ಅಶೋಕ್​ ಗೆಹ್ಲೋಟ್​ಗೆ ಒಲಿಯಿತು ರಾಜಸ್ಥಾನದ ಮುಖ್ಯಮಂತ್ರಿ ಪಟ್ಟ, ಅಧಿಕೃತ ಘೋಷಣೆ ಬಾಕಿ

ನವದೆಹಲಿ: ಅಶೋಕ್​ ಗೆಹ್ಲೋಟ್​ ಅವರೇ ರಾಜಸ್ಥಾನದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ. ಅಧಿಕೃತ ಪ್ರಕಟಣೆ ಸದ್ಯವೇ ಹೊರಬೀಳಲಿದೆ. ಒಂದೊಮ್ಮೆ ಅವರು ಅಧಿಕಾರ ಸ್ವೀಕರಿಸಿದರೆ, ಮೂರನೇ ಬಾರಿಗೆ ಮುಖ್ಯಮಂತ್ರಿ ಭಾಗ್ಯ ದೊರೆತಂತಾಗುವುದು.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಇಂದು ಅಶೋಕ್​ ಗೆಹ್ಲೋಟ್​ ಹಾಗೂ ಅವರ ಪ್ರತಿಸ್ಪರ್ಧಿ ಸಚಿನ್​ ಪೈಲಟ್​ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಬಳಿಕ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಹೆಸರು ಘೋಷಣೆಯಾಗಲಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನದ ರೇಸ್​ನಲ್ಲಿ 67 ವರ್ಷದ ಅಶೋಕ್​ ಗೆಹ್ಲೋಟ್​ ಅವರೇ ಮುಂಚೂಣಿಯಲ್ಲಿದ್ದರು. ಸಭೆ ಮುಗಿದ ಬಳಿಕ ಅವರು ಜೈಪುರಕ್ಕೆ ವಾಪಸಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಸಚಿನ್​ ಪೈಲಟ್​ ಅವರು ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್​ಗೆ ಹುಲ್ಲು ಕಡ್ಡಿಯ ನೆರಳೂ ಸಿಗದಿದ್ದಾಗ ಅದನ್ನು ಮರುನಿರ್ಮಾಣ ಮಾಡಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದರು. 2013ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್​ ಸಂಪೂರ್ಣ ಸೋಲು ಅನುಭವಿಸಿದಾಗ ಸಚಿನ್​ ಪೈಲಟ್​ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಡಿ.7ರಂದು ನಡೆದ ಚುನಾವಣಾ ಪ್ರಚಾರಕ್ಕಾಗಿ ಸುಮಾರು 5 ಲಕ್ಷ ಕಿ.ಮೀ. ಸಂಚಾರ ಮಾಡಿದ್ದರು.

ಆದರೆ, ಮಂಗಳವಾರ ಬಂದ ಚುನಾವಣೆ ಫಲಿತಾಂಶ ಸಚಿನ್ ಪೈಲಟ್​ ಮತ್ತು ಕಾಂಗ್ರೆಸ್​ ನಿರೀಕ್ಷೆ ಮಾಡಿದ ಮಟ್ಟಕ್ಕೆ ಇರಲಿಲ್ಲ. 99 ಬಹುಮತ ಪಡೆಯಿತು.

ಡಾ. ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದ ಸಚಿನ್​ ಪೈಲಟ್​ ಅಷ್ಟು ಸುಲಭವಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ರಾಜಸ್ಥಾನದಲ್ಲಿ 99ಕ್ಕೂ ಹೆಚ್ಚು ಶಾಸಕರು ನಾನು ಸಿಎಂ ಆಗುವುದನ್ನು ಬಯಸುತ್ತಿದ್ದಾರೆ ಎಂದು ವಾದ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.