ಭಾರತ ರಾಜಕಾರಣದಲ್ಲಿ ಯುಗಳರ ಆಟ

| ಡಾ.ಕೆ.ಎಸ್​.ನಾರಾಯಣಾಚಾರ್ಯ

ಶೀರ್ಷಿಕೆ ನೋಡಿ ಗಾಬರಿಯೋ, ಅಚ್ಚರಿಯೋ, ಸಂಶಯವೋ ಆಗುವುದು ಬೇಡ. ಸತ್ಯವನ್ನೇ ಬರೆಯುತ್ತೇನೆ. ಲೋಕೋಪಕಾರಕರಾದ ಅವಳಿಗಳೂ, ಸೋದರ-ಸೋದರಿಯರೂ ಉಂಟು. ಲೋಕನಾಶಕ ದೀಕ್ಷೆಯವರೂ ಉಂಟು. ಇಂದು ನೆನೆಯುವುದೇಕೆಂದರೆ, ‘ಇದು ಹೊಸದಲ್ಲ, ಸಹಿಸಬೇಕು’ ಎಂದು ಎಚ್ಚರಿಸಲು. ರಾಜಕಾರಣ ಬಿಡಿ, ಸಂಗೀತಪ್ರಪಂಚದಲ್ಲೂ ಯುಗಳರು ಉಂಟು. ಡಾಗರ್ ಸೋದರರು ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಮೇಲೇರಿಸಿದರೆ, ದಕ್ಷಿಣದಲ್ಲಿ ಆಲತ್ತೂರ್ ಸಹೋದರರು, ಬೃಂದಾ, ಮುಕ್ತಾ ಸಹೋದರಿಯರು, ಹೈದ್ರಾಬಾದ್ ಸಹೋದರರು, ಹಾಗೇ ಬಾಂಬೆ ಸಹೋದರಿಯರು, ಈಗ ಮಲ್ಲಾಡಿ ಸಹೋದರರು, ಉತ್ತರದ ರಾಜನ್-ಸಾಜನ್- ಹೀಗೆ ಅನೇಕರು ನಮ್ಮ ಪರಂಪರೆಯ ಗೌರವ ಹೆಚ್ಚಿಸಿದರು. ಸಂಗೀತ ಕ್ಷೇತ್ರವೇ ಹಾಗೆ. ಅಲ್ಲಿ ಕಿತಾಪತಿಯೋ, ಆಕ್ರಮಣಬುದ್ಧಿಯೋ ಇರುವಂತಿಲ್ಲ. ವ್ಯಾಪಾರ ಕ್ಷೇತ್ರ, ಪುಸ್ತಕ ಪ್ರಕಾಶನ, ಉದ್ದಿಮೆಗಳಲ್ಲೂ ‘Brothers’’ ಎಂಬ ಕಂಪನಿಗಳು ಇವೆ, ಇದ್ದವು. ಒಡವೆ ತಯಾರಕರಲ್ಲಿ, ಫಿಲ್ಮೀ ಪ್ರಪಂಚ- ತಯಾರಿಕೆಯಲ್ಲಿ-ವಿತರಣೆಯಲ್ಲಿ, ಎಲ್ಲೆಲ್ಲೂ ಈ ‘Brothers’’ ಎಂಬ ಛಾಪು ಪ್ರಸಿದ್ಧವಿದೆ. ಆಕ್ಷೇಪವಿಲ್ಲ. ಇಲ್ಲಿ ಹೇಳಹೊರಟದ್ದು ರಾಜಕೀಯ ಕ್ಷೇತ್ರದ ಬಗ್ಗೆ. ಅಲ್ಲೂ ಹಕ್ಕಬುಕ್ಕರು, ಪ್ರಾತಃಸ್ಮರಣೀಯರು, ವಿಜಯನಗರ ಸಾಮ್ರಾಜ್ಯ ಸ್ಥಾಪಕರು, ಶ್ರೀ ವಿದ್ಯಾರಣ್ಯರ ಮಾರ್ಗದರ್ಶನದ, ವಿನೀತ, ವೀರ, ಧೀರ ಆಳುಗರು. ಗಮನಿಸಿ- ಬ್ರಾಹ್ಮ- ’Spiritual’ ದಿಗ್ದರ್ಶನವಿದ್ದಾಗ, ಕ್ಷಾತ್ರವು- militancy- ಪವಾಡಗಳನ್ನು ಮಾಡಬಲ್ಲದು.

ಬಹಮನೀ ಸುಲ್ತಾನರ ಕೈಗೆ ಸಿಕ್ಕು, ಮತಾಂತರಿತರಾಗಿ, ಸೇನಾನಿಗಳಾಗಿದ್ದು, ಸಮಯನೋಡಿ ತಪ್ಪಿಸಿಕೊಂಡು ಬಂದ ಈ ವೀರರು ಹುಟ್ಟಾ ಕ್ಷತ್ರಿಯರೋ, ‘ಮೇಲು’ ಎನಿಸಿದ ಜಾತಿಯವರೋ ಇರಲಿಲ್ಲ! ಚಂದ್ರಗುಪ್ತ ಮೌರ್ಯ ಯಾವ ಜಾತಿ? ಅಲ್ಲಿ ಚಾಣಕ್ಯಸಂಯೋಗ ಆದ ಪ್ರಯುಕ್ತ, ಮಗಧ ಸಾಮ್ರಾಜ್ಯ ಸ್ಥಾಪಿತವಾಯ್ತು. ಮೈಸೂರಿನ ಇತಿಹಾಸದಲ್ಲು, ಯದುರಾಯರು, ಕೃಷ್ಣರಾಯರು, ಗುಜರಾತ್ ಕಡೆಯಿಂದ ಬಂದವರು, ಜಂಗಮ ಒಡೆಯರ ಸಹಾಯದಿಂದ ದುಷ್ಟಸಂಹಾರ ಮಾಡಿ, ಮೈಸೂರು ಸಂಸ್ಥಾನವನ್ನು ಕಟ್ಟಿದರು. ಇದೆಲ್ಲ ಸಕಾರಾತ್ಮಕ ರಾಜಕಾರಣ. ಇದೂ ಸಾಧ್ಯ ಎಂಬುದಕ್ಕೆ ಪುರಾವೆಗಳು.

ಈಗ ಋಣಾತ್ಮಕ ರಾಜಕಾರಣದತ್ತ ಹೊರಳಿ, ಇತಿಹಾಸ ಪರಾಮರ್ಶೆ ಮಾಡೋಣ. ಹೆದರಬೇಡಿ, ನಗಬೇಡಿ. ಕೃತಯುಗದಲ್ಲಿ ಹಿರಣ್ಯಾಕ್ಷ, ಹಿರಣ್ಯಕಶಿಪು ಎಂಬುವರು ಲೋಕವನ್ನೇ ಗೆಲ್ಲಲು ಹೊರಟ ಯುಗಳರು. ದಿತಿಯ ಮಕ್ಕಳಾಗಿ ಆದಿದೈತ್ಯರೆನಿಸಿದರು. ‘ಯಾರಿಂದಲೂ ಸಾವುಬೇಡ’ ಎಂಬ ವರಗಳ ಕಾಲದಲ್ಲಿ ದೇವರೇ ರೂಪಾಂತರದಲ್ಲಿ ಅಜ್ಞಾತ ವೇಷದಲ್ಲಿ ಬಂದು ವರಾಹ, ನರಸಿಂಹ ಅವತಾರಗಳಲ್ಲಿ ಕೊಲ್ಲಬೇಕಾಯ್ತು. ತ್ರೇತಾಯುಗದಲ್ಲಿ ರಾವಣ-ಕುಂಭಕರ್ಣರೂ ಯುಗಳವೇ! ಇವರು ಮಾಡಿದ್ದೇನು? ಒಬ್ಬ ಸ್ತ್ರೀಲಂಪಟಿ, ಇನ್ನೊಬ್ಬ ನಿದ್ರಾಪಟು. ಇವರನ್ನೂ ಮುಗಿಸಲು ರಾಮಾವತಾರ ಬೇಕಾಯ್ತು. ಆ ಮುನ್ನ ಅವರೇ ಜಯ-ವಿಜಯರೆಂಬ ಯುಗಳರು. ರಾಮಾಯಣ ಕಾಲದಲ್ಲೇ ಕಿಷ್ಕಿಂಧೆಯಲ್ಲಿ ಮೈಂದ-ದ್ವಿವಿದ ಎಂಬುವರೂ ಇದ್ದರು. ರಾಮಸೇವಕರು. ಅಷ್ಟೇಕೆ? ವೇದಗಳಲ್ಲೇ ಅಶ್ವಿನೀದೇವತೆಗಳಿದ್ದರು. ದೇವವೈದ್ಯರು, ಗೊತ್ತಿದೆಯಲ್ಲ? ಇವರು ಬದುಕಿಸುವ ಕಲೆ, ವಿದ್ಯೆ ಕಲಿತಿದ್ದವರು. ಒಂದು ಕಾಲದಲ್ಲಿ ಅವರಿಗೂ ದೇವತಾಮಂಡಳದಲ್ಲಿ ಪ್ರಾತಿನಿಧ್ಯ ಇರಲಿಲ್ಲ. ಚ್ಯವನರ ಕಾಲದಲ್ಲಿ ಅದು ದೊರೆತು- 33 ದೇವತೆಗಳಲ್ಲಿ ಸೇರ್ಪಡೆಯಾದರು- 11 ರುದ್ರರು + 12 ಆದಿತ್ಯರು + 8 ವಸುಗಳು + 2 ಅಶ್ವಿನರು= 33. ಹಿರಣ್ಯಾಕ್ಷ-ಹಿರಣ್ಯಕಶಿಪು, ರಾವಣ-ಕುಂಭಕರ್ಣರು ಈ ಸಾಲಿಗೆ ಸೇರದೆ, ಆಮೇಲಣ ನಮ್ಮ ಯುಗದ ಮೊಘಲರಂತೆ ದಬ್ಬಾಳಿಕೆಕೋರರಾಗಿ, ಚರಿತ್ರೆಯಲ್ಲಿ ಖಳನಾಯಕರಾಗಿಹೋದರು, ಬಿಡಿ.

ಈಗ ಮಹಾಭಾರತ, ಪುರಾಣಗಳತ್ತ ದೃಷ್ಟಿ ಹೊರಳಿಸೋಣ. ಮೊದಲಿಗೆ ಹಂಸ-ಡಿಂಭಕರೆಂಬ ಸೇನಾನಿಗಳು, ಜರಾಸಂಧನ ಊಳಿಗದಲ್ಲಿದ್ದವರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಸತ್ತರೂ ಒಟ್ಟೇ ಸಾಯುವುದಾಗಿ ಪ್ರತಿಜ್ಞೆ ಮಾಡಿದ್ದರು. ಅದು ಹೇಗೆ ಸಾಧ್ಯವಿತ್ತು? ‘ಮರಣ ಬೇಡ’ ಎಂಬುದಕ್ಕೆ ಪರ್ಯಾಯವಾದ ಪ್ರತಿಜ್ಞೆ. ಬ್ರಹ್ಮನನ್ನೂ, ಯಮನನ್ನೂ ವಂಚಿಸುವ ತಂತ್ರ. ಧರ್ಮಜನ ರಾಜಸೂಯಕ್ಕೆ, ಸಾಮ್ರಾಟ್ ಪದವಿಗೆ ಪ್ರಧಾನ ಅಡಚಣೆಯಾಗಿದ್ದವನೇ ಈ ಜರಾಸಂಧ. ಅವನ ಬಲ ಇದ್ದುದು ಜರೆಯೆಂಬ ರಾಕ್ಷಸಿಯಲ್ಲಿ ಹಾಗೂ ಈ ಸಾಯದ ಯಮಳರ ತಂತ್ರರೀತಿಯಲ್ಲಿ! ಧರ್ಮಸಾಮ್ರಾಜ್ಯ ಸ್ಥಾಪನಾದೀಕ್ಷೆ ಹೊಂದಿದ್ದ ಶ್ರೀಕೃಷ್ಣ ಏನು ಮಾಡಬೇಕು? ವರಕೊಟ್ಟ ಬ್ರಹ್ಮನಿಗೂ, ಪಾಶಹಿಡಿದು ಕಾದಿದ್ದ ಯಮನಿಗೂ ಹೊಳೆಯದಿದ್ದ ತಂತ್ರವೊಂದನ್ನು ಮಾಡಿದ! ಅನಾಯಾಸವಾಗಿ ಜರಾಸಂಧನ ರಾಜಧಾನಿಯನ್ನು ಹೊಕ್ಕು ಒಂದು ದಿನ ತಮಟೆ, ಜಾಗಟೆ ಬಾರಿಸುವವರನ್ನೂ, ಶಂಖ ಊದುವವರನ್ನೂ ಬಾಡಿಗೆಗೆ ಪಡೆದು, ಊರ ಸುತ್ತ ಒಂದೆರಡು ರೌಂಡು ‘ಹಂಸನೆಂಬ ಸೇನಾನಿ, ಅಕಸ್ಮಾತ್ ನೀರಿನಲ್ಲಿ ಜಾರಿಬಿದ್ದು ಸತ್ತ’ ಎಂದು ಪ್ರಚುರಪಡಿಸಿದ. ಊರಿಗೆ ಊರೇ ದಂಗಾಯ್ತು. ಜರಾಸಂಧ ಮೊದಲು ನಂಬಲಿಲ್ಲ. ಆಮೇಲೆ ಆಪ್ತರನ್ನು ವಿಚಾರಿಸಿದ. ಆ ಅಪ್ರಿಯ ಶ್ರೀಕೃಷ್ಣನ ತಂತ್ರಗಾರಿಕೆಯೊಳಗೇ ಇದ್ದವರು ‘ಸತ್ಯ’ ಎಂದು ನಂಬಿಸಿದರು. ದೊರೆ ಅತ್ತ. ಇತ್ತ ಈ ಮಾತು ಡಿಂಭಕನ ಕಿವಿಗೂ ಬಿತ್ತು. ಅಲ್ಲೂ ಕೃಷ್ಣನ ಏಜೆಂಟರು ಇದ್ದರಲ್ಲ? ‘ಹೌದು ಮಹಾಸ್ವಾಮಿ! ಹಂಸ ಸತ್ತ’ ಎಂದು ನಂಬಿಸಿದರು. ಡಿಂಭಕನಿಗೆ ಈಗ ಪರ್ಯಾಯ ಉಳಿಯಲಿಲ್ಲ. ಒಟ್ಟಿಗೇ ಸಾಯಬೇಕಲ್ಲ? ಅದಕ್ಕಾಗಿ, ಎಲ್ಲಿ ಹಂಸ ಸತ್ತನೆಂದು ಜನ ಹೇಳಿದರೋ, ಅದೇ ಮಡುವಿನಲ್ಲಿ ತಾನೂ ಹೋಗಿ ಬಿದ್ದು ಸತ್ತ! ಈ ವೃತ್ತಾಂತವನ್ನು ಸ್ವಯಂ ಶ್ರೀಕೃಷ್ಣನೇ ಯುಧಿಷ್ಠಿರನಿಗೆ ರಾಜಸೂಯ ತಂತ್ರ ವಿವರಣೆಯ ಪ್ರಸಂಗದಲ್ಲಿ ಹೇಳುತ್ತಾನೆ. ಸ್ಕೂಲಿನಲ್ಲಿ ‘ನೀತಿ ಚಿಂತಾಮಣಿ’ ಎಂಬ ಪುಸ್ತಕದ ಭಾಗದಲ್ಲಿ ಈ ಕತೆಯನ್ನು ಮೊದಲಿಗೆ ಓದಿದ್ದೂ ನನಗೆ ನೆನಪಿದೆ. ರಾಮಾವತಾರ, ನರಸಿಂಹಾವತಾರಗಳ ಕಷ್ಟವಿಲ್ಲದೆ, ಕೇವಲ ತಂತ್ರದಲ್ಲಿ ದುಷ್ಟರನ್ನು ಸಾಯಿಸಿದ. ಈಗ ಇಂಥ ಒಕ್ಕೂಟ, ಘಟಬಂಧನ ಮಾಡಿಕೊಳ್ಳುತ್ತಿರುವಾಗ ದೇವರು ಯಾವ ತಂತ್ರ ಅನುಸರಿಸುತ್ತಾನೋ ನೋಡೋಣ.

ಇನ್ನೊಂದು ಮಹಾಭಾರತೋಕ್ತ ಅವಳಿಗಳ ಕತೆ ಕೇಳಿ. ನಾರದರು ಪಾಂಡವರಿಗೆ ಐಕಮತ್ಯ ಬೋಧಿಸುವ ಪ್ರಸಂಗ. ದ್ರೌಪದಿ ವಿವಾಹವಾದ ಹೊಸತು. ‘ಸ್ತ್ರೀನಿಮಿತ್ತ ನಿಮ್ಮನಿಮ್ಮಲ್ಲಿ ಜಗಳ, ಯುದ್ಧ, ಸಾವು ಬರಬಾರದು’ ಎಂದು ಕತೆ ಹೇಳುತ್ತಾರೆ. ಸುಂದ, ಉಪಸುಂದ ಎಂಬ ಯಮಳರು ಇದ್ದರು. ‘ಸಾವು ಬಂದರೆ, ತಂತಮ್ಮಲ್ಲೇ ಒಬ್ಬನಿಂದ ಇನ್ನೊಬ್ಬನಿಗೆ ಬರಬೇಕೇ ಹೊರತು, ಮೂರನೆಯವನಿಂದ ಅಲ್ಲ’ ಎಂಬ ವರ ಪಡೆದಿದ್ದರು. ಆದರೆ, ಇವರ ಸಾವಿನಲ್ಲೇ ಲೋಕಕಲ್ಯಾಣವಿದ್ದುದನ್ನು ಇಂದ್ರ ಬಲ್ಲವನಾಗಿದ್ದ. ಅದಕ್ಕೊಂದು ಉಪಾಯ ಮಾಡಿದ. ತಿಲೋತ್ತಮೆ ಎಂಬ ಅಪ್ಸರೆ ಒಂದು ದಿನ ಈ ಯಮಳರ ನಡುವೆ ಹಾಜರಾದಳು. ಅಣ್ಣ-ತಮ್ಮಂದಿರ ಮೋಹ ಹೇಗಿತ್ತೆಂದರೆ, ‘ನನಗೆ, ತನಗೆ’ ಎನ್ನುತ್ತ ಅವಳನ್ನು ಜಗ್ಗಾಡಿದರು. ಅವಳು ಹೇಳಿದಳು- ‘ನಿಮ್ಮಲ್ಲಿ ಯಾರು ಹೆಚ್ಚು ಬಲಿಷ್ಠರೋ, ಅವರಿಗೇ ನಾನು ವಶ’ ಅಂತ! ಹುರುಪು, ಸ್ತ್ರೀವ್ಯಾಮೋಹ ಹೆಚ್ಚಾಗಿ, ಅಣ್ಣ-ತಮ್ಮಂದಿರು ಬಡಿದಾಡಿಯೇ ಸತ್ತರು. ಅಧಿಕಾರಕ್ಕಾಗಿ ಇಂದು ಬಡಿದಾಡುವವರ ಉಪದ್ರವ ಮುಗಿಯಬೇಕಾದರೆ, ಇಂದ್ರ ಇಂಥ ತಂತ್ರ ಮಾಡಬೇಕಾಗುತ್ತೆ. ಈಗ ರಾಮಾಯಣದ ಕಾಲಕ್ಕೆ ಬರೋಣ. ನೋಡಿ, ರಾವಣ-ಕುಂಭಕರ್ಣ ಅಂತ ಒಂದು ಭಲೇಜೋಡಿ ಇತ್ತು. ರಾವಣನಿಗಾದರೂ ಸ್ತ್ರೀಚಾಪಲ್ಯ ಇತ್ತು. ಕುಂಭಕರ್ಣ ಯಾರಿಗಾಗಿ ಸಾಯುತ್ತೇನೆಂದು ತಿಳಿಯದೆಯೇ ಸತ್ತ. ಟಿ.ಎಸ್. ಎಲಿಯಟ್​ನ ’The Wasteland’ ಕವನದಲ್ಲಿ ‘ಫ್ಲೀಬಸ್’ ಎಂಬ ಹಡಗುಗಳ್ಳನ ಪ್ರಸ್ತಾಪ ಬರುತ್ತದೆ. ಹಡಗು ಒಡೆದು, ಇವನು ಮುಳುಗಿ 15 ದಿನ ಆದರೂ ಸತ್ತದ್ದೇ ತಿಳಿಯಲಿಲ್ಲವಂತೆ! ಅದು ಐರೋಪ್ಯ ಸಾಮ್ರಾಜ್ಯ ನಾಶವಾದುದಕ್ಕೆ ಸಂಕೇತ. ಸಾಯುವವನಿಗೆ ‘ಸತ್ತೆ’ ಎಂಬ ಪ್ರಜ್ಞೆಯೂ ಇರದೆ ಸತ್ತರೆ!? ಹಾಗೆ ಸತ್ತ ಕುಂಭಕರ್ಣ. ರಾವಣನೋ? ರಾಮಬಾಣಕ್ಕೆ ಸತ್ತ. ಲೋಕ ನಿಟ್ಟುಸಿರುಬಿಟ್ಟಿತ್ತು. ಇನ್ನೊಂದು ಯಮಳರ ಕತೆ ರಾಮಾಯಣದಲ್ಲೇ ಇದೆ. ವಾಲಿ-ಸುಗ್ರೀವರದ್ದು. ವಾಲಿ ದುಷ್ಟನಿದ್ದ. ಸ್ತ್ರೀಚಾಪಲ್ಯ ಇದ್ದವ. ಸುಗ್ರೀವ ದುರ್ಬಲ. ಆದರೆ ಧರ್ಮಕ್ಕೆ ಬಗ್ಗಿ ಉಳಿದ. ಇನ್ನೂ ಅನೇಕ ಯಮಳರ ಉದಾಹರಣೆ ಹೇಳಬಹುದು.

ನಿಜಲಿಂಗಪ್ಪನವರ ಗರಡಿಯಲ್ಲಿ ಪಳಗಿದ ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲರನ್ನು ಹಿಂದೆ ‘ಲವ-ಕುಶ’ ಎಂದು ಹೋಲಿಸುತ್ತಿದ್ದರು. ಜೆಡಿಎಸ್, ಜೆಡಿಯು ಎಂಬ ಯುಗಳ ಬೇರೆಯಾದದ್ದು ಲೋಕಹಿತ ತರಲಿಲ್ಲ. ಇತ್ತ ವೀರೇಂದ್ರರನ್ನು, ಅಂದಿನ ಕಾಂಗ್ರೆಸ್ ನಾಯಕ, ವಿಮಾನ ಏರುತ್ತ ಇದ್ದ ಕಾಲದಲ್ಲಿ ಅಲ್ಲಿಂದಲೇ ಪದಚ್ಯುತಿಮಾಡಿಬಿಟ್ಟ! ಯಮಳರು ಏನಂದರು? ಈಗ ಘಟಬಂಧನಕ್ಕೆ ಬನ್ನಿ. ತಮಿಳುನಾಡಿನಲ್ಲಿ ಶಶಿಕಲಾರನ್ನು ಜಯಲಲಿತಾ ಸೋದರಿ ಎಂದೇ ಜನ ಭಾವಿಸಿ ‘ಚಿನ್ನಮ್ಮ’ ಎಂದು ಕರೆಯಿತು! ‘ಅಮ್ಮಾ’ ಎಂದರೆ ಜಯಲಲಿತಾ ಎಂಬ ವ್ಯವಹಾರ. ಜಯಲಲಿತಾ ಸಾವಿನ ನಂತರ ಶಶಿಕಲಾ ಜೈಲು ಸೇರಿದರು! ಇದು ರಾಮಾಯಣ, ಮಹಾಭಾರತ ಕತೆಗಳಂತಿಲ್ಲವೇ? ತಾನೂ ಸತ್ತು ಇತರರನ್ನೂ ಸಾಯಿಸುವುದು ಷೇಕ್ಸ್​ಪಿಯರ್​ನ ‘ಕಿಂಗ್ ಲಿಯರ್’ ನಾಟಕದಲ್ಲೂ ಬರುತ್ತದೆ. ಸೋದರಿಯರು- ಗಾನೆರಿಲ್, ರೀಗನ್​ರ ಕತೆ. ಇಲ್ಲೆಲ್ಲ ದುರಾಸೆ, ದುರ್ಬಂಧನ, ದುರ್ಮಂತ್ರಣಗಳು ಹೆಣೆದಿರುತ್ತವೆ.

ಉತ್ತರ ಪ್ರದೇಶದ ಮಾಯಾವತಿ ಮತ್ತು ಮುಲಾಯಂ ಪಾರ್ಟಿ ಘಟಬಂಧನ ಹೇಗಾಯ್ತು? ಚುನಾವಣೆಯಲ್ಲಿ ಏಕೆ ಮಣ್ಣುಮುಕ್ಕಿದರು? ಬದ್ಧವೈರಿಗಳು ಒಂದಾದರೆ, ಜರಾಸಂಧನ ಹೋಳುಗಳು ಸೇರಿದಂತೆ ಆಗುತ್ತದೆಯೇ? ಈಗ ನಾಯ್ಡು + ಕಾಂಗ್ರೆಸ್ಸಿನ ಆಟ, ಪರದಾಟ! ಒಡಿಶಾ, ಬಿಹಾರಗಳಲ್ಲೂ ಲಾಲು ಮಕ್ಕಳು, ನಿತೀಶರನ್ನು ಕೂಡಿ ಸಾಧಿಸಿದ್ದೇನು? ರಾಜಕಾರಣಿಗಳು ಪಾಠ ಕಲಿಯುವುದಿಲ್ಲ. ಈಗ ಕರ್ನಾಟಕದ ಸರದಿ. ‘ವಚನಭ್ರಷ್ಟ ಪರ್ವದ’ ಎರಡನೆಯದೋ, ಮೂರನೆಯದೋ ಅಂಕ! ಕಾಂಗ್ರೆಸ್ಸು, ದಳ ಎಷ್ಟು ದಿನ ಈ ಜೋಡಿ? ಅರಣ್ಯಕ ಪಶುಗಳೂ, ಗ್ರಾಮ್ಯ ಪಶುಗಳೂ ಕೂಡಿದರೆ, ಎಂಥ ಒಕ್ಕೂಟ? ಹುಲಿ ಹೇಳುತ್ತದೆ ನರಿಗೆ ‘ನನ್ನೊಳಗೆ ಬಾ, ಅದೇ ಘಟಬಂಧನ’ ಅಂತ. ಇದು ಈಗ ಬಳ್ಳಾರಿ, ಹಾಸನ, ಮೈಸೂರು ಪ್ರಾಂತ್ಯ ಎಲ್ಲೆಲ್ಲೂ ವಿಸ್ತರಿಸುತ್ತ, ಯಮಳರು ಅಟ್ಟಹಾಸ ಮಾಡಿದ್ದೂ ಮಾಡಿದ್ದೇ! ಕಾಲ ಬರುತ್ತದೆ.

ನನಗೊಂದು ಆಸೆ. ಶಕುನಿ ಮಹಾಭಾರತದಲ್ಲಿ ಚಕ್ರವರ್ತಿಯಾದಂತೆ, ಕಾಲ್ಪನಿಕ ಕತೆ ಬರೆಯಬೇಕು ಅಂತ. ಜೋನಾಥನ್ ಸ್ವಿಫ್ಟ್​ನ ’Gulliver’s Travel’ ಇದ್ದಂತೆ ವ್ಯಂಗ್ಯಾರ್ಥಗಳೊಡನೆ. ಅದು ಆಗದಾಗ, ಹಳೆಯ ಶಕುನಿ, ಕೌರವ ವಂಶವನ್ನೇ ನಾಶಮಾಡಿದ ಎಂದು ಪರಮಕವಿಯ ತುರಂಗಭಾರತ ಹೇಳುತ್ತದೆ. ಅಂಥ ಕತೆ ತೆಲುಗು ಭಾರತದಲ್ಲೂ ಇದೆ. ಈಗ ಕರ್ನಾಟಕದ ಸರದಿ.

ಮೊದಲು ಕತೆ ನಡೆಯಲಿ. ಶಕುನಿ ಚಕ್ರವರ್ತಿಯಾಗಲಿ. ಆಮೇಲೆ ಬರೆಯುತ್ತೇನೆ. ಅಲ್ಲಿಯವರೆಗೆ 2019ರ ಚುನಾವಣೆಯಲ್ಲಿ ಯಾವ ಯಾವ ಘಟಬಂಧನಗಳು ಉರುಳುತ್ತವೋ ನೋಡಬೇಕು. ಒಡೆಯದ ‘ಘಟ’ ಸಂಗೀತವಾದ್ಯವಾಗುತ್ತದೆ. ಒಡೆದರೆ ಬೀದಿಯಲ್ಲಿ ಎಸೆಯುತ್ತಾರೆ. ಇಲ್ಲವೇ ತೂತುಮಾಡಿ ಸ್ಮಶಾನದಲ್ಲಿ ಬಿಸಾಡುತ್ತಾರೆ. ಘಟವೇ? ನೀನೆಲ್ಲಿ ಸಲ್ಲುವೆ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)