Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

‘ತಾಜ್​ಮಹಲ್​’ ಮೂಲಸೃಷ್ಟಿಯ ರಹಸ್ಯ ಬಯಲಾಯಿತು!

Tuesday, 18.09.2018, 3:03 AM       No Comments

| ಡಾ. ಕೆ.ಎಸ್​.ನಾರಾಯಣಚಾರ್ಯ

‘ಸೈನ್ಸ್ ನ್ಯೂಸ್’ ವರದಿಯಲ್ಲಿ ಕೆ.ಎಸ್. ಜಯರಾಂ ಎಂಬುವವರು ಒಂದು ಸಂಶೋಧನೆಯ ಕುರಿತು ಮಾಹಿತಿ ಇತ್ತಿದ್ದಾರೆ. ಲೇಖನದ ಶೀರ್ಷಿಕೆ- “In same measures: Harappa to Taj’ ಮೂಲ ಸಂಶೋಧಕರು ಪ್ರೊ. ಆರ್. ಬಾಲಸುಬ್ರಹ್ಮಣಿಯನ್. ಖರಗ್​ಪುರದ ಐಐಟಿ, ಕಾನ್ಪುರದಲ್ಲಿ ಇವರು ಮೆಟೀರಿಯಲ್ಸ್ ಆಂಡ್ ಮೆಟಲರ್ಜಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕರು. ಇವರ ಸಂಶೋಧನಾತ್ಮಕ ಲೇಖನ ಅಂತರ್ಜಾಲದಲ್ಲಿ ಒಬ್ಬ ಸ್ನೇಹಿತರ ಮೂಲಕ ದೊರೆಯಿತು. ಈ ಸಂಶೋಧನೆಯ ಕಂತು “Mail Today’ ಪತ್ರಿಕೆಯ 2009ರ ಜುಲೈ 9ರ ಆವೃತ್ತಿಯಲ್ಲಿ ಸೊಗಸಾದ ಪರಾಮರ್ಶೆ, ಪರಿಚಯ, ಚಿತ್ರಸಹಿತ ಬಂದಿದೆ. ಈಗ ಈ ಸಂಶೋಧನೆ ನಮ್ಮ ಜೆಎನ್​ಯುು ತರಹ ಭೋಳೇ/ಢೋಂಗಿ ವಿದ್ವಾಂಸರಿಗೂ, ಮಂಕುಬೂದಿಯ ಹಿಂಬಾಲಕರಿಗೂ ಎದೆಯೊಡೆಸುತ್ತದೆ. ‘ತಾಜ್’ ಅನ್ನು ಕಟ್ಟಿದವರಾರು? ಅಳತೆಗಳು- ಕಟ್ಟಡ ವಿನ್ಯಾಸಕ್ಕೆ ಅವಶ್ಯವಾದವು- ಉದ್ದ, ಅಗಲ, ತೋಟಿಗಳ ಆಯಗಳ ವಿವರಗಳು ಹೇಗೆ? ಯಾವುವು? ಇಲ್ಲಿದೆ ಉತ್ತರ. ಹರಪ್ಪ ಸಂಸ್ಕೃತಿಯ ಅವಶೇಷಗಳನ್ನೂ, ಅಲ್ಲಿನ ಕಟ್ಟಡ ಅವಶೇಷಗಳ ಉದ್ದಗಲ ಅಳತೆಗಳನ್ನೂ ಗಮನಿಸಿದರೆ, ಅವೇ- ಅವೇ!- ‘ತಾಜ್’ನ ನಿರ್ವಣಕ್ಕೂ ಅಪ್ಪಟ ಅನ್ವಯ ಆಗುತ್ತವೆ ಎಂದರೆ, ಎದೆಯೊಡೆದು ಕುಸಿಯುತ್ತೀರಿ! ಕ್ರಿ.ಪೂ. 2000ನೇ ಇಸವಿಯಿಂದ ಗುಪ್ತರ ಕಾಲದ ದೆಹಲಿ ಉಕ್ಕಿನಸ್ತಂಭ (ಕ್ರಿ.ಶ.320-600)ವರೆಗೂ ಅಲ್ಲದೆ, ಈಚೆಗಿನ ಅನೇಕ ಇಮಾರತ್ತು (ಕಟ್ಟಡ)ಗಳೂ, ಬ್ರಿಟಿಷರು ಬರುವತನಕದ್ದು ಒಂದೇ ಮಾಪನಕ್ಕೆ ಒಳಗಾಗಿವೆ! ಯಾವುದು ಆ ಮಾಪನ? ಯಾವುದು ಅಳತೆಗೋಲು? ಕೌಟಿಲ್ಯನ ಅರ್ಥಶಾಸ್ತ್ರ (ಕ್ರಿ.ಪೂ. 320)ದಲ್ಲಿ ಒಂದು ‘ಅಂಗುಲ’ ಎಂದರೆ ಇಂದಿನ 1.763 ಸೆಂ.ಮೀ.ಗೆ ಸರಿಯಾಗುತ್ತದೆ (ಇದನ್ನು ಪತ್ತೆಹಚ್ಚಿದುದು ಮೈಕೇಲ್ ಡ್ಯಾನಿನೊ ಎಂಬ ವಿದ್ವಾಂಸ. ಫ್ರಾನ್ಸ್ ಜಾತ, ಭಾರತೀಯ ನಿವಾಸಿ. ‘ಅಂಗುಲ’ ನಮ್ಮ “Inch’ ಅಲ್ಲ! 108 ಇಂಥ ಒಂದು ಸೇರಿಸಿದರೆ ಕೌಟಿಲ್ಯ ಅದಕ್ಕೆ ‘ಧನುಸ್ಸು’ ಎಂದು ಕರೆಯುತ್ತಾನೆ (ಧನುಸ್ಸು = ಬಿಲ್ಲು ಅಲ್ಲ!). ಇದು 1.904 ‘ಅಂಗುಲ’ದಷ್ಟಾಗುತ್ತದೆ. ಇದರ ಅಪವರ್ತನಮಾಪುಗಳೇ ಭಾರತದಲ್ಲಿ ಸದಾ ಸನಾತನ ಕಾಲದಲ್ಲೂ ರೂಢಿಯಲ್ಲಿತ್ತು. ಹರಪ್ಪದ ಮುದ್ರೆಗಳಲ್ಲಿ ‘1.75’ ಎಂಬ ಚಿಹ್ನೆಗಳಿವೆ. ಡ್ಯಾನಿನೋ ಅವರ ಸಂಶೋಧನೆ ತಮಗೆ ಸ್ಪೂರ್ತಿ ಇತ್ತಿತೆಂದು ಬಾಲಸುಬ್ರಹ್ಮಣಿಯನ್ ಅವರೇ ಹೇಳಿಕೊಂಡಿದ್ದಾರೆ.

ಕೌಟಿಲ್ಯನ ಅಳತೆಗಳ ವಿವರ ಆರ್.ಪಿ. ಕಾಂಗ್ಲೆ ಅವರ ‘ಕೌಟಿಲ್ಯ ಅರ್ಥಶಾಸ್ತ್ರ’ ಎಂಬ ಮೂರು ಬೃಹತ್ ಸಂಪುಟಗಳ ಪೈಕಿ ಎರಡನೆಯದರಲ್ಲಿ ಸಿಗುತ್ತದೆ (ಪುಟ 138-141 ಇತ್ಯಾದಿ). ಅಲ್ಲಿ ಕೌಟಿಲ್ಯನ ಗ್ರಂಥಭಾಗದ ಶೀರ್ಷಿಕೆ- ಕಾಲ, ದೇಶಗಳ ಅಳತೆಯ ಕುರಿತು (ವಿಭಾಗ 38, ಅಧ್ಯಾಯ 20). ರಥಚಕ್ರಗಳ ಅಳತೆಗಳು, ಕೇಂದ್ರ, ಪರಿಧಿ, ವ್ಯಾಸಗಳು, ಹಗ್ಗಗಳ ಉದ್ದಗಳು, ದಪ್ಪ, ಕೋಟೆ ಕಂದಕಗಳ ಅಗೆತ, ವಿಸ್ತಾರ ಪ್ರಮಾಣಗಳು, ಬ್ರಾಹ್ಮಣರ ಯಜ್ಞವೇದಿಕೆಗಳ ಅಳತೆಗಳು, ಉದ್ದ, ಅಗಲ, ಎತ್ತರ, ದಾರಿ ಅಳತೆಗಳು- ಯೋಜನ, ಹೀಗೆ ನಿಮಗೆ ತಲೆಚಿಟ್ಟು ಬರುವಷ್ಟು ವಿವರಗಳು. ಕಾಲದ ಬಗೆಗೂ ತುಟ, ಲವ, ನಿಮೇಷ, ಕಾಷ್ಠಾ, ಕಲಾ, ನಾಳಿಕಾ, ಮುಹೂರ್ತ, ಮಾಸ, ಆಯನ, ವತ್ಸರಾದಿಗಳು (ಇವು ವೇದೋಕ್ತವೂ ಹೌದಾಗಿ, ಈ ಅಳತೆಗಳು ಜಾರಿಯಾದ ಕಾಲ ತಿಳಿಯದೇ ಅನಾದಿ ಎನ್ನಬೇಕಾಗಿದೆ). ಮಹಾಭಾರತದ ಸಭಾಪರ್ವದಲ್ಲಿ ಮಯನಿರ್ವಿುತ ಸಭಾಗೃಹದಲ್ಲಿ ನಿರ್ವಣಕ್ಕೆ ಅಳತೆಮಾಡಿದ ದಾಖಲೆಗಳೂ ಇಲ್ಲೇ ಸಲ್ಲುತ್ತವೆ! ಯೋಚಿಸಿ! ‘ತಾಜ್​ವುಹಲ್’ ನಿರ್ವಣದಲ್ಲೂ ಇವೇ ಅಳತೆ ಉಪಯುಕ್ತವಾಗಿವೆ ಎಂದರೆ ಏನಿರಯ್ಯ ಅರ್ಥ? ಮೊಘಲರಿಗೆ ಭಾರತೀಯ ಪ್ರಾಚೀನ ಅಳತೆಗಳ ಪರಿಚಯ, ಅದರಲ್ಲಿ ಗೌರವ, ಶ್ರದ್ಧೆ ಇದ್ದಿತೆಂದು ಅರ್ಥವೇ? ಅವರ ಅಳತೆಗಳು ಬೇರೆಯವೇ ಇವೆ! 2700 ‘ವಿತಸ್ತಿ’ಯಷ್ಟು ಉದ್ದದ, 1440 ವಿತಸ್ತಿಯ ಅಗಲದ ತಾಜ್ ಕಟ್ಟಡದ ಎಲ್ಲ ಬಿಡಿಭಾಗಗಳೂ ಯಮುನೆಯ ಅಭಿಮುಖದ ಮಹಡಿ (ಟೆರೇಸ್)- ಅಲ್ಲೇ ಸಮಾಧಿ ಇರುವುದು- ‘ಚಿಲೂಖಾನ್’, ಎಲ್ಲವೂ ಈ ಅಪವರ್ತನ ಗ್ರಿಡ್​ಗಳಲ್ಲೇ ಏಕೆ ತಲೆಯೆತ್ತಿ ನಿಂತಿವೆ? ಚಾರ್​ಬಾಗ್ = 4 ಸುತ್ತಲ ತೋಟಗಳು ಎಲ್ಲವೂ, ಕೌಟಿಲ್ಯನ ಮಾಪನಕ್ಕೇ ಏಕೆ ಒಳಪಟ್ಟಿವೆ? ಈ ಇಂಜಿನಿಯರಿಂಗ್ ವಿನ್ಯಾಸದ ಎಲ್ಲ ಅಂಶಗಳನ್ನೂ ಈ ಬಗೆಯ ಮಾಪನದಿಂದಲೇ ಏಕೆ, ಸುಲಭವಾಗಿ ವಿವರಿಸಿ ಗ್ರಹಿಸಬಹುದಾಗಿದೆ? ಮೊಘಲರ ಅಳತೆಗಳು, ಗಾಝು, ಝೆರಾ ಅಳತೆಗಳು, ಷಾಜಹಾನನ ಅಧಿಕೃತ ಇತಿಹಾಸಕಾರನಾಗಿದ್ದ ಲಾಹೋರಿ ಎಂಬುವನು ಬರೆದಿರುವುದಕ್ಕಿಂತ ಏಕೆ ಭಿನ್ನವಾಗಿವೆ? ಅಳೆದೇ ನೋಡಬಹುದಲ್ಲ?

ಇದು ಅಪ್ಪಟ ಭಾರತೀಯ ವಾಸ್ತುಶಿಲ್ಪ ರಚನೆ, ಭಾರತೀಯ ಬೌದ್ಧಿಕತೆಗೆ ಸಾಕ್ಷಿ ಎನ್ನದೆ ಬೇರೇನು ಹೇಳುತ್ತೀರಿ? ‘ಮೌಸೋಲಿಯಂ’ ಎಂಬ ಭಾಗ, ಎರಡೂ ಕಡೆ 270 ವಿತಸ್ತಿಯಷ್ಟು ಒಳಗೊಂಡಿದೆ. ಈ 270 ಎಂದರೇನು? 3ಗಿ3ಗಿ3ಗಿ10= 270, ಮೂರರ ಅಪವರ್ತನ, ದಶಾಂಶಗುಣಿತ. ಅಂದರೆ ದಶಮಾಂಶ ಪದ್ಧತಿ ಯಾವ ದೇಶದ್ದು? ರಾಮಸೇತುವಿನ ಉದ್ದಗಲಗಳೂ ಈ ಅಪವರ್ತನಗಳಲ್ಲೇ ಏಕೆ ಇವೆ? ‘ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ?’ ಎಂದೊಬ್ಬರು ದ್ರವಿಡ ನಾಯಕರು ಕುಹಕವಾಡಿದರಲ್ಲ? ಆ ಸೇತುವೆ ಕಟ್ಟಿದವರು ಕರ್ನಾಟಕದ ವೀರರಲ್ಲವೇ? ಕರ್ನಾಟಕದ ಮಯ, ಶಿಲ್ಪಿಗೆ, ಈ ಅಳತೆ ಗೊತ್ತಿರಲಿಲ್ಲವೇ? ಮೊಘಲರ ‘ಗಾಝು’ ಅಳತೆಗೆ ತಾಜ್ ಎಷ್ಟೂ ಹೊಂದುವುದಿಲ್ಲ. ಕ್ರೖೆಸ್ತರು ‘ಆಡಮ್್ಸ ಬ್ರಿಜ್’ ಎಂದು ಕರೆದ ರಾಮಸೇತುವಿನ ಅಗಲ, ಉದ್ದವನ್ನು ಯಾವ ಕ್ರೖೆಸ್ತ ಇಂಜಿನಿಯರೂ ರ್ತಾಕವಾಗಿ ವಿವರಿಸಲಾರ! ಹೌದೇ? ಪಿ.ಎನ್. ಓಕ್ ಎಂಬುವರು ಹಿಂದೆ ತಾಜ್​ವುಹಲು ಹಿಂದೂ ‘ತೇಜೋಮಹಲ್’ ಆಗಿತ್ತೆಂದು ಆಗ ಲಭ್ಯವಿದ್ದ ಪ್ರಮಾಣಗಳಿಂದ ಬಹಿರಂಗಪಡಿಸಿದಾಗ, ನೆಹರು ಇತಿಹಾಸಕಾರರು ಅವಹೇಳನ ಮಾಡಿದರು! ಈ ಕಟ್ಟಡವು ರಾಜಾ ಮಾನ್​ಸಿಂಗ್​ಗೆ ಸೇರಿದ್ದು, ಅವನು ಷಾಜಹಾನನ ಸರ್ದಾರನಾದ ಬಳಿಕ, ಷಾಜಹಾನನು ಅವನಿಂದ ಇದನ್ನು ವಶಪಡಿಸಿಕೊಂಡು ಹೊರಹೊದ್ದಿಕೆ ಬದಲಾಯಿಸಿ, ಮೊಘಲ್ ಕಟ್ಟಡವೆಂಬಂತೆ ಮಾಯೆಬೀಸಿದ್ದು ಇತಿಹಾಸ. ಏಕೆ ಓದಲಾರಿರಿ? ಇದು ಮಾರೀಚಮಾಯೆ! ದೆಹಲಿಯ ಕುತುಬ್ ಮಿನಾರ್ ಸಹ ಹೀಗೆಯೇ. ಅಲ್ಲಿನ ಉಕ್ಕಿನಸ್ತಂಭ ಗುಪ್ತರ ಕಾಲದ್ದು. ಅಂದಹಾಗೆ, ಉಕ್ಕನ್ನು ಕಂಡುಹಿಡಿದವರೂ ಭಾರತೀಯರೇ! ತಮಿಳರೇ! ಚೇರನಾಡು ಎಂಬ ಇಂದಿನ ಕೇರಳದ, ದಕ್ಷಿಣ ಭಾರತದ ಅನೇಕ ಪ್ರದೇಶಗಳನ್ನು ಒಳಗೊಂಡಿದ್ದು ಎಂದು ಒಂದು ಸಂಶೋಧನೆ. ಗುಜರಾತಿನ ಬೀಸ್​ನಗರದಲ್ಲಿನ ತುಕ್ಕುಹಿಡಿಯದ ಉಕ್ಕಿನ ಕಂಬವನ್ನು ಅಲ್ಲಿ ಯಾರು ತಂದು ಪ್ರತಿಷ್ಠಿಸಿದರು? ಅದರ ಮೇಲೆ Heliodorus  ಎಂಬ ಹಿಂದೂ ಭಾಗವತನಾದ ಗ್ರೀಕನು ಅಂಟಾಕಿಲಿಡೀಸನ ರಾಯಭಾರಿ ಕೆತ್ತಿಸಿದ ತ್ರಿವಿಕ್ರಮನ ಮೂರು ಪಾದಗಳ- ‘ದಾನ, ಧರ್ಮ, ದಯೆ’- ಎಂಬವುಗಳ ಅರ್ಥ ಬರೆಸಿದನಲ್ಲ? ಅವನು ಗ್ರೀಸಿನಿಂದ ತಂದಿದ್ದನೇ? ಇಲ್ಲಿಯದೇ? ಇದು ಮೌರ್ಯರ ಕಾಲದ್ದು ಎಂದು ಹೇಳಲಾಗುತ್ತದೆ. ಭಾರತದಲ್ಲೇ ಉಳಿದ ಅಲೆಕ್ಸಾಂಡರ್ ಬಿಟ್ಟುಹೋದ ಅನುಯಾಯಿಗಳು ಅನೇಕರು ಭಾಗವತ ಮತ ಸ್ವೀಕರಿಸಿದ ವೈಷ್ಣವ ಕಾಲ ಅದು! ಹಾಗೆಯೇ ಕುತುಬ್ ಮಿನಾರ್ ಬಳಿಯದು ಒಂದು ಉಕ್ಕಿನ ಕಂಬ! ನಾವು ಭಾರತೀಯರು ಈ ಇತಿಹಾಸ ಕುರುಹುಗಳ ಮೂಲವನ್ನು ನೋಡುವುದೂ ಇಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲಿ ಕುತುಬ್ ಮಿನಾರ್​ನ ಮೇಲ್ಛಾವಣಿಯ ಹೊರಗೆ ಮೆತ್ತಿದ್ದ ಇಸ್ಲಾಮಿ ಮುಖವಾಡ, ಬಿಸಿಲಿಗೋ ಸಿಡಿಲಿಗೋ ಮಳೆಗೋ ಕಳಚಿಬಿತ್ತು! ಅಲ್ಲಿ ಒಳಗೆ ಇದ್ದವು ವಿಷ್ಣುವಿನ ದಶಾವತಾರ ಸನ್ನಿವೇಶ ಚಿತ್ರಗಳು! ಗಾಬರಿಯಾದ ಇಂದಿರಾ ತರಾತುರಿಯಲ್ಲಿ ಮತ್ತೆ ಇಸ್ಲಾಮಿ ಮುಖವಾಡಗಳನ್ನು ಮೆತ್ತಿಸಿದರು.

ಅದೇ ಕಾಲದಲ್ಲಿ ಗುಜರಾತಿನ ಸಿಧ್​ಪುರ ಎಂಬ ಊರಲ್ಲಿ ಒಂದು ಮಸೀದಿಯ ಹೊರಗೋಡೆ ಉರುಳಿತ್ತು. ಅದನ್ನು ಮತ್ತೆ ಕಟ್ಟಿಸಿಕೊಡುವಂತೆ ಕೇಂದ್ರಕ್ಕೆ ಒತ್ತಡ ತಂದಾಗ, ಸರ್ಕಾರ ಆ ಗೋಡೆ ಕೆಡವಿ ಬೇರೆಯದನ್ನು ನಿರ್ವಿುಸಲು ಆಜ್ಞೆ ಮಾಡಿತ್ತು. ಆಗ ಕೆಲಸಗಾರರು ಆ ಗೋಡೆ ಮಾತ್ರವಲ್ಲದೆ ಬೀಳಲಿದ್ದ ಉಳಿದ ಭಾಗಗಳನ್ನೂ ಅಗೆಸಿ ಕೆಡವಿ ಬೇರೆ ನಿರ್ವಿುಸಲು ಹೊರಟಾಗ ಅಲ್ಲಿ ‘ಮಾತೃಗಯೆ’ ಎಂಬ ಯಾತ್ರಾಸ್ಥಳದ ಕುರುಹುಗಳು- ಏಕಾದಶರುದ್ರರು, ಸಪ್ತಮಾತೃಕೆಯರು, ಪುಷ್ಕರಿಣೀ, ಪ್ರಾಕಾರ- ಇಂಥವು ಗೋಚರವಾದವು (ನೋಡಿ: ಸೀತಾರಾಂ ಗೋಯೆಲ್ ಅವರು 2 ಭಾಗಗಳಲ್ಲಿ ಬರೆದಿರುವ Hindu Temples- what happened to them’ ಕೃತಿ; ಇಲ್ಲಿ ಚಿತ್ರಗಳೇ ವಿವರವಾಗಿವೆ. ದಾಖಲೆಗಳು ಸಹ). ಸರ್ಕಾರ ಗಾಬರಿಯಿಂದ ಅವನ್ನು ಮುಚ್ಚಿಸಿತ್ತು. ಈಚೆಗೆ ಈ ಮಾತೃಗಯೆ, ಯಾತ್ರಿಕರಿಗೆ ಲಭ್ಯವೆಂದು ಕೇಳಿದ್ದೇನೆ. ಪ್ರಸಿದ್ಧ ಗಯಾಕ್ಷೇತ್ರದ ವಿಷ್ಣುಪಾದಗಯೆಗೆ ಆಗ ಪಿತೃಗಯೆ ಎಂಬ ಹೆಸರಿದ್ದು ಈಗಲೂ ಉಳಿದಿದೆ! ನಮ್ಮ ಪುಣ್ಯ! ಮೊಘಲರು ಕಟ್ಟಿದ್ದವೆಂದು ಹೇಳಲಾಗುವ ಅನೇಕ ಕಟ್ಟಡಗಳು ಮೂಲದಲ್ಲಿ ಹಿಂದೂ ಕಟ್ಟಡಗಳೇ ಎಂಬುದರಲ್ಲಿ ಸಂದೇಹ ಬೇಡ. ಅಯೋಧ್ಯೆಯ ರಾಮಜನ್ಮಭೂಮಿಯ ಅವಶೇಷಗಳೂ ಇವೆಯಲ್ಲ? ನಾನೂ ಈ ಬಗ್ಗೆ ‘ರಾಮಜನ್ಮಭೂಮಿ ತೀರ್ಪಿನ ಸುತ್ತಮುತ್ತ’ ಎಂಬ ಪುಸ್ತಕವನ್ನು ಬರೆದಿದ್ದೇನೆ, ಸಚಿತ್ರ (ಪ್ರಕಾಶಕರು- ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ). ನಾವು ಯಾವುದನ್ನೂ ಓದುವುದಿಲ್ಲ. ಯಾವುದನ್ನು ಕುರಿತೂ ಚಿಂತಿಸುವುದಿಲ್ಲ. ನೆಹರು, ಕಾಂಗ್ರೆಸ್ಸು ಮಬ್ಬುಬಿಡುವ ಲಕ್ಷಣಗಳು ಕಾಣುತ್ತಿಲ್ಲ! ಹೋದವಾರ ‘ನೆಹರುರ 97 ಪ್ರಮಾದ’ಗಳು ಕುರಿತ ನನ್ನ ಲೇಖನ ಈ ಅಂಕಣದಲ್ಲಿ ಪ್ರಕಟವಾಗಿತ್ತಷ್ಟೇ! ಅದರ ಕುರಿತು ಕೋಪಗೊಂಡ ಒಬ್ಬ ನಿವೃತ್ತ ಸನ್ಮಿತ್ರ ಲೆಫ್ಟಿನೆಂಟ್ ಜನರಲ್ ಸಾಹೇಬರು, ನನ್ನ ಯಾವ ಆಧಾರವನ್ನೂ ನಿರಾಕರಿಸದೆ, ಒಪ್ಪಲು ಇಷ್ಟವಿಲ್ಲದೆ, ‘ಹಿಂದುತ್ವವು ನಮ್ಮನ್ನು ಯುದ್ಧದತ್ತ ತಳ್ಳುತ್ತಿದೆ’

ಎಂಬ ಅರ್ಥದ ಅಪದ್ಧ ಲೇಖನವನ್ನು ನನಗೆ ಅಂಚೆಯಲ್ಲಿ ರವಾನಿಸಿದ್ದಾರೆ! ಇದರರ್ಥ- ನೆಹರು ಮಬ್ಬು ಅವರಿಗೆ ಬಿಟ್ಟಿಲ್ಲ! ಅವರ ಮನೋಭಾವ ತುಂಬ ಹಳೆಯದು! ನವಭಾರತ ನಿರ್ವಣವು ಭಾರತೀಯರ ಸ್ವಾಭಿಮಾನದಿಂದಲೇ ನಿರ್ವಣವಾಗತಕ್ಕದ್ದು ಹೊರತು, ರಷ್ಯಾ, ಚೀನಾ, ಅರಬ್ ಪ್ರೇರಣೆಗಳಿಂದಲ್ಲ! ತರುಣ ಭಾರತೀಯ ವಿಜ್ಞಾನಿಗಳೂ, ಇತಿಹಾಸತಜ್ಞರೂ ಈ ಬಗ್ಗೆ ಭೂತ ಬಿಡಿಸಲು ಕಂಕಣ ತೊಟ್ಟಿದ್ದಾರೆ ಎಂಬುದಕ್ಕೆ ಈ ಲೇಖನಾರಂಭದಲ್ಲಿ ಉಲ್ಲೇಖಿಸಿದ ಬಾಲಸುಬ್ರಹ್ಮಣಿಯನ್ ಒಂದು ಸಾಕ್ಷಿ. ಗುಲಾಮೀ ಬುದ್ಧಿ ಇರುವ ತನಕ ನಮಗೆ ಹಿಂದೂಸ್ತಾನಿ ಸಂಗೀತವೂ ಅಪ್ಪಟ ಭಾರತೀಯವೇ ಎಂದು ನಂಬಿಕೆ ಬರಲಾರದು. ಅನೇಕ ಉಸ್ತಾದರು ಈಗ ಇಸ್ಲಾಮೀ ಹೆಸರಲ್ಲಿದ್ದು, ಯಾವಾಗಲೋ ಮತಾಂತರಿತರಾದವರು. ಭ್ರಾಂತಿ ಬೇಡ. ಈ ಸಂಗೀತವು ಅರಬ್ ಮೂಲದ್ದಾಗಿದ್ದರೆ, ಅಲ್ಲಿ ಮೆಕ್ಕಾ ಮದೀನಾಗಳಲ್ಲಿ ಯಾರು ಈ ರಾಗ ಹಾಡುತ್ತಾರೆ? ಇಸ್ಲಾಂನಲ್ಲಿ ಸಂಗೀತ, ನೃತ್ಯ ಇವು ನಿಷೇಧಿತವಲ್ಲವೇ? ಭಾರತೀಯರೇ… ನೀವು ನೀವಾಗುವುದು ಯಾವಾಗ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top