ಪ್ರಾದೇಶಿಕ ಪಕ್ಷಗಳೆಂಬ ಪ್ರಹಸನದ ಸುತ್ತ-ಮುತ್ತ

ಪ್ರಾದೇಶಿಕ ಪಕ್ಷಗಳು ಸ್ಪಷ್ಟ ಚಿಂತನೆ, ಗುರಿಯನ್ನು ಹೊಂದಿಲ್ಲ. ರಾಷ್ಟ್ರೆೊಧ್ಯೇಯದ ತತ್ತ್ವ, ರಾಷ್ಟ್ರಚಿಂತನೆ ಎಲ್ಲವನ್ನೂ ಮರೆತು ಕೇವಲ ಅಧಿಕಾರಕ್ಕಾಗಿ ಹಪಹಪಿಸುತ್ತ ರಾಜಕೀಯ ಅವಕಾಶವಾದಿತನವನ್ನು ಸಾಧಿಸುತ್ತಿವೆ. ಇದು ಶೋಚನೀಯ ಬೆಳವಣಿಗೆಯೇ ಹೌದು.

‘ಪ್ರಹಸನ’ ಎಂದರೆ ನಗೆನಾಟಕ, ವಿಡಂಬನಾತ್ಮಕ, ಟೀಕಾತ್ಮಕ ಎಂಬುದು. ಇವಕ್ಕೆ ಒಂದು ನಿರ್ದಿಷ್ಟ ಥೀಮ್ ಎಂಬ ವಸ್ತು, ಪ್ರತಿಪಾದನಾರ್ಹವಾದ ತತ್ತ್ವ, ಧನಾತ್ಮಕವಾದ ಚಿಂತನೆ ಇರುವುದಿಲ್ಲ. ಯಾರನ್ನೋ ಗುರಿಯಾಗಿಸಿಕೊಂಡು ನೋಯಿಸಿ, ಚುಚ್ಚುವಂತೆ ಆ ಮೂಲಕ ಒಂದು ಉದ್ದಿಷ್ಟ ಗುರಿಯತ್ತ ಜನರ ಚಿಂತನೆಯನ್ನು ಹರಿಯ ಬಿಡುವುದು. ಹಿಂದೆ ಗಂಭೀರನಾಟಕಗಳ ನಡುವೆಯೂ ಪ್ರೇಕ್ಷಕರಿಗೆ ಸ್ವಲ್ಪ ವಿಶ್ರಾಂತಿಯಂತಹ, ಬೇರೊಂದತ್ತ ಮನ ತಿರುಗಿಸುವ ‘ವಿಷ್ಕಂಭ’ ರೀತಿಯ ದೃಶ್ಯಗಳು ಇರುತ್ತಿದ್ದವು. ವಿದೂಷಕನ ಪಾತ್ರ ರಂಜನೆಯ ಜತೆಗೆ ಮೂಲವಸ್ತುವಿನ ಅಪೂರ್ವ ವಿನ್ಯಾಸವನ್ನೂ ಒದಗಿಸುತ್ತಿತ್ತು. ಶೇಕ್ಸ್ ಪಿಯರನ ನಾಟಕಗಳಲ್ಲಿ ಒಂದು “Forbs’ ದೃಶ್ಯಗಳು ಉದಾಹರಣೆ. ಇವು ಸ್ವತಂತ್ರ ಕೃತಿಗಳಾಗಿ ತಲೆಯೆತ್ತಲು ಯೋಗ್ಯತೆ ಇಲ್ಲದವು. ನಾಟಕ, ತ್ರೋಟಕ, ಭಾಣ, ನಾಟಿಕಾ ಎಂಬ ಪ್ರಭೇದಗಳೂ ಹಿಂದೆ ನಮ್ಮಲ್ಲೇ ಇದ್ದವು. ಇಂಥವಕ್ಕೆ ಸ್ವತಂತ್ರ ಕಥಾಹಂದರ, ನಾಯಕ-ನಾಯಕಿಯರು, ನಿರ್ದಿಷ್ಟ ಆರಂಭ, ಅಂತ್ಯ ಅಂತಿರದೆ ಅವು ಹೇಳಹೆಸರಿಲ್ಲವಾದವು. ಇದನ್ನು ನೆನಪಿಸುತ್ತಿರುವುದೇಕೆಂದರೆ ನಮ್ಮ ಇಂದಿನ ಪ್ರಾದೇಶಿಕ ಪಕ್ಷಗಳ ಸ್ಥಿತಿಯೂ, ಅವುಗಳ ಒಡೆಯರ

ಸ್ಥಿತಿಯೂ ಹಾಗೇ ಇದೆ.

ದ್ರವಿಡ ಪಕ್ಷಗಳಿಗೆ ಎಂಥ ಗುರಿ? ಏನು ಬಗೆಯ ರಾಷ್ಟ್ರೀಯ ಕಲ್ಪನೆ ಇದೆ? ಅಧಿಕಾರ ಹಿಡಿಯಬೇಕು, ಹಣ ಮಾಡಬೇಕು, ಮೆರೆಯಬೇಕು, ವಂಶಪಾರಂಪರ್ಯವಾಗಿ ಆಡಳಿತ ದಕ್ಕಿಸಿಕೊಳ್ಳಬೇಕು, ಆಗದವರನ್ನು ಮಟ್ಟಹಾಕಬೇಕು, ಅದಕ್ಕೆ ಜನರ ಕಣ್ಣಿಗೆ ಮಣ್ಣೆರಚಲು ಒಂದು ಎಂಥದೋ ಪ್ರಣಾಳಿಕೆ, ಅದರಲ್ಲಿ ಉಪು್ಪ, ಹುಳಿ, ಖಾರ, ಸಿಹಿ ಏನೂ ಇಲ್ಲದ ರ್ಚವಿತಚರ್ವಣವಾದ ಸವಕಲು ಶಬ್ದಗಳೇ ಇರಬೇಕು. ಸೆಕ್ಯುಲರಿಸಂ, ಸಮಾನತೆ, ‘ಕೋಮುವಾದಿಗಳನ್ನು ದೂರ ಇಡುತ್ತೇವೆ’ ಎಂಬ ನಿರಾಧಾರ, ನಿರ್ಭವಿಷ್ಯ ಪೊಳ್ಳು ಭರವಸೆ, ವೋಟು ಹಿಡಿಯಲು ಹಣ ಹರಿಯುವುದು- ಹಾಗೆನ್ನಬಾರದು! ದಕ್ಷಿಣಿ ಎನ್ನಿ! ಬಡವರಿಗೆ ಕೊಡುಗೆ ಎನ್ನಿ, ಲ್ಯಾಪ್​ಟಾಪ್, ಸೈಕಲ್, ಸಿಲಿಂಡರ್, ಹೊಲಿಗೆಯಂತ್ರ, ವೀಲ್​ಚೇರ್, ಸೀರೆ, ಪಂಚೆ- ಬಿಡಿ, ಹೆಂಡ ಇದ್ದೇ ಇರುತ್ತವೆ- ಕೈ ಮುಗಿಯುತ್ತ ತೆರೆದ ವಾಹನಗಳಲ್ಲಿ ಮಾರಿ ಮೆರವಣಿಗೆ, ಎಲ್ಲೆಲ್ಲೂ ಭಿತ್ತಿಪತ್ರ, ಕರಪತ್ರಗಳ ಕಸ, ರಾಶಿರಾಶಿ, ಅರಚಾಟ, ಕೆಸರೆರಚಾಟ-ಇದೇ ಅಲ್ಲವೆ ಪ್ರಹಸನ? ಇದೇ ಅಲ್ಲವೆ ಮೋದಿ ಆಡಳಿತದ ಅವಧಿ ಮುಗಿದು ಮತ್ತೊಂದು ಅವಧಿಯ ನಡುವಿನ ವಿಷ್ಕಂಭ? ನೀವು ಮೋಸ ಹೋಗುತ್ತೀರಿ-ಡಿಎಂಕೆ ಅಂದರೂ ಅದೇ ಎಐಎಡಿಎಂಕೆ ಎಂದರೂ ಅದೇ, ಜೆಡಿಎಸ್ ಎಂದರೂ ಅದೇ, ತೆಲುಗುದೇಶಂ ಎಂದರೂ ಅದೇ, ಟಿಆರ್​ಎಸ್ ಎಂದರೂ ಅದೇ, ಟಿಎಂಸಿ ಎಂದರೂ ಅದೇ, ಬಿಎಲ್​ಡಿ ಎಂದರೂ ಅದೇ, ಬಿಜೆಡಿ, ಆರ್​ಎಲ್​ಜೆ ಎಂದರೂ ಅದೇ! ಅಕ್ಷರಗಳ ಮೋಸ! ಎಸ್​ಪಿ ಎಂದರಲ್ಲ ಮುಲಾಯಂ? ಯಾರಿಗೆ ಮುಲಾಯಂ ‘ಮುಲಾಂ’ ಹಚ್ಚಿದರು? ಯಾರಿಗೆ ‘ಸಲಾಂ’ ಸಲ್ಲಿಸಿದರು? ರಕ್ಷಣಾ ಮಂತ್ರಿಯಾಗಿ ಸಾಧಿಸಿದ್ದೇನು? ‘ಸೇನೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ಬೇಕು’ ಎಂದು ಹುಯಿಲೆಬ್ಬಿಸಿದರಲ್ಲ?

ವಾಜಪೇಯಿಯವರಿಗೆ ಗೊತ್ತಿತ್ತು ಈ ನರಿಬುದ್ಧಿಯ ರಾಜಕಾರಣದ ಮಸಲತ್ತು. ಅಯೋಧ್ಯಾ ಕರಸೇವಕರ ಕೊಲೆಗೈಸಿ, ರಕ್ತಹರಿಸಿದ ‘ದೇಶಭಕ್ತ’ ಈತನಲ್ಲವೇ? ಮುಲಾಯಂ? ಜನ ಮರೆಯುತ್ತಾರೆಯೇ? ಕಾಶ್ಮೀರದಲ್ಲಿ ಎನ್​ಸಿ ಎಂದರೂ ಪಿಡಿಪಿ ಎಂದರೂ ಅದೇ- ಎಲ್ಲ ಪ್ರತ್ಯೇಕತಾವಾದಿಗಳು! ಕಾಂಗ್ರೆಸ್ಸು ಇವರನ್ನು ಮೆಂಟೆನ್ ಮಾಡಿ, ಹಣ ಕೊಟ್ಟು, ಸೌಲಭ್ಯ ಇತ್ತು, ಸಮಸ್ಯೆ ಸಾಯದಂತೆ, ತನಗೆ ಅನುಕೂಲಕರ ಏಜೆಂಟರಾಗಿರುವಂತೆ, ಇವರನ್ನು ಬೆಳೆಸಿ ಎತ್ತಿ ಹಿಡಿದು ಒಂದು ದುಷ್ಟ ಸಂಪ್ರದಾಯ ಹುಟ್ಟುಹಾಕಿತ್ತು. ಅಲ್ಲಿತ್ತು ‘ಹುರಿಯತ್’ ಎಂಬ ಗೋಮುಖ ವ್ಯಾಘ್ರ. ‘ಕಾಶ್ಮೀರ ಸ್ವಾತಂತ್ರ್ಯ ಹೋರಾಟ’ ಎಂಬುದು ನೆಪ! ಬೆದರಿಸಿ, ಕೇಂದ್ರ ನಾಯಕರನ್ನು ಬಲೆಗೆ, ಬುಟ್ಟಿಗೆ ಹಾಕಿಕೊಂಡು, ಸೌಲಭ್ಯ ಗಿಟ್ಟಿಸಿ ಮೆರೆಯುವುದು! ಇದು ಶೇಖ್ ಅಬ್ದುಲ್ಲ ಕಾಲದಿಂದ ನೆಹ್ರೂ ನೀರೆರೆದು ಬೆಳೆಸಿದ ಮಹಾ ವಿಷವೃಕ್ಷ! ವಾಜಪೇಯಿಯವರಿಗೆ ‘ಭಾಜಪ’ದ ‘ಕೋಮುವಾದಿ’, ಅಪಪ್ರಚಾರ ತೊಡೆದುಕೊಳ್ಳಲು ಈ ಎಲ್ಲ ನಿಷ್ಕಿ›ಯ ಪಕ್ಷಗಳೇ ಬೇಕಾದವು- ಡಿಎಂಕೆ, ಆರ್​ಜೆಡಿ, ಎನ್​ಸಿಪಿ, ಎನ್​ಸಿ-ಹೀಗೆ ಎಲ್ಲ ಬಾಲಬಡುಕ ಪಕ್ಷಗಳನ್ನೂ ಹೆಣೆದು ‘ಹಗ್ಗ’ ಹೊಸದದ್ದೇ ಸಾಧನೆ. ಈ ಪಕ್ಷಗಳು ತಮ್ಮ ‘ಚಾಳಿ’ ಬಿಡಲಿಲ್ಲ. ‘Local interests’ ಎಂಬ ಪರದೆಯ ಹಿಂದೆ ಅವಿತು ಬೇಳೆ ಬೇಯಿಸಿಕೊಂಡರು. 23 ಪಕ್ಷಗಳ ಮಹಾಘಟಬಂಧನ ಆಗ ಕಾಂಗ್ರೆಸ್ಸನ್ನೂ, ಕಮ್ಯುನಿಷ್ಠರನ್ನೂ ಹೊರಗಿಟ್ಟುದೊಂದೇ ಸಾಧನೆಯಾಯ್ತು. ಇವು ಮತ್ತೆ ಮತ್ತೆ ತಲೆ ಎತ್ತುತ್ತ, ಮಾರೀಚನಂತೆ ಮಾಯಾವಿಲಾಸ ತೋರಿಸುತ್ತ, ಭಾರತೀಯತ್ವ, ರಾಷ್ಟ್ರೀಯತೆಯ ಧ್ಯೇಯಗಳಿಗೆ ವಂಚಿಸುತ್ತ, ಕಾಯ್ದೆ, ಕಾನೂನುಗಳಿಗೆ ಮೀರಿ ನಡೆಯುತ್ತ, ಆಡಿದ್ದೇ ಆಟ ಎಂಬಂತೆ ಇಷ್ಟೂ ವರ್ಷ ಮೆರದರು! ಈಗ ಪ್ರಹಸನ ಮುಗಿಯುವ ಕಾಲ. ರಂಗಭೂಮಿಯಲ್ಲಿ ಎಲ್ಲವೂ ಕಾಲಾಧೀನ. ಕಾಲ ಮೀರಿದರೆ ಪರದೆ ಎಳೆಯಬೇಕಾಗುತ್ತದೆ.

ಈಗ ಪ್ರತಿ, ಪುಟ್ಟ ಪಕ್ಷಗಳು ಒಗ್ಗೂಡಲು ಯತ್ನಿಸುತ್ತಿವೆ. ಮೋದಿ ಎಂಬ ಬೃಹತ್ ಬೆಕ್ಕಿಗೆ ‘ಗಂಟೆ’ ಕಟ್ಟಲು ಯತ್ನ. ಕಟ್ಟುವ ಇಲಿ ಯಾರು? ಇಟಲಿಯ ಏಜೆಂಟರೇ? ಕರ್ನಾಟಕದ ‘ಆಶಾದೀಪ’ಗಳೇ? ಆಕಾಶಬುಟ್ಟಿಗಳೇ? ಮಾಯಾ? ಉಹೂಂ… ಮಮತಾ? ಉಹೂಂ. ಕಿಂಗ್​ಲಿಯರ್ ನಾಟಕದ ಗಾನೆರಿಲ್, ರೀಗನ್ ಎಂಬ ದೊರೆಯ ಪುತ್ರಿಯರು, ಒಬ್ಬರು ಇನ್ನೊಬ್ಬಳನ್ನು ಕೊಲ್ಲಲು, ಪರಸ್ಪರ ವಿಷಮಿಶ್ರಿತ ವೈನ್ ಕುಡಿಸಿ, ಕುಡಿದು ಸತ್ತಂತೆ ಮೋದಿಗೆ, ಭಾರತೀಯತ್ವಕ್ಕೆ, ರಾಷ್ಟ್ರೀಯನಿಷ್ಠೆಗೆ ವಂಚಿಸಲು ಹೋಗಿ, ಈಗ ಹಿಂದೆ ಪಡೆದ ಅಧಿಕಾರದ ಮತ್ತಿನಲ್ಲಿ ಉರುಳಿ, ಇನ್ನೇನು ನಾಮಾವಶೇಷರಾಗಲಿದ್ದಾರೆ! ಈ ಪ್ರಾದೇಶಿಕ ಪಕ್ಷಗಳ ಹೊಸ ಕೂಗು-ಸ್ಲೋಗನ್ ಏನು ಗೊತ್ತೆ? ‘ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತ, ಫೆಡರಲಿಸಂ, ಬಹುತ್ವ, ನಾನಾತ್ವಗಳನ್ನೊಳಗೊಂಡ ಪ್ರಜಾತಂತ್ರವನ್ನು ಸಾಯಿಸುತ್ತಿದ್ದಾರೆ’ ಎಂದು. ಇದನ್ನು ತುರ್ತಾಗಿ ವಿಚಾರಿಸಿ ಸತ್ಯ ಅರಿಯುವುದಿದೆ.

ಫೆಡರಲಿಸಂ ಎಂಬುದು ಪಾಶ್ಚಾತ್ಯರಿಂದ ತಿಳಿಯಲ್ಪಡಬೇಕಾದ ಹೊಸ ರಾಜಕಾರಣ ತಂತ್ರವಲ್ಲ! ಪ್ರಕೃತಿಯಷ್ಟು ಹಳೆಯದು. ಹೇಗೆಂದು ನೋಡಿ. ದೇವರು ನಮಗೆ ಎರಡು ಕಾಲು, ಎರಡು ಕೈ, ಮೂಗಿನ ಹೊಳ್ಳೆಗಳೆರಡು, ಕಂಗಳೆರಡು, ಕಿವಿಗಳೆರಡು, ಮಿದುಳಿನಲ್ಲೂ ಎರಡು ಭಾಗಗಳು, ಶ್ವಾಸಕೋಶಗಳೆರಡು ಎಂದು ಎಲ್ಲೆಲ್ಲೂ ‘ದ್ವೈತ’ವನ್ನು ಮೆರೆದರೂ, ‘ಹೃದಯ’ವನ್ನು ಮಾತ್ರ ಒಂದೇ ಇತ್ತ! ಜೀರ್ಣಾಂಗ, ರಕ್ತ ಸಂಚಲನ, ಉಸಿರಾಟ, ಮೇದೋಜೀರಕ, ಪಿತ್ಥಕೋಶ-ಇವು ಯಾವೂ ಒಂದರೊಡನೊಂದು ಹೋರಾಡುವುದಿಲ್ಲ. ಎಲ್ಲವೂ ಹೃದಯಕ್ಕೆ ವಿಧೇಯ. ನೋ ರೆಬಲ್ಸ್! ಇಲ್ಲಿ ಕರ್ನಾಟಕದ ಕಾಂಗ್ರೆಸ್ಸು ಧುರೀಣರು ಗುಜರಾತಿನ ಅಹ್ಮದ್ ಪಟೇಲ್ ಕಡೆಯವರ ಗೆಲುವಿಗೆ ತಲೆನ ಹಾಕಿ ಎಂಎಲ್​ಎಗಳನ್ನು ಇಲ್ಲಿನ ರೆಸಾರ್ಟ್​ಗೆ ಕರೆತಂದು, ಕೂಡಿ ಹಾಕಿ, ಬಲಾತ್ಕಾರ ವೋಟು ತರಿಸಿ ಗೆಲ್ಲಿಸುತ್ತಾರೆ. ಇದು ಫೆಡರಲ್ ಆದೀತೆ? ಆಂಧ್ರದಲ್ಲಿ ಎನ್​ಟಿಆರ್ ಕಾಲದಲ್ಲೂ ಇದೇ ಆಯ್ತು. ಜಯಲಲಿತಾ ಉತ್ತರಾಧಿಕಾರಿಯಾಗಲು ಶಶಿಕಲಾ ಮಾಡಿದ್ದೂ ಇದನ್ನೇ! ಕೇಂದ್ರವನ್ನು ಟೀಕಿಸುವುದು ಬೇರೆ, ಕತ್ತಿ ಮಸೆಯುವುದು ಬೇರೆ! ರಚನಾತ್ಮಕ ವಿರೋಧ ಬೇರೆ, ತಾನು ಅಧಿಕಾರ ಹಿಡಿಯಲು ಮಾರೀಚ ತಂತ್ರ ಮಾಡುವುದೇ ಬೇರೆ. ಮರದಲ್ಲಿ ಕಾಂಡ ಒಂದೇ. ಬೇರು ಬಹಳ, ಟೊಂಗೆಗಳೂ, ಎಲೆಗಳೂ ಬಹಳ.

ಅದು ಫೆಡರಲಿಸಂ. ಕೌಟಿಲ್ಯ ಹೇಳುವ ‘ಬಹುತ್ತ್ಪಾತ್ಮಕಕವಾಗಿ ನಿರ್ಧರಿಸಲ್ಪಡುವ ಏಕತ್ವ’. “Unity in Diversity’ ಎಂಬುದೂ ಇದೆ. ಹುಡುಗರಿಗೂ ತಿಳಿಯುವ ಈ ವಿಷಯ ನಮ್ಮ ಇಂದಿನ ಪಾಳೆಯಗಾರರಿಗೆ ತಿಳಿಯದೇ ಇರಲು ಅವರ ಸ್ವಾರ್ಥವೇ ಕಾರಣ. ತಮಗೆ ಅನುಕೂಲವಾಗುವಂತೆ ಕೇಂದ್ರದ ವಿರುದ್ಧ ಈ ನಿಷ್ಕಿ›ಯ ಸರ್ಕಾರಗಳೇ ‘ಬಂದ್’ ಆಚರಿಸುತ್ತವೆ. ರೌಡಿಗಳ ಸೇನೆಯನ್ನು ಛೂ ಬಿಡುತ್ತವೆ. ರಾಜಕೀಯ ಕೊಲೆಗಳಾಗುತ್ತವೆ. ಬಂಡಾಯ ಸೇನೆಗಳಿಗೆ ‘ಕಪು್ಪಹಣ’ ಸಂಬಳ ದೊರೆಯುತ್ತದೆ. ಅಲ್ಲಿ ಬುದ್ಧಿಜೀವಿಗಳೆಂಬವರಿಗೂ ಗಾಂಧಿವಾದಿಗಳಿಗೂ ಪ್ರೋತ್ಸಾಹ(ಧನ) ದೊರೆಯುತ್ತದೆ. ಮತಾಂಧಶಕ್ತಿಗಳಿಗೆ ಪ್ರೋತ್ಸಾಹ ಸಿಕ್ಕಿ ದಾಂಧಲೆ ನಡೆಯುತ್ತವೆ. ‘ಗಾಂಧಿ’ ಹೆಸರು ಬೇಕಾ? ‘ನೆಹ್ರೂ’ ಹೆಸರೋ ಅನಿವಾರ್ಯ! ‘ಇಂದಿರಾ?’ ಅಯ್ಯಯ್ಯಪ್ಪ-ಇವೆಲ್ಲ ಮಹಾಮಂತ್ರಗಳು. ಈಗ? ಇಂದ್ರಜಿತ್ತನ ನಿಕುಂಭಿಲಾಯಾಗ ಕೆಟ್ಟು ಮಾಯಾವೀ ಹೊರಬರುವ ಕಾಲ! ಮಾರೀಚ ಸತ್ತಾಯ್ತು. ಅವನ ತಾಯಿ ತಾಟಿಕೆ ಎಂದೋ ಹೋದಳು. ಶೂರ್ಪನಖಿಗೆ ಮೂಗು ಹೋದರೂ ‘ಕಿಂಯರ್’ ಎನ್ನುತ್ತ ರಾವಣ ಸಂಹಾರವನ್ನು ಮರೆಯಲ್ಲಿ ನಿಂತು ವೀಕ್ಷಿಸುತ್ತಿದ್ದಾಳೆ. ವೀಕ್ಷಕ ವಿವರಣೆಗೆ ಟಿ.ವಿ.ಗಳೂ, ಆಂಕರ್​ಗಳೂ ಇದ್ದೇ ಇದ್ದಾರೆ. ರಾಮಾಸ್ತ್ರ ಪ್ರಯೋಗನಿಷ್ಠ ಪತ್ರಿಕೆಗಳೂ, ವಿದ್ಯುನ್ಮಾನಗಳೂ, ಬೇರೆ ಸಾಧನಗಳೂ ಇವೆ! ರಾವಣ! ನಿನ್ನ ಹತ್ತು ತಲೆಗಳ ಘಟಬಂಧನ ಏನಾಯ್ತು? ಒಂದೇ ರಾಮಾಸ್ತ್ರಕ್ಕೆ ರಾವಣನು ಸತ್ತ. ಏಕೆ? ಬಾಣಬಿಟ್ಟದ್ದು ಎದೆಗೆ! ತಲೆಗಳಿಗಲ್ಲ! ಆ ಎದೆ ಈಗ ಅರ್ಬನ್ ನಕ್ಸಲರಲ್ಲಿದೆ. ತಿಳಿಯಿತೇ?

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)