ಲೋಕಸಭೆ ಚುನಾವಣೆ: 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

ನವದೆಹಲಿ: ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ನಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಬುಧವಾರ ಎಐಸಿಸಿ 21 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಉತ್ತರ ಪ್ರದೇಶದ 16 ಮತ್ತು ಮಹಾರಾಷ್ಟ್ರದ 5 ಕ್ಷೇತ್ರಗಳು ಸೇರಿದಂತೆ ಒಟ್ಟು 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಉತ್ತರ ಪ್ರದೇಶದ ಕಾಂಗ್ರೆಸ್​ ಅಧ್ಯಕ್ಷ ರಾಜ್​ ಬಬ್ಬರ್​ಗೆ ಮೊರಾದಾಬಾದ್​ನಿಂದ ಮಾಜಿ ಕೇಂದ್ರ ಸಚಿವ ಶ್ರೀಪ್ರಕಾಶ್​ ಜೈಸ್ವಾಲ್​ ಅವರಿಗೆ ಕಾನ್ಪುರದಿಂದ ಟಿಕೆಟ್​ ನೀಡಲಾಗಿದೆ.

ಮಾಜಿ ಗೃಹ ಸಚಿವ ಸುಶೀಲ್​ ಕುಮಾರ್​ ಶಿಂಧೆಗೆ ಸೊಲ್ಲಾಪುರ ಮತ್ತು ಪ್ರಿಯಾ ದತ್​ಗೆ ಮುಂಬೈ ನಾರ್ತ್​-ಸೆಂಟ್ರಲ್​ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಒಟ್ಟು 27 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಎಐಸಿಸಿ ಮಾರ್ಚ್​ 7 ರಂದು 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್​ಬರೇಲಿಯಿಂದ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅಮೇಠಿಯಿಂದ ಸ್ಪರ್ಧಿಸುತ್ತಾರೆ ಎಂದು ಘೋಷಿಸಲಾಗಿತ್ತು. (ಏಜೆನ್ಸೀಸ್​)