More

  ಜಿಲ್ಲೆಯ ರೈತರು ಶ್ರಮಜೀವಿಗಳು: ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ

  ಮುಳಬಾಗಿಲು : ಕೆ.ಸಿ.ವ್ಯಾಲಿ ಯೋಜನೆಗೆ ತಾವೇ ಕಾರಣಕರ್ತರು ಎಂದು ಹೇಳಿಕೊಳ್ಳುವ ಬುದ್ಧಿಜೀವಿ ರಾಜಕಾರಣಿಗಳು ಸೃಷ್ಟಿ, ಲಯ, ಸ್ಥಿತಿಗೆ ತಾವೇ ಕಾರಣ ಎಂಬ ಮನೋಭಾವ ಹೊಂದಿದ್ದಾರೆ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕೆಸಿ ವ್ಯಾಲಿ ತನ್ನಿಂದಲೇ ಆರಂಭವಾಯಿತು ಎಂದು ಹೇಳುವವರನ್ನು ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

  ನಗರ ಹೊರವಲಯದ ರಾ.ಹೆ 75ರ ಬಳಿ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ತಾಲೂಕಿನ 32 ಕೆರೆಗಳಿಗೆ ನೀರು ತುಂಬುವ ಕೆ.ಸಿ ವ್ಯಾಲಿ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಕೆ.ಸಿ.ವ್ಯಾಲಿ ಯೋಜನೆ ರೂವಾರಿ ನಾನೇ ಎನ್ನುವವರು ಅದಕ್ಕೆ ಹಣ ಒದಗಿಸಿ ನೀರು ಪೂರೈಸುತ್ತಿರುವ ಸರ್ಕಾರದ ಬಗ್ಗೆ ಮಾತನಾಡದೇ ಇರುವುದು ಸೋಜಿಗವಾಗಿದೆ ಎಂದರು.

  ನಾನು ನನ್ನಿಂದಲೇ ಎಲ್ಲವೂ ಎಂಬ ಮನೋಭಾವವನ್ನು ಬುದ್ಧಿಜೀವಿಗಳು ಬಿಡಬೇಕು. ಈಗಿನ ಬಿಜೆಪಿ ಸರ್ಕಾರ ಈ ಯೋಜನೆಗೆ ಎಷ್ಟು ಹಣ ಒದಗಿಸಿ ಕಾರ್ಯರೂಪಕ್ಕೆ ತಂದಿದೆ ಎಂಬುದನ್ನು ಹೇಳಬೇಕು. 8 ಟಿಎಂಸಿ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ತುಂಬಿಸಲಾಗಿದೆ. ಮುಂದೆಯೂ 2ನೇ ಹಂತದ ಯೋಜನೆಯಲ್ಲಿ 200 ರಿಂದ 300 ಕೆರೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು.
  ಕೋಲಾರ ಜಿಲ್ಲೆಯ ರೈತರು ಶ್ರಮಜೀವಿಗಳಾಗಿದ್ದು, ನೀರು ಒದಗಿಸಿದರೆ ಉತ್ತಮ ಹಣ್ಣು ತರಕಾರಿ, ದವಸಧಾನ್ಯ ಬೆಳೆದು ದೇಶಕ್ಕೆ ನೀಡುತ್ತಾರೆ. ಆದ್ದರಿಂದ ನೀರಾವರಿ ಯೋಜನೆಗಳು ಜಾರಿಯಾಗಬೇಕಾಗಿದೆ, ಪಕ್ಷಾತೀತವಾಗಿ ಎಲ್ಲರೂ ಈ ಯೋಜನೆಗಳಿಗೆ ಸಹಕರಿಸಬೇಕೆಂದು ಕರೆ ನೀಡಿದರು.

   

  ಶೀಘ್ರ ಕೋಲಾರಕ್ಕೆ ಎತ್ತಿನಹೊಳೆ ನೀರು :  ಎತ್ತಿನಹೊಳೆ ಯೋಜನೆ ಅನುಷ್ಠಾನ ಮಾಡಿ ಪೈಪ್‌ಲೈನ್ ಕಾಮಗಾರಿಗೆ ಟೆಂಡರ್ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಆದರೆ ಭೂಸ್ವಾಧೀನ ಮಾಡದ ಕಾರಣ ಟೆಂಡರ್‌ದಾರರಿಗೆ ಪ್ರತಿವರ್ಷ ಹೆಚ್ಚುವರಿ ಹಣ ಪಾವತಿಸಬೇಕಾಯಿತು. ಯೋಜನೆ ಜಾರಿಗೆ ಮೊದಲು ಭೂಸ್ವಾದೀನ ಮಾಡಿ ನಂತರ ಟೆಂಡರ್ ಪ್ರಕ್ರಿಯೆ ಮಾಡದ ಕಾರಣ ಎತ್ತಿನಹೊಳೆ ಯೋಜನೆ ತಡವಾಗಿದೆ. ಬಿಜೆಪಿ ಅಧಿಕಾರ ಬಂದ ನಂತರ ಚುರುಕಾಗಿ ಕಾಮಗಾರಿ ನಡೆಸಲಾಗುತ್ತಿದೆ. ತುಮಕೂರು ಜಿಲ್ಲೆಗೆ ನೀರು ಬರುತ್ತಿದ್ದು ಇದಕ್ಕೆ ಅಲ್ಲಿನ ರೈತರು ಸಹಕಾರ ಅಮೂಲ್ಯವಾಗಿದೆ. ಕೋಲಾರ-ಚಿಕ್ಕಬಳ್ಳಾಪುರ ರೈತರು ಮನವೊಲಿಸುವ ಜವಾಬ್ದಾರಿ ಮಾಡಿದರೆ ಶೀಘ್ರದಲ್ಲೇ ಎತ್ತಿನಹೊಳೆ ನೀರು ಕೋಲಾರಕ್ಕೆ ಹರಿಸಲಾಗುವುದು ಎಂದರು.

  ಕೀಲುಹೊಳಲಿ ಬಳಿ ಕೆ.ಸಿ.ವ್ಯಾಲಿ ಪಂಪ್‌ಹೌಸ್‌ನಲ್ಲಿ ನೀರು ಲ್‌ಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ನಂತರ ಜಮ್ಮನಹಳ್ಳಿ ಕೆರೆಗೆ ಸಚಿವರು ಮತ್ತು ಗಣ್ಯರು ಬಾಗಿನ ಅರ್ಪಿಸಿದರು. ಸಂಸದ ಎಸ್.ಮುನಿಸ್ವಾಮಿ, ಶಾಸಕ ಎಚ್.ನಾಗೇಶ್, ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ರಿಯಾಜ್ ಅಹ್ಮದ್, ತಾಪಂ ಮಾಜಿ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಜೆಡಿಎಸ್ ಮುಖಂಡ ಅಲಂಗೂರು ಶಿವಣ್ಣ, ಬಿಜೆಪಿ ಮುಖಂಡರಾದ ಅಲಂಗೂರು ವೈ.ಸುರೇಂದ್ರಗೌಡ, ಡಾ.ಕೆ.ಎನ್.ವೇಣುಗೋಪಾಲ್ ಇತರರು ಇದ್ದರು

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts