Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಗಣತಂತ್ರದ ಗಾಂಭೀರ್ಯ, ಪವಿತ್ರತೆಯ ವ್ಯಾಖ್ಯಾನ

Tuesday, 20.02.2018, 3:03 AM       No Comments

| ಡಾ. ಕೆ. ಎಸ್​. ನಾರಾಯಣಚಾರ್ಯ

ಕೇಂದ್ರವು ಪ್ರಬಲವೂ, ಸರ್ವಾಧಿಕಾರಶಕ್ತವೂ, ಎಲ್ಲ ಘಟಕಗಳನ್ನೂ ಎಳೆದು ಕೂಡಿಸಿಕೊಂಡು ಹೋಗುವ ಸಾಮರ್ಥ್ಯವುಳ್ಳದ್ದಾಗಿಯೂ ಇರಬೇಕೆಂದು ಅರ್ಥಶಾಸ್ತ್ರ ಹೇಳುತ್ತದೆ. ಹಾಗೆಂದರೆ ದಬ್ಬಾಳಿಕೆಯದು ಎಂದರ್ಥವಲ್ಲ. ಬಹುತ್ವಾಧಾರಿತ, ಬಹುತ್ವ ನಿರ್ಧಾರಿತ, ಏಕಾತ್ಮಕ ಸಾರ್ವಭೌಮ ಸರ್ಕಾರ ಎಂಬುದು ಹಿಂದೂ ಶಾಸ್ತ್ರಗಳೆಲ್ಲದರ ಮೂಲಕಲ್ಪನೆ.

‘ಗಣತಂತ್ರ’ ಶಬ್ದವು ಮಹಾಭಾರತದಲ್ಲೇ ಇದೆ. ‘ಉತ್ಥಾನ, ರಾಷ್ಟ್ರೆೊತ್ಥಾನ’ ಶಬ್ದಗಳು ಸಹ. ‘ಈಗಣ’, ‘ಆಗಣ’ ಅಲ್ಲದೆಯೂ ‘ಯಾವಾಗಣ’ ಕಾಲದ ಸತ್ಯವೂ ಆಗಿ ಅಲ್ಲಿ ನಿರೂಪಿಸಲ್ಪಟ್ಟಿದೆ. ಭೀಷ್ಮನು ಯುಧಿಷ್ಠಿರನಿಗೆ ಉಪದೇಶಿಸುವ ಶಾಂತಿ, ಅನುಶಾಸನ ಪರ್ವಗಳಲ್ಲೇ ಇದು ಬರುತ್ತದೆ. ರಾಜಸೂಯ, ಅಶ್ವಮೇಧ ಯಾಗಗಳನ್ನು ಸಾಂಕೇತಿಕವಾಗಿ ಆಚರಿಸಿ, ಒಂದು ರಾಷ್ಟ್ರದ ಕಲ್ಪನೆಯ ಸಾಂಸ್ಕೃತಿಕ ಬಿಗಿಭದ್ರತೆಯ ಪರಿಧಿಯಲ್ಲೇ ಭಿನ್ನತೆಗೆ, ಅನಪಾಯಕರ ವೈವಿಧ್ಯಕ್ಕೆ, ಪೋಷಕ ನಾನಾತ್ವಕ್ಕೆ ಇಂಬು ಎರೆಯುವ ಕಲ್ಪನೆ, ರಾಜಕೀಯ ಪರಿಕಲ್ಪನೆ ಋಗ್ವೇದ, ಐತರೇಯ ಬ್ರಾಹ್ಮಣಗಳಷ್ಟು ಹಳೆಯದು. Republicanism’ ಎಂಬ ಈಚಿನ ಐರೋಪ್ಯ ಕಲ್ಪನೆಯಲ್ಲ ಇದು. ಈ ವಿಕೃತಿಗಳು ನಮಗೆ ಅವಶ್ಯಕವೂ ಅಲ್ಲ.

ಈ ಮಾತಿಗೆ ಉದಾಹರಣೆ ತೋರಿಸುತ್ತೇನೆ. ನಮ್ಮ ಶರೀರ ರಚನೆಯನ್ನೇ ನೋಡಿ. ಎಷ್ಟು ಘಟಕಗಳು ಅಡಕ? ಉಸಿರಾಟದ ವ್ಯವಸ್ಥೆ, ಜೀರ್ಣಕ್ರಿಯೆಯ ವ್ಯವಸ್ಥೆ, ರಕ್ತಸಂಚಾಲನೆಯ ವ್ಯವಸ್ಥೆ, ಹಾಗೇ ಪಿತ್ತಕೋಶ ಕ್ರಿಯೆ, ಮೂತ್ರಾಶಯದ ಶುದ್ಧೀಕರಣ ಘಟಕ, ಮಿದುಳಿನ ಎಡ-ಬಲ ಭಾಗಗಳ ಪರಸ್ಪರ ಕಾರ್ಯ ಅತಿಕ್ರಮಣವಲ್ಲದ ಸಹಕಾರಾತ್ಮಕ ಕ್ರಿಯೆ, ನರಮಂಡಲ ವ್ಯವಸ್ಥೆ, ಅಲ್ಲದೆ ಪಂಚ ಕಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು, ತಾಕಲಾಟವಿಲ್ಲದ ಒಂದೊಂದೂ ಒಂದು ಒಂದೇ ಕೆಲಸಕ್ಕೆ ಮೀಸಲಾದ ಕರಣ ಘಟಕಗಳು, units of streamlined, specific activity ಹೀಗೆ ಇಲ್ಲೆಲ್ಲಾ ಇರುವುದೇ ‘ಗಣ’ವ್ಯವಸ್ಥೆ. ‘ಗಣ= ಘಟಕ, unit’ ಎಂಬುದನ್ನು ರಾಜಕೀಯ ಭೂಪಟಗಳಲ್ಲಿ ರಾಜ್ಯಗಳು, ನಗರಗಳು, ಗ್ರಾಮಗಳು, ಠಾಣೆಗಳು ಹೀಗೆ. ರೆವಿನ್ಯೂ ದೃಷ್ಟಿಯಲ್ಲಿ ನೋಡುವುದಾದಾಗ, ಅರ್ಥ ವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಅಭಿವೃದ್ಧಿ ವ್ಯವಸ್ಥೆ, ಆದಾಯಕರ ಸಂಗ್ರಹ ವ್ಯವಸ್ಥೆ, ವಿದ್ಯಾವ್ಯವಸ್ಥೆ, ಆರೋಗ್ಯವರ್ಧಕ ಸಂಸ್ಥೆ, ಕೃಷಿ, ಪಶು ಸಂಗೋಪನ, ಅರಣ್ಯ ರಕ್ಷಣೆ, ಗಣಿಗಾರಿಕೆ, ಮೀನುಗಾರಿಕೆ- ಈ ಎಲ್ಲಕ್ಕೂ ಒಂದು ಮರ್ಯಾದೆ, ಮಿತಿ, ಸಹಕಾರಾವಶ್ಯಕತೆ, ಇವನ್ನು ಕೌಟಿಲ್ಯನ ಅರ್ಥಶಾಸ್ತ್ರವು ವಿವರಿಸುತ್ತದೆ.

ಕೇಂದ್ರವು ಪ್ರಬಲವೂ, ಸರ್ವಾಧಿಕಾರಶಕ್ತವೂ, ಎಲ್ಲ ಘಟಕಗಳನ್ನೂ ಎಳೆದು ಕೂಡಿಸಿಕೊಂಡು ಹೋಗುವ ಸಾಮರ್ಥ್ಯವುಳ್ಳದ್ದಾಗಿಯೂ ಇರಬೇಕೆಂದು ಅರ್ಥಶಾಸ್ತ್ರ ಹೇಳುತ್ತದೆ. Strong Centre ಎಂದರೆ ದಬ್ಬಾಳಿಕೆಯದಲ್ಲ, ತುರ್ತು ಪರಿಸ್ಥಿತಿಯ ಹುಚ್ಚಲ್ಲ. ಬಹುತ್ವಾಧಾರಿತ, ಬಹುತ್ವ ನಿರ್ಧಾರಿತ, ಏಕಾತ್ಮಕ ಸಾರ್ವಭೌಮ ಸರ್ಕಾರ ಎಂಬುದು ಹಿಂದೂ ಶಾಸ್ತ್ರಗಳೆಲ್ಲದರ ಮೂಲಕಲ್ಪನೆ (ನನ್ನ The Relevance of Kautilya for Today ಎಂಬ ಗ್ರಂಥ ಓದಿನೋಡಿ).

ಇಲ್ಲೊಬ್ಬರು ಕೇಂದ್ರಕ್ಕೆ ಸೆಡ್ಡು ಹೊಡೆಯುತ್ತಾರೆ- ‘ನಿಮ್ಮ ಅನುದಾನ ಎಂಬುದು ಭಿಕ್ಷೆಯಲ್ಲ, ನಮ್ಮದೇ ಹಣ. ನಾವು ಕೇಳಿದಷ್ಟೂ ಕೊಡದ ಜಿಪುಣತನದ ಪರಮಾವಧಿ, ಇಲ್ಲಿ ನಿಮ್ಮ ಔದಾರ್ಯವಿಲ್ಲ’ ಎಂದು ಬಾಯಿಬಡಿದುಕೊಳ್ಳುತ್ತಿರುವಾಗ ಈ ಮೂಲಗಳನ್ನು ತೋರಿಸಿ ವ್ಯಾಖ್ಯಾನ ಮಾಡುವುದು ಅಪೇಕ್ಷಿತವಾಗುತ್ತದೆ. ವಿವರಿಸೋಣ- ಶರೀರದ ರಕ್ತ ಉತ್ಪತ್ತಿ, ಹಂಚಿಕೆಯ ದೈವಕೃತ ವ್ಯವಸ್ಥೆಯನ್ನು ನೋಡಿ. ಆಹಾರವು ಏನೇ ಬಣ್ಣ ಇರಲಿ- ಅಕ್ಕಿಯ ಬಿಳುಪು, ಗೋಧಿಯ ಹಳದಿ, ಸೊಪ್ಪಿನ ಹಸಿರು, ಮೆಣಸಿನಕಾಯಿಯ ಕೆಂಪು, ಹಾಲಿನ ಬಿಳುಪು. ಟೊಮ್ಯಾಟೊ ಕೆಂಪು, ಕರಿಮೆಣಸಿನ ಕಪು್ಪ- ಎಲ್ಲವೂ ಒಗ್ಗೂಡಿ, ಅವಿಭಾಜ್ಯ ಸಾವಯವ ಸಂಬಂಧದಲ್ಲಿ ಕೆಂಪುರಕ್ತ ಆಗುವುದು ಕರುಳಿನ ಒಂದು ಸಣ್ಣ ಪ್ಯಾಂಕ್ರಿಯಾಸ್ (‘ಸವೋತ್ಪತ್ತಿ ಘಟಕ’) ಎಂಬುದರಲ್ಲಿ. ಒಂದು ಅಂಗುಲದಷ್ಟು ಸಣ್ಣಭಾಗ. ಅದು ‘ತಾನು ಉತ್ಪಾದಿಸಿದ ರಕ್ತವೆಲ್ಲ ತನ್ನದೇ’ ಎನ್ನುವುದಿಲ್ಲ. ಅಯ್ಯನವರೇ? ಎಲ್ಲಿದ್ದೀರಿ? ಏನು ತಿಳಿದಿದ್ದೀರಿ? ಯಾರ ದುಬೋಧನೆಯಯ್ಯ? ಆ ರಕ್ತ, ಹೃದಯಕ್ಕೆ-ಕೇಂದ್ರಕ್ಕೆ ರವಾನಿಸಲ್ಪಟ್ಟು, ಪಂಚಪ್ರಾಣಗಳ ವ್ಯಾಪಾರದ ದೆಸೆಯಿಂದ ಹಂಚಲ್ಪಡುತ್ತದೆ- ಮಿದುಳಿಗೆ ಇಷ್ಟು, ಕೈಕಾಲುಗಳಿಗೆ ಇಷ್ಟು, ಸೂಕ್ಷಾ್ಮತಿಸೂಕ್ಷ್ಮ ರಕ್ತನಾಳ- Capillary – ಇರುವ ಕಣ್ಣು, ಹಲ್ಲುಬುಡ, ಉಗುರು, ತಲೆಗೂದಲು, ಚರ್ಮದ ಕಣಕಣಗಳು- cells, ಬಾಯಿ, ನಾಲಿಗೆ, ಗುದಸ್ಥಾನ, ಜಠರ ಎಲ್ಲಕ್ಕೂ ಇಂತಿಷ್ಟು ಎಂದು ಸ್ವಯಂಪ್ರೇರಿತವಾಗಿ. ಅಲ್ಲಿ ಚಳವಳಿ ಇರುವುದಿಲ್ಲ. ಬೇಕಾಬಿಟ್ಟಿ ಆಕ್ಷೇಪ ಇರುವುದಿಲ್ಲ, ಬೊಗಳಾಟ, ಬೊಬ್ಬಾಟ, ಬೈಗುಳ, ಆರೋಪ, ಅಸೂಯೆ ಇರುವುದಿಲ್ಲ. ಏಕೆ? ಅವು ಅವುಗಳ ಸ್ಥಾನ ಅಲ್ಲೇ ಅವಕ್ಕೆ ಇರುತ್ತವೆ. ಶರೀರದ ಅಂಗಾಂಗಗಳಲ್ಲಿ ಚುನಾವಣೆ ಇರುವುದಿಲ್ಲ. ತತ್ರತ್ ಕ್ಷೇತ್ರ ಉಚಿತ ಚಲಾವಣೆ ಇರುತ್ತದೆ. ಅಯ್ಯನವರೇ, ತಿಳಿಯುತ್ತಿದೆಯೇ? ಮತ್ತೆ ಹೇಳಲೇ? ಬೇಡ ಬಿಡಿ! ಕರ್ನಾಟಕ, ತಮಿಳುನಾಡು, ಕೇರಳ, ತ್ರಿಪುರಾ, ಕಾಶ್ಮೀರ (ಜುಜುಬಿ ಮೊತ್ತ) ಡೆಲ್ಲಿ, ಯಾವುದೇ ಪ್ರಾಂತ್ಯಗಳ ಕೇಂದ್ರೀಯ ಬಾಬ್ತು ತೆರಿಗೆ ಏನು ಬರುತ್ತದೋ, ಅದನ್ನು ಅಲ್ಲಲ್ಲೇ ಪೂರ್ತಾ ವಿತರಿಸಿಬಿಟ್ಟರೆ, ಸೇನೆಗೆ ಖರ್ಚು ಎಲ್ಲಿಂದ ತರುತ್ತೀರಿ? ಕೇಂದ್ರೀಯ ಯೋಜನೆಗಳೂ ಇರುತ್ತವಲ್ಲ? ರೈಲ್ವೆ, ರಸ್ತೆ- ರಾಷ್ಟ್ರೀಯ ಹೆದ್ದಾರಿ- ಆಪತ್ಕಾಲ ನಿರ್ವಹಣೆ, ತುರ್ತು ಖರ್ಚುಗಳು, ಕೇಂದ್ರ ಆಹಾರ ಶೇಖರಣೆ, ಕೇಂದ್ರ ಕೋರ್ಟು ಕಚೇರಿ, ನ್ಯಾಯಾಲಯಗಳು, ಯುಜಿಸಿಯಂಥ ಸಂಸ್ಥೆಗಳು- ಇವಕ್ಕೆ ಎಲ್ಲಿ ಕನ್ನಹಾಕಿ ತರುತ್ತೀರಿ? ಉಗುರಿಗೆ ಬೇಕಾದ ರಕ್ತವೆಷ್ಟು? ತಲೆಗೆ- Overhead tank- ಎಂಬ ಭಾಗಕ್ಕೆ ಹೆಚ್ಚು ರಕ್ತ ಬೇಡವೇ? ತಲೆಗೂದಲಿಗೆ ಎಷ್ಟು? ಜಠರಕ್ಕೆ ಎಷ್ಟು? ಹೃದಯಕ್ಕೆ ಎಷ್ಟು?- ಇದು ‘ಕಸಬರಿಗೆ ಪಕ್ಷಕ್ಕೆ’ ತಿಳಿಯದಂತೆ, ಕರ್ನಾಟಕದ ಬೃಹಸ್ಪತಿಗಳಿಗೂ ತಿಳಿಯದೇಕೆ? ಕೊಟ್ಟದ್ದನ್ನೇ ಉಪಯೋಗಿಸದಾಗ, ಹೆಚ್ಚು ಕೊಟ್ಟರೆ ತಿಂದದ್ದು ಜೀರ್ಣವಾಗದ ಹೊಟ್ಟೆಗೆ ಹೆಚ್ಚು ಹಾಕಿ, ಅಜೀರ್ಣ ಮಾಡಿಸಿ, ನಾನಾ ಅಪವ್ಯಯಕಾರಕ ‘ಭಾಗ್ಯ’ಗಳಲ್ಲಿ ಬೊಕ್ಕಸ ಶೋಷಣೆಯಾಗುತ್ತದೆ. ತಮ್ಮಂದಿರು ಗೆದ್ದು ತಂದ ಹಣ, ಬೊಕ್ಕಸ, ರಾಜ್ಯಗಳನ್ನೆಲ್ಲ ಶಕುನಿ ಒಂದೇ ದಾಳ ಎಸೆತದಲ್ಲಿ ಹಾಳುಗೆಡಹಿದನಲ್ಲ? ಶಕುನಿ, ಪಾಂಡವರಿಗೆ ‘ಇದು ನಿಮ್ಮ ಭಿಕ್ಷೆಯಲ್ಲ, ಜೂಜಾಟ ನನ್ನ ಹಕ್ಕು, ಇಲ್ಲಿ ಸಂಪಾದಿತವೆಲ್ಲ ಕೌರವನದು. ಅದು ಉತ್ಪಾದಿತವೋ, ಅನುತ್ಪಾದಕವೋ ಏನಾದರಾಗಲಿ, ಅದೆಲ್ಲ ನಮ್ಮದೇ’ ಎಂದನಲ್ಲ? ಹಾಗಲ್ಲವೇ ನಿಮ್ಮ ನ್ಯಾಯ? ಇದಕ್ಕೆ ಪರಿಹಾರ, ಅಂದು ಕುರುಕ್ಷೇತ್ರ ಯುದ್ಧ. ಇಂದು ಮಹಾಚುನಾವಣೆ. ಅಂದು ವೈಶಂಪಾಯನ ಕೊಳ, ಇಂದು ವರುಣಾ ಕೆರೆ! ನಿಮ್ಮ ಅರ್ಥಶಾಸ್ತ್ರ ಬೋಧಕರಾರು? ಅಂದು ಶಕುನಿ, ಇಂದು ಕಪಿಲ್ ಸಿಬಲ್ ಇಂಥವರು.

‘ಗಣತಂತ್ರ’ದಲ್ಲಿ ಜವಾಬುದಾರಿ ಇರುತ್ತದೆ. ಅಸ್ವತಂತ್ರಸ್ಥಿತಿ ಇರುವುದು ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ- ನೀವು ಬರೆದುಕೊಟ್ಟ ಸುಳ್ಳನ್ನು ಅವರ ಓದಬೇಕಾದ ದುಃಸ್ಥಿತಿ, ಗಣತಂತ್ರಕ್ಕೆ ಭೂಷಣವಲ್ಲ! ಟಿಪು್ಪ ಹೊಗಳಾಟ, ಕಾನೂನು ಕುಸಿತದಲ್ಲಿ ಸುವ್ಯವಸ್ಥೆಯ ಕಾಣ್ಕೆ- ಇವು ಧೃತರಾಷ್ಟ್ರನ ದರ್ಬಾರಿನ ಕಾಲದ ಕೌರವ ಗಣತಂತ್ರ! ಸಂಜಯ, ವಿದುರ, ಶ್ರೀಕೃಷ್ಣರದಲ್ಲ!

ಇದಕ್ಕೆ ಮೇಲೆ ಗಣತಂತ್ರದ ಮಸಿಬಳಿದಾಟದಂತೆ ಮಾತು! ಬಾಯಿಚಪಲ! ‘ಮೋದಿ ಪ್ರಧಾನಿಯಾಗಲು ಅನರ್ಹರು, ನಾಲಾಯಕ್’ ಅಂತ ಹೇಳಿಕೆ. ಏಕೆ? ಆ ಸ್ಥಾನದಲ್ಲಿ ಸೋನಿಯಾ ಬರಲಿಲ್ಲ, ಬರುವಂತಿಲ್ಲ, ರಾಹುಲ್​ಗೆ

ಅವಕಾಶವಿಲ್ಲ ಎಂಬ ತಿಳಿವಳಿಕೆ! ಹೋಗಲಿ, ಬಾಯಿಚಪಲದವರಿಗೆ ಯೋಗ್ಯತೆ? ಕರ್ನಾಟಕದ ಕಂಠೀರವರೇ, ಆ ಸ್ಥಾನದಲ್ಲಿ ಇದ್ದರಲ್ಲ? ಎಷ್ಟು ಸಮಸ್ಯೆ ಪರಿಹರಿಸಿದರು? ಕಾವೇರಿ? ಕೃಷ್ಣಾ? ಗಡಿತಂಟೆ? ಕಾಶ್ಮೀರ? ಎಷ್ಟು ದೇಶ-ವಿದೇಶ ಸುತ್ತಿ ರಾಷ್ಟ್ರದ ಘನತೆ ಎಷ್ಟು ಹೆಚ್ಚಿಸಿದರು? ಎಷ್ಟು ಉದ್ದಿಮೆ ತಂದರು? ಚೀನಾ, ಪಾಕ್, ಅರಬ್ಬರನ್ನು ಅಡಗಿಸಿದ್ದೆಷ್ಟು? ಪ್ರಾದೇಶಿಕತೆ ಎಂಬುದು ಪ್ರಕೃತಿನಿರ್ವಿುತ ಮಿತಿ. ಅದು ಬುದ್ಧಿಯ ಸಂಕೋಚಕ್ಕೆ ಪರ್ಯಾಯವಾಗಬಾರದು. ಸೂರ್ಯ ಇದ್ದಲ್ಲೇ ಇದ್ದೂ, ಕಿರಣವನ್ನು ಎಲ್ಲೆಡೆ ಹಂಚುತ್ತಾನೆ. ಅಗ್ನಿಯೂ ಅಷ್ಟೆ.

ಏಕದೇಶಸ್ಥಿತಸ್ಯಾಗ್ನೇಃ ಜ್ಯೋತ್ಸಾ್ನ ವಿಸ್ತಾರಿಣೀ ಯಥಾ (ವಿ.ಪುರಾಣ) ಎಂಬಂತೆ, ಹೃದಯ ಒಂದೇ ಕಡೆ ಇದ್ದರೂ, ಅಲ್ಲವನ್ನೂ ನಿಯಂತ್ರಿಸುತ್ತದೆ. ಅದು ಗಣರಾಜ್ಯದ ಘನತೆ. ಸಿಕ್ಕದ್ದಕ್ಕೆಲ್ಲಾ ‘ಮೋದಿ’ ತಲೆಹಾಕಲಿ ಎಂಬ ಭಾವನೆ ತಲೆತಿರುಕತನದ್ದು. ‘ಮಹದಾಯಿ’ ಪರಿಹಾರವಾಗದಿದ್ದುದಕ್ಕೆ ಅಡ್ಡಹಾಕಿದವರಾರು? ‘ನಾನಿರುವುದೇ ಸಮಸ್ಯೆ ಸೃಷ್ಟಿಸಲು, ನೀವಿರುವುದೇ ಪರಿಹರಿಸಲು’ ಎಂಬುದು ಜಿನ್ನಾ ರೀತಿ. ‘He had a problem for every solution’ ಎಂದು ರಾಜಾಜಿ ಬರೆದಿದ್ದಾರೆ.

ಕರ್ನಾಟಕ, ಪಾಕಿಸ್ತಾನ ಆಗಬಾರದು. ಕಾಶ್ಮೀರದ ಕುತಂತ್ರಿಗಳ ದಾರಿ ಹಿಡಿಯಬಾರದು. ಅಲ್ಲಿ ಹುರಿಯತ್ ಎಂಬ ವಿದ್ರೋಹಿಗಳ ಘೋಷಣೆಗೆ ಯುಪಿಎ ಖರ್ಚುಮಾಡಿದ ಹಣದ ಲೆಕ್ಕ ಈಗ ಬಹಿರಂಗವಾಗಿದೆ. ಹೇಳಿಬಿಡಿ, ಇಲ್ಲಿ ಪುಂಡಸೇನೆಗಳ ಪೋಷಣೆಗೆ ಎಷ್ಟು ಖರ್ಚು ಮಾಡಿದ್ದೀರಿ? ಎಲ್ಲ ವಾಟ್ಸ್ ಆಪ್​ನಲ್ಲಿ ಬರುತ್ತಿದೆ. ಕೋರ್ಟು, ‘ಬಂದ್’ಕಾರರಿಗೆ ಛೀಮಾರಿ ಹಾಕಿದೆ. ಅದು ಅವರ ಪೋಷಕರಿಗೂ ಅನ್ವಯವಲ್ಲವೇ? ಕಾನೂನು ರಕ್ಷಣೆ ಎಂದರೆ ಇದೇನೇ? ಎಷ್ಟು ‘ಪರ್ಸೆಂಟು’ ಎಲ್ಲ ಲೆಕ್ಕ, ಕೊಟ್ಟವರಿಗೂ ತೆಗೆದುಕೊಂಡವರಿಗೂ ಗೊತ್ತೇ ಇದೆ. ‘ಲಂಚ ಕೊಡುವುದೂ ಅಪರಾಧ, ತೆಗೆದುಕೊಳ್ಳುವುದೂ ಅಪರಾಧ’ ಎಂಬ ಕಾನೂನಿನಡಿಯಲ್ಲಿ ಯಾರೂ ಬಹಳ ಕಾಲ ಉಳಿಯಲಾರರು. ಯಾವ ಯುದ್ಧ ಬಂಕರ್ ಸಹ ಹಿಟ್ಲರ್​ನನ್ನು, ಸದ್ದಾಂ ಹುಸೇನನನ್ನು, ಕರ್ನಲ್ ಗಡಾಫಿಯನ್ನು, ಒಸಾಮ ಬಿನ್ ಲಾಡೆನ್​ನನ್ನು ಕಾಪಾಡಿ ಬಚ್ಚಿಡಲಿಲ್ಲ! ಈಗ ಮಾಫಿಯಾಗಳೆಲ್ಲ ಬಯಲೇ ಬಯಲು.

‘ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ?’ ಎಂದರಲ್ಲ ಕನಕದಾಸರು? ಕ್ಷಮೆ ಕೇಳಿ ನಿಮಗೇ ಅನ್ವಯಿಸಲೇ?

ಅಯ್ಯಾ! ಬಾಯಿ ತೊಳೆದು, ಮುಚ್ಚಿ, ಗೌರವವಾಗಿ ಧರ್ಮ ಹಿಡಿದು ಪಾಲಿಸಿದರೆ ಜನ ಮೆಚ್ಚುತ್ತಾರೆ. ಜಗದೀಶ ಕೂಡ. ಆಗ ಮೋದಿ ಮೆಚ್ಚುಗೆಯೂ ಲಭ್ಯ. ಸೋನಿಯಾ, ರಾಹುಲರು ಮೆಚ್ಚಿದರೆ ಅಪಾಯ ಇದೆ ಎಂದು ಅರ್ಥ. ಬರಲೇ? ಒಳಿತಾಗಲಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top