More

    ಕೇಂದ್ರ ಸಚಿವ, ಸಿಎಂ ಅವರಿಂದ ಸಿಕ್ಕಿದ್ದು ಕೇವಲ ಭರವಸೆ: ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಬೇಸರ

    ಮಂಡ್ಯ: ಕಬ್ಬು ಹಾಗೂ ಹಾಲಿನ ದರ ನಿಗದಿ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಮಗೆ ಮತ್ತೆ ಸಿಕ್ಕಿದ್ದು ಕೇವಲ ಭರವಸೆಯಷ್ಟೇ. ಇನ್ನು ಬೇಡಿಕೆ ಈಡೇರಿಸುವವರೆಗೂ ಅಹೋರಾತ್ರಿ ಧರಣಿ ಮುಂದುವರೆಯಲಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.
    ರೈತರ ಪ್ರತಿಭಟನೆಗೆ ಮಣಿದು ಬಿಜೆಪಿ ನಾಯಕರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಮಿತ್ ಷಾ ಅವರ ಜತೆಗೆ ಐವರು ಮಾತುಕತೆ ನಡೆಸುವುದಕ್ಕೆ ಅವಕಾಶ ನೀಡಿದರು. ಕೇವಲ ಹತ್ತು ನಿಮಿಷದ ಮಾತುಕತೆಯಲ್ಲಿ ಮನವಿ ಸ್ವೀಕರಿಸಿ ಬೇಡಿಕೆ ಕುರಿತು ಪರಿಶೀಲಿಸುವುದಾಗಿ ಹೇಳಿದರು. ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದಾಗ ಮುಂದಿನವಾರ ರೈತ ಮುಖಂಡರ ಸಭೆ ಕರೆದು ಚರ್ಚಿಸುವ ಭರವಸೆ ನೀಡಿರುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರೈತರ ಬೇಡಿಕೆಗಳಿಗೆ ರಾಜ್ಯಸರ್ಕಾರ ಸ್ಪಂದಿಸದಿರುವುದರ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ, ಮಂಡ್ಯ ನಗರ ಬಂದ್, ಮುಖ್ಯಮಂತ್ರಿಗಳ ಪ್ರತಿಮೆ ಮೇಲೆ ರಕ್ತಾಭಿಷೇಕದಂತಹ ವಿನೂತನ ಹೋರಾಟ ನಡೆಸಿಕೊಂಡು ಬರಲಾಗಿದೆ. ಇದಕ್ಕೆ ಸಾರ್ವಜನಿಕರಿಂದಲೂ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಬಸವರಾಜ ಬೊಮ್ಮಾಯಿ ಅವರಿಂದ ಸ್ಪಷ್ಟ ಉತ್ತರ ಸಿಗದ ಹಿನ್ನೆಲೆಯಲ್ಲಿ ಚಳವಳಿ ಮುಂದುವರೆಸಲು ನಿರ್ಧರಿಸಿದ್ದೇವೆ. ಪ್ರತಿಭಟನೆಯನ್ನು ಕೈಬಿಟ್ಟರೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ಮತ್ತಷ್ಟು ನಿಧಾನವಾಗುವುದರಿಂದ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಹೋದರೆ ಪ್ರತಿಭಟನೆಯನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಗುತ್ತಿದೆ ಎಂದು ನುಡಿದರು.
    ಸದನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಸೂಚಿಸುವುದಕ್ಕೆ ಜಿಲ್ಲೆಯ ಜನಪ್ರತಿನಿಗಳು ಸದನಕ್ಕೆ ಹಾಜರಾಗಿಲ್ಲ. ಅವರಿಗೆ ರೈತರ ಹಿತ ಕಾಪಾಡುವ ಬದ್ಧತೆಯೇ ಇಲ್ಲ. ಒಂದು ದಿನವೂ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ರೈತ ಮುಖಂಡರೊಂದಿಗೆ ಚರ್ಚಿಸಿಲ್ಲ. ಇವರೆಲ್ಲಾ ಮಣ್ಣಿನ ಮಕ್ಕಳು ಹೇಗಾಗುತ್ತಾರೆ. ಇಂತಹವರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ ಎಂದು ಪ್ರಶ್ನಿಸಿದ ಅವರು, ಯುವನಾಯಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನ್ಯುಮೋನಿಯಾ ಆಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ ಬಳಿಕ ರೈತಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವರು. ಆ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.
    ಸಂಘದ ಪದಾಧಿಕಾರಿಗಳಾದ ಲಿಂಗಪ್ಪಾಜಿ, ಎಸ್.ಕೆ.ರವಿಕುಮಾರ್, ವೈ.ಜಿ.ರಘು, ಜಿ.ಶಂಕರ್, ವಿಜಯಕುಮಾರ್, ಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts