More

  ರಜನಿಕಾಂತ್ ಸಂಚಲನ: ಹೊಸ ವರ್ಷಕ್ಕೆ ರಜನಿ ಪಕ್ಷ

  ಸೂಪರ್ ಸ್ಟಾರ್ ರಜನಿಕಾಂತ್ ಸಕ್ರಿಯ ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. ದಶಕಗಳ ಕಾಲ ತಮಿಳುನಾಡು ರಾಜಕಾರಣವನ್ನು ಪ್ರಭಾವಿಸಿದ ಇಬ್ಬರು ಘಟಾನುಘಟಿಗಳ ಅನುಪಸ್ಥಿತಿಯಲ್ಲಿ 2021ರಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗೆ ರಜನಿಕಾಂತ್ ಭರ್ಜರಿ ಎಂಟ್ರಿ ನೀಡಿದ್ದಾರೆ. ಈ ಬೆಳವಣಿಗೆ ಮತ್ತು ಪರಿಣಾಮಗಳ ಕುರಿತು ರಮೇಶ ದೊಡ್ಡಪುರ ವಿವರಿಸಿದ್ದಾರೆ.

  ‘ನಾವು ವಿಧಾನಸಭೆ ಚುನಾವಣೆಯಲ್ಲಿ ಖಂಡಿತ ಗೆಲುವು ಸಾಧಿಸಲಿದ್ದೇವೆ. ನಾವು ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರಮುಕ್ತ, ಆಧ್ಯಾತ್ಮಿಕ, ಜಾತ್ಯತೀತ ಆಡಳಿತ ನೀಡುತ್ತೇವೆ. ಒಂದು ಪವಾಡ ಹಾಗೂ ಚಮತ್ಕಾರ ಖಂಡಿತ ಸಂಭವಿಸಲಿದೆ’ ಎಂಬ ರಜನಿಕಾಂತ್ ಟ್ವೀಟ್ ಇದೀಗ ದೇಶಾದ್ಯಂತ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹಾಗೇ, ತಮಿಳುನಾಡಿನ ವರ್ಣರಂಜಿತ ರಾಜಕಾರಣ ರಾಷ್ಟ್ರಮಟ್ಟದಲ್ಲೂ ಗಮನಸೆಳೆದಿದೆ.

  ಟ್ವೀಟ್​ನಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಘೋಷಣೆ ನಂತರ ಚೆನ್ನೈನ ಪೋಯೆಸ್ ಗಾರ್ಡನ್​ನಲ್ಲಿರುವ ತಮ್ಮ ಮನೆಯ ಬಳಿ ಪತ್ರಕರ್ತರನ್ನು ಭೇಟಿ ಮಾಡಿದ ರಜನಿ, ‘ತಮಿಳುನಾಡಿನ ಜನರಿಗಾಗಿ ನಾನು ನನ್ನ ಜೀವವನ್ನೂ ತ್ಯಾಗ ಮಾಡಲು ಸಿದ್ಧ’ ಎಂದಿದ್ದಾರೆ. ‘ಈಗಲ್ಲದಿದ್ದರೆ ಮುಂದೆಂದೂ ಅಲ್ಲ’, ‘ನಾನು ಗೆದ್ದರೆ ಅದು ತಮಿಳುನಾಡಿನ ಜನರ ಜಯ. ನಾನು ಸೋತರೆ ಅದು ಸಹ ತಮಿಳುನಾಡಿನ ಜನರ ಸೋಲು’ ‘ನಾವು ಎಲ್ಲವನ್ನೂ ಬದಲಿಸುತ್ತೇವೆ’ ಎಂಬಂತಹ ರಜನಿ ಸ್ಟೈಲ್ ಡೈಲಾಗ್​ಗಳ ಮೂಲಕವೇ, ಐದು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಯನ್ನು ತಾನೆಷ್ಟು ಗಂಭೀರವಾಗಿ ಪರಿಗಣಿಸಿದ್ದೇನೆ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದಾರೆ. ಡಿ.31ರಂದು ತಮ್ಮ ಪಕ್ಷವನ್ನು ಘೋಷಿಸುವ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದಾರೆ.

  ಶೂನ್ಯ ತುಂಬಲು ಹಣಾಹಣಿ: ಡಿಎಂಕೆಯ ಎಂ. ಕರುಣಾನಿಧಿ ಹಾಗೂ ಎಐಎಡಿಎಂಕೆಯ ಜೆ. ಜಯಲಲಿತಾ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದು. ತಮಿಳುನಾಡು ರಾಜಕಾರಣವನ್ನು ಸಂಪೂರ್ಣ ಆವರಿಸಿದ್ದ ಇವರಿಬ್ಬರ ನಿಧನದಿಂದಾಗಿರುವ ಕೊರತೆಯನ್ನು ತುಂಬಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಕರುಣಾನಿಧಿ ಪುತ್ರ ಸ್ಟಾಲಿನ್ ಡಿಎಂಕೆ ಮುನ್ನಡೆಸುತ್ತಿದ್ದಾರೆ. ಚಿತ್ರನಟ ಕಮಲ ಹಾಸನ್ ಮಕ್ಕಳ್ ನೀತಿ ಮೈಯಮ್​ಎಂಎನ್​ಎಂ) ಮೂಲಕ ಈಗಾಗಲೆ ಪ್ರಚಾರದಲ್ಲಿದ್ದು, ನಿವೃತ್ತ ಅಧಿಕಾರಿಗಳೂ ಸೇರಿ ಅನೇಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಆಡಳಿತಾರೂಢ ಎಐಎಡಿಎಂಕೆಯ ಇಪಿಎಸ್-ಒಪಿಎಸ್ (ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ -ಡಿಸಿಎಂ ಒ ಪನ್ನೀರ್ ಸೆಲ್ವಮ್ ಜೋಡಿ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿದೆ. ತಮಿಳುನಾಡಿನ ಮಟ್ಟಿಗೆ ‘ನಾನೂ ಓಡುತ್ತಿದ್ದೇನೆ’ ಎನ್ನುವಂತೆ ಸ್ಪರ್ಧಿಸುತ್ತಿದ್ದ ಬಿಜೆಪಿ ಈಗ ಮೈಕೊಡವಿ ನಿಂತಿದೆ. ಬಿಜೆಪಿಯ ‘ವೆಟ್ರಿವೇಲ್ ಯಾತ್ರೆ’ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕರ್ನಾಟಕ ಕೇಡರ್​ನ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿ ಅನೇಕ ಹೊಸ ಮುಖಗಳನ್ನು ಸೇರ್ಪಡೆ ಮಾಡಿಕೊಂಡಿದೆ.

  ಅಧ್ಯಾತ್ಮ ಉಲ್ಲೇಖ, ಕುತೂಹಲ: ರಜನಿ ತಮ್ಮ ಪಕ್ಷದ ಘೋಷಣೆಯಲ್ಲಿ ಬಳಸಿರುವ ಒಂದು ಪದ ಇದೀಗ ಚರ್ಚೆಯಾಗುತ್ತಿದೆ. ಪಾರದರ್ಶಕ, ಪ್ರಾಮಾಣಿಕ, ಜಾತ್ಯತೀತ ಹಾಗೂ ‘ಆಧ್ಯಾತ್ಮಿಕ’ ಆಡಳಿತ ಎಂದಿದ್ದಾರೆ. ಜಾತ್ಯತೀತ, ಸರ್ವಧರ್ಮ ಸಮಭಾವದಂತಹ ಪದಗಳೇ ಹೆಚ್ಚಾಗಿ ಹರಿದಾಡುವ ಭಾರತದ ರಾಜಕಾರಣದಲ್ಲಿ ಅಧ್ಯಾತ್ಮ ಪದ ಬಳಕೆ ಆಗುವುದಿಲ್ಲ ಎಂಬುದು ಒಂದೆಡೆಯಾದರೆ, ಹಿಂದು ದೇವರುಗಳಿಗೆ ಅಪಮಾನ ಮಾಡುವುದನ್ನೂ ರಾಜಕಾರಣದ ಭಾಗವಾಗಿಸಿಕೊಂಡಿದ್ದ ‘ಪೆರಿಯಾರಿಸಂ’ ಪ್ರಭಾವದ ತಮಿಳುನಾಡಿನಲ್ಲಿ ಇದರ ಬಳಕೆ ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ಬಗೆ ಬಗೆ ಪಾತ್ರ ನಿರ್ವಹಿಸುವ ರಜನಿ, ಮೇಕಪ್ ತೆಗೆದ ನಂತರ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ, ಹಿಮಾಲಯಕ್ಕೆ ತೆರಳಿ ಧ್ಯಾನದಲ್ಲಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

  ಅಣ್ಣಾತ್ತೆ ಹೊಸ ಚಿತ್ರ

  ನಟನೆಯಲ್ಲಿ ಅತೀವ ಆಸಕ್ತಿ ಇದ್ದ ರಜನಿಕಾಂತ್ ಅವರಲ್ಲಿನ ಕಲಾವಿದನನ್ನು ಗುರುತಿಸಿದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್, ‘ಅಪೂರ್ವ ರಾಗಂಗಳ್’ ಮೂಲಕ ಪರಿಚಯಿಸಿದರು. ಅಲ್ಲಿಂದ ಈ ನಾಲ್ಕು ದಶಕಗಳಲ್ಲಿ ಕನ್ನಡ, ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲಿ 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ, ‘ಅಣ್ಣಾತ್ತೆ’ ಎಂಬ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಸಂಪೂರ್ಣವಾಗಲಿದೆ.

  ರಜನಿಕಾಂತ್ ಸಂಚಲನ: ಹೊಸ ವರ್ಷಕ್ಕೆ ರಜನಿ ಪಕ್ಷ

  ಗುರುಮೂರ್ತಿ ಭೇಟಿ?

  ಅ.29ರಂದು ತಮ್ಮ ರಾಜಕೀಯ ಪ್ರವೇಶದ ಕುರಿತು ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದ ರಜನಿ ಇದ್ದಕ್ಕಿದ್ದಂತೆ ಘೋಷಣೆ ಮಾಡಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಕಿಡ್ನಿ ಕಸಿಯಾಗಿರುವ ಕಾರಣಕ್ಕೆ ಹೊರಗೆ ಹೋಗಬೇಡಿ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅ.29ರಂದು ರಜನಿ ಹೇಳಿದ್ದರು. ಈ ನಡುವೆ, ಖ್ಯಾತ ಪತ್ರಕರ್ತ ಚೊ. ರಾಮಸ್ವಾಮಿ ನಿಧನದ ನಂತರ ‘ತುಘಲಕ್’ ಸಂಪಾದಕರಾಗಿರುವ ಆರೆಸ್ಸೆಸ್ ಮುಖಂಡ ಹಾಗೂ ಆರ್ಥಿಕ ತಜ್ಞ ಎಸ್. ಗುರುಮೂರ್ತಿ ಅವರೊಂದಿಗೆ ನ.1ರಂದು ಸಭೆ ನಡೆಸಿದ್ದರು. ತಮಿಳುನಾಡಿನ ರಾಜಕಾರಣಕ್ಕೆ ರಜನಿ ಅವಶ್ಯಕತೆ, ಬಂದರೆ ಏನು ಬದಲಾವಣೆ ಮಾಡಬಹುದು ಎಂಬುದರ ಕುರಿತು ಗುರುಮೂರ್ತಿ ಸ್ಪಷ್ಟನೆ ನೀಡಿದ ನಂತರ ಅವರ ನಿರ್ಧಾರ ಬಲವಾಯಿತು ಎನ್ನಲಾಗುತ್ತಿದೆ.

  ರಾಜಕೀಯ ಅಪಾಯಕಾರಿ ಆಟ

  ‘ರಾಜಕೀಯ ಎಂಬುದು ಅತ್ಯಂತ ದೊಡ್ಡ ಹಾಗೂ ಅಷ್ಟೆ ಅಪಾಯಕಾರಿ ಆಟ. ಆದ್ದರಿಂದ ಈ ಆಟವನ್ನು ನಾನು ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಯ(ಟೈಮಿಂಗ್) ಬಹಳ ಮುಖ್ಯ. ನಾನು ಏಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ ಎಂದರೆ, ಅದು ದೇವರ ಇಚ್ಛೆ’ಎಂದು 2018ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.

  ಡಿಸೆಂಬರ್ ಮಹತ್ವ?: 2017ರಲ್ಲಿ ಅಭಿಮಾನಿಗಳ ಸಭೆ ನಡೆಸಿದ್ದ ರಜನಿ, ತಾವು ರಾಜಕಾರಣ ಪ್ರವೇಶಿಸುವುದಾಗಿ ಡಿ.31ರಂದೇ ಘೋಷಣೆ ಮಾಡಿದ್ದರು. ಇದೀಗ ಹೊಸ ಪಕ್ಷವನ್ನೂ 2020ರ ಡಿ.31ರಂದು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

  ಬಿಜೆಪಿ ಕಡೆಗೆ ಒಲವು?

  ನ.29ರಂದು ತಮಿಳುನಾಡಿಗೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಷಾ ಅವರನ್ನು ರಜನಿ ಭೇಟಿ ಆಗಿ ನಾಲ್ಕು ತಾಸು ಸಭೆ ನಡೆಸಿದ್ದರು. ರಜನಿ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗಳ ನಡುವೆಯೇ ಪ್ರತ್ಯೇಕ ಪಕ್ಷ ಘೋಷಿಸಿದ್ದಾರೆ. ‘ಪ್ರತಿ ದೇವಸ್ಥಾನಕ್ಕೂ ತಲತಲಾಂತರದಿಂದಲೂ ಅದರದ್ದೇ ಪದ್ಧತಿಗಳಿರುತ್ತವೆ. ಅದರಲ್ಲಿ ಮಧ್ಯಪ್ರವೇಶಿಸಬಾರದು’ ಎಂದು ಈ ಹಿಂದೆ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ರಜನಿ ಹೇಳಿದ್ದರು. ‘ಜಲ್ಲಿಕಟ್ಟು ತಮಿಳುನಾಡಿನ ಸಂಸ್ಕೃತಿಯಾಗಿದ್ದು, ಅದನ್ನು ನಾವು ಎತ್ತಿಹಿಡಿಯಬೇಕು. ಆಟದಲ್ಲಿ ಆಗುವ ಗಾಯವನ್ನು ತಡೆಯಲು ಕಾನೂನು ರೂಪಿಸಬಹುದು‘ ಎಂದು ಜಲ್ಲಿಕಟ್ಟು ಕುರಿತು ಹೇಳಿದ್ದರು. ಇದೀಗ ಅಧ್ಯಾತ್ಮ ರಾಜಕಾರಣದ ಬಗ್ಗೆ ಮಾತನಾಡುತ್ತಿರುವ ರಜನಿ, ಬಿಜೆಪಿಗೆ ಬೆಂಬಲವಾಗುವಂತೆ ಡಿಎಂಕೆ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

  ರಜನಿ ರಾಜಕೀಯ ದೃಷ್ಟಿ

  ರಜನಿಕಾಂತ್ ಇದುವರೆಗೆ ಸಕ್ರಿಯ ರಾಜಕಾರಣ ಮಾಡಿಲ್ಲವಾದರೂ, ಈ ಕುರಿತು ಅವರ ದೃಷ್ಟಿ ಈ ಹಿಂದಿನ ನಡೆಗಳ ಮೂಲಕ ಅಂದಾಜಿಸಬಹುದು.
  • 1996ರಲ್ಲಿ ‘ಜಯಲಲಿತಾ ಮತ್ತೆ ಅಧಿಕಾರಕ್ಕೇರಿದರೆ, ದೇವರೂ ತಮಿಳುನಾಡನ್ನು ಕಾಪಾಡಲು ಸಾಧ್ಯವಿಲ್ಲ’ ಎಂಬ ಹೇಳಿಕೆ ಮೂಲಕ ರಾಜಕೀಯದ ಕುರಿತು ಆಸಕ್ತಿ ತೋರಿದ್ದರು ರಜನಿ. ಆ ಚುನಾವಣೆಯಲ್ಲಿ ಈ ಹೇಳಿಕೆ ಸಾಕಷ್ಟು ಪ್ರಭಾವ ಬೀರಿತ್ತು. ಆಗ ಜಯಲಲಿತಾ ಸೋತಿದ್ದರು.
  • 2002ರಲ್ಲಿ ಕಾವೇರಿ ವಿಚಾರದಲ್ಲಿ ಮಾತನಾಡಿದ್ದ ರಜನಿ, ಸಮಸ್ಯೆಯನ್ನು ಬಗೆಹರಿಸಲು ಆಂದೋಲನ ಆರಂಭಿಸುವ ಯೋಜನೆಯನ್ನು ಹರಿಬಿಟ್ಟಿದ್ದರು. ನದಿ ಜೋಡಣೆ ಯೋಜನೆಯನ್ನು ಬೆಂಬಲಿಸಿದ್ದರು.
  • 2004ರಲ್ಲಿ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ರಜನಿ ಬೆಂಬಲಿಸಿದ್ದರು. ಜಯಲಲಿತಾ ಕುರಿತ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಇಲ್ಲವಾದರೂ, ನದಿಗಳನ್ನು ಜೋಡಿಸುವ ಮೂಲಕ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಬಿಜೆಪಿ ಭರವಸೆ ನೀಡಿದ್ದಕ್ಕೆ ಬೆಂಬಲ ಎಂದಿದ್ದರು.
  • 2004ರ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರು.
  • 2011ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆಗೆ ಬೆಂಬಲ ವ್ಯಕ್ತಪಡಿಸಿದ್ದರು.
  • 2014ರಲ್ಲಿ ನರೇಂದ್ರ ಮೋದಿ ಕುರಿತು ಮಾತನಾಡಿದ್ದ ರಜನಿ, ತಾವು ಮೋದಿಯವರ ಹಿತೈಷಿ ಎಂದಿದ್ದರು.
  • 2017ರಲ್ಲಿ ಅಭಿಮಾನಿಗಳೊಂದಿಗೆ ಆರು ದಿನ ಸಮಾವೇಶ ನಡೆಸಿದ್ದ ರಜನಿ, ತಾವು ರಾಜಕಾರಣ ಪ್ರವೇಶಿಸುವುದು ನಿಶ್ಚಿತ ಎಂದು ಘೋಷಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts