ಹೆದ್ದಾರಿಯಲ್ಲಿ ಉರುಳಿದ ರಾಜಸ್ಥಾನ ಬಸ್, 28 ಜನರಿಗೆ ಗಾಯ

ಎಂ.ಕೆ.ಹುಬ್ಬಳ್ಳಿ: ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ರಾಜಸ್ಥಾನ ರಾಜ್ಯಕ್ಕೆ ಹೊರಟಿದ್ದ ಬಸ್ ಸಮೀಪದ ದಾಸ್ತಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡುರಸ್ತೆಯಲ್ಲೇ ಉರುಳಿ ಬಿದ್ದಿದೆ. ಅಪಘಾತದಲ್ಲಿ 28 ಜನರು ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ದುರಂತಕ್ಕೀಡಾದ ಬಸ್ ರಾಜಸ್ಥಾನ ಮೂಲದ ಎಂ.ಆರ್.ಟ್ರಾವೆಲ್ಸ್ಗೆ ಸೇರಿದೆ. ಬಸ್‌ನಲ್ಲಿದ್ದವರು ರಾಜಸ್ಥಾನ, ಮಹಾರಾಷ್ಟ್ರ ಮೂಲದವರಿದ್ದು ಹೆಸರು, ಮತ್ತು ಬಸ್‌ನಲ್ಲಿದ್ದವರ ನಿಖರ ಮಾಹಿತಿ ಸಿಗುತ್ತಿಲ್ಲ . ಅಪಘಾತ ಸಂಭವಿಸುತ್ತಲೇ ಚಾಲಕರಿಬ್ಬರೂ ಪರಾರಿಯಾಗಿದ್ದಾರೆ. ಬಸ್‌ನಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಟ್ರಾವೆಲ್ಸ್ ಕಂಪನಿ ಅಧಿಕಾರಿಗಳು ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಉರುಳಿದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಬಸ್ ಒಳಗೆ ಸಿಲುಕಿದ್ದ ಜನರನ್ನು ಹೊರತೆಗೆದಿದ್ದಾರೆ. ಬಸ್‌ನಲ್ಲಿ ಒಟ್ಟು 42ಜನ ಪ್ರಯಾಣಿಕರಿದ್ದರು ಎಂಬ ಮಾಹಿತಿ ಇದೆ. 28 ಗಾಯಾಳುಗಳನ್ನು ಸುಮಾರು 5ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಮೂಲಕ ಎಂ.ಕೆ.ಹುಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬೆಳಗಾವಿಯ ಜಿಲ್ಲಾಸತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಸುಮಾರು ಐದಾರು ಜನರಿಗೆ ಗಂಭೀರ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಿತ್ತೂರು ಠಾಣೆ ಪಿಎಸ್‌ಐ ಈರಣ್ಣ ಲಟ್ಟಿ , ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.