ಹೊಸ ಕಾಯ್ದೆಯನ್ವಯ ಟ್ರಕ್​ ಡ್ರೈವರ್​ಗೆ 1.41 ಲಕ್ಷ ರೂ. ದಂಡ ವಿಧಿಸಿದ ಟ್ರಾಫಿಕ್​ ಪೊಲೀಸರು

ಬಿಕಾನೇರ್​: ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಮಾಡಿದ ನಂತರ ಸಂಚಾರ ನಿಮಯ ಉಲ್ಲಂಘಿಸಿದ್ದಕ್ಕಾಗಿ ಹಲವು ವಾಹನ ಸವಾರರು ಭಾರಿ ದಂಡ ತೆತ್ತು ಸುದ್ದಿಯಾಗಿದ್ದರು. ಈಗ ರಾಜಸ್ಥಾನದ ಟ್ರಕ್​ ಡ್ರೈವರ್​ ಒಬ್ಬ ಬರೋಬ್ಬರಿ 1.41 ಲಕ್ಷ ರೂ. ದಂಡ ಕಟ್ಟಿದ್ದಾರೆ.

ರಾಜಸ್ಥಾನದ ಬಿಕಾನೇರ್​ನ ಹರ್ಮಾನ್​ ರಾಮ್​ ಭಾಂಬು ಎಂಬ ಟ್ರಕ್​ ಮಾಲಿಕನಿ​ಗೆ ಟ್ರಕ್​ನಲ್ಲಿ ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್​ಲೋಡ್​ ನಿಯಮದನ್ವಯ ದಂಡ ವಿಧಿಸಲಾಗಿದೆ. ‘ಸೆಪ್ಟೆಂಬರ್​ 5 ರಂದು ದೆಹಲಿ ಪೊಲೀಸರು ದಂಡ ವಿಧಿಸಿ ಟ್ರಕ್​ ವಶಕ್ಕೆ ಪಡೆದಿದ್ದರು. ಇಷ್ಟು ದುಬಾರಿ ಮೊತ್ತವನ್ನು ಹೊಂದಿಸಲು 5 ದಿನವೇ ಬೇಕಾಯಿತು. 5 ದಿನದ ನಂತರ ಸೆಪ್ಟೆಂಬರ್​ 9 ರಂದು ಕೋರ್ಟ್​ನಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡಿದ್ದೇವೆ ಎಂದು ಟ್ರಕ್​ ಮಾಲಿಕ​ ತಿಳಿಸಿದ್ದಾರೆ.

ಟ್ರಕ್​ನಲ್ಲಿ ನಿಯಮಕ್ಕಿಂತ ಹೆಚ್ಚಿಗೆ ತುಂಬಿಸಲಾಗಿದ್ದ ಸರಕಿಗೆ ಮೊದಲ ಒಂದು ಟನ್​ಗೆ 20 ಸಾವಿರ ಮತ್ತು ಆ ನಂತರ ಪ್ರತಿಯೊಂದು ಟನ್​ಗೆ 2 ಸಾವಿರದಂತೆ ಓವರ್​ಲೋಡ್​ ಮಾಡಿದ್ದಕ್ಕಾಗಿ ಒಟ್ಟು 48 ಸಾವಿರ ರೂ. ದಂಡ ವಿಧಿಸಲಾಗಿದೆ. ಜತೆಗೆ ಆರ್​ಸಿ ಮತ್ತು ಪರ್ಮಿಟ್​ ಇಲ್ಲದ್ದಕ್ಕಾಗಿ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ. ಎಲ್ಲಾ ಸೇರಿ ಡ್ರೈವರ್​ಗೆ 70,800 ರೂ. ಮತ್ತು ಇಷ್ಟೇ ಮೊತ್ತದ ದಂಡವನ್ನು ಟ್ರಕ್​ ಮಾಲಿಕನಿಗೆ ವಿಧಿಸಲಾಗಿದೆ. ಹೀಗಾಗಿ ದಂಡದ ಒಟ್ಟು ಮೊತ್ತ 1,41,600 ರೂ. ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್​ 3 ರಂದು ಒಡಿಶಾದ ಸಂಬಾಲ್​ಪುರ ಜಿಲ್ಲೆಯಲ್ಲಿ ಟ್ರಕ್​ ಡ್ರೈವರ್​ಗೆ 86,500 ರೂ. ದಂಡ ವಿಧಿಸಲಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *