ಸತ್ತವರ ಲೆಕ್ಕ ಕೇಳುತ್ತಿದ್ದಾರೆ, ಯಾಕೆ ಕೊಡಬೇಕು ಲೆಕ್ಕ?

ಭಯೋತ್ಪಾದನೆಯ ವಿರುದ್ಧ, ದೇಶದ್ರೋಹಿಗಳ ವಿರುದ್ಧ ಸಂಘಟಿತ ಹೋರಾಟ ಅತ್ಯಗತ್ಯ. ಆದರೆ, ಇದರಲ್ಲೂ ರಾಜಕೀಯ ಮಾಡುವ ನಾಯಕರಿಗೆ ಏನು ಹೇಳಬೇಕು? ನಮ್ಮ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಉಗ್ರಶಿಬಿರಗಳನ್ನು ಧ್ವಂಸ ಮಾಡಿದ ಪರಿಗೆ ಹಲವು ರಾಷ್ಟ್ರಗಳೂ ಬೆರಗಾಗಿವೆ. ಆದರೆ, ನಮ್ಮ ದೇಶದೊಳಗಿನ ಕೆಲ ನಾಯಕರೇ ಪ್ರಶ್ನೆ ಮಾಡುತ್ತಿದ್ದಾರೆ, ಸತ್ತವರ ಲೆಕ್ಕ ಕೇಳುತ್ತಿದ್ದಾರೆ.

ಇವರಿಗೇಕೆ ಲೆಕ್ಕ ಬೇಕು? ಇವರೇನು ದಾಯಾದರೇ? ತರ್ಪಣ ಬಿಡುವವರೇ? ಉತ್ತರಕ್ರಿಯೆ ಮಾಡುವ ದೀಕ್ಷಿತರೇ? ಅಲ್ಲರೀ! ಮಹಾಭಾರತ ಯುದ್ಧದಲ್ಲೇ ಲೆಕ್ಕ ಸಿಗಲಿಲ್ಲ. ಒಟ್ಟು ಸೇರಿದ್ದವರ ಸಂಖ್ಯೆಯಲ್ಲಿ ಅತ್ತ ಕೃತವರ್ಮ, ಅಶ್ವತ್ಥಾಮ, ಕೃಪ ಇವರೇ ಮಾತ್ರ ಉಳಿದವರೆಂದ ಮೇಲೆ, ಸೇರಿದ್ದ ಉಳಿದ 11 ಅಕ್ಷೌಹಿಣೀ ಸೇನೆಯೂ ಸತ್ತುಹೋಯಿತೆಂಬ ಅಂದಾಜು! ಹಿಟ್ಲರ್ ಕೊಂದದ್ದು ಎಷ್ಟು ಜನರನ್ನು? ಅಂದಾಜು ಮಾತ್ರ! ಸ್ಟಾಲಿನ್ನನ Collective Farming ಪ್ರಯೋಗ ಸಂದರ್ಭದಲ್ಲಿ ಸತ್ತವರೆಷ್ಟು? ಯಾವ ಕಮ್ಯುನಿಸ್ಟರೂ ಹೇಳಲಾರರು! ಹೋಗಲಿ, ಇಂದಿರಾರ ತುರ್ತು ಪರಿಸ್ಥಿತಿಯಲ್ಲಿ ಸತ್ತವರೆಷ್ಟು ಜನ? ಕಾಂಗ್ರೆಸ್ಸು ಲೆಕ್ಕ ಕರಾರುವಾಕ್ಕಾಗಿ ಕೊಡುತ್ತದೆಯೇ? 1984ರ ಸಿಕ್ಖರ ನರಮೇಧದಲ್ಲೊ? ಹಾಯ್! ಇವರ ಆಟ ಅಷ್ಟಿಷ್ಟಲ್ಲ. ಈಗ ದಿಗ್ವಿಜಯ ಸಿಂಗರ ಅಪಲಾಪ- ‘ಪುಲ್ವಾಮಾದಲ್ಲಿ ನಡೆದದ್ದು ಸೇನೆಯೊಳಗಣ ಆಕಸ್ಮಿಕ! ಅಲ್ಲಿ ಪಾಕ್ ಕೈವಾಡವೇ ಇರಲಿಲ್ಲ! ಹಾಗೇ Air Surgical Strike-2 ಬರೀ ಕಾಡಿನ ಮೇಲೆ ಬಾಂಬುಗಳು ಬಿದ್ದವು. ಯಾರಾದರೂ ಸತ್ತಿದ್ದರೆ ಲೆಕ್ಕ ಕೊಡಿ’- ಅಂತ. ಸರಿ, ಕಪಿಲ್ ಸಿಬಲ್, ತಿವಾರಿ, ಸಿಂಘ್ವಿ, ಸುರ್ಜೆವಾಲಾ- ಎಲ್ಲರೂ ಹೇಳುತ್ತಿರುವುದು ಒಂದೇ orchestrated ಧ್ವನಿ. ಅಪಸ್ವರಮೇಳ.

ಸ್ವಲ್ಪ ಹಾಸ್ಯ ಮಾಡಬೇಕಾಗಿದೆ. ಕನಕದಾಸರು ‘ಸತ್ತವರಿಗಳಲೇಕೆ?’ ಎಂದರು (‘ಹರಿಭಕ್ತಸಾರ’ದಲ್ಲಿ). ಅಯ್ಯಯ್ಯಪ್ಪ! ಅಳದಿದ್ದರೆ ಕೆಲವರು ಸತ್ತಮೇಲೂ ಕಾಡುತ್ತಾರೆ! ಸರಿಯಾಗಿ ಅಳಲು ಬಾಡಿಗೆಗೋಷ್ಠಿಗಳಿರುವುದೇಕೆ? ಸತ್ತವರು ಮರಳಿ ಬಾರದೆ, ಬಂದು ಕಾಡದೆ, ಗೋರಿಗಳಲ್ಲಿ Doom’s day ದಿನಾ ಎಣಿಸುತ್ತ ಅಲ್ಲೇ ಶಾಂತವಾಗಿರಲಿ ಎಂದು. ‘ಆತ್ಮಕ್ಕೆ ಶಾಂತಿ ಕೋರುವುದು’ ಮರಳುಗಾಡಿನ ಮತಗಳಲ್ಲಿ ಯುಕ್ತ. ಏಕೆ? ಅಲ್ಲಿ ಸತ್ತವರ ಬಗೆಗೆ ಭಯ ಇರುತ್ತಾ, ಎದ್ದು ಬಾರದೇ ಇರಲಿ ಅಂತ ಒಂದು ಅಂದಾಜು!

ಹಿಂದೂಗಳಲ್ಲಿ ಅಳುವುದು ದುಃಖ ತಾಳದೆ. ಇಲ್ಲಿ ಅಳಲು ಅದಕ್ಕೆobject ಹೆಣವೇ ಎದುರು ಇರಬೇಕೆಂಬುದಿಲ್ಲ. ನೆನಪಾದಾಗಲೆಲ್ಲ ಅಳಬಹುದು. ದಿಗ್ವಿಜಯರು ಏಕೆ ಅಳಬೇಕು? ಹೇಳಿ. ಸೋನಿಯಾ, ರಾಹುಲಾದಿಗಳಿಗೇ ಇಲ್ಲದ ಅಳು ಇವರಿಗೇಕೆ ಬೇಕು? ಪ್ರಶ್ನೆ. ಇನ್ನೊಂದು ಪ್ರಶ್ನೆ, ಒಬ್ಬರು ಸತ್ತಮೇಲೆಯೇ ಅಳಬೇಕೋ? ಮೊದಲೋ, ಬದುಕಿರುವಾಗಲೇ ಅತ್ತುಬಿಡುವುದು ವಾಸಿಯೇ? ಮಹಾಭಾರತಕ್ಕೇ ಮತ್ತೆ ಬನ್ನಿ. ಯುದ್ಧಭೂಮಿಯಲ್ಲಿ, ಯುದ್ಧಾರಂಭಕ್ಕೂ ಮೊದಲೇ, ತನ್ನತ್ತ ಸೇರಿದ್ದವರನ್ನು ಕಂಡು ದುರ್ಯೋಧನ ಅಳುತ್ತಾನೆ- ‘ಇವರೆಲ್ಲ ತನಗಾಗಿ ಸತ್ತಾಯ್ತು’ ಎಂಬುದು ಅವನ ಆಗಣ ಲೆಕ್ಕ. ಪ್ರಮಾಣ ಬೇಕೇ? ‘ಮದರ್ಥೇ ತ್ಯಕ್ತ ಜೀವಿತಾಃ’ ಎನ್ನುತ್ತಾನೆ, ನೋಡಿ. ‘ತ್ಯಕ್ತಜೀವರು’ ಎಂದರೆ ಪ್ರಾಣಬಿಟ್ಟವರು. ಅಲ್ಲವೇ ದಿಗ್ವಿಜಯರೇ? ನೀವು ಹಿಂದೂ ಅಲ್ಲ, ಬಿಡಿ. ಅಲ್ಲೇ ಇನ್ನೊಂದು ಪ್ರಮಾಣ ನೋಡಿ. ಭೀಷ್ಮಾದಿಗಳನ್ನು ಕಂಡು ಅರ್ಜುನ ಯುದ್ಧಾರಂಭದಲ್ಲೇ ಅಳುತ್ತಾನೆ. ‘ಅಶೋಚ್ಯಾನ್ ಅನ್ವಶೋಚಸ್ತಿ ್ವ’ ಎಂಬ ಶ್ರೀಕೃಷ್ಣನ ಮೂದಲಿಕೆ ಗಮನಿಸಿ. ‘ಅವರಿನ್ನೂ ಸತ್ತೇ ಇಲ್ಲ, ಬದುಕಿರುವವರಿಗೇಕೆ ಅಳುವೇ?’ ಎಂಬುದು ಕೃಷ್ಣನ ಪ್ರಶ್ನೆ ಹೌದೆ? ಅರ್ಜುನನೂ ದುರ್ಯೋಧನನೂ ಇಲ್ಲಿ ಒಂದೇ ಲೆಕ್ಕದಲ್ಲಿ ಸೇರುತ್ತಾರೆ. ಭಾವಗಳು ಬೇರೆಬೇರೆ. ‘ಇವರು ತನ್ನತ್ತ ಮನಸ್ಸಿಟ್ಟು ಒಲವಿಂದ ಯುದ್ಧ ಮಾಡದೆ, ಸತ್ತೇ ಇದ್ದಾರೆ’ ಎಂಬುದು ದುರ್ಯೋಧನನ ಭಾವ. ‘ಇವರು ತನ್ನಿಂದ ಸಾಯುವುದೇ ಸಿದ್ಧ ಅಂತ ನಿಂತಿದ್ದಾರೆ’ ಎಂಬುದು ಅರ್ಜುನನದ್ದು. ಇದರ ಮೇಲೆ ಶ್ರೀಕೃಷ್ಣನದೂ ಇಂಥದೇ ಒಂದು ಮಾತು ಅಲ್ಲೇ ಇದೆ- ‘ಮಯೈ ವೈ ತೇ ನಿಹತಾಃ ಪೂರ್ವಮೇವ, ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್’ ಎಂಬುದು. ‘ನಾನು ಇವರನ್ನು ಕೊಂದಾಗಿದೆ. ನಿನ್ನೆದುರು ಇರುವವರು ಬರೀ ಹೆಣಗಳು. ಎಡಗೈಯಿಂದ ಬಾಣಬಿಟ್ಟರೂ ಹೆಣಗಳು ಉರುಳಿಬೀಳುತ್ತವೆ. ನೀನು ಅದಕ್ಕೆ ನೆಪವಾಗು, ಸಾಕು’ ಎಂಬುದು ಶ್ರೀಕೃಷ್ಣಭಾವ.

ಕಾಂಗ್ರೆಸ್ಸಿಗರ ಬೈಬಲ್ಲಿನಲ್ಲಿ ಇದೆಲ್ಲ ಬರುವುದಿಲ್ಲ. ಜಿಹಾದಿಗಳೂ ತಿಳಿಯಲಾರದ ರಹಸ್ಯ ಇದು. ಯಾವುದು? ‘ದ್ವೇಷದಲ್ಲಿ ಹುಟ್ಟಿದ್ದು ದ್ವೇಷಾಗ್ನಿಯಲ್ಲೇ ಸಾಯಬೇಕು’ ಎಂಬುದು. ಇದು ಪಾಕ್​ನ ‘ಜನ್ಮರಹಸ್ಯ’. ಜಿಹಾದಿಗಳೆಲ್ಲರ ಭವಿಷ್ಯ, ಈ ಬಗೆಯ ಉಗ್ರಮರಣಗಳಲ್ಲೇ ಇರುತ್ತದೆ. ಅಲ್ಲಿ ಲೆಕ್ಕ ತೆಗೆದುಕೊಂಡು ಏನು ಮಾಡುತ್ತೀರಿ? ಹೇಳಲೇ? ದಿನದಿನದ ಮಹಾಭಾರತ ಯುದ್ಧದಲ್ಲಿ ಧೃತರಾಷ್ಟ್ರ ಸಂಜಯನನ್ನು ಕೇಳುತ್ತಾನೆ- ‘ಇಂದು ನನ್ನ ಮಕ್ಕಳು ಎಷ್ಟು ಜನ ಸತ್ತರು?’ ಅಂತ. ಹಾಗೆ ಲೆಕ್ಕ ಕೇಳುವ, ಸ್ಕೋರ್ ವಿಚಾರಿಸುವವನಿಗೆ ಇದು ಆಟವೇ? ಮೋಜೇ? ವಿಷಾದವೇ? ಅಳಬೇಕೋ? ನಗಬೇಕೋ? ದಿಗ್ವಿಜಯರು ಹೇಳುತ್ತಾರೆಯೇ? ನೂರೂ ಜನ ಕೌರವರು ಪರಿಪರಿಯಲ್ಲಿ ಸತ್ತರು. ವಿವರ ಏಕೆ ಬೇಕು? ಬೇಕಾದರೆ ನನ್ನ ‘ಆ ಹದಿನೆಂಟು ದಿನಗಳು’ ಹಾಗೂ “Those Eighteen Days’ ಓದಿರಿ. ಭಾರತದ ಸಂಕಟ, 70 ವರ್ಷದ ಒಡಲಾಳದ ಸಂಕಟ, ಒಂದು ಲೆಕ್ಕದಲ್ಲಿ ತೀರುವುದಿಲ್ಲ. ಮೋದಿ ಹೇಳಿದಂತೆ, ಪಾಕ್ ಪೂರ್ತಾ ನಾಶವಾದಾಗ ಮಾತ್ರ ಲೆಕ್ಕ ತೀರುತ್ತದೆ. ತೀರಿದಾಗ ಜಿನ್ನಾ ಸಾಹೇಬರು ಇರುವುದಿಲ್ಲ, ಗಾಂಧಿ-ನೆಹರು ಇರುವುದಿಲ್ಲ, ಹುರಿಯೆತ್ ಇರುವುದಿಲ್ಲ, ಎನ್​ಸಿ, ಪಿಡಿಪಿ ನಾಯಕರು ಇರುವುದಿಲ್ಲ. ಹೇಳಲೇ? ಭಾರತದೊಳಗಿನ ಪಾಕ್ ಅನುಯಾಯಿಗಳದ್ದು ಮಂದಿನ ಸರದಿ. ಮುಂದಿನ ಜನ್ಮದಲ್ಲಿ ಇಸ್ಲಾಮೀಯರಾಗಬಯಸುವ ಹಿಂದೂ ನಾಯಕರು ಎಲ್ಲಿ ಹೋಗುತ್ತಾರೋ? ಪಾಕ್ ಇರುವುದೇ ಇಲ್ಲವೆಂದಾದಾಗ, ಇಲ್ಲಿ ಬೇರೆ ಪಾಕ್​ಗಳು ನಿರ್ವಣವಾಗಬೇಕೆಂಬ ಬಯಕೆಯ ‘ತುಕಡೇ ತುಕಡೇ’ ನಾಯಕರು ಇರಲಾರರು ಎಂಬುದೂ ಒಂದು ಲೆಕ್ಕ! ಮಾರಾಯ್ರೇ! ಬದುಕಿರಬೇಕಾದವರ ಲೆಕ್ಕಹಾಕಿರಿ! ‘ಯಾರಿಗಾಗಿ ಬದುಕು?’ ಎಂಬುದು ಧನಾತ್ಮಕ ಚಿಂತೆ.”Live for future generations, not for the dead past villains’ ಎಂಬುದು ವಿವೇಕವಾಣಿ. ರಾಮಾಯಣದಲ್ಲಿ ದಿನದಿನದ ಯುದ್ಧದಲ್ಲಿ ಸತ್ತ ರಾಕ್ಷಸರ ಹೆಣಗಳನ್ನು ರಾವಣನ ಕಡೆಯವರು ಸಮುದ್ರಕ್ಕೆ ಎಸೆಯುತ್ತಿದ್ದರೆಂದು ರಾಮಾಯಣ ಹೇಳುತ್ತದೆ. ವಾಲ್ಮೀಕಿ ಲೆಕ್ಕ ಕೊಡುವುದಿಲ್ಲ. ಏಕೆ? ರಾವಣನಿಗೆ ಅದು ಬೇಕಿರಲಿಲ್ಲ. ಈಗ ಪಾಕ್ ಮಂತ್ರಿಗಳೂ, ರಾಯಿಟರ್ಸ್ ವಾರ್ತಾಸಂಸ್ಥೆ, ಇಟಲಿಯ ಪತ್ರಕರ್ತೆ- ಇನ್ನೂ ಇರಾನ್, ರಷ್ಯಾ ಕಡೆಯವರೂ ಸಾಕ್ಷ್ಯ ಕೊಡುತ್ತಾ ಇದ್ದಾರೆ. ನೀವು ಧೃತರಾಷ್ಟ್ರರಾದರೆ ಸಂಜಯನನ್ನು ಲೆಕ್ಕ ಕೇಳಿ. ಅದು ಬಿಟ್ಟು, ಭೀಮನನ್ನು ‘ಎಷ್ಟು ಜನರನ್ನು ಕೊಂದೆ?’ ಎನ್ನುವುದುSurrender ಆದಂತೆ. ಕೆಲವು ಲೆಕ್ಕಗಳು ಮುಗಿಯುವುದೇ ಇಲ್ಲ. ನನ್ನ ಅಜ್ಜಿ ಹೇಳುತ್ತಿದ್ದ ಕತೆ. ಒಂದು ಕುಟುಂಬದಲ್ಲಿ ಸತ್ತವನೊಬ್ಬನನ್ನು ಸುಟ್ಟು ಬರುವಷ್ಟರಲ್ಲಿ ಇನ್ನೊಂದು ಹೆಣ ಬಿದ್ದಿರುತ್ತಿತ್ತಂತೆ. ‘ಅಕ್ಷಯ’, ಕತೆಯ ಹೆಸರು. ಅದರ ನೆನಪು ಈ ಪಾಕ್​ನ ಯುದ್ಧ ಸಂದರ್ಭದಲ್ಲಾಯಿತು. ಈಗ ಹೇಳಿ, ಲೆಕ್ಕ ಬೇಕೆ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

One Reply to “ಸತ್ತವರ ಲೆಕ್ಕ ಕೇಳುತ್ತಿದ್ದಾರೆ, ಯಾಕೆ ಕೊಡಬೇಕು ಲೆಕ್ಕ?”

  1. ನಮಗೆ ಲೆಕ್ಕ ಬೇಕಿಲ್ಲ. ಆದರೆ ಸರಕಾರವೇ ೨೦೦ – ೩೦೦ ಉಗ್ರವಾದಿಗಳು ಸತ್ತರು ಎಂದು ಹೇಳಿತು. ಪಾಕಿಸ್ತಾನ ಯಾರು ಸಾಯಲಿಲ್ಲ ಎಂದು ಹೇಳಿತು. ಅದನ್ನು ನಾವು ನಂಬುವುದು ಬೇಕಿಲ್ಲ. ಆದರೆ ವಿದೇಶ ಸುದ್ದಿವಾಹಿನಿಗಳು ಅದರ ಬಗ್ಗೆ ಏನು ಬರೆಯಲಿಲ್ಲ. ಮುಖ್ಯವಾಗಿ ಬಿ.ಬಿ.ಸಿ.

    ಬಿ.ಜೆ.ಪಿ ಅಥವಾ ಕಾಂಗ್ರೆಸ್ ಇದನ್ನು ಚುನಾವಣೆಗೆ ಉಪಯೋಗಿಸುವುದು ಖಂಡಿತ ಸರಿಯಲ್ಲ

    ನಮ್ಮ ಪ್ರಧಾನಿಗಳು ಚೀನಾಗೆ ಹೋಗಿ ಬಂದರು. ಆದರೂ ಸಹ ಚೀನಾ ಮಸೂದ್ ಉಗ್ರವಾದಿ ಎಂದು ಹೇಳಲು ನಿರಾಕರಿಸಿತು.

Comments are closed.