ಕಳಸಕ್ಕೀಗ ಜಲಪಾತಗಳ ಸೊಬಗಿನ ಕಳಶ

ಕಳಸ: ಸುತ್ತಲೂ ಹಸಿರು. ಬೆಟ್ಟಗಳನ್ನು ಆವರಿಸಿದ ಮಂಜು. ಗಿರಿಶ್ರೇಣಿಗಳ ಹಸಿರಿನಿಂದ ಕಣ್ಮನ ಸೂರೆಗೊಳ್ಳುವ ಕಳಸದ ಪ್ರಕೃತಿ ದತ್ತ ಸುಂದರ ಸೊಬಗು ಮಳೆಗಾಲದಲ್ಲಿ ಮತ್ತೆ ಕಾಣಸಿಗುತ್ತಿದೆ. ಮಳೆಗಾಲ ಬಂತೆಂದರೆ ಮೂರು ತಿಂಗಳು ಪಕೃತಿ ಪ್ರಿಯರ ಸ್ವರ್ಗವಾಗಲಿದೆ ಕಳಸ. ಇಲ್ಲಿಯ ಬೆಟ್ಟ ಗುಡ್ಡಗಳ ಸಾಲಿನ ಮಧ್ಯೆ ಹರಿಯುವ ಜಲಪಾತಗಳನ್ನು ನೋಡುವುದೆ ಒಂದು ಸೌಭಾಗ್ಯ.

ಕಳಸ ಸಮೀಪದ ಅಬ್ಬುಗುಡಿಗೆ ಎಂಬಳ್ಳಿಯ ಜಗಲಬ್ಬೆ ಫಾಲ್ಸ್ 600 ಅಡಿಗಳಷ್ಟು ಎತ್ತರದಿಂದ ಬಂಡೆಗಳ ನಡುವೆ ನರ್ತಿಸುತ್ತ್ತ ಮಿಂಚಿನ ಬಳ್ಳಿಯಂತೆ ಧುಮ್ಮುಕ್ಕುವ ನೀರಿಗೆ ಮೈಯೊಡ್ಡುವ ಸೊಬಗೆ ಚೆಂದ. ವರ್ಷದ ಹನ್ನೆರಡು ತಿಂಗಳೂ ಈ ಜಲಪಾತದಲ್ಲಿ ನಿರಂತರ ಜಲಧಾರೆ ಹರಿಯುವುದು ಇಲ್ಲಿಯ ವಿಶೇಷ. ಮಳೆಗಾಲದಲ್ಲಂತೂ ನೀರಿನ ಮಟ್ಟ ಹೆಚ್ಚಿಸಿಕೊಳ್ಳುವ ಮೂಲಕ ಜಲಪಾತ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೆಲ ದಿನಗಳಿಂದ ಕಳಸ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಎಲ್ಲ ಜಲಪಾತಗಳಿಗೂ ಹೊಸ ಕಳೆ ಬಂದಿದೆ. ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನಿಸುವಷ್ಟರ ಮಟ್ಟಿಗೆ ತಮ್ಮತ್ತ ಆಕರ್ಷಿಸುತ್ತಿವೆ.

ಮನಸೂರೆಗೊಳ್ಳುವ ಸುರುಮನೆ ಫಾಲ್ಸ್: ಜಗಲಬ್ಬೆ ಫಾಲ್ಸ್ ನೋಡಲು ಬರುವವರು ಹತ್ತಿರದಲ್ಲೇ ಇರುವ ಸುರುಮನೆ ಫಾಲ್ಸ್ ಕೂಡ ನೋಡಬಹುದು. 60 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ಸೊಬಗು ಇನ್ನೂ ಚೆಂದ. ಈ ಜಲಪಾತ ನೋಡಲು ಕಳಸದಿಂದ ಸುಮಾರು 5 ಕಿಮೀ ದೂರದಲ್ಲಿರುವ ಅಬ್ಬುಗುಡಿಗೆ ಎಂಬ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಖಾಸಗಿ ಜಮೀನಿನ ಮುಖಾಂತರ ಈ ಜಲಪಾತಕ್ಕೆ ಹೊಗಬೇಕಿದ್ದು,ನೋಡಲು ಸ್ಥಳೀಯರ ಸಹಕಾರ ಅಗತ್ಯವಾಗಿದೆ.

ಎಳನೀರು ಫಾಲ್ಸ್​ನಲ್ಲಿ ಹಾಲ್ನೊರೆ ನೋಟ: ಕಳಸ-ಕುದುರೆಮುಖ ದಾರಿಯಲ್ಲಿ ಸಂಸೆಯಲ್ಲಿ ಎಡಕ್ಕೆ ತಿರುಗಿ ಸುಮಾರು ಮೂರು ಕಿಮೀ ದೂರ ಸಾಗಿದರೆ ಇಲ್ಲಿ ಎಳನೀರು ಜಲಪಾತ ಕಾಣಸಿಗುತ್ತದೆ. ಅಪಾಯಕಾರಿಯಲ್ಲದ ಈ ಜಲಪಾತ 100 ಅಡಿಗಳಷ್ಟು ಎತ್ತರದಿಂದ ಬಂಡೆಗಳ ಮಧ್ಯೆ ಹಾಲ್ನೊರೆಯಂತೆ ಹರಿಯುವ ನೀರಿನ ಸೊಬಗನ್ನು ನೋಡಿಯೇ ಆನಂದಿಸಬೇಕು. ಬೇಸಿಗೆಯ ಸಂದರ್ಭದಲ್ಲಿ ನೀರಿನ ಹರಿವು ಕಡಿಮೆ ಇದ್ದು, ಮಳೆಗಾಲದಲ್ಲಿ ತುಂಬಿ ಹರಿಯುವ ಜಲಪಾತ ಕಾಣಬಹುದು.

ದೂರದಲ್ಲಿ ನೋಡಬೇಕು ಕಡಂಬಿ ಫಾಲ್ಸ್: ಕಳಸ-ಕುದುರೆಮುಖ ದಾರಿಯಲ್ಲಿ ಬಜಗೋಳಿ ರಸ್ತೆಯಲ್ಲಿ ಸಾಗಿದಾಗ ಪ್ರವಾಸಿಗರಿಗೆ ಮುಖ್ಯ ರಸ್ತೆಯ ಇಕ್ಕೆಲದಲ್ಲಿ ಹರಿಯುವ ಜಲಪಾತವೇ ಕಡಂಬಿ ಫಾಲ್ಸ್. 150 ಅಡಿಯಷ್ಟು ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಜಲಪಾತ ನೋಡಿದರೆ ಮತ್ತಷ್ಟು ಹೊತ್ತು ನೋಡಬೇಕು ಅನಿಸುತ್ತದೆ. ಇದು ಕುದುರೆಮುಖ ನ್ಯಾಷನಲ್ ಪಾರ್ಕ್ ವ್ಯಾಪ್ತಿಯಲ್ಲಿ ಬರುವುದರಿಂದ ದೂರದಿಂದಷ್ಟೇ ನೋಡಿ ಕಣ್ತುಂಬಿಸಿ ಕೊಳ್ಳಬೇಕು.

Leave a Reply

Your email address will not be published. Required fields are marked *