗದೆ ಪ್ರಜ್ಞೆ ತಪ್ಪಿ ಬಿದ್ದಿರುತ್ತೇನೆ. ಆಗ ನನ್ನ ಮುಖದ ಮೇಲೆ ಮಂಜು ಬಿದ್ದು ಕರಗಿ ನೀರಾಗುತ್ತದೆ. ಎಚ್ಚರಗೊಂಡು ನೋಡಿದರೆ ಸುತ್ತಮುತ್ತ ಪ್ರಕೃತಿಯಲ್ಲಿನ ಬೀಸುವ ಗಾಳಿ, ಹರಿಯುವ ಝುರಿ, ಚಿಲಿಪಿಲಿಗುಟ್ಟುವ ಹಕ್ಕಿಗಳ ಸಂಗೀತ ಕೇಳಿಸುತ್ತದೆ. ಅದರಿಂದ ಪ್ರೇರಣೆಗೊಂಡ ನಾನು ಹಾಡಲು ಶುರುಮಾಡುತ್ತೇನೆ. ಅಲ್ಲಿಂದ ನಾದಮಯ ಗೀತೆ ಆರಂಭವಾಗುತ್ತದೆ…’

ಇದನ್ನು ಕೇಳಿದ್ದೇ ತಡ, ನಾಲ್ವರು ಘಟಾನುಘಟಿಗಳಿಗೆ ವಾವ್ ಎನಿಸಿತು. ಇದಕ್ಕಿಂತ ಉತ್ತಮ ಐಡಿಯಾ ಸಿಗಲಿಕ್ಕೆ ಸಾಧ್ಯವೇ ಇಲ್ಲ ಎಂದು ಖುಷಿಪಟ್ಟರು. ನಾಲ್ಕು ದಿನ ಕತ್ತಲಕೋಣೆಯಲ್ಲಿ ಇದ್ದಂಥವರಿಗೆ ರಾಜ್​ಕುಮಾರ್ ಬೆಳಕು ತೋರಿಸಿದ್ದಂತಾಯಿತು. ಅಷ್ಟೇ ಅಲ್ಲ, ಚಿತ್ರದ ಕ್ಲೈಮ್ಯಾಕ್ಸ್ ಹೇಗಿದ್ದರೆ ಚೆಂದ ಎಂಬ ಸಲಹೆಯನ್ನೂ ಅವರೇ ನೀಡಿದರು. ಇದರಿಂದ ಸಂತಸಗೊಂಡ ಭಗವಾನ್, ‘ನೀವೇ ಈ ಚಿತ್ರವನ್ನು ನಿರ್ದೇಶನ ಮಾಡಿ’ ಎಂದು ರಾಜ್​ಕುಮಾರ್​ಗೆ ಹೇಳಿದ್ದೂ ಉಂಟು. ಅದನ್ನು ನಗುತ್ತಲೇ ತಳ್ಳಿಹಾಕಿದರು ಮೇರುನಟ. ಅವರು ಸೂಚಿಸಿದಂತೆಯೇ ಇಡೀ ಹಾಡಿನ ಚಿತ್ರೀಕರಣ ನಡೆಯಿತು. 17 ದಿನ ಶೂಟಿಂಗ್ ಮಾಡಲಾಯಿತು. ಯಾಕೆ ಇಷ್ಟು ದಿನ ತಡವಾಗುತ್ತಿದೆ ಎಂದು ರಾಜ್​ಕುಮಾರ್ ಕೇಳಿದಾಗ, ‘ಈ ಸಿನಿಮಾ ಗೆದ್ದರೂ ಸೋತರೂ ಈ ಗೀತೆಯೇ ಕಾರಣ. ಹಾಗಾಗಿ ಕಾಳಜಿವಹಿಸಿ ಚಿತ್ರಿಸುತ್ತಿದ್ದೇವೆ’ ಎಂದು ಉತ್ತರಿಸಿದ್ದರು ಭಗವಾನ್. ಅಣ್ಣಾವು› ಕೂಡ ಅಷ್ಟೇ ಶ್ರದ್ಧೆಯಿಂದ ಭಾಗವಹಿಸಿದರು. ಮೈ ಕೊರೆಯುವ ಚಳಿಯಲ್ಲೂ ತೆಳುವಾದ ಖಾದಿ ಜುಬ್ಬ ಮತ್ತು ಪಂಚೆ ಧರಿಸಿ ನಟಿಸಿದರು. ಬ್ರೇಕ್ ಸಮಯದಲ್ಲೂ ಅವರು ಒಂದು ಶಾಲು ಕೂಡ ಹೊದೆಯುತ್ತಿರಲಿಲ್ಲ. ಹಿಮದ ರಾಶಿ ಮೇಲೂ ಚಪ್ಪಲಿ ಧರಿಸದೆ ಅಭಿನಯಿಸಿದರು! ಪಾತ್ರದಲ್ಲಿ ತಲ್ಲೀನರಾಗಿದ್ದ ಅವರಿಗೆ ಚಳಿ-ಗಾಳಿಯೂ ಸವಾಲು ಎನಿಸಲಿಲ್ಲ. ಈ ಹಾಡಿಗೆ ಧ್ವನಿ ನೀಡಿದ ರಾಜ್​ಕುಮಾರ್​ಗೆ ‘ಅತ್ಯುತ್ತಮ ಗಾಯಕ’ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಸಿನಿಮಾ ಕೂಡ ಸೂಪರ್​ಹಿಟ್ ಆಯಿತು.