ಬಿಡಾಡಿ ಹಸುಗಳನ್ನು ದತ್ತು ಪಡೆಯುವವರನ್ನು ಸನ್ಮಾನಿಸಲಿದೆ ರಾಜಸ್ಥಾನ ಸರ್ಕಾರ

ಜೈಪುರ: ಬಿಡಾಡಿ ಹಸುಗಳನ್ನು ದತ್ತು ಪಡೆದು ಸಲಹುವವರನ್ನು ಸನ್ಮಾನಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.

ರಾಜಸ್ಥಾನದ ಗೋಪಾಲನೆ ನಿರ್ದೇಶನಾಲಯವು ಡಿ. 28 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಬಿಡಾಡಿ ಹಸುಗಳನ್ನು ದತ್ತು ಪಡೆಯಲು ಸ್ವಯಂ ಸೇವಾ ಸಂಸ್ಥೆಗಳು, ಸಮಾಜ ಸೇವಕರು, ಗೋ ಪ್ರೇಮಿಗಳನ್ನು ಉತ್ತೇಜಿಸಿ, ಹಸುಗಳನ್ನು ದತ್ತು ಪಡೆದವರನ್ನು ಗಣರಾಜ್ಯೋತ್ಸವ ಮತ್ತು ಸ್ವಾತಂತ್ಯ್ಯ ದಿನದಂದು ಸನ್ಮಾನಿಸಿ ಎಂದು ತಿಳಿಸಲಾಗಿದೆ ಎಂದು ಗೋಪಾಲನೆ ನಿರ್ದೇಶನಾಲಯದ ನಿರ್ದೇಶಕ ವಿಶ್ರಮ್​ ಮೀನಾ ತಿಳಿಸಿದ್ದಾರೆ.

ಗೋಶಾಲೆಗಳಲ್ಲಿರುವ ಹಸುಗಳನ್ನು ಹಲವರು ದತ್ತು ಪಡೆಯುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಗೋಶಾಲೆಗೆ ಭೇಟಿ ನೀಡಿ ಹಸುಗಳ ಜತೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡಾಡಿ ಹಸುಗಳನ್ನು ದತ್ತು ಪಡೆಯುವಂತೆ ಉತ್ತೇಜಿಸಲು ಹೊಸ ಯೋಜನೆ ರೂಪಿಸಲಾಗಿದೆ. ದತ್ತು ಪಡೆಯಲು ಆಸಕ್ತಿ ಇರುವ ವ್ಯಕ್ತಿಗಳು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಹಸು ದತ್ತು ಪಡೆಯಬಹುದು. ದತ್ತು ಪಡೆದವರು ಹಸುವನ್ನು ನಿಗದಿತ ಮೊತ್ತ ಪಾವತಿಸಿ ಗೋಶಾಲೆಗಳಿಗೆ ಬಿಡಬಹುದು ಅಥವಾ ತಮ್ಮ ಮನೆಗೂ ಕರೆದೊಯ್ದು ಸಾಕಬಹುದು ಎಂದು ಮೀನಾ ತಿಳಿಸಿದ್ದಾರೆ. (ಏಜೆನ್ಸೀಸ್​)