ವಸುಂಧರ ರಾಜೇ ಸಂಪುಟದ ನಾಲ್ವರು ಸಚಿವರು ಸೇರಿ 11 ಜನ ಬಂಡಾಯಗಾರರ ಅಮಾನತು

ಜೈಪುರ: ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿರುವ ರಾಜಸ್ಥಾನದಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿದ್ದು, ಮುಖ್ಯಮಂತ್ರಿ ವಸುಂಧರ ರಾಜೇ ಸಂಪುಟದ ನಾಲ್ವರು ಸಚಿವರು ಸೇರಿದಂತೆ 11 ಹಿರಿಯ ಬಂಡಾಯ ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಪರ್ಯಾಯ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆ ಮಾಡಿದ್ದು, ಈಗಾಗಲೇ ಸಲ್ಲಿಸಿರುವ ನಾಮಪತ್ರ ಹಿಂಪಡೆಯಲು ನಿರಾಕರಿಸಿದ ಬೆನ್ನಲ್ಲೇ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷವು, 11 ಬಂಡಾಯಗಾರರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಕೈಬಿಡಲಾಗಿದೆ. ಸುರೇಂದ್ರ ಗೋಯಲ್‌, ಲಕ್ಷ್ಮಿನಾರಾಯಣ್‌ ದಾವೆ, ರಾಧೆಶ್ಯಾಮ ಗಂಗಾನಗರ, ಹೇಮ್‌ಸಿಂಗ್‌ ಭಾದನಾ, ರಾಜ್‌ಕುಮಾರ್‌ ರಿನಾವಾ, ರಾಮೇಶ್ವರ್‌ ಭಾಟಿ, ಕುಲದೀಪ್‌ ಢಂಕಾದ್‌, ದೀನ್‌ದಯಾಳ್‌ ಕುಮಾವತ್‌, ಕ್ರಿಷನ್‌ರಾಮ್‌ ನಾಯ್, ಧನ್‌ಸಿಂಗ್‌ ರಾವತ್‌ ಮತ್ತು ಅನಿತಾ ಕತಾರಾ ಎಂಬವರನ್ನು ಪಕ್ಷದಿಂದ ಅಮಾನತು ಗೊಳಿಸಲಾಗಿದೆ.

ಡಿ. 7ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಂಡಾಯ ಎದ್ದ ಹಲವರು ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದು, ಪಕ್ಷದಿಂದ ಅಮಾನತುಗೊಂಡ ಬಳಿಕ ಕೆಲವು ಶಾಸಕರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ವಸುಂಧರ ರಾಜೇ ನೇತೃತ್ವದ ಬಿಜೆಪಿಯು ರಾಜಸ್ಥಾನದಲ್ಲಿ ಭಿನ್ನಾಭಿಪ್ರಾಯದ ವಿರೋಧಿ ಅಲೆ ಎದುರಿಸುತ್ತಿದ್ದು, ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. (ಏಜೆನ್ಸೀಸ್)