Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಉಗ್ರ ದಮನದ ದಿಟ್ಟ ಹೆಜ್ಜೆಗೆ ಶಹಬ್ಬಾಸ್!

Tuesday, 17.07.2018, 3:03 AM       No Comments

| ಡಾ. ಕೆ.ಎಸ್​. ನಾರಾಯಣಾಚಾರ್ಯ

‘ರಾಷ್ಟ್ರೀಯ’ ಎಂಬ ಸುಳ್ಳು ಹಣೆಪಟ್ಟಿ ಹಚ್ಚಿಕೊಂಡಿರುವ ಒಂದು ಪಕ್ಷದ ಅಧಿನಾಯಕರಲ್ಲೊಬ್ಬರು ಇತ್ತೀಚೆಗೆ ಹೇಳಿದ್ದು-‘ಉಗ್ರರು ಹತ್ಯೆಗೈದ ನಾಗರಿಕರಿಗಿಂತ, ಭಾರತೀಯ ಸೇನೆ ಹತ್ಯೆಗೈದ ನಾಗರಿಕರ ಸಂಖ್ಯೆಯೇ ಹೆಚ್ಚು’! ಈ ನಾಯಕ ಇಸ್ಲಾಮಿ ಅನುಯಾಯಿ; ಹಿಂದಣ ಕಾಶ್ಮೀರ ಸರ್ಕಾರದ ಮುಖ್ಯಮಂತ್ರಿಯೂ ಆಗಿದ್ದರು; ಎಂದಿಗೂ ಪಾಕಿಸ್ತಾನ ಪರರಾದ ಮಣಿಶಂಕರ ಅಯ್ಯರ್, ಸಲ್ಮಾನ್ ಖುರ್ಷಿದ್, ಆನಂದ ಶರ್ವ, ಸಿಂಘ್ವಿ, ತಿವಾರಿ ಮುಂತಾದವರ ಗುಂಪಿನಲ್ಲಿ ಎದ್ದುಕಾಣುವ ಒಬ್ಬ ನಾಯಕ. ಕಾಶ್ಮೀರದ ಪ್ರತ್ಯೇಕತಾವಾದಿಗಳ ಪರ ಎಂದರೂ ಒಂದೇ, ಪಾಕ್ ಪರ ಎಂದರೂ ಒಂದೇ. ಎಪ್ಪತ್ತು ವರ್ಷಗಳಿಂದ ‘ಪರಸ್ಪರ ಮಾತಾಡುವುದು’ ಎಂಬ ನಾಟಕ ನಡೆದೇ ಇದೆ. ನಡೆಯದ ನಾಟಕಕ್ಕೆ ಪೂರ್ವಭಾವಿ ತಾಲಿಮು- Banen rehearsal-ಎಂಬ ಗಾದೆಯೇ ಇದೆ, ಆಂಗ್ಲದಲ್ಲಿ. ಕಾಶ್ಮೀರದಲ್ಲಿ ಸಾಯುತ್ತಿರುವವರು ಯಾರು? ಸಾಯಿಸುತ್ತಿರುವವರು ಯಾರು? ಆ ಮೂಲ ಎಲ್ಲಿದೆ? ಸಾಹೆಬ್ರೇ, ನಿಮಗೂ ಗೊತ್ತಿದೆ, ನನಗೂ, ಎಲ್ಲರಿಗೂ ಸಹ. ಪಾಕ್ ಇದೆ. ಅದರ ಸಿದ್ಧಾಂತದ ಮೂಲ ‘ಜಿಹಾದ್’. ಬರೀ ಕಾಶ್ಮೀರದ ಸ್ವಾತಂತ್ರ್ಯ-ಆಝಾದಿ ಅದರ ಅಜೆಂಡಾ ಅಲ್ಲ. ಸಮಗ್ರ ಭಾರತದ ಇಸ್ಲಾಮಿಕರಣ, ಹಿಂದೂನಾಶ, ಎಲ್ಲ ‘ವಿರೋಧಿ’ಗಳ ದಮನ. ಹಿಂದೆ ಸದರ್-ಇ-ರಿಯಾಸತ್ ಪದವಿಯ ಕರಣ್ ಸಿಂಗರು, ‘ಕಾಶ್ಮೀರವನ್ನು ಬೆಳ್ಳಿಯ ತಟ್ಟೆಯ ಮೇಲಿಟ್ಟು ಪಾಕ್​ಗೆ ಕೊಟ್ಟುಬಿಡಿ’ ಎಂದು ಸಲಹೆ ಮಾಡಿದರು. ಅವರು ರಾಜಾ ಹರಿಸಿಂಗರ ಸಾಕುಪುತ್ರ ಎನ್ನುತ್ತಾರೆ. ಈ ಸಾಹೇಬರದ್ದೂ ಕಾಂಗ್ರೆಸ್ ಬುದ್ಧಿಯೇ! ಕಾಶ್ಮೀರ ಸಮಸ್ಯೆಯನ್ನು ಹುಟ್ಟುಹಾಕಿದ್ದೂ, ಬೆಳೆಸಿದ್ದೂ, ಇನ್ನೂವರೆಗೆ ಪೋಷಿಸುತ್ತಿರುವುದು ಕಾಂಗ್ರೆಸ್ಸೇ! ಬಹಳರಿಗೆ ತಿಳಿಯುವುದಿಲ್ಲ. ಬರೆದರೆ ಕೋಪವೂ ಬರುತ್ತದೆ.

ಸ್ವದೇಶೀ ದ್ರೋಹ, ವಿದೇಶಿ ಮೋಹ-ಈ ಎರಡೂ ಭಾರತಕ್ಕೆ ಹಿಡಿದ ಸೂರ್ಯ-ಚಂದ್ರ ಗ್ರಹಣಗಳು. ಆಕಾಶದಲ್ಲಿ ಈ ಎರಡೂ ಸಂಭವಗಳು ಒಟ್ಟಿಗೆ ಆಗುವುದಿಲ್ಲ. ಭಾರತದಲ್ಲಿ ಆಗುತ್ತವೆ. ಕಮ್ಯುನಿಷ್ಠರೂ, ಎಲ್ಲ ಬಗೆಯ ಎಡಪಂಥಿಯರೂ, ಸೆಕ್ಯುಲರ್ ಮಾರೀಚ ಮುಸುಕಿನ ರಾಜಕೀಯ ಪಕ್ಷಗಳೂ, ಈ ಗ್ರಹಣಗಳಲ್ಲಿ ಸಿಲುಕಿವೆ, ಒಗ್ಗಿಕೊಂಡಿವೆ. ಈಗ ಬೆಳಕನ್ನೇ ದ್ವೇಷಿಸುತ್ತಿವೆ.

ಮಿಲ್ಟನ್ನನ- ‘Paradise Lost’ ಮಹಾಕಾವ್ಯದಲ್ಲಿ, ನರಕಕ್ಕೆ ತಳ್ಳಲ್ಪಟ್ಟ ಸೈತಾನನು ದೇವರ ಮೇಲೆ ಸೇಡು ತೀರಿಸಿಕೊಳ್ಳಲು, ಆಗಿನ್ನೂ ‘ಸ್ವರ್ಗ’ವಾಗಿದ್ದ ಭೂಮಿಯ ಬಳಿಗೆ, ಕಷ್ಟಪಟ್ಟು ಹಾರಿಕೊಂಡು ಬಂದು, ಗಂಭೀರ ಚೆಲುವಿನ ಸೂರ್ಯೋದಯವನ್ನು ನೋಡಿ, ಅಸೂಯೆಪಟ್ಟು ಕ್ರಮೇಣ ದ್ವೇಷಿಸುವ ಒಂದು ಅದ್ಭುತ ಭಾವಾಭಿವ್ಯಕ್ತಿಯ ಸುಂದರ ಸಾಲುಗಳು ಈ ಕಾವ್ಯರತ್ನದಲ್ಲಿವೆ. ಅಲ್ಲಿ, ‘ನಾನೇ ನರಕ! ನಾನು ಎಲ್ಲಿದ್ದರೂ ಅದೇ ನನಗೆ ನರಕ!’ ಎಂದು ಸೈತಾನನ ಮಾತುಗಳಲ್ಲಿ ಬರುವುದು, ನಿತ್ಯಸಾಂಕೇತಿಕ ಎಂದು ನಾನು ತಿಳಿಯುತ್ತೇನೆ. ಕತ್ತಲೆಗೇ ಒಗ್ಗಿಕೊಂಡ ಸಿದ್ಧಾಂತಗಳಿಗೆ, ಈ ಅನುಯಾಯಿಗಳಿಗೆ ಬೆಳಕು ಬೇಡ, ಸ್ವಾತಂತ್ರ್ಯ ಬೇಡ, ಸಹನೆ ಬೇಡ, ಸಹಕಾರ ಜೀವನ, ಸಮರಸ ಬೇಡ, ಶಾಂತಿ ಬೇಡವೇ ಬೇಡ. ನಿತ್ಯಯುದ್ಧ ಬೇಕು. ‘ಶತ್ರುಗಳು ಸಿಗದಾಗ, ತಮ್ಮ ತಮ್ಮಲ್ಲೇ ಶತ್ರುಗಳನ್ನು ಸೃಷ್ಟಿಸಿಕೊಂಡು ಹೊಡೆದಾಡಿ ಸಾಯುತ್ತಾರೆ’ ಎಂದೊಬ್ಬ ಜಿಹಾದ್​ನ ವ್ಯಾಖ್ಯಾನಕಾರ ಬರೆಯುತ್ತಾನೆ. ಒಳ್ಳೆಯ ಮಾತುಗಳಲ್ಲೂ ಕ್ಷುಲ್ಲಕ ಕಾರಣಗಳಿಗೆ ಒಳಜಗಳ ತೆಗೆದು ಸಮಗ್ರತೆಯ ಸಮದರ್ಶನವನ್ನು ಹಾಳು ಮಾಡುವವರೆಲ್ಲ ಸೈತಾನನ ಹಿಂಬಾಲಕರೇ!

ಸೊಳ್ಳೆಗಳಿಗೆ ‘ಕಚ್ಚಬೇಡ’ ಎಂದು ಗಾಂಭಿರ್ಯದ ಅಹಿಂಸಾವಾದ ಉಪದೇಶಿಸಿದರೆ ಮೂರ್ಖರಾಗುತ್ತೀರಿ. ತಿಗಣೆ, ಹೇನು, ರಕ್ತಹೀರುವ ಜಂತುಗಳನ್ನು ಹಿಸುಕಿಯೇ ಕೊಲ್ಲಬೇಕು. ಅಲ್ಲಿ ‘ಮಾತಾಡು’ ‘ಸಂಧಾನ ಮಾಡು’ ಎಂಬ ಮಾತುಗಳು ಅನರ್ಥಕ ಮಾತ್ರವಲ್ಲ, ಅಪಾಯಕರ ಕೂಡ. ಇದು ಇನ್ನೂ ಗುಲಾಮಿಬುದ್ಧಿ ಕಳೆಯದ ಅನೇಕ ಭಾರತೀಯರಿಗೆ ತಿಳಿಯುತ್ತಿಲ್ಲ, ಹಿಡಿಸುತ್ತಿಲ್ಲ. ಕಾಲಿದಾಸನ ‘ಕುಮಾರಸಂಭವ’ ಮಹಾಕಾವ್ಯದಲ್ಲಿ, ಪಾರ್ವತಿಯು ಶಿವನನ್ನು ಒಲಿಸಲು ಪಂಚಾಗ್ನಿತಪಸ್ಸು ಮಾಡುತ್ತ, ಒಂಟಿಕಾಲಲ್ಲಿ ಸೂರ್ಯನನ್ನೇ ನೋಡುತ್ತ, ಉದಯಾಸ್ತಮಾನದ ಉದ್ದಕ್ಕೂ ಎವೆಯಿಕ್ಕದೆ, ಶಿವಧ್ಯಾನದಲ್ಲಿರುವಾಗ, ಶಿವನು ಇವಳನ್ನು ಪರೀಕ್ಷಿಸಲು, ವೃದ್ಧತೌಪನನ ವೇಷದಲ್ಲಿ ಇದಿರು ಬಂದು ‘ನೀನು ಕೋಮಲಾಂಗಿ’ ಆ ಸ್ಮಶಾನವಾಸಿ, ಸರ್ಪಭೂಷಣನನ್ನೇಕೆ ಇಷ್ಟಪಡುತ್ತೀಯೇ? ಈ ತಪಸ್ಸು ಬೇಡ’ ಎಂದೆಲ್ಲ ಶಿವನಿಂದೆ ಮಾಡುವ ಪ್ರಸಂಗದಲ್ಲಿ ಪಾರ್ವತಿ-‘ದೊಡ್ಡವರ ಬಗ್ಗೆ ಕೆಟ್ಟಮಾತುಗಳನ್ನಾಡಿದವರಿಗೆ ಮಾತ್ರವಲ್ಲ, ಕೇಳಿದವರಿಗೂ ಅಷ್ಟೇ ಪಾಪ ಬರುತ್ತದೆ, ಹೋಗು, ಹೋಗು’ ಎನ್ನುತ್ತಾಳೆ. ಕೆಟ್ಟವರನ್ನು ಹೊಗಳಿದರೂ ಇದೇ ಪರಿಸ್ಥಿತಿ!

ನ ಕೇವಲಂ ಯೋ ಮಹಂತೋ ಅಪಭಾಷತೇ,

ಶೃಣೋತಿ ಯಶ್ಚಾಪಿ, ಸ ವನ ಪಾಪ ಭಾಕ್||

ಇದರ ಅರ್ಥ, ಅನ್ವಯ ವ್ಯಾಪ್ತಿಯಲ್ಲೇ ಹಿಂದೂ ನಿಂದಕರ, ಹಿಂದೂ ದ್ವೇಷಿಗಳ, ಹಿಂದೂ ನಾಶಕ ಉದ್ದೇಶದ ಸೇನೆಯ, ಉಗ್ರರ ಸಹಾನುಭೂತಿಯ, ಉಗ್ರರ ಸಂಬಂಧಿಕರ ಇಂದಿನ ಸ್ಥಿತಿಯನ್ನು ನೋಡಿಕೊಳ್ಳಿ. ಮಹಾಕವಿಯ ಅರ್ಥ, ಉಪದೇಶದ ಸಾರ್ವಕಾಲಿಕತೆಯನ್ನು ಮನಗಾಣಿಸಲಿ. ತಿಳಿಯಲಿಲ್ಲವೇ? ಬಿಡಿಸಿ ಹೇಳುತ್ತೇನೆ. ಉಗ್ರರ ಆಯುಧಗಳನ್ನು ಮನೆಯಲ್ಲಿಟ್ಟುಕೊಂಡ ಪ್ರಕರಣದಲ್ಲಿ ಒಬ್ಬ ಸಿನಿಮಾ ನಟನಿಗೆ ಏನು ಫಜೀತಿ, ಶಿಕ್ಷೆ, ನರಕಾನುಭವ ಆಗುತ್ತಿದೆ, ಬಲ್ಲಿರಲ್ಲ? ಇದರಂತೆ ಉಗ್ರರನ್ನೂ, ಉಗ್ರವಾದಿಗಳನ್ನೂ, ಜಿಹಾದಿ ನೆಲೆಗಟ್ಟನ್ನೂ ಭಯದಿಂದಲೋ, ವೋಟು ಆಸೆಯ ಭ್ರಮೆಯಿಂದಲೋ ಸಮರ್ಥಿಸುವವರು, ಅಂಥ ರಾಜಕೀಯ ಧುರೀಣರು, ಪಕ್ಷಗಳು, ಪ್ರಣಾಳಿಗಳು ಎಲ್ಲಿ ನಿಲ್ಲುತ್ತವೆ? ಇವರನ್ನು ಶಿಕ್ಷಿಸಬೇಡವೇ? ಅಯ್ಯಯ್ಯಪ್ಪ! ಯುಪಿಎ 1 ಮತ್ತು 2ರಲ್ಲಿ ಇವರೇ ಅಧಿಕಾರ ಹಿಡಿದರು, ಮೆರೆದರು, ದುಷ್ಟರನ್ನು ರಕ್ಷಿಸಿದರು. ಅದು ಈಗ ‘ಕಾಂಗ್ರೆಸ್​ವುುಕ್ತ’ ಆಗಬೇಕಾದ್ದು ಎಂಬ ಮೋದಿಯವರ ಮಾತುಗಳ ಇಂಗಿತ. ಗುಲಾಂನಬಿ ಆಜಾದರು ಈಗ ಪ್ರಕಟವಾಗಿಯೇ ಉಗ್ರ ಸಮರ್ಥಕರಾಗಿರುತ್ತ, ಅವರನ್ನು ಜೀರ್ಣಿಸಿಕೊಳ್ಳಲೂ, ಬಿಡಲೂ ಆಗದ ಫಜೀತಿ ಕಾಂಗ್ರೆಸ್ಸಿಗೆ ಆಗಿದೆ.

ಸ್ವಲ್ಪ ಸಾಹಿತ್ಯದ ಕಡೆಗೆ ನೋಡೋಣ. ಅರಗಿನ ಮನೆಯಲ್ಲಿ ಪಾಂಡವದಹನ ಯತ್ನದ, ಭೀಮನಿಗೆ ವಿಷಪ್ರಾಶನ ಯತ್ನದ, ದ್ರೌಪದಿ ಮಾನಭಂಗ ಯತ್ನದ, ನಿರಂತರ ಪಾಂಡವ, ನಿಷ್ಕಾರಣ ದ್ವೇಷದ ದುರ್ಯೋಧನನನ್ನು ನಮ್ಮ ಒಬ್ಬ ಖ್ಯಾತ ಕವಿ ಕೊಂಡಾಡಿದ-‘ಛಲದೊಳ್ ದುರ್ಯೋಧನಂ’ ಎಂದು! ‘ಛಲ, ಹಠ ಇಟ್ಟರೆ ಹಾಗೆ ಇಡಬೇಕು’ ಎಂಬ ಧ್ಯೇಯವನ್ನು ಮೆಚ್ಚುತ್ತೀರಾ? ಏನಿರಯ್ಯ? ದುರ್ಯೋಧನನನ್ನು ಮೆಚ್ಚುವುದು, ಉಗ್ರವಾದದ ಮೆಚ್ಚುಗೆ ಆಗಲಾರದೇ? ಇವನ ಮಿತ್ರ-ಉಗ್ರರ ಸಮರ್ಥಕ, ಆಶ್ರಿತ, ಕರ್ಣನನ್ನು ‘ನನ್ನಿಯೊಳ ಇನತನಯಾರ’ಎಂದು ಕೊಂಡಾಡಿದ, ಅದೇ ಕವಿರತ್ನ! ‘ನಂಬುಗೆ, ನೆಚ್ಚು ಬಿಡದ ನಂಟು, ನೆಲೆಯಂತಿದ್ದ ಕರ್ಣನನ್ನು ಅವನ ‘ನನ್ನಿಗೆ’ ನಿಷ್ಠೆಗೆ ಕೊಂಡಾಡಿ ಎಂದದ್ದು ಹೇಗಿದೆ?’ ‘ದುಷ್ಟರನ್ನು ಪ್ರೋತ್ಸಾಹಿಸುವವರನ್ನೂ, ಅವರ ನಿಷ್ಠೆಗೆ ಮೆಚ್ಚಬೇಕು’ ಎಂಬುದು ಸಂದೇಶ. ಇಲ್ಲಿ ‘ನಾನು ಹುಟ್ಟಾ ಕಾಂಗ್ರೆಸ್ಸಿಗ, ಸಾಯುವಾಗಲೂ ಕಾಂಗ್ರೆಸ್ಸಿಗ’ ಎಂದು ಹೇಳಿಕೊಂಡೇ ಅಧ್ಯಕ್ಷ ಪದವಿಯಿಂದ ತಳ್ಳಲ್ಪಟ್ಟ ಸೀತಾರಾಂ ಕೇಸರಿಯಂಥವರನ್ನು ಮೆಚ್ಚುತ್ತೀರಾ? ಈ ಮಾತುಗಳನ್ನು ಇನ್ನೂ ಹೇಳುತ್ತಿರುವ ಸಾವಿರಾರು ಕಾಂಗ್ರೆಸ್ಸಿಗರು ದೇಶಾದ್ಯಂತ ಇದ್ದಾರೆ. ಕರ್ನಾಟಕದ ತುಂಬ ಆ ಪಕ್ಷದಲ್ಲಿ ‘ನನ್ನಿ’ಯವರೇ ತುಂಬಿದ್ದಾರೆ. ಇವರನ್ನು ‘ಆಲ್ ಔಟ್’ ಮೋದಿ ಕಾರ್ಯಕ್ರಮದಲ್ಲಿ ಎಲ್ಲಿ ಸೇರಿಸುತ್ತೀರಿ? ಗುಲಾಂ ನಬಿಯವರೇ! ನಿಮ್ಮ ಬುದ್ಧಿ ತೋರಿಸಿಬಿಟ್ಟಿರಲ್ಲಾ?

ಈಗ ಪರಿಹಾರದ ಬಗೆಗೆ, ರಾಷ್ಟ್ರವು ಭೀತಿಮುಕ್ತ ಆಗುವ ಬಗೆಗೆ ಯೋಚಿಸೋಣ. ಮುಂದೆ ಓದಿ. ಜೀರ್ಣಿಸಿಕೊಳ್ಳುವುದು ಕಷ್ಟ. ಸಹನೆ ಇರಲಿ. ಸೀತಾರಾಂ ಗೋಯಲ್​ರ

“voice of india’ ಗ್ರಂಥಗಳನ್ನು ಓದಿ. ಆ ಸಂಸ್ಥೆ ಪ್ರಕಟಿಸಿದ ಅನೇಕ ಗ್ರಂಥಗಳಲ್ಲಿ ‘ಜಿಹಾದ್’ ಕುರಿತ ವಿಸ್ತಾರ ಪುರಾವೆಗಳದ್ದೂ ಒಂದು. ‘ಜಿಹಾದ್ ’ ತತ್ತ್ವ ಇರುವ ತನಕ, ಅದರ ಹೃದಯದ ರಾಜಕೀಯ ಪಕ್ಷ, ಬೇರೆ ಸಂಸ್ಥೆಗಳು, ಶಿಕ್ಷಣ ವರ್ಗಗಳು ನಿಷ್ಪರಿಣಾಮಕಾರಿ ಆಗಬೇಕಾದರೆ, ಇವನ್ನು ಒಪ್ಪುವವರಿಗೆ ವೋಟಿನ ಹಕ್ಕನ್ನು ರದ್ದು ಮಾಡಬೇಕು. Defranchise ಮಾಡಬೇಕು. ಅದು ಕಷ್ಟ. ಪಾರ್ಲಿಮೆಂಟಿನಲ್ಲಿ ಈ ಬಗ್ಗೆ ಚರ್ಚೆಗೂ ಅಡ್ಡಿ ಮಾಡುತ್ತಾರೆ. ‘ಹಿಂದೂ ಟೆರರ್’ ಪಟ್ಟ ಕಟ್ಟುತ್ತಾರೆ. ತಾವೇ ಟೆರರಿಸ್ಟ್ ಆಗಿ ಇತರರಿಗೆ ಈ ಬಣ್ಣ ಬಳಿಯುವುದು ನಿಂತಾಗ ಮಾತ್ರ ನಮ್ಮ ಭಾರತದೇಶದ ಉದ್ಧಾರ ಸಾಧ್ಯ. ಮೋದಿಯವರ ‘ಆಲ್ ಔಟ್’ ಕಾರ್ಯಕ್ರಮ ದೇಶಾದ್ಯಂತ ಆಗಬೇಕು! ಟಿಪು್ಪ ವೈಭವೀಕರಣದ ಧುರೀಣರು ಎಲ್ಲಿ ಸಲ್ಲುತ್ತಾರೆ? ನಿಮ್ಮ ವೋಟಿಗೆ ಬೆಂಕಿ ಬಿತ್ತು! ದೇಶ ಉಳಿಯಬೇಡವೇ? ಉಗ್ರವಾದದ ನೆರಳು, ವ್ಯಾಪ್ತಿ ಬಹಳ ಇದೆ.

ರಾಜಕೀಯ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲದೆ ಪುಕ್ಕರ ಹೃದಯಗಳಲ್ಲಿಯೂ ಉಗ್ರ ಭೀತಿ, ಉಗ್ರ ಸಹಾನುಭೂತಿ ಇದೆ. ಕಾಳಧನಿಕರು ಅಲ್ಲೆಲ್ಲ ದಾವೂದ್ ಇಬ್ರಾಹಿಂನ ಭಕ್ತರು ಇದ್ದಾರೆ. ಅವರು ಇಲ್ಲಿ ರೌಡಿಗಳಾಗುತ್ತಾರೆ, ಲೂಟಿ ಕೋರರಾಗುತ್ತಾರೆ, ಕಾಡು, ನದಿ, ಮರಳು, ಬೆಟ್ಟ, ಮಣ್ಣು ಎಲ್ಲ ಇವರ ದರೋಡೆಯ ಸಾಮಗ್ರಿಗಳಾಗಿ, ಇವರು ರೆಸಾರ್ಟ್​ಗಳನ್ನು ನಡೆಸುತ್ತಾರೆ. ಮಾಲ್​ಗಳನ್ನು ನಡೆಸಿ ‘ಕಮಾಲ್’ ಮಾಡುತ್ತಾರೆ, ಜೂಜಿನ ಅಡ್ಡೆ ನಡೆಸುತ್ತಾರೆ. ಪೊಲೀಸರನ್ನೇ ಕೊಳ್ಳುತ್ತಾರೆ. ಈಗ ಇ.ಡಿ. ತನಿಖೆಗೆ-ಕ್ರಮವಾಗಿ ಜೈಲಿಗೆ ಸೇರುವವರೆಲ್ಲ ಈ ಉಗ್ರ ಸಮರ್ಥಕ ಸೇನೆಯಲ್ಲೇ ಸೇರುತ್ತಾರೆ! ಭಯವಾಗುತ್ತದೆಯೋ? ಜೆಎನ್​ಯುು ಒಂದೇ ಅಲ್ಲ, ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಆಯಕಟ್ಟಿನ ಜಾಗಗಳಲ್ಲಿ ಉಗ್ರರು ನಾನಾ ಫ್ರಂಟ್​ಗಳ ನಂಟಿನಲ್ಲಿ ಅಡಗಿ ನಾನಾ ಮಾರೀಚ ವೇಷಗಳನ್ನು ಹಾಕುತ್ತಾರೆ. ಪತ್ತೆ ಹಚ್ಚಿ, ಜೈಲು ಸೇರಿಸಿ, ಶಿಕ್ಷಿಸದ ಹೊರತು ಉದ್ಧಾರವಿಲ್ಲ.

ಅಂದು ಮಹಾಭಾರತ ಯುದ್ಧದಲ್ಲಿ ಖಳ ಖೂಳರನ್ನೆಲ್ಲ ಸೇರಿಸಿ ಶ್ರೀಕೃಷ್ಣ ಭೂಭಾರ ಹರಣ ಮಾಡಿದ. ಭೀಷ್ಮದ್ರೋಣರು ಉಗ್ರ ಸಮರ್ಥಕರೆಂದರೆ ಅಂದು ಯಾರು ನಂಬುತ್ತಿದ್ದರು? ಇಂದು ಮಠಪತಿಗಳು ಆ ಜಾಗೆಯಲ್ಲಿದ್ದರೆ ಹೇಗೆ ನಂಬುತ್ತೀರಿ? ಕಾವಿ, ಖಾಕಿ, ಕಾಷಾಯ, ಖಾದಿ-ಎಲ್ಲ ಹೊದಿಕೆಗಳಾದರೆ ಬಯಲಾಗಬೇಕು. ಕಾವಿ ಧರಿಸಿಯೂ ರಾವಣ ಬಯಲಾದ. ಖುಷಿಯಾಗ ಹೊರಟು ಮಾರೀಚ ಬಯಲಾದ. ಇಂದು ಹೊಸ ‘ಹಿಂದೂ’ ರೂಪ ಆಕಾರದ ರಾಷ್ಟ್ರ ಉದಯವಾಗಲು ರಾವಣ, ಮಾರೀಚಾದಿಗಳು ಹತರಾಗಬೇಕು, ಅದೇ ಆಲ್ ಔಟ್. ಬರೀ ಸೊಳ್ಳೆ ನಿಯಂತ್ರಣ ಮಾತ್ರವಲ್ಲ. ರಾಜಕೀಯ ಶಸ್ತ್ರ. ಭಯವಾದರೂ, ಬಿಟ್ಟರೂ ಇದೇ ಈಗ ಬೇಕಾದ ಮುಕ್ತಿ ಮಾರ್ಗ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top