ಹನುಮಂತನನ್ನು ದಲಿತ ಎಂದ ಯುಪಿ ಸಿಎಂ ಯೋಗಿಗೆ ಲೀಗಲ್​ ನೋಟಿಸ್​

ಜೈಪುರ: ಹಿಂದು ದೇವರು ಹನುಮಂತನನ್ನು ದಲಿತ ಎಂದು ಉಲ್ಲೇಖಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಜಸ್ಥಾನದ ಬಲಪಂಥೀಯ ಗುಂಪೊಂದು ಲೀಗಲ್​ ನೋಟಿಸ್​ ನೀಡಿದ್ದು, ಮೂರು ದಿನಗಳ ಒಳಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.​

ರಾಜಸ್ಥಾನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಅಲ್ವಾರ್​ ಜಿಲ್ಲೆಯ ಮಾಳಖೇಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ, ಹನುಮಂತ ಒಬ್ಬ ಅರಣ್ಯ ನಿವಾಸಿಯಾಗಿದ್ದು, ಎಲ್ಲಾ ಭಾರತೀಯ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ ಎಂದು ಹೇಳಿದ್ದರು.

ರಾಮನ ಆಶಯದಂತೆ ಎಲ್ಲರನ್ನು ಒಂದುಗೂಡಿಸುವುದು ಹನುಮಂತನ ನಿರ್ಧಾರವಾಗಿತ್ತು. ಅವನಂತೆಯೇ ರಾಮನ ಆಶಯವನ್ನು ಪೂರೈಸುವ ತನಕ ನಾವು ವಿಶ್ರಾಂತಿಯನ್ನು ಪಡೆಯಬಾರದು ಎಂದು ಪ್ರಚಾರ ಸಭೆಯಲ್ಲಿ ಹೇಳಿದ್ದರು.

ಹನುಮಂತ ದಲಿತ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ರಾಜಸ್ಥಾನದ ಸರ್ವ ಬಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್​ ಮಿಶ್ರಾ ಅವರು ಸಿಎಂ ಯೋಗಿ ಅವರಿಗೆ ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ. ಅಲ್ಲದೆ, ಡಿಸೆಂಬರ್​ 7 ರಂದು ನಡೆಯುವ ಚುನಾವಣೆಗೆ ಮತದಾರರನ್ನು ಸೆಳೆಯಲು ಯೋಗಿ ಅವರು ಹನುಮಂತನ ಜಾತಿಯನ್ನು ಎಳೆದು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಯೋಗಿ ಅವರ ಹೇಳಿಕೆ ಅನೇಕ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ರಾಜಕೀಯ ಲಾಭಕ್ಕಾಗಿ ಹನುಮಂತನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್ ಖಂಡನೆ
ಯೋಗಿ ಅವರ ಹೇಳಿಕೆಯು ಬಿಜೆಪಿಯ ಎರಡು ಮುಖವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್​ ಕಿಡಿಕಾರಿದ್ದು, ಕಾಂಗ್ರೆಸ್​ ನಾಯಕ ಮನೋಜ್​ ತಿವಾರಿ ಹೇಳಿಕೆಯನ್ನು ಖಂಡಿಸಿದ್ದಾರೆ. ಸಾಮಾನ್ಯವಾಗಿ ಬಿಜೆಪಿ ತನ್ನ ಹೇಳಿಕೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರನ್ನು ಬೇರ್ಪಡಿಸುವ ಕೆಲಸ ಮಾಡುತ್ತದೆ. ಆದರೆ, ಇದೇ ಮೊದಲ ಬಾರಿಗೆ ದೇವರನ್ನು ಜಾತಿ ಆಧಾರದ ಮೇಲೆ ಬೇರ್ಪಡಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ರಾಜಸ್ಥಾನ ವಿಧಾನಸಭಾ ಚುನಾವಣೆಯ ಬಿಜೆಪಿ ಸ್ಟಾರ್​ ಪ್ರಚಾರಕರಾಗಿದ್ದು, ಹಲವು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ.(ಏಜೆನ್ಸೀಸ್​)