ಬ್ಯಾಡಗಿ ಸರ್ಕಾರಿ ಆಸ್ಪತ್ರೆ ಕೊಠಡಿ ಜಲಾವೃತ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಪಟ್ಟಣದಲ್ಲಿ ಗುರುವಾರ ಸುರಿದ ಮಳೆಗೆ ಸರ್ಕಾರಿ ಆಸ್ಪತ್ರೆ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ತಗ್ಗುಪ್ರದೇಶದ ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುವಂತಾಯಿತು.

ರಟ್ಟಿಹಳ್ಳಿ-ಬ್ಯಾಡಗಿ ರಸ್ತೆಗೆ ಅಡ್ಡಲಾಗಿ ಸಿಡಿ ನಿರ್ಮಾಣ ಸಂದರ್ಭದಲ್ಲಿ ದೊಡ್ಡ ಕಾಲುವೆಯಲ್ಲಿ ನೀರು ಹರಿಯದಂತೆ ತಡೆ ಹಾಕಲಾಗಿದೆ. ಹೀಗಾಗಿ ಕಾಲುವೆ ನೀರು ಹರಿಯಲು ಜಾಗವಿಲ್ಲದೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿದೆ. ರಾತ್ರಿಯಿಡೀ ನೀರು ಹೊರ ಹಾಕಲು ಆಸ್ಪತ್ರೆ ಸಿಬ್ಬಂದಿ ಹರಸಾಹಪಟ್ಟರು.

ಸುಮಾರು 50 ವೈದ್ಯ ಸಿಬ್ಬಂದಿ, ಕಾರ್ವಿುಕರು ಎಲ್ಲರೂ ಸತತ ಪ್ರಯತ್ನದಿಂದ ಆಸ್ಪತ್ರೆಯ ಕೊಳೆ ಹೊರ ಹಾಕಿದ್ದಾರೆ. ಆದರೆ, ಎಲ್ಲೆಡೆ ನೀರಿನಿಂದ ತೇವಾಂಶ ಹೆಚ್ಚಾಗಿದೆ.

ಇಲ್ಲಿನ ಬನಶಂಕರಿ ಬಡಾವಣೆ, ಆಡಿನವರ ಓಣಿ, ಮಲ್ಲೇಶ್ವರ ಬೆಟ್ಟ, ಶಿವಪುರ ಬಡಾವಣೆ, ಇಸ್ಮಾಪುರ ಓಣಿಗಳ ನಿವಾಸಿಗಳು ತೊಂದರೆಗೊಳಗಾದರು. ಪಟ್ಟಣದ ಮುಖ್ಯರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ರಸ್ತೆ ವಿಸ್ತರಣೆ ವೇಳೆ ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಜಂಟಿಯಾಗಿ ನಡೆಸಿದ ತೆರವು ಕಾರ್ಯಾಚರಣೆ ವೇಳೆ ಚರಂಡಿ ಕಿತ್ತು ಹೋಗಿವೆ. ಇದರಿಂದ ಮಳೆ ನೀರು ಎಲ್ಲೆಂದರಲ್ಲಿ ನಿಂತಿದೆ.

ಗುರುವಾರ ರಾತ್ರಿ ಆಸ್ಪತ್ರೆಗೆ ಮಳೆ ನೀರು ನುಗ್ಗಿದೆ. ಇದರಿಂದ ಸೂಕ್ಷ್ಮಯಂತ್ರಗಳಿಗೆ ತೊಂದರೆಯಾಗಿದೆ. ಹೀಗಾಗಿ ವಾರಗಳ ಕಾಲ ಯಾವುದೇ ದೊಡ್ಡಮಟ್ಟದ ಚಿಕಿತ್ಸೆ ಮಾಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ವಾಸ್ತವ ಅರಿತು ಸಹಕರಿಸಬೇಕು.

| ಡಾ.ಪುಟ್ಟರಾಜ, ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ

ಭಾರಿ ಮಳೆಯಿಂದ ಪಟ್ಟಣದ ಕೆಲವೆಡೆ ತೊಂದರೆಯಾಗಿದೆ. ಪುರಸಭೆ ಕಾರ್ವಿುಕರ ದುರಸ್ತಿಯಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಲೋಕೋಪಯೋಗಿ ಇಲಾಖೆ ಸಿ.ಡಿ. ನಿರ್ವಿುಸುತ್ತಿದ್ದು, ಕಾಲುವೆ ನೀರು ಹರಿಯಲು ಪರ್ಯಾಯ ಮಾರ್ಗ ಮಾಡದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.

| ವಿ.ಎಂ. ಪೂಜಾರ ಪುರಸಭೆ ಮುಖ್ಯಾಧಿಕಾರಿ

Leave a Reply

Your email address will not be published. Required fields are marked *