‘ಗಾಢ ನಿದ್ದೆ’ಯಲ್ಲಿ 6 ತಿಂಗಳ ಮಗುವನ್ನು ಕೊಂದ ತಾಯಿ, ಪೊಲೀಸರ ಲಾಠಿ ಏಟಿಗೆ ಸತ್ಯ ಬಾಯ್ಬಿಟ್ಟ ಮಹಾಮಾತೆ…!

ಕೋಟ (ರಾಜಸ್ಥಾನ): ಮಹಿಳೆಯೊಬ್ಬಳು ತನ್ನ 6 ತಿಂಗಳ ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ. ಆದರೆ, ತಾನು ಈ ಕೃತ್ಯವನ್ನು ‘ಗಾಢ ನಿದ್ದೆ’ಯಲ್ಲಿ ಇರುವಾಗ ತನಗರಿವಿಲ್ಲದಂತೆ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ!

ಕೋಟದ ಸರಸ್ವತಿ ಕಾಲನಿ ನಿವಾಸಿ ದೀಪಿಕಾ ಗುಜ್ಜರ್​ (35) ಈ ಕೃತ್ಯ ಎಸಗಿದವಳು. ಇದಕ್ಕೂ ಮುನ್ನ ಈಕೆಯ ಇಬ್ಬರು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದವು ಎನ್ನಲಾಗಿದೆ. ಈಕೆಯ ಪ್ರಕಾರ ತಾನು ಗಾಢ ನಿದ್ದೆಯಲ್ಲಿದ್ದಾಗ ತನಗರಿವಿಲ್ಲದಂತೆ ಎದ್ದು, ತನ್ನ ಪಕ್ಕದಲ್ಲಿ ಮಲಗಿದ್ದ 6 ತಿಂಗಳ ಮಗು ಶಿವನನ್ನು 2ನೇ ಮಹಡಿಗೆ ಕರೆದೊಯ್ದು, ಅಲ್ಲಿರುವ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಗಿ ಹೇಳಿದ್ದಾಳೆ. ಹಾಗೇಕೆ ಮಾಡಿದ್ದು ಎಂಬುದು ತನಗೆ ಈವರೆಗೂ ಅರ್ಥವಾಗುತ್ತಿಲ್ಲ ಎಂದು ಹಲುಬಿದ್ದಾಳೆ.

ಶಾಲಾ ಶಿಕ್ಷಕನಾಗಿರುವ ಈಕೆಯ ಪತಿ ಸೀತಾರಾಂ ಗುಜ್ಜರ್​ ಶನಿವಾರ ತಡರಾತ್ರಿ 1.30ರಲ್ಲಿ ಎಚ್ಚರಗೊಂಡು ನೋಡಿದಾಗ ಮಗು ಇರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ದೀಪಿಕಾ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಳು. ಜತೆಗೆ ಅತ್ತೆ ಹಾಗೂ ಪತಿಯೊಂದಿಗೆ ಮಗುವನ್ನು ಹುಡುಕಲು ಮುಂದಾಗಿದ್ದಳು. ಕೊನೆಗೆ ಎರಡನೇ ಮಹಡಿಯ ನೀರಿನ ತೊಟ್ಟಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

ಮಗುವಿನ ಸಾವಿನ ಬಗ್ಗೆ ಅದೆಷ್ಟೇ ಪ್ರಶ್ನಿಸಿದರೂ ದೀಪಿಕಾ ಮಾತ್ರ ಕ್ಷಣಕ್ಕೊಂದು ಹೇಳಿಕೆ ನೀಡುತ್ತ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಳು. ಸೋಮವಾರ ಮಧ್ಯಾಹ್ನದವರೆಗೂ ಹೀಗೆಯೇ ಮುಂದುವರಿದಿತ್ತು. ಇದರಿಂದ ಬೇಸತ್ತ ಪೊಲೀಸರು ಆಕೆಯನ್ನು ಕರೆದೊಯ್ದು ಲಾಠಿ ಏಟು ಕೊಡುತ್ತಲೇ ಮಗುವನ್ನು ಕೊಂದಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾಳೆ.

ಅಂದು ರಾತ್ರಿ ಪತಿ, ಅತ್ತೆ ಮಲಗಿರುವಾಗ ಮೊದಲ ಮಹಡಿಯಿಂದ ಎರಡನೇ ಮಹಡಿಗೆ ಮಗುವನ್ನು ಕರೆದೊಯ್ದೆ. ಬಳಿಕ ಅಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಸಾಯಿಸಿದೆ. ಆನಂತರದ ಏನೂ ತಿಳಿಯದವಳಂತೆ ಬಂದು ಮಲಗಿಕೊಂಡೆ ಎಂದು ತಿಳಿಸಿದ್ದಾಳೆ. ಆದರೆ, ಮಗುವನ್ನು ಕೊಂದಿದ್ದು ಏಕೆ ಎಂಬುದನ್ನು ಹೇಳಿಲ್ಲ. ಹೀಗಾಗಿ ಆಕೆ ಮಾನಸಿಕ ಅಸ್ವಸ್ಥೆ ಇರಬಹುದೇ ಎಂಬುದು ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವುದಾಗಿ ಕೋಟ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)