ಅನಾಥಪ್ರಜ್ಞೆಯ ಅಧಮ ರಾಜಕೀಯ

ರಾಜಕಾರಣಕ್ಕೆ ಪುರುಷಾರ್ಥದ ದಿಕ್ಕು, ಪ್ರಜ್ಞೆ ಇರಬೇಕೆಂದು ಎಂದಿನಿಂದಲೂ ನಂಬಿಬಂದ ದೇಶ ನಮ್ಮದು. ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ಮೈಸೂರು ಅರಸರು- ಎಲ್ಲರೂ ಆದರ್ಶಗಳನ್ನು ಎತ್ತಿಹಿಡಿದೇ ಆಳಿದರು. ‘ಅವರ ಹೆಸರು ಬೇಕು, ಅವರ ರೀತಿ ಬೇಡ’ ಎಂಬುದು ಇಂದಿನ ಪರಿಹಾಸ್ಯಾಸ್ಪದ ಸ್ಥಿತಿ.

ಕೌಟಿಲ್ಯನ ಅರ್ಥಶಾಸ್ತ್ರವನ್ನು ನಾವು ಮರೆತಿದ್ದೇವೆ. ಮಹಾಭಾರತದ ಶಾಂತಿಪರ್ವ, ಅನುಶಾಸನಪರ್ವಗಳ ಸಂದೇಶವನ್ನು ಉಪೇಕ್ಷಿಸಿದ್ದೇವೆ. ನಮಗೆ ಪರಂಪರೆ, ಉಪದೇಶ, ಮೌಲ್ಯ, ಆದರ್ಶಗಳು ಏನೂ ಬೇಡ. ಸ್ವಾರ್ಥಕ್ಕೆ ಇವೆಲ್ಲ ಅಡೆತಡೆಗಳು ಎಂಬ ದುರ್ಭಾವನೆಯಲ್ಲಿ ಉಚ್ಛ ೃಖಲ ವೃತ್ತಿಯಲ್ಲಿ (ಸರಪಳಿ ಕಳಚಿದ ಕಾಡಾನೆಯ ರೀತಿಯಲ್ಲಿ) ಚುನಾವಣೆಗಳಲ್ಲಿ ‘ಗೆದ್ದು’, ‘ವಂಚಿಸಿ’, ಜನಶೋಷಣೆಯಲ್ಲಿರುತ್ತ, ‘ಪ್ರಗತಿ’, ‘ಸೆಕ್ಯುಲರಿಸಂ’, ‘ಸೋಷಲಿಸಂ’, ‘ಡೆಮಾಕ್ರಸಿ’ ಎಂದೆಲ್ಲ ಸವಕಳಿ ಶಬ್ದಗಳನ್ನು ಉಚ್ಚರಿಸುತ್ತ, ಯಾರ ಯಾರದೋ ಅಂಧಾನುಕರಣೆಯಲ್ಲಿ ಹಾಳಾಗುತ್ತಿದ್ದೇವೆ. ಕೌಟಿಲ್ಯನೇ ಹೇಳುವುದನ್ನು ಕೇಳಿ- ‘ಭೂಮಿ, ರಾಷ್ಟ್ರ, ರಾಜ್ಯ, ದೇಶವನ್ನು ಪಡೆದು ಪಾಲಿಸಲು, ಏನೆಲ್ಲ ಅರ್ಥಶಾಸ್ತ್ರಗಳನ್ನು ಹಿಂದಿನ ಹಿರಿಯರು, ಮುತ್ಸದ್ದಿಗಳು ಶೋಧಿಸಿ ಬರೆದರೋ, ಸಾಧ್ಯವಾದಷ್ಟೂ ಅವೆಲ್ಲವನ್ನೂ ಸಂಗ್ರಹಿಸಿ, ಇದೋ ಈ ಅರ್ಥಶಾಸ್ತ್ರವನ್ನು ಬರೆದಿದ್ದೇನೆ’. ಈ ಶಾಸ್ತ್ರವು ಬರೀ ಎಕನಾಮಿಕ್ಸ್ ಅಲ್ಲ. ಇದರಲ್ಲಿ ಆಡಳಿತ, ಸೇನಾರಚನೆ, ನ್ಯಾಯವಿತರಣೆ, ಸಮಾಜ ಶಾಂತಿರಕ್ಷಣೆ, ಜೀವನಾವಶ್ಯಕ ವೃತ್ತಿಗಳ ಪೋಷಣೆ, ಶತ್ರು ವಿಜಯೋಪಾಯಗಳು, ಗೂಢಚರ್ಯೆ, ವಾಣಿಜ್ಯ, ವಿದೇಶಾಂಗ ನೀತಿ, ಆಡಳಿತಗಾರನ ದಿನನಿತ್ಯದ ರೀತಿಗಳು, ಒಳಶತ್ರು ಹೊರಶತ್ರುಗಳ ಬಗ್ಗೆ ಎಚ್ಚರಿಕೆ, ಜನವಂಚನೆಯ ನಿಗ್ರಹ- ಇಂಥವೆಲ್ಲ ಅಡಕವಾಗಿವೆ. ‘ರಾಷ್ಟ್ರೆೊತ್ಥಾನದ ಇಂದಿನ ಆದ್ಯತೆಗಳು’ ಎಂಬ ಪುಸ್ತಕವೊಂದನ್ನು ಈ ಆಧಾರದ ಮೇಲೆ, ಇಂದಿನ ವಿಡಂಬನೆಯ ವ್ಯತ್ಯಾಸಗಳನ್ನು ತೋರಿಸುತ್ತ ನಾನು ಈಗ ಬರೆದು ಮುಗಿಸಿದ್ದೇನೆ. ಈ ಅರ್ಥಶಾಸ್ತ್ರವನ್ನು ಚಾಣಕ್ಯ ವರ್ಣಿಸಿರುವುದು ಹೀಗೆ- ‘ಈ ಶಾಸ್ತ್ರವು ಎಲ್ಲ ವಿದ್ಯೆಗಳಿಗೂ ದೀಪದಂತೆ, ಎಲ್ಲ ರಾಜಕಾರ್ಯಗಳಿಗೂ ಸರಿಯಾದ ಉಪಾಯಗಳನ್ನು ತಿಳಿಸುತ್ತದೆ. ಲೋಕವನ್ನು ಎತ್ತಿಹಿಡಿಯುವ ಎಲ್ಲ ಧರ್ಮ, ವೃತ್ತಿ, ಪ್ರವೃತ್ತಿಗಳಿಗೂ ಆಶ್ರಯವಾಗಿದೆ. ಇದನ್ನು ನಿತ್ಯಶಾಸ್ತ್ರವೆಂದೂ ‘ಆನ್ವೀಕ್ಷಿಕೀ’ ಎಂದೂ ಕರೆಯುವುದು ಇದಕ್ಕಾಗಿಯೇ’ ಎಂದರ್ಥ. ‘ವೀಕ್ಷಣೆ’ ಎಂದರೆ ಸೂಪರ್​ವೈಸ್, ಎಚ್ಚರದ ಸರ್ವೆಕ್ಷಣೆ, ಪರಿಶೀಲನೆ, ಎಲ್ಲವನ್ನೂ ಕಣ್ಣಿಟ್ಟು ಸದಾ ಎಚ್ಚರವಿದ್ದು ರಕ್ಷಿಸುವುದು ಎಂದು ಅರ್ಥ. ಅದನ್ನು ಮಾಡಲು ಅನುಕೂಲವಾದ ಶಾಸ್ತ್ರ ಆನ್ವೀಕ್ಷಿಕೀ.

ಇದನ್ನು ಪ್ರಸ್ತಾಪಿಸುತ್ತಿರುವುದೇಕೆಂದು ನೀವು ತಿಳಿಯಬೇಕು. ಮೊದಲು ಒಂದೆರಡು ಕತೆ ಹೇಳುತ್ತೇನೆ. ಯಾವುದೋ ಊರು. ಆಚೆಗೆ ಒಂದು ತೋಪು. ಅಲ್ಲಿ ಯಾರೋ ಮನೆ ಕಟ್ಟುತ್ತಿದ್ದರು. ಅದಕ್ಕೆ ಬೇಕಾದ ಬಾಗಿಲು, ಕಿಟಕಿ, ತೊಲೆ, ಆಸನಗಳನ್ನು ಒಬ್ಬ ಬಡಗಿ ನಿರ್ವಿುಸುತ್ತ ದೊಡ್ಡ ತೇಗದ ಮರಗಳ ದಿಮ್ಮಿಗಳನ್ನು ಗರಗಸ, ಬಾಚಿ, ಉಳಿ, ಕೊಡತಿ ಮುಂತಾದ ಆಯುಧಗಳಿಂದ ಕೆತ್ತುತ್ತ, ಕೊಯ್ಯುತ್ತ, ಹದಮಾಡುತ್ತ ಇದ್ದ. ದೊಡ್ಡ ಹಳ್ಳ ತೋಡಿ, ಆ ದಿಮ್ಮಿಯನ್ನು ಆಚೆ-ಈಚೆ ದಡ, ತುದಿಗಳಲ್ಲಿ ಬರುವಂತೆ ಇಟ್ಟು, ನಡುವೆ ನಿಂತು ಇಬ್ಬರು ಆ ದೊಡ್ಡ ದಿಮ್ಮಿಯನ್ನು ಕೊಯ್ಯುತ್ತಿದ್ದರು ಬೃಹತ್ ಗರಗಸದಿಂದ. ಒಂದು ಕಾಲದಲ್ಲಿ ಊರೂರುಗಳಲ್ಲಿ ಕಾಣಬರುತ್ತಿದ್ದ ಸಾಮಾನ್ಯ ದೃಶ್ಯ ಇದು. ಬಡಗಿಗಳ ಕಾರ್ಯವನ್ನು ಆ ತೋಪಿನ, ಆ ಹಳ್ಳದ ಅಂಚಿಗಿದ್ದ ಎತ್ತರದ ಮರದ ಮೇಲಿರುತ್ತಿದ್ದ ಒಂದು ಕೋತಿ ದಿನಾ ನೋಡುತ್ತಿತ್ತು. ಬಡಗಿಗಳು ಊಟಕ್ಕೋ, ಶೌಚಕ್ಕೋ ಅತ್ತಿತ್ತ ಹೋದ ಸಂದರ್ಭದಲ್ಲಿ, ಅದು ಕೆಳಗಿಳಿದು ಬಂದು ಅವರ ಆಯುಧಗಳನ್ನು ಆ ಮರದ ಸಾಮಾನುಗಳ ಮೇಲೆ ಯದ್ವಾತದ್ವಾ ಪ್ರಯೋಗಿಸಿ, ಕೆಲಸವನ್ನೆಲ್ಲ ಹಾಳುಮಾಡುತ್ತಿತ್ತು. ಇದು ಬಲು ಉಪದ್ರವವಾಗಿತ್ತು. ಓಡಿಸಿದರೆ ಕೋತಿ ಹೋಗುತ್ತಿರಲಿಲ್ಲ. ದಾರಿಕಾಣದ ಬಡಗಿಗೆ ಒಂದು ಉಪಾಯ ಹೊಳೆಯಿತು! ಅದ್ಭುತ, ಅದು! ಮರದ ದಿಮ್ಮಿಯನ್ನು ಅರ್ಧ ಕೊಯ್ದದ್ದನ್ನು, ಆ ಅರ್ಧಗಳು ಮಾತ್ರ ತಾವು ಬರುವ ತನಕ ಸೇರದಂತೆ ಒಂದು ಭರ್ಜರಿ ಬೆಣೆಯನ್ನು ಅದರಲ್ಲಿ ನಡುವೆ ಸಿಲುಕಿಸಿದ. ‘ಬೆಣೆ’ ಎಂದರೆ, ಕೊಯ್ದದ್ದು ಅಂಟದಂತೆ ನಡುವೆ ನಿಲ್ಲಿಸಿದ ಮರದ ತುಂಡು. ಅದನ್ನು ಕಿತ್ತರೆ ಕೊಯ್ದ ಭಾಗಗಳು ಬಿಗಿಯಾಗಿ ಸೇರಿಕೊಂಡು, ಅಲ್ಲಿ ಗರಗಸ ಮತ್ತೆ ನಿಲ್ಲಿಸಿ ಉಪಯೋಗಿಸಲು ಕಷ್ಟವಾಗುತ್ತಿತ್ತು. ಕೋತಿ ಇದನ್ನು ಚುರುಕುಗಣ್ಣಿನಿಂದ ವೀಕ್ಷಿಸುತ್ತಿತ್ತು. ಅದನ್ನು ಬಡಗಿ ಆ ಬೆಣೆಯನ್ನು ಹಲವಾರು ಸಲ ಕಿತ್ತಂತೆ ನಾಟಕವಾಡಿ, ಸೋತಂತೆ ಆಚೆ ಶೌಚಕ್ಕೆ ಹೋದ. ಕೋತಿ ಇಳಿದುಬಂತು. ಬಡಗಿ ಮಾಡಲಾಗದುದನ್ನು ತಾನು ಮಾಡುವೆನೆಂದು ಹಿಗ್ಗಿ, ಕೊಯ್ದ ಆ ಸೀಳಿನ ನಡುವೆ ಒಂದು ಕಾಲನ್ನೂ, ಬಾಲವನ್ನೂ ಇಳಿಸಿ ಮತ್ತೊಂದು ಕಾಲನ್ನು ದಿಮ್ಮಿಯ ಮೇಲಿಟ್ಟುಕೊಂಡು, ಎರಡೂ ಕೈಗಳಿಂದ ಬಲವಾಗಿ ಆ ಬೆಣೆಯನ್ನು ಕಿತ್ತುಬಿಟ್ಟಿತು! ಒಂದು ಕಾಲೂ, ಬಾಲವೂ ಈಗ ಆ ಸೀಳುಗಳ ಅಂಟಿನ ಬಿಗಿಯಲ್ಲಿ ಸಿಲುಕಿ, ಕೋತಿ ಜೋರಾಗಿ ಅಳಲಾರಂಭಿಸಿತು. ಊರವರೆಲ್ಲ ಬಂದು ನೋಡಿದರೂ ಯಾರಿಗೂ ಭಯ. ಕೋತಿಯೋ ಬೃಹದಾಕಾರದ್ದು! ಏನು ಮಾಡುವುದೋ? ಆಗ ಬಡಗಿ ಬಂದು ಕೋತಿಗೆ ಕೊಡತಿಯಿಂದ ಬಡಿದು, ಕಿತ್ತುಹೋದ ಬೆಣೆಯನ್ನು ಕೊಯ್ದ ಮರದ ಸೀಳಿನಲ್ಲಿ ಬಡಿದು, ನಿಲ್ಲಿಸಿ, ಕೋತಿಯನ್ನು ಬಿಡಿಸಿದ. ಕೋತಿ ‘ಇನ್ನೆಂದೂ ಇತ್ತ ಬರುವುದಿಲ್ಲ’ ಎಂದು ಓಡಿಹೋಯಿತು.

ಕತೆಯ ಪ್ರಸ್ತುತಿ ಏನು? ತಿಳಿಯಿರಿ. ಕರ್ನಾಟಕದಲ್ಲಿ ಒಂದು ಘಟಬಂಧನ ತಯಾರಾಗುತ್ತಿದೆಯಷ್ಟೆ? ರಾಜಕಾರಣ ಇಲ್ಲಿ ಅರ್ಧಕೊಯ್ದ ಮರದ ದಿಮ್ಮಿಯಂತೆ. ಒಬ್ಬರು ಹೇಳುತ್ತಾರೆ- ‘ನಮ್ಮ ಘಟಬಂಧನದ ಉದ್ದಿಶ್ಯ, ಭಾಜಪವನ್ನು ದಕ್ಷಿಣ ಭಾರತಕ್ಕೆ ಪ್ರವೇಶಿಸದಂತೆ, ಹೆಬ್ಬಾಗಿಲಾದ ಕರ್ನಾಟಕದಲ್ಲಿ ಅದು ಅಧಿಕಾರಕ್ಕೆ ಬಾರದಂತೆ ತಡೆಯುವುದು’ ಎಂದು! ಇದು ಋಣಾತ್ಮಕ, ನೆಗೆಟಿವ್ ಪಾಲಿಟಿಕ್ಸ್ ಎಂದು ಅವರಿಗೆ ಗೊತ್ತಿಲ್ಲ. ಏಕೆ? ಅವರಿಗೆ ಬೇಕು ಕೌಟುಂಬಿಕ ಆಡಳಿತ. ಅದಕ್ಕೆ ಡೆಮಾಕ್ರಸಿ, ಸೆಕ್ಯುಲರಿಸಂ ಎಂಬ ಶಬ್ದಗಳೆಲ್ಲ ಜನರ ಕಣ್ಣಿಗೆ ಮಣ್ಣೆರಚಲು ಉಪಯುಕ್ತವಾದ ಧೂಳು ಮಾತ್ರ. ಧೃತರಾಷ್ಟ್ರನ ಕುರುಡು ಆಡಳಿತದಲ್ಲಿ ಎಷ್ಟು ಕೆರೆ ಕಟ್ಟಿಸಿದ? ಎಷ್ಟು ದೇವಾಲಯ ನಿರ್ವಿುಸಿದ? ಎಲ್ಲಿ ಸೇನಾಬಲ ವೃದ್ಧಿಮಾಡಿದ?- ವ್ಯಾಸರು ಬರೆಯಲಿಲ್ಲ. ಅಲ್ಲಿ ಅದು ಆಗಿಲ್ಲದ್ದರಿಂದ. ಧೃತರಾಷ್ಟ್ರನ ಸೂತ್ರ ಇದ್ದವರೆಲ್ಲ ದುಷ್ಟರೇ ಇದ್ದರಲ್ಲ?

ಭಾಜಪದಲ್ಲಿ ಕೆಡುಕರು, ಒಡಕರು, ದೂರದೃಷ್ಟಿ ಇಲ್ಲದವರು ಇಲ್ಲವೆಂದಲ್ಲ! ಆದರೆ ದೇಶಕ್ಕೆ ಬೇಕಾದುದು ಮೋದಿ, ಅವರ ದಕ್ಷ ಆಡಳಿತ, ಅವರ ರಕ್ಷಣಾವೈಖರಿ, ಅವರ ಧರ್ಮನಿಷ್ಠೆ, ನಿಸ್ವಾರ್ಥ ಬದುಕು, ಆಡಳಿತ, ರಾಷ್ಟ್ರರಕ್ಷಣೆಯ ದೀಕ್ಷೆ, ಸದಾ ಜಾಗರೂಕತೆ ಇವು. ಇದನ್ನು ಗಮನದಲ್ಲಿಡದೆ, ಭಾಜಪಕ್ಕೆ ಅಧಿಕಾರಕ್ಕೆ ಬರಲು ಅಡ್ಡಿಮಾಡಿದರೆ, ಕೋತಿ ಬೆಣೆ ಕಿತ್ತಂತೆ ಮಾತ್ರ ಆಗುತ್ತದೆ. ಕಾಲು, ಬಾಲ, ನಡುವೆ ಸೀಳುಗಳಲ್ಲಿ ಸಿಕ್ಕು, ಬೆಣೆ ತೆಗೆದಾಗ, ಕೊಯ್ದ ಸೀಳುಗಳು ಸೇರುವಂತೆ ಆದರೆ ಇದು ಘಟಬಂಧನವೆನ್ನುತ್ತೀರಾ? ಕೊಯ್ದಿದ್ದು ಒಂದಾದರೆ ಯಾರ ಬಾಲವೇನು? ಯಾರ ಕಾಲೇನು? ಬಿಡಿಸುವ ಮೋದಿ ಯಾರು? ಹಾಗಾಗಿದೆ ಇಲ್ಲಿನ ಸ್ಥಿತಿ.

ಇನ್ನೊಂದು ಕತೆ ಹೇಳುತ್ತೇನೆ. ಒಂದು ಅಡವಿ, ಅಲ್ಲೊಬ್ಬ ಮಡಿವಂತ ವಿಪ್ರ ಹಾದುಹೋಗುತ್ತಿದ್ದ. ಮೈತುಂಬ ನಾಮಗಳು. ಅದನ್ನೊಂದು ಹುಲಿ ನೋಡಿತು. ತನಗೂ ಪಟ್ಟೆಗಳಿವೆ, ಸ್ವಾಭಾವಿಕ; ಈ ವಿಪ್ರನದು ಬಳಿದುಕೊಂಡ ಕೃತಕಗಳು! ‘ಏನಯ್ಯ ವಿಶೇಷ?’ ಎಂದು ವಿಪ್ರನನ್ನು ಕೇಳಿತು. ಪೆದ್ದ, ರಾಜಕೀಯ ಪ್ರಜ್ಞಾಶೂನ್ಯ ವಿಪ್ರ ಹೇಳಿದ- ‘ಇಂದು ಏಕಾದಶೀ ವ್ರತ! ನಾಳೆ ದ್ವಾದಶೀ ಪಾರಣೆ. ಅದಕ್ಕಾಗಿ ಈ ದಿನ ಹರಿಸ್ಮರಣೆಗಾಗಿ ಈ ವೇಷ, ಇಂದು ಉಪವಾಸ’ ಅಂತ. ಹುಲಿಗೆ ದಿಗ್ಭŠಮೆಯಾಯ್ತು. ‘ಉಪವಾಸ ಎಂದರೇನು? ಪಾರಣೆ ಎಂದರೇನು?’ ಎಂದು ಪ್ರಶ್ನಿಸಿತು. ವಿಪ್ರ ಹೇಳಿದ- ‘ಇಂದು ಏನೂ ತಿನ್ನಬಾರದು. ಅದು ಉಪವಾಸ. ದಿನಾ ಒಂದು ದೇವಸ್ಥಾನಕ್ಕೆ, ಮಠಕ್ಕೆ ಹೋಗಬೇಕು. ನಾಳೆ ಪೂರ್ತ ತಿನ್ನಬೇಕು. ದ್ವಾದಶೀ ಪಾರಣೆ ಎಂದರೆ ಅದು. ಭರ್ಜರಿ ಊಟ’ ಅಂತ. ಹುಲಿಗೆ ಇಷ್ಟು ತಿಳಿಯಿತು- ‘ಇಂದು ಉಪವಾಸ ನಾಟಕ! ನಾಳೆ ಪಾರಣೆಯ ಫಲ!’ ಅಂತ. ಧ್ಯಾನ, ಮೌನ, ಜಾಗರಣೆ, ಚಿಂತನೆ, ಭಜನೆ ಇದಾವುದನ್ನೂ ವಿಪ್ರ ಹೇಳಲೂ ಇಲ್ಲ, ಹುಲಿ ಕೇಳಲೂ ಇಲ್ಲ, ತಿಳಿಯಲೂ ಇಲ್ಲ. ಸರಿ, ಸ್ವಭಾವ ಬದಲಾಗದ ಹುಲಿ, ಹೇಗೋ ಹಸಿವಡಗಿಸಿ ಉಪವಾಸಶಾಸ್ತ್ರ ಮಾಡಿತು. ಮರುದಿನ, ‘ಹುಲಿಯ ಸ್ವಭಾವ ಬದಲಾಗಿದೆ’ ಎಂದು ಭ್ರಮಿಸಿದ ಜಿಂಕೆಗಳು, ಗೋವುಗಳು, ಆಡುಗಳು ಕೊನೆಗೆ ಆ ವಿಪ್ರನೂ ‘ತನ್ನ ಬೋಧನೆ ಫಲ ಕೊಟ್ಟಿತಲ್ಲ!’ ಎಂಬ ಹುಸಿಹಿಗ್ಗಿನಿಂದ ಹುಲಿಯ ಎದುರಿಗೆ ಸಾಲಾಗಿ ಕುಳಿತು, ಏಕಾದಶೀ, ದ್ವಾದಶೀ ಆಚರಣೆಯ ಫಲ ತಿಳಿಯಲು, ಉಪನ್ಯಾಸ ಕೇಳಲು ಕಾತರವಾದವು! ಆಗ ಹುಲಿ ಚಂಗನೆ ನೆಗೆದು ಆ ಪ್ರಾಣಿಗಳನ್ನೂ, ವಿಪ್ರನನ್ನೂ ತಿಂದುಹಾಕಿತು! ಉಪವಾಸ ಮಾಡದಿದ್ದರೆ ದಿನಕ್ಕೆ ಒಂದೋ ಎರಡೋ ಜಿಂಕೆ, ಹಸುಗಳನ್ನು ತಿನ್ನುತ್ತಿದ್ದ ಹುಲಿಗೆ, ಈ ಅಸಾಮಾನ್ಯ ಹಸಿವಿನಿಂದ ಅಂದು ಎಲ್ಲವನ್ನೂ ತಿನ್ನುವ ಹಸಿವು, ಆಸೆ, ಶಕ್ತಿ, ಜೀರ್ಣಶಕ್ತಿ ಬಂದಿತ್ತಂತೆ.

ಸೂಕ್ತಿಯೊಂದನ್ನು ಕೇಳಿ- ‘ಅಸತ್ ಸ್ವಭಾವದವರು ಧರ್ಮಬುದ್ಧಿ ಬಂದಿತೆಂದು ನಾಟಕವಾಡಿದರೆ, ಅದು ನಿಜ ಸತ್ಪುರುಷರಿಗೆ ಪ್ರಾಣಾಪಾಯವನ್ನೇ ತರುತ್ತದೆ. ಹುಲಿಯ ಧರ್ಮ ಉಪವಾಸ ಅಲ್ಲ. ಅದರ ಜಾಯಮಾನದಲ್ಲಿಲ್ಲದ್ದು ಈ ವ್ರತ. ಅದನ್ನು ಹುಲಿ ಮಾಡಿದರೆ, ಸಿಕ್ಕಸಿಕ್ಕ ಪ್ರಾಣಿಗಳನ್ನೆಲ್ಲ ತಿನ್ನುವುದೇ ‘ಪಾರಣೆ’ ಆಗಿಬಿಡುತ್ತದೆ, ಜಾಗ್ರತೆ!’ ಎಂದರ್ಥ. ‘ಅಸತ್ ಪುರುಷರಿಗೆ ಧರ್ಮಬುದ್ಧಿ ಬರಬಾರದೆ?’ ಎಂದು ಕೇಳಿದರೆ, ನಿಜಪರಿವರ್ತನೆ ಆದರೆ ಸರಿ! ಆದರೆ ಸ್ವಭಾವ ಬಿಡದೆ ನಾಟಕವಾಡಿದರೆ ಲೋಕಕ್ಕೆ ಹಾನಿ ತಪ್ಪದು. ಒಂದು ಪಕ್ಷದ ಮುಖಂಡನನ್ನು, ಆ ಪಕ್ಷದ ಒಂದು ಕಾಲದ ಘಟಬಂಧನದಲ್ಲಿದ್ದ ಒಬ್ಬ ಧುರೀಣ ‘ಬಫೂನ್’ (ಸರ್ಕಸ್ಸಿನ ವಿದೂಷಕ) ಎಂದು ವರ್ಣಿಸಿದ! ಈ ‘ಹುಲಿ’ ಹೇಳುತ್ತದೆ- ‘ಹಾಗಲ್ಲ! ಅವನಿಗೆ ನಾಯಕತ್ವದ ಎಲ್ಲ ಗುಣಗಳೂ ಇವೆ. ಘಟಬಂಧನದ ನಾಯಕತ್ವಕ್ಕೆ ಅವನು ಅರ್ಹ’ ಅಂತ. ಬಂಗಾಳ, ಆಂಧ್ರ, ದೆಹಲಿ, ಕೇರಳ ಆದಿಯಾಗಿ ಯಾವ ಪ್ರತಿಪಕ್ಷ ನಾಯಕರೂ ಒಪ್ಪದ ಈ ಶಹಬ್ಬಾಸ್​ಗಿರಿಯನ್ನು ಕರ್ನಾಟಕ ಒಪು್ಪತ್ತದೆ! ಏಕೆ? ಇಲ್ಲಿ ಹಸಿದ ಹುಲಿಗಳೇ ಹೆಚ್ಚು. ಕೇಳಿ, ಇವರ ಪ್ರಕಾರ ‘ಫೆಡರಲಿಸಂ’ ಎಂದರೆ- ಗಣತಂತ್ರ ಎಂದರೆ- ನಿರಂತರವಾಗಿ ಕೇಂದ್ರದ ಮೇಲೆ ಹೋರಾಟ ಎಂದು! ಇದು ಅನಾರೋಗ್ಯದ ಚಿಹ್ನೆ! ಕೌಟಿಲ್ಯ ಹೇಳಿದ- ಕೇಂದ್ರ ಗಟ್ಟಿ, ಬಲಶಾಲಿ ಇರಬೇಕು- ಅಂತ. ಅವನೂ ಗಣತಂತ್ರವಾದಿಯೇ, ಮಹಾಭಾರತ ರೀತಿಯಲ್ಲಿ. ಹೇಗೆ? “Pluralistically determined monism’ = ರಾಷ್ಟ್ರ ಅಂತ. ‘ಬಹುತ್ವಾಧಾರಿತ, ಬಹುತ್ವ ನಿರ್ಧಾರಿತ, ಏಕತ್ವಾಡಳಿತ’ ಅಂತ. ಪ್ರೊ. ಎಂ.ವಿ. ಕೃಷ್ಣರಾಯರ “Studies in Kautilya’ ಪುಸ್ತಕವನ್ನು ಕರ್ನಾಟಕ ಧುರೀಣರು ಓದಿ, ಕಾರ್ಯನಿರತರಾದರೆ, ನಾವೂ ನೀವೂ ಕರ್ನಾಟಕವೂ ಉಳಿಯುತ್ತೆ. ಇಲ್ಲವಾದರೆ ಇಂದಿರಾರನ್ನು ಚಿಕ್ಕಮಗಳೂರಿಗೆ ತಂದ ಅರಸರ ಗತಿಯಾಗುತ್ತೆ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)