ಮಕ್ಕಳ ಸಹಾಯವಾಣಿ ಜಾಗೃತಿ ಮೂಡಿಸಲು ಕ್ರಮ: ಹೆಪ್ಸಿಬಾ ರಾಣಿ ಕೊರ್ಲಪಾಟಿ

ವಿಜಯವಾಣಿ ಸುದ್ದಿಜಾಲ ಉಡುಪಿ
ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದಿಂದ ರಕ್ಷಿಸಲು ಮತ್ತು ಮಕ್ಕಳ ಸಹಾಯವಾಣಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮಾಹಿತಿ 10 ದಿನಗಳೊಳಗೆ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಕ್ಕಳ ಸಹಾಯವಾಣಿ ಸಲಹಾ ಸಮಿತಿ ಸಭೆ ನಡೆಸಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹ, ಪೋಸ್ಟರ್‌ಗಳನ್ನು ಅಂಟಿಸುವುದು, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವುದು, ಸಾರಿಗೆ ಸಂಪರ್ಕ ವ್ಯವಸ್ಥೆಗಳಾದ ಆಟೋರಿಕ್ಷಾ, ಬಸ್‌ಗಳಲ್ಲಿ ಮಕ್ಕಳ ಸಹಾಯವಾಣಿ ಜಾಗೃತಿ ಮೂಡಿಸುವ ಪೋಸ್ಟರ್ ಅಂಟಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬಹುದು ಎಂದು ಹೇಳಿದರು.

ಪ್ರತೀ ತಿಂಗಳು ಗ್ರಾಮ ಮಟ್ಟದಲ್ಲಿ ಮಕ್ಕಳ ಸಭೆ ಮಾಡಿ, ಸಹಾಯವಾಣಿಗೆ ಬಂದ ಕರೆಗಳ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ಮಾಡಬೇಕು. ಬಳಿಕ ಈ ಬಗ್ಗೆ ತಾಲೂಕು ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಬೇಕು ಎಂದರು.

ಆರೋಗ್ಯ ಇಲಾಖೆ ಮತ್ತು ಸಂಬಂಧಿಸಿದ ಇತರ ಇಲಾಖೆ ಸೇರಿದಂತೆ ಯಾವುದೇ ಇಲಾಖೆ ಕಾರ್ಯಕ್ರಮಗಳಲ್ಲಿ ಮಕ್ಕಳ ಸಹಾಯವಾಣಿಯ ಲೋಗೊ ಬಳಸಬೇಕು. ಗ್ರಾಮ ಮಟ್ಟದಲ್ಲಿ ಒಂದೊಂದು ಪ್ರದೇಶದಲ್ಲಿ ಮಕ್ಕಳ ನಾಯಕನನ್ನು ಗುರುತಿಸಿ ಸಹಾಯವಾಣಿ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಚೈಲ್ಡ್ ಇಂಡಿಯಾ ಫೌಂಡೇಶನ್ ಚೆನ್ನೈ ಹಿರಿಯ ಕಾರ್ಯಕ್ರಮ ಸಂಯೋಜಕಿ ಚಿತ್ರಾ ಆಂಚನ್, ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ. ಉಪಸ್ಥಿತರಿದ್ದರು.

ಭಿಕ್ಷಾಟನೆ ನಿರತರ ರಕ್ಷಣೆ: ಜಿಲ್ಲೆಯಲ್ಲಿ ಮಾರ್ಚ್‌ನಿಂದ ಈವರೆಗೆ 22 ಕರೆಗಳು ಬಂದಿದ್ದು, ಎಲ್ಲ ಕರೆಗಳಿಗೆ ಸೂಕ್ತ ರೀತಿ ಸ್ಪಂದಿಸಲಾಗಿದೆ ಎಂದು ಜಿಲ್ಲಾ ಸಹಾಯವಾಣಿ ಕಾರ್ಯಕ್ಷಮತೆ ಕೋ-ಆರ್ಡಿನೇಟರ್ ಅರವಿಂದ್ ಮಾಹಿತಿ ನೀಡಿದರು. ಸಹಾಯವಾಣಿ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸುವಂತೆ ಮತ್ತು ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಸಭೆಗೆ ಚೈಲ್ಡ್‌ಲೈನ್ ಸಂಯೋಜಕರನ್ನು ಆಹ್ವಾನಿಸುವುದು, ಮಕ್ಕಳ ಸಹಾಯವಾಣಿ ಫಲಕ ಪ್ರದರ್ಶಿಸಲು ನಿರ್ದೇಶನ ನೀಡುವುದು, ಮಕ್ಕಳ ರಕ್ಷಣಾ ನೀತಿಯನ್ನು ಎಲ್ಲ ಶಾಲೆಗಳಲ್ಲಿ ವ್ಯವಸ್ಥಿತವಾಗಿ ಅಳವಡಿಸಿಕೊಳ್ಳುವುದು, ಶಾಲಾ ಕಾಲೇಜುಗಳಲ್ಲಿ ಚೈಲ್ಡ್‌ಲೈನ್ 1098 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ಬಾಲ ಕಾರ್ಮಿಕ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಮಾಹಿತಿ ಕಾರ್ಯಗಾರವನ್ನು ನಡೆಸುವುದು, ಮಕ್ಕಳ ರಕ್ಷಣೆ ಮತ್ತು ಪೋಷಣೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು. ಸಂಬಂಧಪಟ್ಟ ಇಲಾಖೆಗಳು ಪ್ರತೀ ತಿಂಗಳಿಗೊಮ್ಮೆ ಕಡ್ಡಾಯವಾಗಿ ಭಿಕ್ಷಾಟನೆಯಲ್ಲಿ ನಿರತರಾದವರ ರಕ್ಷಣಾ ಕಾರ್ಯಚರಣೆ ಹಮ್ಮಿಕೊಳ್ಳುವಂತೆ ಮನವಿ ಮಾಡಿದರು.

ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಯಾವುದೇ ಪ್ರಕರಣದಲ್ಲಿ ಮಕ್ಕಳ ಹೇಳಿಕೆಗೆ ಆದ್ಯತೆ ನೀಡಿ ಸಮಗ್ರ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ.
ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Leave a Reply

Your email address will not be published. Required fields are marked *