ಬೆಂಗಳೂರು: ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಮೈಸೂರ, ಹಾಸನ ಸೇರಿದಂತೆ ಶುಕ್ರವಾರವೂ ವರಣಾರ್ಭಟ ಮುಂದುವರೆದಿದ್ದು ಅಲ್ಲಲ್ಲಿ ಗುಡ್ಡ ಕುಸಿತ ಮುಂದುವರೆದಿದೆ. ಮಳೆಯಿಂದಾಗಿ ನದಿಗಳು ತುಂಬಿ ಹರಿದಿದ್ದು, ಪ್ರವಾಹದ ಭೀತಿಯೂ ಎದುರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಎಂಬಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ, ಬಂಟ್ವಾಳ ತಾಲ್ಲೂಕಿನ ಬುರಾಲು ಎಂಬಲ್ಲಿ ಧರೆ ಕುಸಿದಿದೆ. ಪುತ್ತೂರು ತಾಲ್ಲೂಕಿನ ಮಚ್ಚಿಮಲೆ- ಬಂಗಾರಡ್ಕ ರಸ್ತೆಯಲ್ಲಿ ಮಚ್ಚಿಮಲೆ ಎಂಬಲ್ಲಿ ರಸ್ತೆ ಬದಿಯ ಧರೆ 50 ಅಡಿ ಆಳಕ್ಕೆ ಕುಸಿದಿದೆ. ಈ ಮೂರು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.
ಬಾಳೆಹೊನ್ನೂರು ಸಮೀಪದ ಮಾಗುಂಡಿ-ಮಹಲ್ ಗೋಡು-ಕಳಸ ಸಂಪರ್ಕ ರಸ್ತೆ ಕಡಿತಗೊಂಡಿದೆ. ಈ ರಸ್ತೆಯಲ್ಲಿ ಸೇತುವೆ ಮೇಲೆಯೇ ನೀರು ಹರಿಯುತ್ತಿದ್ದು, ಎರಡೂ ಬದಿಯಲ್ಲಿದ್ದ ತಡೆ ಕಂಬಗಳು ಕೊಚ್ಚಿ ಹೋಗಿವೆ.
ಮಳೆ ಹಾನಿ ಪರಿಹಾರಕ್ಕಾಗಿ ಸರ್ಕಾರದಿಂದ 774.5 ಕೋಟಿ ರೂ. ಒದಗಿಸಲಾಗಿದ್ದು, 29 ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಗಾವಿ ಹಾಗೂ ಮಲೆನಾಡು ಸೇರಿದಂತೆ ಪ್ರವಾಹ ಉಂಟಾಗುವ ಆರು ಜಿಲ್ಲೆಗಳಲ್ಲಿ ಎನ್ಡಿಆರ್ಎಫ್ನ ಐದು ತುಕಡಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಅತಿವೃಷ್ಠಿಯಿಂದ ಸಮಸ್ಯೆಗೆ ಒಳಗಾಗುವವ 2,225 ಗ್ರಾಮಗಳನ್ನು ಗುರುತಿಸಿದ್ದು, ಅಲ್ಲಿ 2.38 ಲಕ್ಷ ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.
ಸಿಲಿಕಾನ್ ಸಿಟಿ ಬೆಂಗಲೂರಿನಲ್ಲೂ ಮೋಡ ಕವಿದ ವಾತಾವರಣವಿರಲಿದ್ದು, ಶನಿವಾರವೂ ಜಿಟಿಜಿಟಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.