ದ.ಕ., ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಮಳೆ

ಮಂಗಳೂರು/ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಸುಳ್ಯ, ಸುಬ್ರಹ್ಮಣ್ಯ ಸೇರಿದಂತೆ ದ.ಕ. ಜಿಲ್ಲೆಯ ಹಲವೆಡೆ ಶನಿವಾರ ತಡರಾತ್ರಿ ಮತ್ತು ಭಾನುವಾರ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಬಿಟ್ಟು ಬಿಟ್ಟು ಉತ್ತಮ ಗಾಳಿ ಮಳೆಗೆ ಮರಗಳು ಉರುಳಿ ಬಿದ್ದಿವೆ.

ಹಂಪನಕಟ್ಟೆಯ ಐತಪ್ಪ ಶೆಟ್ಟಿ ಕಂಪೌಂಡ್‌ನಲ್ಲಿ ಬೃಹತ್ ಮರ ಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ಹಾಗೂ ಗಾಳಿಯಿಂದಾಗಿ ಜಿಲ್ಲೆಯಾದ್ಯಂತ ರಾತ್ರಿ ಹಾಗೂ ಹಗಲು ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿತ್ತು. ಸುಳ್ಯದ ಗ್ರಾಮಾಂತರ ಭಾಗದಲ್ಲಿ ಬೆಳಗ್ಗೆ ಹೋದ ಕರೆಂಟ್ ರಾತ್ರಿಯಾದರೂ ಬಂದಿಲ್ಲ. ನಗರ ಪ್ರದೇಶದಲ್ಲಿಯೂ ವಿದ್ಯುತ್ ಹಲವು ಗಂಟೆಗಳ ಕಾಲ ವ್ಯತ್ಯಯವಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ತೊಕ್ಕೊಟ್ಟಿನ ನರಿಂಗಾನ ಗ್ರಾಮದ ಮೋರ್ಲ ಸೋಮಯ್ಯ ಪೂಜಾರಿ ಎಂಬುವರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಎರಡು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಮನೆಯ ಪೀಠೋಪಕರಣಗಳಿಗೂ ಹಾನಿಯಾಗಿದೆ.

ದ.ಕ.ಜಿಲ್ಲೆಯಲ್ಲಿ ಸುರಿದ ಮಳೆ: ಭಾನುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 69.7 ಮಿಮೀ ಮಳೆಯಾಗಿದೆ. ಬಂಟ್ವಾಳದಲ್ಲಿ 79.1ಮಿಮೀ, ಬೆಳ್ತಂಗಡಿಯಲ್ಲಿ 78.2 ಮಿಮೀ, ಮಂಗಳೂರಿನಲ್ಲಿ 73.5ಮಿಮೀ, ಪುತ್ತೂರಿನಲ್ಲಿ 70.6ಮಿಮೀ, ಸುಳ್ಯದಲ್ಲಿ 47.2ಮಿಮಿ ಮಳೆಯಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ಮಟ್ಟ ಸುಮಾರು 3.8 ಮೀ ಇದ್ದರೆ, ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿ ಮಟ್ಟ 19 ಮೀ. ನಷ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದು, ಅಲ್ಲಿಲ್ಲಿ ಮರದ ಕೊಂಬೆಗಳು ತಂತಿ, ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು. ತಾಲೂಕಿನ ಉದ್ಯಾವರ ಗ್ರಾಮದ ಪಡುಕೆರೆಯ ಸುಂದರಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು 20 ಸಾವಿರ ರೂ. ನಷ್ಟ ಸಂಭವಿಸಿದೆ. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಲಲಿತ ಅವರ ಮನೆ ಮೇಲೆ ಮರ ಬಿದ್ದು ರೂ. 20 ಸಾವಿರ ನಷ್ಟ ಸಂಭವಿಸಿದೆ. ಮೂರು ತಾಲೂಕುಗಳ ಸರಾಸರಿ ಮಳೆ: ಉಡುಪಿ-53.7, ಕುಂದಾಪುರ-58.4, ಕಾರ್ಕಳ -61.5 ಮಳೆ ಸುರಿದಿದೆ.

ಸಮುದ್ರದಲ್ಲಿ ಗಾಳಿ: ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪ ತೀರ ಪ್ರದೇಶದಲ್ಲಿ ಪಶ್ಚಿಮ ಭಾಗದಿಂದ ಸುಮಾರು 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಡಲಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.

ಮಳೆ ಪ್ರಮಾಣ ಹೆಚ್ಚಳ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸರಾಸರಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಜನವರಿ 1ರಿಂದ ಜೂ.10ರ ವರೆಗೆ ಕಳೆದ ವರ್ಷ 321.2ಮಿಮೀ ಮಳೆಯಾಗಿತ್ತು. ಆದರೆ ಈ ಬಾರಿ 480 ಮಿಮೀ ಹೆಚ್ಚಾಗಿದ್ದು, ಸುಮಾರು 801.2ಮಿಮೀ ಮಳೆಯಾಗಿದೆ. ಆದರೆ ವಾಡಿಕೆ ಪ್ರಕಾರ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ 1176.2ಮಿಮೀ ಮಳೆಯಾಗಬೇಕಿತ್ತು.

Leave a Reply

Your email address will not be published. Required fields are marked *