ರೈತರಿಗೆ ಕಬ್ಬಿನ ಬಾಕಿ ಹಣ ನೀಡಲು ಆಗ್ರಹ

ಮದ್ದೂರು: ಸಕ್ಕರೆ ಕಾರ್ಖಾನೆಗಳು ರೈತರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಕಬ್ಬಿನ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿ ರೈತ ಮತ್ತು ಕೃಷಿ ಕಾರ್ಮಿಕ ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿರುವ ಕಬ್ಬಿನ ಬಾಕಿ ಹಣ ನೀಡುವಂತೆ ಎಂದು ಆಗ್ರಹಿಸಿದರು.

ಕೊಪ್ಪದ ಎನ್‌ಎಸ್‌ಎಲ್, ಭಾರತೀನಗರದ ಚಾಮ್‌ಷುಗರ್ ಕಾರ್ಖಾನೆಗಳು ರೈತರು ಕಬ್ಬು ಸರಬರಾಜು ಮಾಡಿ 6 ತಿಂಗಳು ಕಳೆದರೂ ರೈತರಿಗೆ ಕಬ್ಬಿನ ಬಾಕಿ ಹಣ ನೀಡಿಲ್ಲ. ರೈತರ ಬದುಕಿನ ಜತೆಯಲ್ಲಿ ಚೆಲ್ಲಾಟವಾಡುತ್ತಿವೆ. ರೈತರ ಕಬ್ಬಿನ ಹಣ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಪ್ರಯತ್ನ ಮಾಡಿಲ್ಲ. ಜತೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಕಬ್ಬಿನ ಬಾಕಿ ಹಣ ಕೊಡಿಸಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಅಜ್ಜಹಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರೈತನೊಬ್ಬ ಕಬ್ಬಿನ ಬಾಕಿ ಹಣ ಕೊಡಿಸುವಂತೆ ಕೇಳಿದಾಗ, ಕೆಲ ಮುಖಂಡರು ರೈತನ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಮಾಡಿದ್ದಾರೆ. ಇದು ಖಂಡನೀಯ. ರೈತನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಮತ್ತು ಕಾರ್ಮಿಕ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಉಪಾಧ್ಯಕ್ಷ ಕೊಟ್ಟಿಗೆ ಪುಟ್ಟಸ್ವಾಮಿ, ತಾಲೂಕು ಉಪಾಧ್ಯಕ್ಷ ಕೆ.ಕುಬೇರ, ಮುಖಂಡರಾದ ಲಿಂಗಯ್ಯ, ರಾಜಣ್ಣ, ನಾಗೇಶ್, ಗಣೇಶ್‌ಕುಮಾರ್, ಅರವಿಂದ್, ನಾಗೇಶ್, ರಮೇಶ್, ನಾಗೇಗೌಡ, ರಮೇಶ್, ಮಧು ಮತ್ತಿತರರಿದ್ದರು.