ವಿವಾದಿತ ಲಂಕಾ ಪ್ರಧಾನಿ ರಾಜಪಕ್ಸ ರಾಜೀನಾಮೆ

ಕೊಲಂಬೊ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಶನಿವಾರ ರಾಜೀನಾಮೆ ನೀಡಿದ್ದಾರೆ. ಪದಚ್ಯುತ ಪ್ರಧಾನಿ ರಾನಿಲ್ ವಿಕ್ರಮಸಿಂಘಯನ್ನು ಮತ್ತೆ ಪ್ರಧಾನಿಯನ್ನಾಗಿ ನೇಮಿಸಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಒಪ್ಪಿದ್ದಾರೆ ಎನ್ನಲಾಗಿದೆ. ಭಾನುವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಪದಚ್ಯುತ ಪ್ರಧಾನಿ ವಿಕ್ರಮಸಿಂಘ ಮತ್ತೆ ಪ್ರಧಾನಿಯಾಗಲಿ ಎಂಬ ನಿರ್ಣಯವನ್ನು ಕಳೆದ ಬುಧವಾರ ಸಂಸತ್ತಿನಲ್ಲಿ ಬಹುಮತದಿಂದ ಅನುಮೋದಿಸಲಾಗಿತ್ತು. ಇದರ ಬೆನ್ನಿಗೆ ಬಹುಮತ ಸಾಬೀತುಪಡಿಸದ ಹೊರತು ರಾಜಪಕ್ಸ ಮತ್ತು ಸಂಪುಟ ಸಚಿವರು ಕಾರ್ಯನಿರ್ವಹಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಹಾಗಾಗಿ ರಾಜಪಕ್ಸ ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನು ಶನಿವಾರ ಪ್ರಕಟಿಸಿದರು. ಈ ಮೂಲಕ ದ್ವೀಪ ರಾಷ್ಟ್ರದಲ್ಲಿ ಏಳು ವಾರಗಳ ರಾಜಕೀಯ ಅಸ್ಥಿರತೆ ಅಂತ್ಯಗೊಳ್ಳುವ ನಿರೀಕ್ಷೆ ಮೂಡಿದೆ.

ಅ.26ರಂದು ನಡೆದ ಹಠಾತ್ ಬೆಳವಣಿಗೆಯಲ್ಲಿ ಅಧ್ಯಕ್ಷ ಸಿರಿಸೇನಾ ಪ್ರಧಾನಿ ವಿಕ್ರಮಸಿಂಘಯನ್ನು ಪದಚ್ಯುತಗೊಳಿಸಿದ್ದರು. ರಾಜಪಕ್ಸರನ್ನು ಪ್ರಧಾನಿಯಾಗಿ ನೇಮಿಸಿ, ಬಹುಮತದ ಕೊರತೆ ಹಿನ್ನೆಲೆಯಲ್ಲಿ ಸಂಸತ್ ವಿಸರ್ಜಿಸಿದ್ದರು.