Friday, 16th November 2018  

Vijayavani

Breaking News

ಅವರಿಗೆ ಬೇಕು ನಮ್ಮ ನೆಲ! ಇವರಿಗೆ ಬೇಕು ಅವರ ವೋಟು!

Tuesday, 14.08.2018, 3:05 AM       No Comments

ಅರಾಷ್ಟ್ರೀಯ ತತ್ತ್ವಗಳಿಗೆ, ಶಕ್ತಿಗಳಿಗೆ ಬೆಂಬಲ ಸಿಗಬಾರದು. ನುಸುಳುಕೋರರು ಇಲ್ಲಿನ ಮೂಲನಿವಾಸಿಗಳಿಗೇ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂಬ ಸತ್ಯವನ್ನು ಗ್ರಹಿಸಬೇಕು. ಎಲ್ಲವನ್ನೂ ವೋಟ್​ಬ್ಯಾಂಕ್ ದೃಷ್ಟಿಯಿಂದ ನೋಡದೆ ರಾಷ್ಟ್ರೀಯ-ರಾಷ್ಟ್ರೀಯರ ಹಿತವನ್ನು ಪರಿಗಣಿಸಬೇಕು.

‘ಕಣ್ಣೆದುರೇ ನಿಮ್ಮ ಸರ್ವಸ್ವವನ್ನೂ ಕದಿಯುವವರು’-ಇವರನ್ನು ಶ್ರೀಕೃಷ್ಣ ‘ಪ್ರತ್ಯಕ್ಷಹರರು’ ಎಂದು ಅಂದೇ ಕರೆದ. ಜೂಜಿನಲ್ಲಿ ಪಾಂಡವರ ಎಲ್ಲವನ್ನೂ ಎರಡು ಪಗಡೆ ದಾಳದಲ್ಲಿ ಕದ್ದವನು ಶಕುನಿ. ಇಂದು ಎರಡು ಶಕುನಿಗಳು-ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು. ಹಾಸು ಹಾಸಿ ಈ ದ್ರೋಹಶಕ್ತಿಗಳಿಗೆ ನೆಲೆಯಿತ್ತವರು ನೆಹರು! ‘ತೀನ್​ವುೂರ್ತಿ ಭವನ’ ಆ ಶಕ್ತಿಗೆ ಸ್ಮಾರಕವಾಗಿ ಉಳಿಯಬೇಕೆಂಬುದು ಕಾಂಗ್ರೆಸ್ಸು ಹಠ. ಇವರೆಲ್ಲಿ ಸಲ್ಲುತ್ತಾರೆ? ಇಂದಿರಾ ಕಾಲದಲ್ಲಿ ನಮ್ಮ ಸೈನಿಕರು ಪ್ರಾಣತೆತ್ತು ಬಾಂಗ್ಲಾವನ್ನು ಪಾಕ್​ನ ಪಠಾಣರ ಕಪಿಮುಷ್ಟಿಯಿಂದ ವಿಮೋಚನ ಗೊಳಿಸಿದರು. ಅದಕ್ಕೆ ಪ್ರತ್ಯುಪಕಾರ? ಬಾಂಗ್ಲಾ ನುಸುಳುಕೋರರ ಹಾವಳಿ ಎಲ್ಲೂ-ಅಸ್ಸಾಂ, ಬಿಹಾರ, ಬಂಗಾಳ, ಉತ್ತರ ಪ್ರದೇಶ, ಬೆಂಗಳೂರು, ಕೊಡಗು-ಹೀಗೆ ಎಲ್ಲೆಲ್ಲೂ! ಇವರು ಕಾಂಗ್ರೆಸಿನ, ಟಿಎಂಸಿಯ ವೋಟುಬ್ಯಾಂಕುಗಳು! ಅವರನ್ನು ‘ಇನ್​ಫಿಲ್ಟೇ›ಟರ್ಸ್’ ಎನ್ನಬಾರದಂತೆ! ನಿರಾಶ್ರಿತರು ಎನ್ನಬೇಕೆಂದು ದುರ್ವಾದ! ರಾಜೀವರ ಕಾಲದಲ್ಲೇ All Assam Students Union (AASU) ಜತೆ ಒಂದು ಒಪ್ಪಂದವಾಗಿ, ಈ ಬಹುಸಂಖ್ಯೆಯ ನುಸುಳರನ್ನು Persona non Grata ಮಾಡಿ, ಭಾರತೀಯ ಪೌರತ್ವಕ್ಕೆ ಬಾಹಿರವಾಗಿ ಮಾಡಬೇಕೆಂಬ ನಿರ್ಣಯವಾಗಿತ್ತು. ಈಗ ಅದರ ಜಾರಿ ಬೇಡವೆಂದು ಕಾಂಗ್ರೆಸ್ಸು, ಟಿಎಂಸಿ ಇನ್ನಿತರ ಭಾರತೀಯ ಅಭಿಮಾನಶೂನ್ಯ ಪಕ್ಷಗಳ ಪಟ್ಟು. ‘ದೀದಿ’ ಎಂಬ ಇಂದಿನ, ಒಬ್ಬ ಅಸಾಧ್ಯ ಮಹಿಳೆ ತ್ರಿಶೂಲವನ್ನೇ ಹಿಡಿದು ನಿಂತಿದ್ದಾರೆ.

ಇನ್ನೂ ಹಿಂದೆ ಹೋಗಿ. ಭಾರತ ವಿಭಜನೆಯ ಕಾಲದಲ್ಲೇ ಬಾಂಗ್ಲಾ ಎಂಬ ಇಂದಿನ, ಅಂದಿನ ಪೂರ್ಣ ಪಾಕ್​ನ ಭಾಗದಿಂದ ಲಕ್ಷಗಟ್ಟಲೇ ಅಕ್ರಮ ವಲಸಿಗರು ಇತ್ತ ಬಂದರು. ಬೇಲಿಯಿಲ್ಲ, ಹಿಡಿಯುವರಿಲ್ಲ. ಹೇಳುವವರಿಲ್ಲ, ಕೇಳುವವರಿಲ್ಲ! ಆ ದುಷ್ಕಾಲದಲ್ಲಿ ನೆಹರು ‘ಔದಾರ್ಯ’ದಿಂದ ಅಕ್ರಮರು, ಆಕ್ರಮಕರಾಗಿ ಉಳಿದರು. ಆಗ ಬಂಗಾಳದ ನಾಯಕ ಶ್ಯಾಂಪ್ರಸಾದ್ ಮುಖರ್ಜಿಯವರು-‘ಪಶ್ಚಿಮ ಪೂರ್ವದಿಂದ ‘ವಲಸೆ’ ಹೆಸರಿನಲ್ಲಿ ನುಸುಳಿ ಬಂದವರಿಗಾಗಿ ಪಾಕ್ ನಮಗೆ ಅನುಪಾತಾನುಗುಣವಾಗಿ proportional ಆಗಿ ತನ್ನ ಭೂಮಿಯ ಭಾಗಗಳನ್ನು ಬಿಟ್ಟು ಕೊಡಬೇಕು, ಏಕೆಂದರೆ ವಿಭಜನೆಯ ಒಪ್ಪಂದ ಉಲ್ಲಂಘನೆ ಇದು, ಎಂದು ಒತ್ತಾಯಿಸಿ, ಸತ್ಯಾಗ್ರಹ ಹೂಡಿದರು. ಆಗ ನೆಹರು ದೋಸ್ತಿ ಶೇಖ್ ಅಬ್ದುಲ್ಲಾರ ಕಾಲ. ಕಾಶ್ಮೀರದ ಜೈಲಿನಲ್ಲಿ ಶ್ಯಾಂಪ್ರಸಾದರು ಅನುಮಾನಾಸ್ಪದವಾಗಿ ಸತ್ತರು. ಕಾಂಗ್ರೆಸ್ಸಿಗರ ಕಂಗಳಲ್ಲಿ ನೀರೇ ಬರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ 70 ವರ್ಷಗಳ ಕಾಲ ಎಷ್ಟು ಕೋಟಿ ನುಸುಳುಕೋರರು ಬಂದಿದ್ದಾರೆ? ಎಲ್ಲೆಲ್ಲಿದ್ದಾರೆ? ಎಷ್ಟೆಷ್ಟು ಸಂಖ್ಯೆಯಲ್ಲಿ ಬೆಳೆದಿದ್ದಾರೆ? ಅವರಲ್ಲಿ ಘಾತಕ ಸೇನಾ ಪಡೆಯ ಪ್ರಚ್ಛನ್ನ ರೂಪದಲ್ಲಿ ಇರುವವರು ಎಷ್ಟು? ಕೊಡಗಿನಲ್ಲಿ? ಕರಾವಳಿಯಲ್ಲಿ? ತಮಿಳುನಾಡಲ್ಲಿ? ಬಿಹಾರದಲ್ಲಿ?-ಈಗ ಎನ್​ಆರ್​ಸಿ ಎಂಬ ಅಸ್ತ್ರ ಪ್ರಯೋಗದಲ್ಲಿ ‘ರಾಷ್ಟ್ರೀಯ ಪೌರರ ನೋಂದಣಿ’ಯಲ್ಲಿ ಇವರು ಸಿಕ್ಕಿ ಬಿದ್ದಿದ್ದಾರೆ.

ಮೊದಲು ಅವರ ‘ನಿಷ್ಪೌರತ್ವ’ (ನಾನ್ ಸಿಟಿಜನ್) ಮಾಡಿ, ವೋಟು ಹಕ್ಕು ತಪ್ಪಿಸುವ ಮೊದಲ ಹೆಜ್ಜೆ ನಡೆಯುವ ಗಂಡುದಾರಿಯನ್ನು ಮೋದಿ, ಷಾ, ರಾಜನಾಥ ಸಿಂಗ್ ಅವರು ಹಿಡಿದಿದ್ದಾರೆ. ತಪ್ಪೇನು? ರಾಷ್ಟ್ರರಕ್ಷಣೆ ತಪ್ಪೇ? ಶತ್ರು ಪರೀಕ್ಷೆ ತಪ್ಪೆ? ಮುಂದಿನದು ಗಡೀಪಾರು ಮಾಡುವುದು. ಬೇರೆ ದಾರಿಯಿದೆಯೇ? ಒಬ್ಬರು ಹೇಳಿದರು-ಎಲ್ಲೆಲ್ಲಿ ‘ಪ್ರಜಾಪ್ರಭುತ್ವ’ ಹೆಸರಿನ ದುರ್ಬಲ ಸರ್ಕಾರಗಳಿವೆಯೋ, ಅಲ್ಲೆಲ್ಲ ಈ ನುಸುಳುಕೋರರ, ಆ ಮೇಲೆ ಕಳ್ಳಪೌರತ್ವ ಸಂಪಾದಿಸುವವರ ಹಾವಳಿ ಎಂತ. ಉದಾಹರಣೆಗೆ, ಇಂಗ್ಲೆಂಡು, ಫ್ರಾನ್ಸು, ಜರ್ಮನಿ, ಸ್ಪೇನ್, ಈಗ ಅಮೆರಿಕ- ಹೀಗೆ. ಆದರೆ ಜಪಾನ್, ಚೀನಾಗಳಲ್ಲಿ ಇಲ್ಲ. ಜಪಾನಿನಲ್ಲಿ ಧರ್ಮಗ್ರಂಥ ತರುವಂತೆಯೂ ಇಲ್ಲ, ಮತಾಂತರವೂ ಇಲ್ಲ. ಚೀನಾದಲ್ಲಿ ಕ್ಸಿನ್ಕ್ಸಿಯಾಂಗ್ ಎಂಬ ಪ್ರಾಂತ್ಯದಲ್ಲಿ ತಂಟೆಕೋರರಿಗೆ ಕಡಿವಾಣ ಬಿದ್ದಿದೆಯಂತೆ. ‘ದೀದಿ’ ಹೇಳುತ್ತಾರೆ, ಬೀದಿಯಲ್ಲಿ ‘ಅಂತರ್ಯುದ್ಧವಾಗುತ್ತದೆ’ ಎಂದು. ದ್ವೇಷ ಭಾಷಣಕ್ಕಾಗಿ ಅವರ ಮೇಲೆ ಈಗ ಖಟ್ಲೆ ಹೂಡಲಾಗಿದೆ. ಕೆಲವು ದಿನಗಳ ಹಿಂದೆ ಫಾರೂಖ್ ಅಬ್ದುಲ್ಲ, ಉಮರ್ ಹಾಗೂ ಮೆಹಬೂಬಾ ಮುಫ್ತಿ ಅವರೂ ಇಂತಹುದೇ ಬೆದರಿಕೆಯ

ಮಾತಾಡಿದ್ದು ವರದಿ. ಯಾರು ‘ಅಂತರ್ಯುದ್ಧವಾಗುತ್ತೆ’ ಎಂದು ಬೆದರಿಸುತ್ತಾರೋ, ಅವರ ಮಾತಿನ ಅರ್ಥ ‘ರಕ್ತಪಾತ ಮಾಡಿಸುತ್ತೇವೆ’ ಅಂತ. ದೀದಿ ಭಾಷೆ ಅದೇ! ಏಕೆ? ವೋಟು ಬ್ಯಾಂಕು ಉಳಿಯಬೇಕಲ್ಲ? ತುಷ್ಟೀಕರಣ ಕಾಲ ಮುಗಿಯಿತು! ಭಾರತ ಗುಲಾಮಿ ಬುದ್ಧಿ ಗ್ರಹಣದಿಂದ ಹೊರ ಬರುತ್ತಿದೆ. ನಿರಂತರ ಗ್ರಹಣ, ಆಕಾಶದಲ್ಲಿ ಇಲ್ಲ, ಭೂಮಿಯಲ್ಲೂ ಸಲ್ಲ. ಬೆದರಿಸುವವರಿಗೂ ಭಯೋತ್ಪಾದಕರಿಗೂ ಏನು ವ್ಯತ್ಯಾಸ?

ಪಾಕ್​ನಲ್ಲಿ ಇಮ್ರಾನ್ ಖಾನ್ ಬಂದು ಏನು ಸುಧಾರಣೆ ಸಾಧ್ಯ? ಈತ ಸೇನಾ ಕೈಗೊಂಬೆ! ಹಿಂದೆ ಪಾಕ್ ಕ್ರಿಕೆಟ್ಟು ದಳಗಳು ಭಾರತದೊಡನೆ ಆಡುವಾಗಲೂ ಈ ಬೌಲರ್, ಪಿಚ್ ಮೇಲೆಯೇ ಭಾರತೀಯ ತಂಡವನ್ನು ಅವಾಚ್ಯವಾಗಿ ಬೈಯುತ್ತಿದ್ದ ದಾಖಲೆಯವರು! ಇಮ್ರಾನ್ ಎಷ್ಟು ದಿನ ಪಟ್ಟದಲ್ಲಿ ಉಳಿಯುತ್ತಾರೊ ನೋಡಬೇಕು. ನವಾಜ್ ಷರೀಫ್​ಗೆ ಬುದ್ಧಿ ಬಂದೂ ಏನಾಯ್ತು? ಓಡಿ ಹೋದ ಅಯೂಬ್ ಖಾನ್, ಮುಷರ›ಫ್ ಗತಿ ನೋಡಿ. ಅವರು ತಾವೂ ಬಾಳುವುದಿಲ್ಲ, ಇತರರನ್ನೂ ಬಾಳಗೊಡುವುದಿಲ್ಲ. ಅದು ಚರಿತ್ರೆಯ ನಿಚ್ಚಳ ಪಾಠ. ಮೋದಿಯವರಿಗೆ ಅಪಾಯ ಕಾದಿದೆ ಎಂಬ ವರದಿಗಳು ಮಾಧ್ಯಮದಲ್ಲೂ, ವಾಟ್ಸ್​ಆಪ್​ನಲ್ಲೂ ಬರುತ್ತಿವೆ. ಕೆಲವರು ಹಠಸಾಧನೆಗಾಗಿ ಏನೂ ಮಾಡಿಯಾರು. ಭಾರತ ಭಾಗ್ಯವಿಧಾತನ ಗಮನಕ್ಕೆ ಬಿಡುವಂತಿಲ್ಲ. ಬಂಗಾಳ ಗಡಿನಾಡು. ಈಶಾನ್ಯ ರಾಜ್ಯಗಳಲ್ಲಿ ಭಾಜಪ, ಹಿಂದುತ್ವ ತಲೆ ಎತ್ತುತ್ತಿರುವ ಸುಸಂಧಿ ಕಾಲದಲ್ಲಿ ರಾಷ್ಟ್ರಶತ್ರುಗಳು ಸುಸಂಘಟಿತ ಯತ್ನ ಮಾಡಿ, ನಮ್ಮ ರಾಷ್ಟ್ರಕ್ಕೆ ಆಪತ್ತು, ಸವಾಲು ಒಡ್ಡುವ ಕಾಲ ಬಂದಿದೆ.

ಶ್ರೀ ಅರವಿಂದರು ಒಬ್ಬರಿಗೆ ಪತ್ರ ಬರೆದಾಗ ‘ಇನ್ನೆಷ್ಟು ದಿನ ಕಾಯುತ್ತೀರಿ? ಆಗುವುದಾಗಲಿ. ಅಖಂಡ ಭಾರತ ಉದಯಿಸಲಿ’ ಎಂದು ಪ್ರಶ್ನೆಗೆ ಉತ್ತರಿಸಿರುವುದನ್ನು ನನ್ನ “Sri Aurobindo Nationalism and Secularism’ ಎಂಬ ಗ್ರಂಥದಲ್ಲಿ ನಮೂದಿಸಿದ್ದೇನೆ. ‘ನಮಗೆ ರಾಮದಾಸರು ಸಾಲದು, ಶಿವಾಜಿಯೂ ಬೇಕು!’ ಎಂದೂ ಅರವಿಂದರು ಬರೆದಿದ್ದಾರೆ. ಇದು ಗಾಂದಿ-ನೆಹರು ದಾರಿಯಲ್ಲ. ನಾವು ರಾಷ್ಟ್ರೀಯ ದಾರಿ ಬಿಟ್ಟು 70 ವರ್ಷಗಳು ಅಜ್ಞಾತವಾಸ ಮಾಡಿಯಾಗಿದೆ. ಅಪಪ್ರಚಾರ ಸಾಕು. ದೇಶಭಕ್ತರು ಉಗ್ರರಲ್ಲ! ಉಗ್ರರು ದೇಶಭಕ್ತರಲ್ಲ! ಉಗ್ರತ್ವದ ಮೂಲ ಯಾವುದು ಎಂದು ಎಲ್ಲರಿಗೂ ಗೊತ್ತೇ ಇದೆ.

ಉಳಿದೆಡೆಯೂ ನುಸುಳುಕೋರರನ್ನು ಪತ್ತೆ ಹಚ್ಚುವುದು ಈಗ ಕಷ್ಟವೂ ಅಲ್ಲ. ಅವರನ್ನೇನು ಮಾಡಬೇಕು? ಅದನ್ನು ಕಾಂಗ್ರೆಸ್ಸು, ಸೆಕ್ಯುಲರ್ ಹಣೆಪಟ್ಟಿಯ ಪಕ್ಷಗಳು ಮಾಡಲು ಬಿಡುವುದಿಲ್ಲ. ಅದನ್ನು ತಿಳಿದೇ ಮೋದಿ ‘ಕಾಂಗ್ರೆಸ್​ವುುಕ್ತ ಭಾರತ’ದ ಸಕ್ರಿಯ ರೂಪಕ್ಕೆ ಪಣ ತೊಟ್ಟಿರುವುದು. ತಮಿಳುನಾಡಿನ ಇಂದಿನ ಅನಾಯಕ ಸ್ಥಿತಿ ಭಾರತದ ಶತ್ರುಗಳಿಗೆ ಸಹಾಯಕವಾಗಬಾರದು. ತಮಿಳರ ರಾಷ್ಟ್ರಪ್ರೇಮ ತಳಮಟ್ಟದಿಂದ ಬೆಳೆಯಬೇಕಾಗಿದೆ.

ಕರ್ನಾಟಕದಲ್ಲಿ ‘ಇಲಿ ಸತ್ತರೂ ಬಾಲ ಅಲ್ಲಾಡುತ್ತಿದೆ’ ಎಂದು ಹೇಳಬಹುದಾದ ಸ್ಥಿತಿ. ಕುಟುಂಬ ರಾಜಕಾರಣದವರಿಗೆ ರಾಷ್ಟ್ರೀಯತೆಯ ಉಪದೇಶ ಕೊಟ್ಟು ಪ್ರಯೋಜನವಿಲ್ಲ. ಎಲ್ಲರಿಗೂ ‘ವೋಟು ಬ್ಯಾಂಕು’ ರಕ್ಷಣೆ ಮುಖ್ಯವಾದರೆ, ಆಗ ದಳ, ಕಾಂಗ್ರೆಸ್ಸು ವ್ಯತ್ಯಾಸವೇನು?

ಆಂಧ್ರದಲ್ಲೋ? ತಿರುಮಲೆಯ ತಿಮ್ಮಪ್ಪನನ್ನೇ ಮತಾಂತರ ಮಾಡಲು ಹವಣಿಸಿದರು. ಆ ಪ್ರಯತ್ನ ನಿಂತಿಲ್ಲ. ಈಗ ಟಿಟಿಡಿ ಬೋರ್ಡಿನ ವಿಸರ್ಜನೆ ಆಗುವ ಯತ್ನ ನಡೆದಿದೆ. ದೇವಾಲಯಗಳ ವಿಷಯದಲ್ಲಿ ಸೆಕ್ಯುಲರಿಸ್ಟರು ಎಷ್ಟರ ಮಟ್ಟಿಗೆ ತಲೆ ಹಾಕುತ್ತಿದ್ದಾರೆ? ಶಬರಿಮಲೈ? ಶ್ರೀರಂಗಂ? ನೋಡುತ್ತಿದ್ದೀರಿ!

ಖಾಸಗಿ ಸಂಸ್ಥೆಗಳಾದರೂ ಕರ್ನಾಟಕದಲ್ಲಿನ ನುಸುಳುಕೋರರ ಪಟ್ಟಿಯನ್ನು ಸಿದ್ಧ ಮಾಡಬೇಕಾಗಿದೆ. ಮಿಶ್ರ ಸರ್ಕಾರ ಬಿದ್ದಾಗ ಇದು ಉಪಯೋಗಕ್ಕೆ ಬರುತ್ತದೆ. ಸುಪ್ರೀಂ ಕೋರ್ಟ್ ಇಂಥ ಎನ್​ಆರ್​ಸಿ ಪಟ್ಟಿ ಕೊಡುವಂತೆ ಕೇಳಿರುವುದು ಆಶಾದಾಯಕ. ಕೋರ್ಟು, ಸೇನೆ, ಮುಖ್ಯವಾಹಿನಿಯ ಜನಾಭಿಪ್ರಾಯ ರಾಷ್ಟ್ರದ ಪರವಾಗಿರುವಾಗ, ದ್ರೋಹಿಗಳ ಅಬ್ಬರ ಎಷ್ಟೇ ಇದ್ದರೂ ಪರಿಣಾಮಕಾರಿ ಆಗುವುದಿಲ್ಲ.

ಅರಾಷ್ಟ್ರೀಯರಿಗೆ ವೋಟು ಹಕ್ಕು ನಿಲ್ಲಿಸಲಿ. ರೇಷನ್ ನಿಲ್ಲಲಿ. ಸರ್ಕಾರಿ ಸೌಲಭ್ಯ ದುರುಪಯೋಗ ನಿಲ್ಲಲಿ. ಹಿಂದಣ ಸರ್ಕಾರದ ಸೌಲಭ್ಯಭಾಗ್ಯಗಳು ನಿಲ್ಲಲಿ. ಆಗ ತೆರಿಗೆದಾರನ ಹಣ, ಬೊಕ್ಕಸ ನುಸುಳುಕೋರರ ಪಾಲಾಗುವುದು ನಿಲ್ಲುತ್ತದೆ. ವೋಟ್​ಬ್ಯಾಂಕನ್ನು ಭಾಜಪವೂ ನಿಷೇಧಿಸಿ ಚಕ್ರವ್ಯೂಹದಿಂದ ಹೊರಬರುವ ಯತ್ನ ಮಾಡಬೇಕು. ಸ್ಪರ್ಧೆಯ ಕಾಲದಲ್ಲಿ ಇದು ಕಷ್ಟ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಒಂದು ದಾರಿ ತೋರಿಸಿದ್ದಾರೆ. ಹೈದ್ರಾಬಾದಿನ ಓವೈಸಿಯವರಿಗೆ ಅಲ್ಲಿ ಏನಾಯ್ತು ಅಂತ ಗೊತ್ತಿದೆ. ‘ವೋಟುಬ್ಯಾಂಕು’ ಹೇಗೆ ಮುರಿಯಿತು? ಅಲ್ಲಾದದ್ದು ಬೇರೆಡೆ ಏಕೆ ಆಗಬಾರದು? ಆಗಲು ಅಡ್ಡ ಇರುವುದು ‘ಪೊಳ್ಳು ಸೆಕ್ಯುಲರಿಸಂ’. ನರಿಯು ಸಿಂಹದ ವೇಷ ಧರಿಸಿದ್ದು ಕಳಚುವ ದಿನ ಬರಲಿ!.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top