ಬಿರುಗಾಳಿ ಸಹಿತ ಭಾರಿ ಮಳೆಗೆ ಪೆಂಡಾಲ್‌ ಉರುಳಿ 14 ಜನ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ನವದೆಹಲಿ: ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ರಾಜಸ್ಥಾನದ ಬಾರ್ಮರ್‌ನಲ್ಲಿ ಪೆಂಡಾಲ್‌(ಟೆಂಟ್‌) ಕುಸಿದು ಸುಮಾರು 14 ಜನರು ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಸಂಜೆ 4.30ರ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರೆಲ್ಲರೂ ರಾಮಕಥೆಯನ್ನು ಕೇಳಲು ಅಲ್ಲಿ ನೆರೆದಿದ್ದರು ಎನ್ನಲಾಗಿದೆ. ಈ ವೇಳೆ ಬಿರುಗಾಳಿ ಸಹಿತ ಭಾರಿ ಮಳೆಗೆ ಪೆಂಡಾಲ್‌ ಉರುಳಿ ಬಿದ್ದಿದೆ.

ಜಾಸೊಲ್‌ ಪ್ರದೇಶದಲ್ಲಿ ರಾಮ ಕಥೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ಶಾಮಿಯಾನ ಅಡಿಯಲ್ಲಿ ಕುಳಿತಿದ್ದವರ ಮೇಲೆ ಬಿದ್ದಿದ್ದರಿಂದಾಗಿ ಸಾವು, ನೋವು ಸಂಭವಿಸಿದೆ ಎಂದು ಪೊಲೀಸ್‌ ಹೆಚ್ಚುವರಿ ಸೂಪರಿಂಟೆಂಡೆಂಟ್‌ ಕೀನ್‌ ಸಿಂಗ್‌ ತಿಳಿಸಿದ್ದಾರೆ.

ಮಳೆಯಿಂದಾಗಿ ಎಲೆಕ್ಟ್ರಿಕ್‌ ಶಾಕ್‌ ಉಂಟಾಗಿ ಸಾವು ಸಂಭವಿಸಿದೆ ಎಂದು ಕೆಲವರು ಹೇಳಿದ್ದಾರೆ.
ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಟ್ವೀಟ್‌ ಮಾಡಿದ್ದು ಘಟನೆಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

ರಾಜಸ್ಥಾನದ ಬಾರ್ಮರ್‌ನಲ್ಲಿ ಪೆಂಡಾಲ್‌ ಕುಸಿದಿರುವುದು ದುರದೃಷ್ಟಕರ. ಮಡಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಮೋದಿ ಕೇಳಿಕೊಂಡಿದ್ದಾರೆ.
ಸಿಎಂ ಗೆಹ್ಲೋಟ್‌ ಟ್ವೀಟ್‌ ಮಾಡಿ, ಪ್ರಾಥಮಿಕ ತನಿಖೆಯನ್ನು ಕೈಗೊಂಡಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *