ಋಣಸಂದಾಯಕ್ಕೂ ಧರ್ಮದ ಬಂಧ ಇರಬೇಕು

‘ಉಪ್ಪು ತಿಂದ ಮನೆಯ ಋಣ ತೀರಿಸಬೇಕು’ ಎಂಬುದು ಸಾಮಾನ್ಯ ನಿಯಮ. ಅದಕ್ಕೂ ಮೇಲಾದ ಧರ್ಮಬಂಧಗಳು, ಪರಿಧಿಗಳು, ಬಿಗಿನಿಯಮಗಳು ಇವೆಯೆಂಬುದು ಧರ್ಮಶಾಸ್ತ್ರದ ಮರ್ಮ. ಇದನ್ನರಿಯದೇ ಸಕಾಲದಲ್ಲಿ ಆಚರಿಸದೇ ಇದ್ದರೆ, ಆ ಇನ್ನೊಂದು ಉನ್ನತಧರ್ಮ ನಿಮಗೇ ಪಾಶವಾಗಿ ಕೊಲ್ಲುತ್ತದೆ. ಅದನ್ನೇ ಮನು ಹೇಳಿದ್ದು- ‘ಧರ್ಮ ಏವ ಹತೋ ಹಂತಿ, ಧಮೋ ರಕ್ಷತಿ ರಕ್ಷಿತಃ’- ಅಂತ. ‘ಧರ್ಮವನ್ನು ನೀನು ಕೊಂದರೆ, ಅದು ಸಾಯುವ ಮುನ್ನ ನಿನ್ನನ್ನೇ ಕೊಲ್ಲುತ್ತದೆ. ಹಾಗಲ್ಲದೆ ಅದನ್ನು ನೀನು ರಕ್ಷಿಸಿದರೆ, ಅದೇ ನಿನ್ನನ್ನು ರಕ್ಷಿಸುತ್ತದೆ’ ಎಂಬುದು ತಾತ್ಪರ್ಯ.

‘ಧರ್ಮರಕ್ಷಣೆ’ ಎಂದರೆ ಅದನ್ನು ಪಾಲಿಸುವುದು. ಇದು ಕಷ್ಟದ ಕೆಲಸ ಎಂದು ವೇದವೇ ಹೇಳುತ್ತದೆ- ‘ಧರ್ವನ್ನತಿ ದುಶ್ಚರಂ, ತಸ್ಮಾತ್ ಪರಮಂ ಧರ್ಮಂ ವದಂತಿ’ (ತೈ.ನಾ.ಉ)- ‘ಪಾಲಿಸಲು ಧರ್ಮಕ್ಕಿಂತ ಕಷ್ಟತರವಾದದ್ದು ಬೇರೊಂದಿಲ್ಲ. ಆದುದರಿಂದಲೇ ಅದು ಶ್ರೇಷ್ಠ ಎಂದು ಹೇಳುತ್ತಾರೆ’. ಇದು ‘ಕತ್ತಿಯ ಅಲಗಿನ ಮೇಲೆ ನಡೆದಂತೆ’ ಎಂದು ಯಮದೇವ, ನಚಿಕೇತನಿಗೆ ಉಪದೇಶಿಸುತ್ತಾನೆ (ಕಠೋಪನಿಷತ್). ವೇದವು ಧರ್ಮವನ್ನೇ ದೇವರೆಂದೂ, ಅದರ ರಕ್ಷಕನೆಂದೂ, ಅದು ವಿಶ್ವವ್ಯಾಪಕವೆಂದೂ, ಅದಕ್ಕೆ ಸೃಷ್ಟಿ-ಸ್ಥಿತಿ-ಲಯ ಶಕ್ತಿಗಳು ಉಂಟೆಂದೂ ಹೇಳುತ್ತದೆ. ಅದು ಕಾಲಸ್ವರೂಪವೆಂದು ಮಹಾಭಾರತ ಬೋಧಿಸುತ್ತದೆ. ಟಿ.ಎಸ್. ಎಲಿಯೆಟ್ಟನು ತನ್ನ “Four Quarters’ ಕವನ ಸಂಕಲನದಲ್ಲಿ East Coker ಮತ್ತು Dry Salvages ಹಾಗೂ Little Gidding ಎಂಬ ಭಾಗಗಳಲ್ಲೂ, Choruses to the Rock ಎಂಬ ಕವನಗುಚ್ಛದಲ್ಲೂ ಈ ವೈದಿಕತತ್ತ್ವವನ್ನೇ, ನದಿ, ಪ್ರವಾಹ, ಮಳೆ ರೂಪಕಗಳಲ್ಲಿ ವಿವರಿಸಿದ್ದಾನೆ. ಪ್ರವಹಿಸುವ ನೀರು ಬದುಕಿಸುತ್ತದೆ. ಅದೇ ರೂಪಾಂತರದಲ್ಲಿ ಮಂಜುಗಡ್ಡೆ ಸಾಯಿಸುತ್ತದೆ. ಆವಿಯಾದರೆ ಗಾಳಿಯ ಸಮತೋಲ ಉಷ್ಣಶೀತಗಳನ್ನು ವ್ಯತ್ಯಾಸಗೊಳಿಸುತ್ತದೆ. ನಗರದ ಕೊಳೆ ಸೇರಿ ಊಟಜ ಆಗಿ, ಇಬ್ಬನಿಯೋ ಗಾಢಾಂಧಕಾರವೋ ಆದರೆ ದಿಕ್ಕುತಪ್ಪಿಸಿ ಸಾಯಿಸುತ್ತದೆ (ದೆಹಲಿ, ಬೆಂಗಳೂರು, ಕೋಲ್ಕತಗಳಂತೆ) ಎಂದು ಬಿಂಬಿಸುತ್ತಾನೆ.

ಈ ಬಹುಮುಖಿ ಸಂಕೇತ, ಪ್ರತಿಮಾರ್ಥಗಳನ್ನು ನಾನು “The Influence of Indian thought on the Poetry of T.S. Eliot and W.B. Yeats’ ಎಂಬ ನನ್ನ ಅಪ್ರಕಟಿತ ಡಾಕ್ಟರೇಟ್ ನಿಬಂಧದಲ್ಲಿ ವಿವರಿಸಿ, ಆಳದ ಪರಿಚಯ ಮಾಡಲು ಯತ್ನಿಸಿದ್ದೇನೆ. ನೀರು ‘ನಾರಾಯಣ’ ಎಂದು ‘ಉದಕತತ್ತ್ವ’ ಭಾಗದಲ್ಲಿ (ವೇದ ಸಂಸ್ಕೃತಿಯ ಪರಿಚಯದಲ್ಲಿ) ವಿವರಿಸಿದ್ದೇನೆ. ಪ್ರವಾಹವೆಂಬುದೇ ಜೀವನಧರ್ಮ. ಅದನ್ನು ವೈಟ್​ಹೆಡ್ ಮಹಾಶಯ “Process and Reality’ ಎಂಬ ತನ್ನ ಮಹಾಗ್ರಂಥದ ಅಂತರಾಳಗ್ರಹಿಕೆಯಾಗಿ ವಿವರಿಸಿದ್ದಾನೆ. ಕಾಲದಲ್ಲಿ ಬಾರದುದು ಬರೀ “Abstract’ ಹೊರತು “Real’ ಅಲ್ಲ ಎಂಬ ಗ್ರಹಿಕೆಗೆ ನಮ್ಮ ‘ದ್ರವ್ಯ’ ಶಬ್ದದ ಅರ್ಥದ ಸಾಮೀಪ್ಯವಿದೆ. ‘ದ್ರವ್’= to flow, ದ್ರವ್ಯ=Fluid, something in the process or making, something becoming Real ಎಂಬುದು ಸದ್ವಿದ್ಯೆಯ ಅರ್ಥ (ಛಾಂದೋಪನಿಷತ್). ಧರ್ಮವು ಕಾಲದೇಶ ಸಂಧಿಯಲ್ಲಿ ಸದಾ ನಿತ್ಯನೂತನತೆಯನ್ನು ಹೀಗೆ ಪಡೆಯುತ್ತಿರುವಾಗ ಅದನ್ನು ಕೊಳೆತ ನೀರನ್ನಾಗಿಸಿ ಅಲ್ಲಿ ಮುಳುಗಿ ಸಾಯುವವನು ಮೂಢ. ಮಹಾಭಾರತದ ಕರ್ಣನ ದುರ್ಯೋಧನನ ಉಪ್ಪಿನ ಋಣ, ಭೀಷ್ಮದ್ರೋಣರ ಅನ್ನಋಣ, ದುಷ್ಟಸೇವನೆ, ಅಧರ್ಮದ ಪಾಲುದಾರಿಕೆ, ಪಾರಾಗದ ಕಣ್ಣುಕುರುಡು ಇವು ಅವರನ್ನು ಧರ್ಮಮೂಢರನ್ನಾಗಿಸಿ, ಶ್ರೀಕೃಷ್ಣ ಇದನ್ನೇ ‘ಧರ್ಮಗ್ಲಾನಿ’, ‘ಮಂಕರು ಕಾಣದ ಧರ್ಮ, ಅದರ ಮುಸುಕು’ ಎಂದು ಗೀತೆಯಲ್ಲಿ (ಅಧ್ಯಾಯ 4) ವರ್ಣಿಸಿದ. ಇಲ್ಲಿ ಮಂಕಾಗದವರು ವಿದುರ, ಸಂಜಯ, ಕುಂತಿ, ಋಷಿಮುನಿಗಳು, ವ್ಯಾಸರು, ವೈಶಂಪಾಯನಾದಿಗಳು. ಶ್ರೀರಾಮಾಯಣದಲ್ಲೂ ಅಷ್ಟೆ. ವಿಭೀಷಣ ಬ್ರಹ್ಮನಲ್ಲಿ ವರ ಬೇಡುವಾಗ-‘ಪರಮಾಪದ್ಗತಸ್ಯಾಪಿ, ಧಮೇ ಭವತು ಮೇ ಮತಿಃ’ (ಉತ್ತರಕಾಂಡ) ಎಂದು ಪ್ರಾರ್ಥಿಸಿದ. ‘ಎಂಥ ಆಪತ್ತಿನಲ್ಲೂ ನನ್ನ ಬುದ್ಧಿಯು ಧರ್ಮದಲ್ಲೇ ನಿಲ್ಲಲಿ’ ಎಂದದ್ದು ಅವನನ್ನು ಚಿರಂಜೀವಿಯನ್ನಾಗಿಸಿತ್ತು. ನಿಕುಂಭಿಲಾ ಯಾಗ ಧ್ವಂಸ ಪ್ರಕರಣದಲ್ಲಿ ಸಿಟ್ಟುಗೊಂಡ ಇಂದ್ರಜಿತು ‘ಇಹತ್ವಂ ಜಾತ ಸಂವೃದ್ಧಃ’- ‘ನೀನಿಲ್ಲೇ ಹುಟ್ಟಿಬೆಳೆದವನು, ನನಗೆ ಹೇಗೆ ದ್ರೋಹ ಮಾಡುತ್ತೀಯೆ?’ ಎಂದು ಮೂದಲಿಸಿದಾಗ ವಿಭೀಷಣ, ‘ಕುಲನಿಷ್ಠೆಗಿಂತ ಧರ್ಮನಿಷ್ಠೆ ಹಿರಿದು’ ಎಂದು ಸುದೀರ್ಘವಾಗಿ ವಿವರಿಸುತ್ತಾನೆ.

‘ತನ್ಮೇ ಶೀಲಂ ಅರಾಕ್ಷಸಂ’- ‘ಕುಲ ರಾಕ್ಷಸವಾದರೂ ಶೀಲವು ರಾಕ್ಷಸವಾಗಲಿಲ್ಲ’ ಎಂಬುದನ್ನು ರಾಹುಲರ ಕಾಂಗ್ರೆಸ್ಸು ನಾಯಕರು ಈಗ ಗಮನಿಸಿ ದಾರಿಗೆ ಬಂದರೆ, ರಾಷ್ಟ್ರಧರ್ಮ, ರಾಷ್ಟ್ರನಿಷ್ಠೆ, ಧರ್ಮನಿಷ್ಠೆಗಳು ಇವರು ಸೇವಿಸುವ ಪಾರ್ಟಿನಿಷ್ಠೆ, ಸೋನಿಯಾ ನಿಷ್ಠೆ, ತಿಂದ ಹಣದ ನಿಷ್ಠೆ, ವಿದೇಶಿ ನಿಷ್ಠೆಗಳೆಂಬ ದ್ರೋಹಗಳಿಂದ ಅವರನ್ನು ಪಾರುಮಾಡುತ್ತವೆ. ಕಪಿಲ್ ಸಿಬಲ್, ತಿವಾರಿ, ಆನಂದಶರ್ವ, ಗುಲಾಂ ನಬಿ, ಆಸ್ಕರ್, ಅಹ್ಮದ್ ಪಟೇಲ್, ಸುರ್ಜೆವಾಲಾ, ಸಿಂಘ್ವಿ, ಕರ್ನಾಟಕ‘ವಾಲಾ’ಗಳು, ಇನ್ನೂ ಇತರರು ಪಾರಾಗುತ್ತಾರೆ. ಸಿಧು ಎಂಬ ಆಟಗಾರ ಪಾಕ್​ನಲ್ಲಿ ಏನೇನೋ ಹೇಳುತ್ತಾರೆ. ಬುದ್ಧಿ ಇದೆಯೇ? ಅದು ರಾಷ್ಟ್ರಧರ್ಮದೊಳಗೆ ಇದೆಯೇ? ಒಬ್ಬರು ಹೇಳುತ್ತಾರೆ- ಶಶಿ ತರೂರ- ‘ಯಾವ ನೈಜ ಹಿಂದುವೂ ಅಯೋಧ್ಯೆಯಲ್ಲಿ ರಾಮಮಂದಿರ ಬಯಸುವುದಿಲ್ಲ’ ಅಂತ. ಇವರು ಬರೆದ “Why I am a Hindu’ ಎಂಬ ಪುಸ್ತಕವನ್ನು ಇದೇ ಅಂಕಣದಲ್ಲಿ ಹಿಂದೆ ಜಾಲಾಡಿದ್ದೇನೆ. ರಾಹುಲರ ಸ್ಥಿತಿ ತುಂಬ ಶೋಚನೀಯ. ಸೋಮನಾಥದಲ್ಲಿ ‘ಬ್ರಾಹ್ಮಣ, ಶಿವಭಕ್ತ’ ಎನ್ನುತ್ತ, ಹೈದರಾಬಾದ್​ನಲ್ಲಿ ‘ನನ್ನ ತಂದೆ ಮುಸಲ್ಮಾನ, ತಾಯಿ ಕ್ರೖೆಸ್ತಳು’ ಎಂದು ಏನೇನೋ ಮಾತನಾಡುತ್ತಾರೆ. ಇವರಿಗೆಲ್ಲ ಏನಾಗಿದೆ? ‘ಧರ್ಮಗ್ಲಾನಿ’. ಅದರಿಂದ ಸಿಬಿಐ ಜಾರಿ ನಿರ್ದೇಶನಾಲಯ ಕ್ರಮದಿಂದ ಚಿದಂಬರಂ, ಕಾರ್ತಿ, ವಾದ್ರಾ ಇಂಥವರನ್ನು ರಕ್ಷಿಸಿ ಆದೇಶಗಳನ್ನು ಮನಬಂದಂತೆ ಜಾರಿಮಾಡದೆ ಮುಂದೆ ತಳ್ಳುತ್ತಾರೆ. ಮುಸ್ಲಿಂ ತುಷ್ಟೀಕರಣಕ್ಕೆ ಯತ್ನಿಸಿ, ಒಬ್ಬರು ಹೇಳುತ್ತಾರೆ ‘ಶೇಕಡ 90 ಇಸ್ಲಾಮಿ ವೋಟುಗಳು ಬಾರದೆ ನಾವು- ಕಾಂಗ್ರೆಸ್ಸು- ಗೆಲ್ಲುವುದಿಲ್ಲ’ ಅಂತ. ಅದು ಒವೈಸಿಗೆ ಟಾನಿಕ್ ಆಗುವ ಲಕ್ಷಣವಿದೆ. ಎಲ್ಲೆಡೆ ಕಮ್ಯೂನಲ್ ಶಕ್ತಿಗಳು ಬೆಳೆಯುತ್ತಿವೆ. ದುರ್ಯೋಧನ ಕರ್ಣನ ಬದಲು, ಯುಧಿಷ್ಠಿರನಿಗೆ ಒಂದು ಹಳ್ಳಿ ಕೊಟ್ಟಿದ್ದರೂ ಆಗ ಮಹಾಭಾರತ ತಪು್ಪತ್ತಿತ್ತು. ಅಧರ್ಮದ ಪಾಶ ಹಾಗೆ ಬಿಡುವುದಿಲ್ಲವಲ್ಲ? ನೋಡಿ, ಗೆಲ್ಲಲಾರದ ಸೋಲುವ ‘ವೀರ’ ರಾಹುಲರನ್ನು ಮುಂದೆಮಾಡಿ, ನಾಯ್ಡು, ಗೌಡ, ಸ್ಟಾಲಿನ್ ಇನ್ನಿತರರು ಒಂದು ಮಹಾಘಟಬಂಧನಕ್ಕೆ ಇಳಿದಿದ್ದಾರೆ. ನಾನು ಇದಕ್ಕೆ ‘ಮಹಾಲಯಪಕ್ಷ’ ಎಂದು ಕರೆಯುತ್ತೇನೆ (ಮಹಾ+ಆಲಯ ಅಲ್ಲ! ಮಹಾ+ಲಯ). ಅಂದರೆ ಶಿವನ ತಾಂಡವ ಪ್ರಳಯನರ್ತನದ, ಪಿತೃಗಳ ಪಿಂಡಪ್ರದಾನದ, ಋಣತೀರಿಸುವ ಪಕ್ಷ! ಯಾರ ಋಣ? ದೇಶದ ಹಣ ಲೂಟಿ ಮಾಡಿದವರು, ಈವರೆಗೆ ಮೆರೆದವರು ಈಗ ಲಯವಾಗುವ ಕಾಲ. ‘ಕಾಲೇ ಅಸ್ಮಿ ಲೋಕಕ್ಷಯಕೃತ್, ಪ್ರವೃದ್ಧಃ’ (ಗೀತಾ) ಎಂದ ಶ್ರೀಕೃಷ್ಣ. ಇದು ಕಾಲದ ಕ್ಷಯಮುಖ. ಸೃಷ್ಟಿಯ ಮರುಮುಖ ಈ ಯುದ್ಧಾನಂತರ, 2019 ಆದಮೇಲೆ.

ನೋಟು ಅಮಾನ್ಯೀಕರಣ ಕುರಿತ ತಜ್ಞರು ಒಬ್ಬರು ಹೇಳಿದ್ದು ವಾಟ್ಸ್​ಆಪ್​ನಲ್ಲಿ ಹೀಗಿದೆ- ‘ಅದು ಕಪ್ಪುಹಣ ಕೂಡಿಟ್ಟವರ ಮೇಲಣ ಅಸ್ತ್ರವಾಗಿದ್ದು ಫಲಪ್ರದವಾಗಿದೆ’ ಅಂತ. ಬೇರೆಯವರಿಗೆ ಸ್ವಲ್ಪ ತೊಂದರೆಯಾಗಿರಲು ಸಾಕು. ಕಾಡು ಉರಿಯುವಾಗ, ಒಣಮರಗಳು ಅಲ್ಲದೆ, ಹಸಿಯವೂ ಸುಟ್ಟುಬೂದಿಯಾಗುತ್ತವಲ್ಲ? ಹಾಗೆ. ಈ ಮಹಾಲಯಪಕ್ಷದ ಪಿತೃಗಳು ಸೇನೆಯನ್ನೂ ದೂಷಿಸುತ್ತಾರೆ, ಹುತಾತ್ಮರನ್ನೂ ದೂಷಿಸುತ್ತಾರೆ, ತಾವು ಮಾತ್ರ ಶಾಶ್ವತ ಎಂದು ಭ್ರಮಿಸುತ್ತಾರೆ.

‘ನೈವ ಧರ್ವತ್ಮನಃ, ವತ್ಸ! ವ್ಯಸನಂ ತು ಕದಾಚನ’- ‘ಧರ್ಮದಲ್ಲಿರುವವನಿಗೆ ಎಂದೂ ಆಪತ್ತು, ಅಪಕೀರ್ತಿ, ಆತ್ಮನಾಶ ಎಂಬ ವ್ಯಸನಗಳು ಬಾರವು’ ಎಂದವನು ಕುಂಭಕರ್ಣ! ವಿಭೀಷಣನಿಗೇ! ನಾವಿರುವುದು ಈಗ ಲಂಕೆಯಲ್ಲಲ್ಲ? ಅಲ್ಲವೇ?

ಕಾಂಗ್ರೆಸ್ ನಾಯಕರೇ ಮುಸಲ್ಮಾನರನ್ನೂ, ಕ್ರೖೆಸ್ತರನ್ನೂ, ಹಿಂದುಳಿದವರನ್ನೂ, ಧನದ್ರೋಹಿಗಳನ್ನೂ, Frustrated ಎಂಬ ಹತಾಶವರ್ಗದ ಇನ್ನಿತರ ನಿಮ್ಮಂಥವರನ್ನೂ ಹುರಿದುಂಬಿಸಿ, ದೇಶವನ್ನು ಈವರೆಗೆ ಹಾಳುಮಾಡುತ್ತಿದ್ದೀರಿ! ಇನ್ನಾದರೂ ಧರ್ಮ ಕಲಿಯಿರಿ. ನಮಗೆ ‘ಹಿಂದೂ’ ಅರ್ಥ ಬೋಧಿಸಬೇಡಿ. ಮಾರೀಚನು ರಾಮನ ಕೈಯಲ್ಲೇ ಸತ್ತರೂ ಮೋಕ್ಷವಾಗಲಿಲ್ಲ! ಜಟಾಯು ರಾವಣನ ಕೈಯಲ್ಲೇ ಸತ್ತರೂ ಮೋಕ್ಷ ಪಡೆದ. ಅದು ಅಧ್ಯಾತ್ಮ! ರಾಮಾಯಣದ ಹೃದಯ. ‘ಯಾರಿಗಾಗಿ ಸಾವು?’ ಎಂಬ ಪುರುಷಾರ್ಥ ಮುಖ್ಯ. ಸುಭಾಷ್, ಸಾವರ್ಕರ್, ಅಂಬೇಡ್ಕರ್, ಜಯಪ್ರಕಾಶ- ಎಲ್ಲರೂ ಅಮರರಾದರು. ಉತ್ತರಕೃತ್ಯ ಆಗದೆ ಸತ್ತವರು ಎಲ್ಲಿಹೋದರು? ಅಯ್ಯಾ, ದೇಶದ ಋಣಸಂದಾಯವು, ಮಾತಾಪಿತೃಋಣ ಸಂದಾಯಕ್ಕೂ ಮಿಗಿಲಾದುದು. ಪ್ರಹ್ಲಾದ, ಧ್ರುವ ಮುಂತಾದವರ ದಾರಿ ಅದು. ರಾಮನನ್ನು ಬಿಟ್ಟು ಕೈಕೇಯಿ ಮಾತಿಗೆ ಶರಣಾದ ದಶರಥ ಏನು ಸಾಧಿಸಿದ? ರಾಮಋಣ ತೀರಿಸದೇ ಈಗಣ ಕೈಕೇಯಿ ಋಣ ತೀರಿಸಿದರೆ ಅದು ಪಾಶವಾಗಿ ಎಂದೆಂದೂ ಚರಿತ್ರೆಯಲ್ಲಿ ನೀವು ತ್ರಿಶಂಕುಗಳಾಗುತ್ತೀರಿ. ಈಗಲೇ ಸೂಚನೆ ಕೊಟ್ಟಿದ್ದೇನೆ. ಮುಂದೆ? ಹೇಳಲಾರೆ!

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *