ನವದೆಹಲಿ: ಐಪಿಎಲ್ 13ನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಸಜ್ಜಾಗುತ್ತಿದೆ. ಇದರೊಂದಿಗೆ ಎಲ್ಲ ತಂಡಗಳು ಕೂಡ ಸಿದ್ಧತೆ ಆರಂಭಿಸಿವೆ. ಇದೇ ವೇಳೆ ಆಟಗಾರರು ಕೂಡ ಟೂರ್ನಿಗೆ ತಯಾರಿ ಮಾಡುತ್ತಿದ್ದಾರೆ. ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಐಪಿಎಲ್‌ಗಾಗಿ ಬ್ಯಾಟ್ ಖರೀದಿಸಲು ಶಾಪಿಂಗ್ ಹೋಗಿಬಂದಿದ್ದಾರೆ.
ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಜತೆಯಾಗಿಯೇ ಅಭ್ಯಾಸ ನಡೆಸುತ್ತಿರುವ ಸುರೇಶ್ ರೈನಾ ಮತ್ತು ರಿಷಭ್ ಪಂತ್ ಇದೀಗ ಜತೆಯಾಗಿಯೇ ಮೀರತ್‌ನ ಎಸ್‌ಜಿ ಕ್ರಿಕೆಟ್ ಫ್ಯಾಕ್ಟರಿಗೆ ಹೊಸ ಬ್ಯಾಟ್ ಖರೀದಿಗೆ ತೆರಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ವಿಡಿಯೋ ಸಹಿತ ಮಾಹಿತಿ ಹಂಚಿಕೊಂಡಿರುವ ಸುರೇಶ್ ರೈನಾ, ‘ನನ್ನ ಬ್ಯಾಟ್ ಅಂತಿಮಗೊಳಿಸುವ ಮೊದಲ ಹೆಜ್ಜೆಯೊಂದಿಗೆ, ಬಹುನಿರೀಕ್ಷಿತ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದೇನೆ. ಮತ್ತೆ ಮೈದಾನಕ್ಕೆ ಇಳಿಯುವ ಬಗ್ಗೆ ಕಾತರಗೊಂಡಿದ್ದೇನೆ. ಒಮ್ಮೆಗೆ ಒಂದೇ ಹೆಜ್ಜೆ’ ಎಂದು ಬರೆದಿದ್ದಾರೆ. ಜತೆಗೆ ರಿಷಭ್ ಪಂತ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಏಷ್ಯಾಡ್ ಸ್ವರ್ಣವನ್ನು ಕರೊನಾ ವಾರಿಯರ್ಸ್‌ಗೆ ಅರ್ಪಿಸಿದ ಹಿಮಾ ದಾಸ್
ಸುರೇಶ್ ರೈನಾ ಮತ್ತು ರಿಷಭ್ ಪಂತ್ ಇಬ್ಬರೂ ಬ್ಯಾಟ್ ಶಾಪಿಂಗ್ ವೇಳೆ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದಾರೆ. ಜತೆಗೆ ಬ್ಯಾಟ್ ಮುಟ್ಟಿದ ಬಳಿಕ ಸ್ಯಾನಿಟೈಸರ್ ಬಳಸಿ ಕೈಯನ್ನು ಶುದ್ಧಮಾಡಿಕೊಂಡಿದ್ದಾರೆ. ಕರೊನಾ ಭೀತಿಯಿಂದಾಗಿ ಇದೆಲ್ಲವೂ ಈಗ ನವವಾಸ್ತವವೆನಿಸಿದೆ. ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಯುಎಇಯಲ್ಲಿ ನಡೆಯುವ ನಿರೀಕ್ಷೆ ಇದೆ.
Gearing up for the much awaited season of IPL with the first step of finalising my Bat🏏 Can’t wait to be back at the FIELD😎..One Happy Soul, One Step at a Time✨@RishabhPant17 @sg_cricket pic.twitter.com/dmRcdwaTz6
— Suresh Raina🇮🇳 (@ImRaina) July 24, 2020