ಲ್ಯುಕೇಮಿಯಾದಿಂದ ಬಳಲುತ್ತಿರುವ ಅಗಸ್ತಾ ವೆಸ್ಟ್​ಲ್ಯಾಂಡ್​ ಹಗರಣ ಆರೋಪಿ ರಾಜೀವ್​ ಸಕ್ಸೇನಾಗೆ ಮಧ್ಯಂತರ ಜಾಮೀನು

ನವದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್​ ವಿವಿಐಪಿ ಹೆಲಿಕಾಪ್ಟರ್​ ಹಗರಣದ ಆರೋಪಿ, ಉದ್ಯಮಿ ರಾಜೀವ್​ ಸಕ್ಸೇನಾ ಅವರಿಗೆ ದೆಹಲಿ ವಿಶೇಷ ನ್ಯಾಯಾಲಯ ಫೆ.22ರ ವರೆಗೆ ಮಧ್ಯಂತರ ಜಾಮೀನು ನೀಡಿ ಆದೇಶ ನೀಡಿದೆ.

ಸಕ್ಸೇನಾ ಅವರು ನಗರ ಬಿಟ್ಟು ಎಲ್ಲಿಗೂ ತೆರಳಬಾರದು ಮತ್ತು ಪ್ರಕರಣದ ಇತರ ಸಾಕ್ಷಿಗಳು ಮೇಲೆ ಯಾವುದೇ ಪ್ರಭಾವ ಬೀರಬಾರದು ಎಂದು ನ್ಯಾಯಾಲಯ ಎಚ್ಚರಿಸಿದೆ.

ರಾಜೀವ್​ ಸಕ್ಸೇನಾ ಅವರನ್ನು ದುಬೈನಿಂದ ಜ.30ರಂದು ಭಾರತಕ್ಕೆ ಕರೆದುಕೊಂಡು ಬರಲಾಗಿದೆ. ಹಗರಣದಲ್ಲಿ ಪಾತ್ರ ವಹಿಸಿರುವ ಆರೋಪದಡಿ ಇತ್ತೀಚೆಗೆ ಬಂಧಿತರಾಗಿರುವ ವಕೀಲ, ಉದ್ಯಮಿ ಗೌತಮ್​ ಖೇತಾನ್​ ಅವರೊಂದಿಗೆ ಸಕ್ಸೇನಾ ಸಂಪರ್ಕದಲ್ಲಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಆರೋಪಿಸಿತ್ತು.

ರಾಜೀವ್ ಸಕ್ಸೇನಾ ಅವರನ್ನು ಏಮ್ಸ್​ನಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು ಅದರ ರಿಪೋರ್ಟ್​ ಅನ್ನು ಇ.ಡಿ. ನ್ಯಾಯಾಲಯಕ್ಕೆ ನೀಡಿದೆ. ಅಲ್ಲದೆ, ಸಕ್ಸೇನಾ ಅವರು ಡಯಾಬಿಟೀಸ್​ ಮತ್ತು ಲ್ಯುಕೇಮಿಯಾ ಕಾಯಿಲೆಗಳಿಂದ ಬಳಲುತ್ತಿದ್ದು ಅದರ ಆಧಾರದ ಮೇಲೆ ಜಾಮೀನು ನೀಡಬೇಕು. ಅವರು ನಮ್ಮೆಲ್ಲ ತನಿಖೆಗಳಿಗೂ ಸಹಕರಿಸುತ್ತಿದ್ದಾರೆ ಎಂದು ಇ.ಡಿ. ವಕೀಲ ಡಿ.ಪಿ.ಸಿಂಗ್​ ನ್ಯಾಯಾಧೀಶರೆದುರು ಹೇಳಿದ್ದರು.