ರಾಜಸ್ಥಾನದ ಪ್ರಾಥಮಿಕ ಶಾಲಾ ಪಠ್ಯಕ್ರಮದಲ್ಲಿ ಅಭಿನಂದನ್​ ಸಾಹಸಗಾಥೆ ಸೇರ್ಪಡೆಗೊಳಿಸಲು ನಿರ್ಧಾರ

ಜೈಪುರ: ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ಸಾಹಸಗಾಥೆ ಪ್ರತಿಯೊಬ್ಬರ ಬಾಯಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ರಾಜಸ್ಥಾನ ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕದಲ್ಲಿ ಅಭಿನಂದನ್​ ಶೌರ್ಯದ ಕತೆಯನ್ನು ಸೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ರಾಜ್ಯದ ಶಿಕ್ಷಣ ಸಚಿವ ಗೋವಿಂದ್​ ಸಿಂಗ್​ ದೋಸ್ತಾರಾ ಅವರೇ ಈ ಪ್ರಸ್ತಾವನೆ ಮುಂದಿಟ್ಟಿದ್ದರು. ಅದಾದ ಬಳಿಕ ಟ್ವೀಟ್​ ಮಾಡಿ, ಅಭಿನಂದನ್​ ಅವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಅವರ ಶೌರ್ಯದ ಕತೆಯನ್ನು ರಾಜಸ್ಥಾನದ ಪಠ್ಯದಲ್ಲಿ ಪರಿಚಯಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳು ಖಂಡಿತ ಅಭಿನಂದನ್​ ಕತೆಯನ್ನು ಪಠ್ಯದಲ್ಲಿ ಓದುತ್ತಾರೆ ಎಂದು ಹೇಳಿದ್ದಾರೆ. ಹಾಗೇ ತಮ್ಮ ಫೇಸ್​ಬುಕ್​ನಲ್ಲೂ ಈ ಬಗ್ಗೆ ಪೋಸ್ಟ್​ ಹಾಕಿಕೊಂಡಿದ್ದಾರೆ.

ರಾಜಸ್ಥಾನದ ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಅಭಿನಂದನ್​ ಕತೆಯನ್ನು ಸೇರಿಸುವುದು ನಿಶ್ಚಿತವಾಗಿದ್ದರೂ ಯಾವ ತರಗತಿಗೆ ಸೇರಿಸಬೇಕು ಎಂಬುದು ಇನ್ನೂ ನಿರ್ಧರಿತವಾಗಿಲ್ಲ. ಅದನ್ನು ಶಿಕ್ಷಣ ಸಚಿವರು ತಿಳಿಸಿಲ್ಲ.
ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರ ಬಗ್ಗೆಯೂ ಪಠ್ಯಕ್ರಮದಲ್ಲಿ ಸೇರಿಸುವ ಪ್ರಸ್ತಾವನೆಯನ್ನು ಸಚಿವ ಗೋವಿಂದ್​ ಸಿಂಗ್​ ದೋಸ್ತಾರಾ ಈ ಮೊದಲು ಇಟ್ಟಿದ್ದರು. ಅದು ಕೂಡ ಪಠ್ಯ ಪರಿಶೀಲನಾ ಸಮಿತಿಯಿಂದ ಅಂಗಿಕರಿಸಲ್ಪಟ್ಟಿದೆ.