ವಾಸ್ತವ ಮರೆಮಾಚುವ ಯತ್ನಗಳಿಗೆ ಕೊನೆ ಇಲ್ಲವೇ?

ನಾನು ಕುರುಕ್ಷೇತ್ರದಲ್ಲಿ 15 ದಿನ ಇದ್ದು ಬಂದಿದ್ದೇನೆ. ವೈಶಂಪಾಯನ ಕೊಳ ಅಲ್ಲೇ ಇದೆ. ಬ್ರಹ್ಮಸರೋವರ ಇದೆ. ಭೂರಿ ಶ್ರವಸ್ಸು, ದುರ್ಯೋಧನ, ಕರ್ಣ, ಶಕುನಿ, ಸೈಂದವ, ಅಭಿಮನ್ಯುಗಳು ಸತ್ತ ಜಾಗವಿದೆ. ಗೀತೋಪದೇಶ ಸ್ಥಳವಿದೆ. ಯಕ್ಷಪ್ರಶ್ನೆ ನಡೆದ ಸರೋವರವೂ ಇದೆ. ಕೌತ್ಸುಕವನ, ದ್ವೈಪವನಗಳಿವೆ. ಸತ್ಯ ಎದುರಿಗೆ ಇದ್ದರೂ ನೋಡುವ ಕಣ್ಣು ಬೇಕು.

ಶ್ರೀರಾಮಾಯಣದ ಅಯೋಧ್ಯಾಕಾಂಡದಲ್ಲಿ ಭರತ, ತನ್ನ ತಾಯಿಯನ್ನು ಧಿಕ್ಕರಿಸುವಾಗ ಈ ಮಾತಿನ ಸಂಸ್ಕೃತ ರೂಪದ ಪ್ರಥಮಾವತಾರ ಕಾಣುತ್ತದೆ-‘ಕಥಂ ದಶರಥಾತ್ ಜಾತಃ ಭವೇತ್ ರಾಜ್ಯಾವ ಹಾರಕಃ|’ ‘ದಶರಥನಿಗೆ ಮಗನಾಗಿ ಹುಟ್ಟಿದವನು ಹೇಗೆ ರಾಜ್ಯಗಳ್ಳ, ರಾಜ್ಯಾಪಹಾರಕ, ರಾಜ್ಯವನ್ನು ಕಿತ್ತುಕೊಂಡವನು ಆಗಿಯಾನು?’ ಎಂಬುದು ಮಹಾತ್ಮನೊಬ್ಬನ, ತ್ಯಾಗಿಯ ಅಂದಿನ ಮಾತು. ಅಧಿಕಾರಕ್ಕಾಗಿ ತಾನು ತಾಯಿಯೊಡನೆ ಏನಾದರೂ ಮಸಲತ್ತು ಮಾಡಿ, ಬೆನ್ನ ಹಿಂದೆ ಚೂರಿ ಹಾಕಿದ್ದರೆ ತನಗೆ ಬರಬಾರದ ಶಾಪಗಳೆಲ್ಲ ತಟ್ಟಲಿ. ಪಾಪಗಳೆಲ್ಲ ಮುತ್ತಿಕೊಳ್ಳಲಿ ಎಂದು ಶಪಥ ಮಾಡುವ ಒಂದು ದೀರ್ಘ ಅಧ್ಯಾಯವೇ ಅಲ್ಲಿ ಬರುತ್ತದೆ.

ದಿನಾ ಓದುವಾಗಲೂ ನನ್ನಂಥವರು ಕಣ್ಣೀರು ಹಾಕುತ್ತೇವೆ. ಅದು ಸಂಸ್ಕೃತಿಯತ್ತ ನಮ್ಮನ್ನು ಎತ್ತುವ ಮಹಾ ಧರ್ಮಗ್ರಂಥ ವಾಲ್ಮೀಕಿರಾಮಾಯಣ. ಅಧಃಪತನದತ್ತ ನೂಕಲ್ಪಡಲು ಮಹಾಭಾರತದ ಶಕುನಿ ಕರ್ಣರು ಸದಾ ಕಾಲದಲ್ಲೂ, ಈಗಲೂ ಇರುತ್ತಾರೆ. ನಮ್ಮ ನಾಡಿನ ಈ ಧರ್ಮಗ್ರಂಥಗಳು ಬರೀ ಕಾವ್ಯಗಳಲ್ಲ. ಕಟ್ಟುಕಥೆಗಳಲ್ಲ. ‘ಕುರುಕ್ಷೇತ್ರದಲ್ಲೆಲ್ಲ ಗೈಡು ಇಟ್ಟುಕೊಂಡು ಹುಡುಕಿ ಬಂದೆ. ಕಥೆ, ಕಥೆಯಾಗಿ ನಡೆದ ಯಾವ ಕುರುಹೂ ಅಲ್ಲಿ ಕಾಣಲಿಲ್ಲ’ ಎಂದೊಬ್ಬ ಸಾಹಿತಿ ಇತ್ತೀಚೆಗೆ ಅಪ್ಪಣೆ ಕೊಟ್ಟರು. ಹಿಂದೆ ಒಬ್ಬ ಖ್ಯಾತಿಯ ಹಂಬಲದ ಕವಿ, ಬೇಂದ್ರೆಯವರ ಕವನಗಳನ್ನು ಅರ್ಥಮಾಡಿಕೊಳ್ಳಲು ಆಗದೆ, ಧಾರವಾಡದ ಲೈನ್ ಬಜಾರಿನಲ್ಲೆಲ್ಲ ಅರ್ಥೈಕೆದಾರರಿಗಾಗಿ ಅಲೆದಾಡಿದರೆಂದು; ತಾವೇ ಆಮೇಲೆ ಬರೆದು, ಸಾದರಪಡಿಸಿದ, ಆಮೇಲೆ ಮುದ್ರಿತವಾದ ನಿಬಂಧದಲ್ಲಿ ಬರೆದುಕೊಂಡಿದ್ದಾರೆ!

ನಾನು ‘ಬೇಂದ್ರೆಯವರ ಕಾವ್ಯದಲ್ಲಿ ಅಧ್ಯಾತ್ಮದ ನೆಲೆ ಮತ್ತು ಆರ್ಷದೃಷ್ಟಿ’ ಎಂಬ ನನ್ನ ಗ್ರಂಥದಲ್ಲಿ ಈ ಬಯಲಾಡಂಬರವನ್ನು ವಿಶದವಾಗಿ ಬಹಿರಂಗ ಪಡಿಸಿದ್ದೇನೆ. ಅಲ್ಲರಿ, ಮಹಾಭಾರತ ಘಟನೆಗಳ ಭೌಗೋಳಿಕ, ಐತಿಹಾಸಿಕ, ಖಗೋಳಾತ್ಮಕ ಪ್ರತ್ಯಕ್ಷ ಸಾಕ್ಷ್ಯಗಳು ಆ ಮಹಾಗ್ರಂಥದಲ್ಲೇ ಇಂದಿಗೂ ಇವೆ. ‘ಅರುಂಧತೀ ನಕ್ಷತ್ರವು ವಸಿಷ್ಠರಿಗಿಂತ ಮುನ್ನಡೆದ Astronomical ಅಪೂರ್ವ ಘಟನೆಯ ದಾಖಲೆಯೊಂದರ ಆಧಾರದಿಂದ ನನ್ನ ಮಿತ್ರ ನಿಲೇಶ್ ನೀಲಕಂಠ ಓಕ್ ಎಂಬ ಸಂಶೋಧಕರು ಮಹಾಭಾರತ ಕಾಲ ನಿರ್ಣಯಮಾಡಿ, ಈ ಹಿಂದಣ ಎಲ್ಲ ಸಂಶೋಧಕರ ನಿರ್ಣಯಗಳಿಗೂ ಸಿಡಿಲೆರಗಿಸಿದ್ದಾರೆ. (ನೋಡಿ:Date of Mahabharatha War:  ಪ್ರಕಾಶಕರು: ಋತ್ವಿಕ್, ಸುಬ್ಬು ಪ್ರಕಾಶನ, ಹುಬ್ಬಳ್ಳಿ) ಇತ್ತ ಸಂಸ್ಕೃತವೂ ಬಾರದೆ, ಅತ್ತ ಮೂಲಗ್ರಂಥವನ್ನೂ ಓದದೆ ಗೈಡನ್ನು ನಂಬಿ ಕುರುಕ್ಷೇತ್ರವನ್ನೆಲ್ಲ ಅಲೆದಾಡಿದರೆ, ಏನು ತಿಳಿಯುತ್ತದೆ? ಗೈಡು ಸಾಕ್ಷಿಯೋ? ವ್ಯಾಸರೋ? ನೈಜ ಸಂಶೋಧಕರೋ? ನಾನೂ ಆ ಕುರುಕ್ಷೇತ್ರದಲ್ಲಿ 15 ದಿನ ಇದ್ದು ಬಂದಿದ್ದೇನೆ. ವೈಶಂಪಾಯನ ಕೊಳ ಅಲ್ಲೇ ಇದೆ. ಬ್ರಹ್ಮಸರೋವರ ಇದೆ. ಭೂರಿ ಶ್ರವಸ್ಸು, ದುರ್ಯೋಧನ, ಕರ್ಣ, ಶಕುನಿ, ಸೈಂದವ, ಅಭಿಮನ್ಯುಗಳು ಸತ್ತ ಜಾಗವಿದೆ. ಗೀತೋಪದೇಶ ಸ್ಥಳವಿದೆ. ಯಕ್ಷಪ್ರಶ್ನೆ ನಡೆದ ಸರೋವರ ಇದೆ. ಕೌತ್ಸುಕವನ, ದ್ವೈಪವನಗಳಿವೆ.

ರಾಮಾಯಣ ಇತಿಹಾಸ, ಮಹಾಭಾರತ ಇತಿಹಾಸಗಳಿಗೆ ದಶಕಗಳ ಕಾಲದ ಮುಡಿಪಿಟ್ಟು ಅಧ್ಯಯನ ಮಾಡಿ ಬರೆದ ನನ್ನ ಹತ್ತಾರು ಗ್ರಂಥಗಳೇ ಇವೆ. ಪ್ರವಚನದ ನೂರಾರು ಸಿ.ಡಿ.ಗಳಿವೆ. ರಾಮಾಯಣದ ಉನ್ನತಿಗೇರದೆ, ರಾವಣನ ನೆಲೆಯಲ್ಲಿರುತ್ತ ಅಲ್ಲಿ ಯಾರು ಎಷ್ಟೇ ಪ್ರತಿಭಾವಂತರಿದ್ದೂ ಕಾಣುವುದೇನು? ಕಣ್ಣಿದ್ದರೂ ಬೆಳಕು ಬೇಕು. ಬೆಳಕಿದ್ದರೂ ಕಣ್ಣೂ ಬೇಕು. ಅದನ್ನು ಕುರಿತು ಶ್ರೀ ಅರವಿಂದರು ತಮ್ಮ “Vyasa and Valmiki’ ಎಂಬ ಗ್ರಂಥದಲ್ಲಿ ವಿವರಿಸಿ ಬರೆದಿದ್ದಾರೆ. ಈ ವಿವರಣೆ, ಈ ಪ್ರಸ್ತಾವಗಳೆಲ್ಲ ‘ಅಧಿಕಾರಗಳ್ಳರು’ ಎಂಬ ಅಪಖ್ಯಾತಿಯ ವ್ಯಾಖ್ಯಾನದ ಹಿನ್ನೆಲೆಗಾಗಿ ಬರೆದದ್ದು. ‘ಕಳ್ಳರು’ ಎಂದರೆ ಇನ್ನೂ ಬೈಗುಳವಾಗಿದ್ದ ಕಾಲಗಳು ಮುಗಿದಿವೆ. ಈಗ ಎಲ್ಲ ‘ರಾಜಾರೋಷವಾಗಿ’ ಕಳ್ಳತನ ನಡೆದು, ‘ಕಳ್ಳರು’ ಎಂದರೆ ಶೂರರು, ಧೀರರು, ವೀರರು, ಸಾಹಸಿಗಳು ಎಂದು ಹೊಗಳಿಸಿಕೊಳ್ಳುವ ಒಂದು ವಿಷಮಕಾಲ. ಏನನ್ನು ಕದಿಯಬಹುದು? ನೀರುಗಳ್ಳರು, ಕಾಡುಗಳ್ಳರು, ಸ್ತ್ರೀಗಳ್ಳರು, ಧನಗಳ್ಳರು, ಕುರಿಗಳ್ಳರು, ದನಗಳ್ಳರು, ದಂತಗಳ್ಳರು, ಮಕ್ಕಳಗಳ್ಳರು, ‘ಮಾನಮರ್ಯಾದೆಗಳ್ಳರು ಎಂದಲ್ಲ ಕರೆಯುವ ಬಗೆಗಳನ್ನು ನೆನೆಸಿ, ಗಮನಿಸಿ.

ವಿರಾಟಪರ್ವದ ‘ಗೋಗ್ರಹಣ’= ದನಗಳ್ಳತನದ ನಿದರ್ಶನ. ಸಭಾಪರ್ವದ ಸ್ತ್ರೀಮಾನಹರಣ, ದ್ರೌಪದೀ ವಸ್ತ್ರಾಪಹಾರ ಯತ್ನ, ಮಾನಗಳ್ಳತನ, ರಾವಣ ಮಾಡಿದ ಸೀತಾಪರಹಣ=ಸ್ತ್ರೀಗಳ್ಳತನ, ಹಿರಣ್ಯಾಕ್ಷನ ಭೂದಾಹ=ಭೂಗಳ್ಳತನ, ಈಸ್ಟ್ ಇಂಡಿಯಾ ಕಂಪನಿಯ ರಾಷ್ಟ್ರಗಳ್ಳತನ, ವಸಾಹತುಶಾಹಿಯ ವಾಸ್ಕೋಡಗಾಮಾ, ಡ್ಯೂಪ್ಲೆ ಇಂಥವರ ಜನಾಂಗೀಯ ಗಳ್ಳತನ= ಹಾಗೂ Seafarest ಎಂಬ ಕಡಲ್ಗಳ್ಳತನ, ಕೊಲಂಬಸನ ರಾಷ್ಟ್ರಚಾರ್ಯ, ಮತಾಂತರ ಮೂಲಕ ಜನಾಂಗಗಳ್ಳತನ- ಇಂಥವೆಲ್ಲ ಇತಿಹಾಸದಲ್ಲಿ ತೆರೆದುಕೊಳ್ಳುವ ಘೋರ ಕಳ್ಳತನ ರೀತಿಗಳು.

ಭಾರತ ಸಂದರ್ಭದಲ್ಲೂ ಇವನ್ನು ಮೀರಿಸಿ, ನಾಚಿಸುವ ಅನೇಕ ರೀತಿಯ ಕುಖ್ಯಾತಗಳ್ಳರ ನಿದರ್ಶನಗಳಿವೆ. ಉದ್ಯೋಗ ಪರ್ವದಲ್ಲಿ ಶ್ರೀಕೃಷ್ಣ, ಸಂಜಯಯಾನ ಪರ್ವದಲ್ಲಿ ಎರಡು ಬಗೆಯ ರಾಜಕೀಯ ಕಳ್ಳರನ್ನು ಹೆಸರಿಸುತ್ತಾನೆ. ‘ಪ್ರತ್ಯಕ್ಷ ಹರರು’, ‘ಪರೋಕ್ಷಹರರು’ ಎಂದು. ಕಣ್ಣೆದುರೇ ಕದಿಯುವವನು ಮೊದಲವನು. ಬೆನ್ನಹಿಂದೆ ಕದಿಯುವವನು ಎರಡನೆಯವನು. ರೀತಿಗಳು ಬೇರೆ. ಯುಧಿಷ್ಠಿರನ ಸರ್ವಸ್ವವನ್ನು ಅವನೆದುರೇ, ಅವನ ಕೈಯ್ಯಿಂದಲೇ ಕದ್ದ ಶಕುನಿ, ಜೂಜಿನಲ್ಲಿ ಧರ್ಮ, ಸೋಗಿನಲ್ಲಿ ಅಪಹರಿಸಿದ್ದು ಪ್ರತ್ಯಕ್ಷಹರ. ಸಮಾನಾಂತರ ಪ್ರಕರಣದಲ್ಲಿ ಭಾರತ ಪ್ರಥಮ ಪ್ರಧಾನಿ ಪಟ್ಟವನ್ನು ಸರ್ದಾರ್ ಪಟೇಲರಿಂದ ಗಾಂಧಿ ಸಾಕ್ಷಿಯಲ್ಲಿ ಅಪಹರಿಸಿದ ಜವಾಹರ ಲಾಲ್ ನೆಹ್ರೂರ ರೀತಿ ಇಂಥದೇ ಹೌದು. ಸುಭಾಷ್, ಸಾವರ್ಕರ್, ಶ್ಯಾಂಪ್ರಸಾದ್, ಅಂಬೇಡ್ಕರ್, ಜಯಪ್ರಕಾಶರನ್ನು ಉಪಯಾಂತರಗಳಲ್ಲಿ ಬದಿಗಿರಿಸಿ ಅಧಿಕಾರಗಳ್ಳತನ ಮಾಡಿದ್ದು ಪರೋಕ್ಷ. ಈಗ ಎಲ್ಲ ಬಟಾಬಯಲು.

ಕರ್ನಾಟಕದ ನಾಟಕೀಯ ರಾಜಕೀಯ ಪ್ರಸಂಗಗಳನ್ನು ನೋಡಿ. ‘ವಚನ ಭ್ರಷ್ಟಾಪರ್ವ’ ಇಲ್ಲಾದದ್ದು, ಮಹಾಭಾರತ ಕಥೆಯಲ್ಲೂ ಇಲ್ಲ! 20-20 ಪರ್ವದಲ್ಲಿ ನಂಬಿಸಿ, ಮೋಸಮಾಡಿ ಒಂದು ಕುಮಾರಪರ್ವ ಆಯಿತಲ್ಲ? ಇದು ಪ್ರತ್ಯಕ್ಷಹರವೋ ಪರೋಕ್ಷಹರವೋ? ‘ಭಾಜಪದೊಂದಿಗೆ ಕುಮಾರರ ಸಖ್ಯ ನನ್ನ ಜೀವನದಲ್ಲೇ ಒಂದು ಕರಾಳ ದಿನ’ ಎಂದೊಬ್ಬರು ದುಃಖಿಸಿದರು! ಅದು ವರದಿ, ಕಥೆ, ಘಟನೆ. ಆಮೇಲೆ ಈ ಸೂತ್ರಧಾರರು ಚಾಳಿ ಬಿಡದೆ, ಮುಂದೆ ಭಾಜಪ ಅಧಿಕಾರಕ್ಕೆ ಬಂದ ಮೇಲೂ, ಭಾಜಪ ಮುಖ್ಯಮಂತ್ರಿಗೆ ಚುಟುಕು ಮುಳ್ಳಾಡಿಸುತ್ತ ದಿನಾ ಇಲ್ಲಸಲ್ಲದ ಆರೋಪ ಮಾಡುತ್ತ ಆಡಿದ ಮಾತು- ‘ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟಿ ಬರುತ್ತದೆ’ ಎಂದು.

ಈ ತರ್ಕದಂತೆ ಎಲ್ಲ ಪ್ರಾಣಿಗಳ ಹೊಟ್ಟೆಗಳಲ್ಲೂ ಅವೇ ಅವೇ ಜಾತಿ, ಗುಣ, ಲಕ್ಷಣ, ಸ್ವಭಾವಗಳುಳ್ಳ ‘ಮರಿ’ಗಳೇ ಹುಟ್ಟಿ ಬರುತ್ತವೆ. ಕಾಡಸಿಂಹ ಬೇರೆ, ಊರಸಿಂಹ ಬೇರೆ. ಕಾಡುಬೆಕ್ಕು ಬೇರೆ, ಊರಬೆಕ್ಕು ಬೇರೆ. ಕಾಡಾನೆ ಬೇರೆ, ನೀರಾನೆ ಬೇರೆ. ಹೀಗೆ ಇದು ಕಾಲನೆಟ್ಟಿಗಾಗಿರುವಾಗಿನ ಸಂಭವಗಳು. ಇದೇ ಮಹಾಭಾರತದಲ್ಲಿ ಆಪತ್ತು ಬರುತ್ತ ಕಲಿಗಾಲ ಬರುತ್ತ ಏನಾಗುತ್ತದೆ ಎಂಬುದನ್ನು ವ್ಯಾಸರು ಬರೆದು, ‘ಖರಾ ಗೋಷು ಪ್ರಜಾಯಂತೇ’ ಎಂದೂ ವರ್ಣಿಸಿದ್ದಾರೆ. ಕಲಿ ಲಕ್ಷಣದ ಮೌನಿಲ ಪರ್ವದಲ್ಲೂ, ವಿಷ್ಣು ಪುರಾಣದಲ್ಲೂ ಇಂಥ ಅನೇಕ ವೈಪರೀತ್ಯಗಳ ವರ್ಣನೆಗಳಿರುತ್ತ ಇವು ‘ಜಾತ್ಯತೀತ’ ಸೃಷ್ಟಿಯ ಉತ್ತಮೋತ್ತಮ ನಮೂನೆಗಳು ಎನ್ನಲಡ್ಡಿಯಿಲ್ಲ. ಜನ ನೋಡುತ್ತಿದ್ದಾರೆಯಪ್ಪ. ಕಳೆದ ವಿಧಾನಸಭೆ ಚುನಾವಣೆ ನೆನಪಿಸಿಕೊಳ್ಳಿ. ಸೋತು ಸುಣ್ಣವಾದ ಎರಡು ಹತಾಶ ಪಕ್ಷಗಳು, ಅಧಿಕ ಬಲಪಡೆದ ಒಂದು ಜನಾದೇಶ ಪಕ್ಷಕ್ಕೆ ಅಧಿಕಾರ ದಕ್ಕದಂತೆ ತಡೆದಿದ್ದು ಎಂಥ ರಾಜ್ಯಗಳ್ಳತನ? ಯಾವ ಮಾದರಿಯ ಅಧಿಕಾರಗಳ್ಳತನ? ಅಭಿಪ್ರಾಯಗಳ್ಳತನಕ್ಕೆ ಹೊಸ ಹೆಸರು ಬಂತು. Lobbying ಅಂತ. ಅದಕ್ಕೆ ಪಶ್ಚಿಮದಲ್ಲಿ Cambridge analytica ಹೆಸರಿನ ಸಂಸ್ಥೆಯೇ ಇದೆ.

ಕರ್ನಾಟಕದಲ್ಲಿ ಒಬ್ಬರು ಕೋರ್ಟಿಗೂ, ರಾಜ್ಯಪಾಲರಿಗೂ ಮನ್ನಣೆ ನೀಡದೇ ‘ಧರ್ಮಪರಿಪಾಲನೆ’ಯ ನಾಟಕ ಮಾಡಿದ್ದನ್ನು ಏನೆಂದು ಕರೆಯಬೇಕೋ? ‘ಸಭಾಗಳ್ಳತನ’ ಎಂದರೆ ಸರಿಯಾಗಲಾರದೇ? ಸ್ಥಾನಗಳ್ಳತನ? ಹೌದು. ಯಾರು ಎಲ್ಲಿರಬಾರದೋ ಅಲ್ಲಿದ್ದರೆ ಈ ಪಟ್ಟ ಸಾಧ್ಯವೇ? ಒಬ್ಬ ವಜ್ರಪಟೀ ವ್ಯಾಪಾರಿ, ಲಕ್ಷ ಲಕ್ಷ ಕೋಟಿ ಹಣ ಎಗರಿಸಿ, ಲಪಟಾಯಿಸಿ, ಅಮಾಯಕ ಆ ಸಮುದಾಯದ ಶಾಪಕ್ಕೂ ಆ ಮತಕ್ಕೂ ಮಂಕು ಹಾಕಿದ ‘ಮತಗಳ್ಳತನವೂ’ ಇದೆ. ದಿನಾ ಇಂಥ ಅಕ್ರಮಗಳ ಬಗೆಗೆ ಅರಿಯುತ್ತ ನೆಮ್ಮದಿ ಇಲ್ಲದೆ ಇರುವ ನನ್ನಂಥವರ ‘ನೆಮ್ಮದಿಗಳ್ಳತನ’ವೂ ಇದೆ. ಸ್ವಾತಂತ್ರ ಪೂರ್ವ ಕಾಲದಲ್ಲಿ ಜನಿಸಿದ ನನಗೆ ಅಂದಿನ ರಾಷ್ಟ್ರವಂಚಕರೂ ತಿಳಿಯಲಿಲ್ಲ. ವಯಸ್ಸಾಗುತ್ತ, ಇಂದಿನವರೂ ತಿಳಿಯುತ್ತಿಲ್ಲ!

ಕೆರೆಗಳ್ಳತನ, ಬಂಡೆಗಳ್ಳತನ, ನದೀನೀರುಗಳ್ಳತನ, ದೇವಾಲಯಗಳ್ಳತನ, ಪರ್ಸೆಂಟೇಜುಗಳ್ಳತನ-ಗಳಿಗಿಂತ, ಬರೀ ಜೇಬುಗಳ್ಳರೇ ವಾಸಿ, ಪಿಕ್ ಪಾಕೆಟ್ ಎಂಬವರು ಜೇಬು ಇಲ್ಲದಿದ್ದರೆ ಅವರಿಗೆ ಕೆಲಸವಿಲ್ಲ. ದೈವ ನೈಸರ್ಗಿಕವಾದ ನಿಯಮಗಳ ಕಳ್ಳರಿಗೇನು ಹೇಳುತ್ತೀರಿ?

One Reply to “ವಾಸ್ತವ ಮರೆಮಾಚುವ ಯತ್ನಗಳಿಗೆ ಕೊನೆ ಇಲ್ಲವೇ?”

Leave a Reply

Your email address will not be published. Required fields are marked *