More

    ರೈತರನ್ನು ಅಲೆದಾಡಿಸಬೇಡಿ: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಮಂಜುನಾಥ್ ಸೂಚನೆ

    ಮಾಗಡಿ: ರೈತರು ರೆವಿನ್ಯೂ ಇಲಾಖೆ ಬಗ್ಗೆ ಗೌರವ ಕಳೆದುಕೊಂಡಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ಬೇಸರಿಸಿದರು.

    ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ರೈತರ ಪಹಣಿ, ಮಿಟೇಷನ್ ಇತರೆ ದಾಖಲಾತಿಗಳಲ್ಲಿ ಸಮರ್ಪಕವಾಗಿ ರೈತರ ಹೆಸರನ್ನು ನಮೂದಿಸಿದರೆ ರೈತರು ಕಚೇರಿಗೆ ಅಲೆಯುವ ಅವಶ್ಯಕತೆಯೆ ಇರುವುದಿಲ್ಲ ಅದರೆ ಅಧಿಕಾರಿಗಳ ಸಣ್ಣ ತಪ್ಪಿನಿಂದ ರೈತರು ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಟುಕಿದರು.

    ಪೌತಿ ಖಾತೆ ಮಾಡುವ ವೇಳೆ ಪಹಣಿ ಮತ್ತು ಮಿಟೇಷನ್‌ಲ್ಲಿ ಸಣ್ಣ,ಪುಟ್ಟ ವ್ಯತ್ಯಾಸ ಕಂಡು ಬಂದಾಗ ಸಮರ್ಪಕ ಮಾಹಿತಿ ಪಡೆದು ಸರಿಪಡಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸುವಂತೆ ತಹಸೀಲ್ದಾರ್ ರಮೇಶ್‌ಗೆ ಶಾಸಕರು ಸೂಚಿಸಿದರು.

    ರಾಗಿ ಖರೀದಿಸಲು ರೈತರಿಗೆ ತೊಂದರೆ ನೀಡಬೇಡಿ ಆ ರೀತಿ ನಡೆದುಕೊಂಡರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕರು ಬೆಳೆ ಸಮೀಕ್ಷೆಯಲ್ಲಿ ದೋಷವಾಗಿರುವುದರಿಂದ ರೈತಸಂಪರ್ಕ ಕೇಂದ್ರದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ರೈತರಿಗೆ ಅರಿವು ಮೂಡಿಸಲು ಬ್ಯಾನರ್ ಅಳವಡಿಸುವಂತೆ ಕೃಷಿ ಅಧಿಕಾರಿ ಮಹೇಶ್‌ಗೆ ತಿಳಿಸಿದರು.

    ಹಕ್ಕುಪತ್ರ ವಿತರಿಸಿ: ಶಾಸಕರಾಗಿದ್ದ ಎಚ್.ಎಂ.ರೇವಣ್ಣ ಅವರ ಅವಧಿಯಲ್ಲಿ ನೀಡಿರುವ ಹಕ್ಕುಪತ್ರಗಳನ್ನು ಇಲ್ಲಿಯವರೆಗೂ ಸಂಬಂಧ ಪಟ್ಟ ಅಧಿಕಾರಿಗಳು ಸಮರ್ಪಕವಾಗಿ ವಿತರಿಸದೆ ಎಲ್ಲವೂ ಕಚೇರಿಯ ಬೀರುಗಳಲ್ಲಿ ಇವೆ ಈ ಬಗ್ಗೆ ಅಧಿಕಾರಿಗಳು ಸೂಕ್ತಕ್ರಮಕೈಗೊಳ್ಳಬೇಕು. ಸರ್ಕಾರದಿಂದ ರೈತರಿಗೆ ಎಚ್‌ಡಿಎಸ್ ಯೋಜನೆಯಡಿ ಉಚಿತವಾಗಿ ನೀಡುತ್ತಿರುವ ಟ್ರಾನ್ಸ್ ಾರ್ಮ್ ಅನ್ನು ಎಜೆನ್ಸಿ ಪಡೆದವರು ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಬೆಸ್ಕಾಂ ಎಇಇ ನಾಯಕ್ ವಿರುದ್ಧ ಕಿಡಿಕಾರಿದರು.

    ತಾಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಅಂಬಿಕಾ, ಸ್ಥಾಯಿಸಮಿತಿ ಅಧ್ಯಕ್ಷ ಧನಂಜಯನಾಯ್ಕ, ಸದಸ್ಯರಾದ ನರಸಿಂಹಮೂರ್ತಿ, ಗೌರಮ್ಮ, ಟಿ.ಜಿ.ವೆಂಕಟೇಶ್, ರಾಘವೇಂದ್ರ, ಇಒ ಟಿ.ಪ್ರದೀಪ್, ಅಧಿಕಾರಿಗಳಾದ ಆಶಾ, ಪುಷ್ವಲತಾ, ಬಿಇಒ ಎಸ್.ಸಿದ್ದೇಶ್ವರ್ ಮತ್ತಿತರರಿದ್ದರು.

    ಮಾತಿನ ಚಕಮಕಿ: ರೆವಿನ್ಯೂ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ಸುಮಾರು 50 ಮಂದಿ ರೈತ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ, ಹಣ ನೀಡಿದರು ತಾಲೂಕು ಕಚೇರಿಯಲ್ಲಿ ಕೆಲಸವಾಗುತ್ತಿಲ್ಲ ಎಂದು ಶಾಸಕರ ಮುಂದೆಯೆ ತಹಸೀಲ್ದಾರ್ ರಮೇಶ್ ಅವರನ್ನು ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಧನಂಜಯ ನಾಯ್ಕ ಪ್ರಶ್ನಿಸುತ್ತಿದಂತೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಾಲೂಕಿನ ತಗ್ಗಚ್ಚ ಕುಪ್ಪೆ ಗ್ರಾಮದ ಸರ್ವೇ ನಂಬರ್19 ರಲ್ಲಿ ಸುಮಾರು 40 ಎಕರೆ ಭೂಮಿಯುನ್ನು 15 ಕುಟುಂಬಕ್ಕೆ ಮಹರಾಜರ ಕಾಲದಲ್ಲಿ ನೀಡಲಾಗಿತ್ತು. ಪೋಡಿ, ಕಂಪ್ಯೂಟರ್ ಪಹಣಿ, ಖಾತೆ, ಕೈಬರಹ ಪಹಣಿ ಇದ್ದು ದುರಸ್ಥಿ ಮಾಡಬೇಕು, ಇಎಸ್‌ಯ್ಯೂ ರಿಜಿಸ್ಟರ್, ವೈಎಮ್ ಕಾಫಿ ಇಲ್ಲ ಎಂದು ಜಿಲ್ಲಾಧಿಕಾರಿಗಳಿಂದ ವಾಪಸ್ಸು ಬಂದಿದೆ ಈ ಎರಡು ದಾಖಲಾತಿ ಲಭ್ಯವಿಲ್ಲ ಎಂದು ಮೂರುವರ್ಷ ರೈತರನ್ನು ಅಲೆಸಿದ್ದಾರೆ ಎಂದು ತಹಸೀಲ್ದಾರ ವಿರುದ್ಧ ಆರೋಪಿಸುತ್ತಿದ್ದಂತೆ ಉತ್ತರಿಸಿದ ತಹಸೀಲ್ದಾರ್ ನಾನು ರೈತನ ಮಗ ನಮಗೂ ಗೌರವ ನೀಡಿ ನಾವು ಸೇವೆ ಮಾಡಲು ಬಂದಿರುವುದು ಹಣ ಮಾಡಲು ಬಂದಿಲ್ಲ ಎಂದರು. ಈ ವೇಳೆ ಶಾಸಕ ಮಂಜುನಾಥ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು.

    5 ಸಾವಿರ ಪೌತಿ ಖಾತೆ ಬಾಕಿ: ಕೆಡಿಪಿ ಸದಸ್ಯ ನಜೀಂ ಅಹಮದ್ ಮಾತನಾಡಿ, ಹಂಚಿಕುಪ್ಪೆ ಸವೇನಂ 93ರ ಹಿಡುವಳಿ ಜಮೀನನ್ನು ಗೋಮಾಳ ಎಂದು ನಮೂದಿಸಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ತಹಸೀಲ್ದಾರ್ ರಮೇಶ್ ಮಾತನಾಡಿ, ತಾಲೂಕಿನಲ್ಲಿ 5 ಸಾವಿರ ಪೌತಿ ಖಾತೆಗಳು ಹಾಗಬೇಕಿದೆ ಈ ಸಂಬಂಧ ವಂಶವೃಕ್ಷ, ಅಧಾರ್ ಕಾರ್ಡ್, ಮರಣ ಪ್ರಮಾಣ ಪತ್ರ, ಪೋಟೋ ನೀಡಿ ಪೌತಿಖಾತೆ ಮಾಡಿಸಿಕೊಳ್ಳಿ ಇದರಿಂದ ಸರ್ಕಾರದ ಸೌಲಭ್ಯಗಳು ಸಿಗುತ್ತದೆ ಕೂಡಲೇ ಪೌತಿಖಾತೆಗಳನ್ನು ಅನ್‌ಲೈನ್‌ಗೆ ಅಳವಡಿಸುವುದಾಗಿ ತಿಳಿಸಿದರು.

    ಕುಡಿಯುವ ನೀರಿಗೆ ತೊಂದರೆ: ಕೆಡಿಪಿ ಸದಸ್ಯ ನಾಗರಾಜು ಮಾತನಾಡಿ, ಗೊಲ್ಲರ ಹಳ್ಳಿಯಲ್ಲಿ 4ತಿಂಗಳ ಹಿಂದೆ ಟಿಸಿ ಸುಟ್ಟುಹೋಗಿದೆ ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ, ಸುಮಾರು 50 ಭಾರಿ ಅಧಿಕಾರಿಗಳ ಗಮನಕ್ಕೆ ತಂದು ಪೋನ್ ಮಾಡಿದರೆ ರಿಸೀವ್ ಮಾಡುವುದಿಲ್ಲ, ಉದಂಡಹಳ್ಳಿ ಗ್ರಾಮ ಇತರೆಡೆ ಭಾಗ್ಯ ಜ್ಯೋತಿ ಸಂಪರ್ಕ ಅಳವಡಿಸಿಲ್ಲ, ಪೌತಿ ಖಾತೆ ಮಾಡಿಕೊಡಲು ರೆವಿನ್ಯೂ ಅಧಿಕಾರಿಗಳು 5 ಸಾವಿರ ಹಣ ಕೇಳುತ್ತಾರೆ ರೈತರು ತಾವು ಸಾಕಿರುವ ಕುರಿ,ಮೇಕೆಗಳನ್ನು ಮಾರಿ ಕೊಡುವಂತಾಗಿದೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts