ನವದೆಹಲಿ/ಜೈಪುರ: ರಾಜಸ್ಥಾನದ ರಾಜಕೀಯ ಪ್ರಹಸನ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಚಿನ್ ಪೈಲಟ್ ಬಣದ ಶಾಸಕರು ಅನರ್ಹತೆಯ ನೋಟಿಸ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಯಾವುದೇ ತೀರ್ಪು ನೀಡದಂತೆ ರಾಜಸ್ಥಾನ ಹೈಕೋರ್ಟ್ಗೆ ಸೂಚಿಸಬೇಕು ಎಂದು ಸ್ಪೀಕರ್ ಸಿ.ಪಿ. ಜೋಶಿ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಮುನ್ನ ತಮ್ಮ ವಾದವನ್ನೂ ಆಲಿಸಬೇಕು ಎಂದು ಪೈಲಟ್ ಬಣ ಕೇವಿಯಟ್ ಸಲ್ಲಿಸಿದೆ. ಈ ಅರ್ಜಿಗಳ ವಿಚಾರಣೆ ಗುರುವಾರ ನಡೆಯಲಿದೆ.
ಪೈಲಟ್ ಮತ್ತು 18 ಶಾಸಕರ ಅರ್ಜಿ ಕುರಿತು ಸೋಮವಾರ ಮತ್ತು ಮಂಗಳವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ವಿಭಾಗೀಯ ಪೀಠ, ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ಅಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಪೀಕರ್ಗೆ ಸೂಚಿಸಿತ್ತು. ಇದರಿಂದ ಸಾಂವಿಧಾನಿಕ ಹುದ್ದೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಿದೆ ಎಂದು ಸ್ಪೀಕರ್ ಜೋಶಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ. ಪೈಲಟ್ ಬಣದ ಪರ ಮುಕುಲ್ ರೋಹಟಗಿ ವಕಾಲತು ವಹಿಸಿದ್ದಾರೆ.
ಹಿನ್ನೆಲೆ ಏನು?: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡೆದ್ದಿರುವ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ 18 ಶಾಸಕರಿಗೆ ವಿಪ್ ನೀಡಿಲಾಗಿದ್ದರೂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಅವರು ಗೈರಾಗಿದ್ದರು. ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ನ ಮುಖ್ಯ ಸಚೇತಕ ಸ್ಪೀಕರ್ಗೆ ದೂರು ನೀಡಿದ್ದರು. ಇದರ ಅನ್ವಯ ಪೈಲಟ್ ಬಣದವರಿಗೆ ಸ್ಪೀಕರ್ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಪೈಲಟ್ ಮತ್ತು ಅವರ ಬೆಂಬಲಿಗರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಫೋನ್ ಟ್ಯಾಪಿಂಗ್ಗೆ ಅನುಮತಿ ನೀಡಿರಲಿಲ್ಲ: ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆಗೆ (ಫೋನ್ ಟ್ಯಾಪಿಂಗ್) ಅನುಮತಿ ನೀಡಿಲ್ಲ ಎಂದು ರಾಜಸ್ಥಾನ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ. ರಾಜಸ್ಥಾನದಲ್ಲಿ ರಾಜಕೀಯ ವಿಪ್ಲವ ಸೃಷ್ಟಿಸಿರುವ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ವರದಿ ನೀಡುವಂತೆ ರಾಜಸ್ಥಾನದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗೃಹ ಸಚಿವಾಲಯ ಸೂಚಿಸಿತ್ತು. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಅಮಿಷ ಒಡ್ಡಿರುವ ಆಡಿಯೋಗಳು ಇತ್ತೀಚೆಗೆ ಬಹಿರಂಗಗೊಂಡಿದ್ದವು.
ಗೆಹ್ಲೋಟ್ ಸೋದರನಿಗೆ ಇಡಿ ಸಂಕಷ್ಟ
ಸಿಎಂ ಅಶೋಕ್ ಗೆಹ್ಲೋಟ್ ಸೋದರ ಅಗ್ರಸೇನ್ ಗೆಹ್ಲೋಟ್ಗೆ ಸಂಬಂಧಿಸಿದ 13 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಯಲಯ (ಇ.ಡಿ) ಬುಧವಾರ ದಾಳಿ ನಡೆಸಿದೆ. ರಸಗೊಬ್ಬರ ರಫ್ತು ಹಗರಣದಲ್ಲಿ ಅವರು ಆರೋಪಿತರಾಗಿದ್ದಾರೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್ ದೆಹಲಿಯ ಹಲವೆಡೆ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ. 2007 ಮತ್ತು 2009ರಲ್ಲಿ ಅಗ್ರಸೇನ್ ಒಡೆತನದ ಅನುಪಮ್ ಕೃಷಿ ಸಂಸ್ಥೆಯು (ಭಾರತೀಯ ಪೊಟ್ಯಾಶ್ ಲಿಮಿಟೆಡ್ನಿಂದ ಮಾನ್ಯತೆ ಪಡೆದ) ರೈತರಿಗೆ ವಿತರಿಸಲು ‘ಮುರಿಯೇಟ್ ಆಫ್ ಪೊಟ್ಯಾಷ್ (ಎಂಒಪಿ)ನ್ನು ರಿಯಾಯಿತಿ ದರದಲ್ಲಿ ಖರೀದಿಸಿತ್ತು. ಆದರೆ, ಇದನ್ನು ಬೇರೆಯವರಿಗೆ ಮಾರಾಟ ಮಾಡಿತ್ತು. ಮಲೇಷ್ಯಾ ಮತ್ತು ಸಿಂಗಾಪುರಕ್ಕೂ ರಫ್ತು ಮಾಡಲಾಗಿತ್ತು. ಈ ಹಗರಣವನ್ನು ಕೇಂದ್ರ ಕಂದಾಯ ಇಲಾಖೆಯ ಗುಪ್ತಚರ ದಳ 2012-13ರಲ್ಲಿ ಪತ್ತೆ ಮಾಡಿತ್ತು. 150 ಕೋಟಿ ರೂ. ಮೌಲ್ಯದ 35 ಸಾವಿರ ಟನ್ ರಸಗೊಬ್ಬರವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿತ್ತು.
1 ರೂ.ಪಾವತಿಸಿ, ಲಿಖಿತವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕಾನೂನು ಕ್ರಮ ನಿಶ್ಚಿತ: ಸಚಿನ್ ಪೈಲಟ್