ಮಾರ್ತಾಂಡನ ಜತೆ ಮೇಘಶ್ರೀ

ಬೆಂಗಳೂರು; ‘ರಾಜ ಮಾರ್ತಾಂಡ’ ರಾಮ್ ನಾರಾಯಣ್ ನಿರ್ದೇಶನ ಮಾಡುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಮೂವರು ನಟಿಯರು ಇರಲಿದ್ದಾರೆ ಎಂದು ನಿರ್ದೇಶಕರು ಈ ಮೊದಲೇ ಹೇಳಿಕೊಂಡಿದ್ದರು. ಅದರಂತೆ ದೀಪ್ತಿ ಸತಿ ಮತ್ತು ತ್ರಿವೇಣಿ ರಾವ್ ಆಯ್ಕೆಯನ್ನು ಅಂತಿಮ ಮಾಡಲಾಗಿತ್ತು. ಇದೀಗ ಮೂರನೇ ಹೀರೋಯಿನ್ ಸ್ಥಾನಕ್ಕೆ ‘ಕೃಷ್ಣ ತುಳಸಿ’ ಖ್ಯಾತಿಯ ಮೇಘಶ್ರೀ ಆಗಮನವಾಗಿದೆ. ಅಷ್ಟೇ ಅಲ್ಲ, ಅವರ ಪಾಲಿನ ಶೂಟಿಂಗ್ ಕೂಡ ಬಹುತೇಕ ಮುಕ್ತಾಯವಾಗಿದೆ.

ಹೌದು, ಕನ್ನಡ ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿರುವ ಮೇಘಶ್ರೀ, ‘ರಾಜ ಮಾರ್ತಾಂಡ’ದಲ್ಲಿ ನಟ ಚಿರಂಜೀವಿ ಸರ್ಜಾ ಜತೆ ತೆರೆಹಂಚಿಕೊಳ್ಳುವ ಚಾನ್ಸ್ ಗಿಟ್ಟಿಸಿದ್ದಾರೆ. ‘ಮೂವರು ನಾಯಕಿಯರ ಪೈಕಿ ಅವರು ಹೆಚ್ಚು, ಇವರು ಕಡಿಮೆ ಅನ್ನುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಸಮನಾದ ಪಾತ್ರ ಪೋಷಣೆ ನೀಡಿದ್ದೇನೆ. ಕಥೆ ಬೇಡುವಂತೆ ಮೂವರ ಪಾತ್ರವೂ ಪ್ರಮುಖವಾಗಿರುತ್ತವೆ’ ಎಂದು ನಾಯಕಿಯರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ ರಾಮ್ ನಾರಾಯಣ್. ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರ ‘ಜಾಗ್ವಾರ್’ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದ ದೀಪ್ತಿ ಸತಿಗೆ ‘ರಾಜ ಮಾರ್ತಾಂಡ’ ಎರಡನೇ ಸಿನಿಮಾ. ಈ ಚಿತ್ರದಲ್ಲಿ ವೈದ್ಯೆಯಾಗಿ ಅವರು ಕಾಣಿಸಿಕೊಂಡಿದ್ದಾರೆ. ದೊಡ್ಡ ಕಂಪನಿಯೊಂದರ ಎಂ.ಡಿ. ಆಗಿ ಮೇಘಶ್ರೀ ನಟಿಸಿದ್ದು, ಅವರಿಗೆ ತ್ರಿವೇಣಿ ರಾವ್ ಸ್ನೇಹಿತೆಯಾಗಿದ್ದಾರೆ. ಸಿನಿಮಾದ ಕಥೆ ಬಗ್ಗೆ ಹೆಚ್ಚೇನೂ ರಹಸ್ಯ ಬಿಟ್ಟುಕೊಡದ ನಿರ್ದೇಶಕರು ಸಿನಿಮಾ ಹೇಗಿರಲಿದೆ ಎಂಬುದರ ಸುಳಿವು ನೀಡುತ್ತಾರೆ. ‘ಇದೊಂದು ಹೊಸ ಪ್ರಯತ್ನ. ಯಾಕೆಂದರೆ, ಈ ಹಿಂದೆಂದೂ ಕಾಣಿಸದ ಹೊಸ ರೀತಿಯಲ್ಲಿ ಚಿರು ಅವರನ್ನು ತೋರಿಸುತ್ತಿದ್ದೇವೆ. ಹಾಗಂತ ಲುಕ್​ನಲ್ಲಿ ಅಲ್ಲ. ಬದಲಿಗೆ ಅವರ ವ್ಯಕ್ತಿತ್ವದಲ್ಲಿ ಹೊಸತನ ಕಾಣಿಸಲಿದೆ. ಪಕ್ಕಾ ಕಮರ್ಷಿಯಲ್ ಚಿತ್ರ ಬೇಡುವ ಎಲ್ಲ ಅಂಶಗಳು ಇದರಲ್ಲಿ ಇರಲಿವೆ’ ಎಂಬುದು ನಿರ್ದೇಶಕರ ಮಾತು. ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಸೆಳೆತವೂ ಚಿತ್ರದ ಹೈಲೈಟ್ ಅಂತೆ. ಆ ತಂದೆ-ಮಗ ಯಾರು ಎಂಬುದನ್ನು ಟ್ರೇಲರ್ ಅಥವಾ ಟೀಸರ್ ಮೂಲಕ ಬಹಿರಂಗಪಡಿಸುವುದು ನಿರ್ದೇಶಕರ ಪ್ಲಾ್ಯನ್. ತೆಲುಗಿನ ‘ವಿಕ್ರಮಾರ್ಕಡು’ ಚಿತ್ರದಲ್ಲಿ ಖಳನಾಗಿದ್ದ ವಿನೀತ್ ಕುಮಾರ್, ‘ರಾಜ ಮಾರ್ತಾಂಡ’ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದಾರೆ. ‘ಡೈನಾಮಿಕ್ ಹೀರೋ’ ದೇವರಾಜ್, ‘ಭಜರಂಗಿ’ ಲೋಕಿ ಸೇರಿ ಹತ್ತಾರು ಕಲಾವಿದರು ತಾರಾಗಣದಲ್ಲಿದ್ದಾರೆ.

3 ಹಾಡುಗಳು ಮತ್ತು ಒಂದು ಫೈಟ್ ದೃಶ್ಯದ ಚಿತ್ರೀಕರಣ ಬಾಕಿ ಇದೆ. ಗ್ರಹಣದ ಸಲುವಾಗಿ ಶೂಟಿಂಗ್ ನಿಲ್ಲಿಸಿದ್ದೆವು. ಆಗಸ್ಟ್ ಮೊದಲ ವಾರ ಮತ್ತೆ ಶೂಟಿಂಗ್ ಶುರುವಾಗಲಿದೆ.

| ರಾಮ್ ನಾರಾಯಣ್ ನಿರ್ದೇಶಕ