ಕೊಚ್ಚಿಹೋದ ಕಾಫಿ ಗಿಡಗಳು

ಮೂಡಿಗೆರೆ: ಮಲೆನಾಡು ಭಾಗದಲ್ಲಿ ಅಬ್ಬರದ ಮಳೆಗೆ ಅವಘಡಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿವೆ. ತಾಲೂಕಿನ ಹಾರ್ಮಕ್ಕಿ ಗ್ರಾಮದ ಕಾಫಿ ತೋಟಗಳಿಗೆ ನೀರು ನುಗ್ಗಿ ಮಣ್ಣು ಕುಸಿದಿದ್ದರಿಂದ ಕಾಫಿ ಗಿಡಗಳು ಕೊಚ್ಚಿಹೋಗಿವೆ.

ಹಾರ್ಮಕ್ಕಿಯ ಸಂತೋಷ್, ವಸಂತೇಗೌಡ, ಕನ್ನೇಹಳ್ಳಿ ಆದರ್ಶ ಅವರ ಕಾಫಿತೋಟ ಹಾಗೂ ಸುತ್ತಮುತ್ತಲಿನ ರೈತರ ತೋಟಗಳಲ್ಲಿ ಮಣ್ಣು ಕುಸಿದು ಹಾನಿಯಾಗಿದೆ.

ಜನ್ನಾಪುರ-ಒಣಗೂರು ರಾಜ್ಯ ಹೆದ್ದಾರಿ ಕಿರುಗುಂದ ಗ್ರಾಮದವರೆಗೆ ಚರಂಡಿ, ಮೋರಿ ವ್ಯವಸ್ಥೆಯಿಲ್ಲದ್ದರಿಂದ ಮಳೆ ನೀರು ಹರಿದು ಗುಂಡಿಗಳಾಗಿವೆ. ಚಿನ್ನಿಗ ಸಮುದಾಯ ಭವನದ ಎದುರು ರಸ್ತೆಯಲ್ಲಿ ನೀರು ನಿಂತಿದೆ. ಕಿರುಗುಂದ-ಕೈಮರದ ಬಳಿ ನೀರು ಹರಿದು ಹೋಗಲು ಮೋರಿ ಇಲ್ಲದೆ ರಸ್ತೆಯೇ ಕೆರೆಯಂತಾಗಿದೆ.

ತಾಲೂಕಿನ ಗೌಡಹಳ್ಳಿ, ದೇವವೃಂದ, ಉಗ್ಗೇಹಳ್ಳಿ, ಬೆಟ್ಟದಮನೆ, ಮಾನಲ, ಕಿರುಗುಂದ ಗ್ರಾಮಗಳಲ್ಲಿ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಸ್ಥಳಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ದುರಾವಸ್ಥೆ: ತಾಲೂಕಿನ ಬೆಟ್ಟದಮನೆಯ ಮರಳು ಯಾರ್ಡ್ ಪಕ್ಕದ ರಸ್ತೆ ಮೇಲೆ ಮರಳು ಹರಡಿಕೊಂಡಿದ್ದು, ಸಂಚಾರ ದುಸ್ತರವಾಗಿದೆ. ಯಾರ್ಡ್​ನಲ್ಲಿ ಮರಳು ಸಂಗ್ರಹವೇನೂ ಇಲ್ಲ. ಆದರೆ ಯಾರ್ಡ್ ಆವರಣದಲ್ಲಿ ಉಳಿದಿದ್ದ ಮರಳು ಮಳೆನೀರಿಗೆ ಕೊಚ್ಚಿಹೋಗಿ ರಸ್ತೆಗಳಲ್ಲಿ ಹರಡಿಕೊಂಡಿದೆ.

Leave a Reply

Your email address will not be published. Required fields are marked *