ಹೊನ್ನಾಳಿ- ನ್ಯಾಮತಿಯಲ್ಲಿ ಧಾರಾಕಾರ ಮಳೆ l ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ
ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ತಾಲೂಕಿನಾದ್ಯಂತ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಸಂಜೆವರೆಗೂ ಧಾರಾಕಾರವಾಗಿ ಮಳೆ ಸುರಿಯಿತು. ತುಂಗಭದ್ರಾ ನದಿ ನೀರಿನ ಮಟ್ಟ 9.500 ಮೀಟರ್ ತಲುಪಿದೆ.
ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ವ್ಯಾಪಕವಾಗಿ ಮಳೆ ಬಂದರೆ ನದಿ ನೀರು ಅಪಾಯದಮಟ್ಟ ತಲುಪಬಹುದು. ಆದರೆ, ನದಿ ನೀರಿನ ಮಟ್ಟ ಹೆಚ್ಚಾದರೆ ಪಟ್ಟಣದ ನದಿಪಾತ್ರದ ಸಾರ್ವಜನಿಕರನ್ನು ಇಲ್ಲಿನ ಶಾದಿಮಹಲ್‌ನಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಪಟ್ಟರಾಜಗೌಡ ತಿಳಿಸಿದರು.
ರೈತರಿಗೆ ಉತ್ತಮ ಮಳೆ: ಜುಲೈ 1ರಿಂದ 11ರ ವರೆಗೆ ಹೊನ್ನಾಳಿ ತಾಲೂಕಿನಲ್ಲಿ ಶೇ. 60ಕ್ಕೂ ಹೆಚ್ಚು ವಾಡಿಕೆ ಮಳೆಯಾಗಿದೆ. ನ್ಯಾಮತಿ ತಾಲೂಕಿನಲ್ಲಿ ವಾಸ್ತವ ವಾಡಿಕೆಯಷ್ಟು ಮಳೆಯಾಗಿದೆ. ಇದರಿಂದ ರೈತರು ಬಿತ್ತನೆ ಮಾಡಿರುವ ಬೆಳೆಗೆ ಇನ್ನೂ ಹದಿನೈದು ಇಪ್ಪತ್ತು ದಿನಗಳವರೆಗೆ ಯಾವುದೇ ಸಮಸ್ಯೆ ಇಲ್ಲ.
ಬೀಜ ಬಿತ್ತನೆ: ಮೆಕ್ಕೆಜೋಳ 1350 ಹೆಕ್ಟೇರ್, ರಾಗಿ 300 ಹೆ, ತೊಗರಿ 1200 ಹೆ, ಶೇಂಗಾ 400 ಹೆ, ಹತ್ತಿ 250 ಹೆ, ಇತರೆ 1000 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ.
ಹೊನ್ನಾಳಿ ತಾಲೂಕಿನಲ್ಲಿ 28,785 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಸದ್ಯ 17150 ಹ. ಪ್ರದೇಶದಲ್ಲಿ ಬಿತ್ತನೆ ಆಗಿದೆ. ನ್ಯಾಮತಿ ತಾಲೂಕಿನಲ್ಲಿ 20,920 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಪ್ರಸ್ತುತ 17,000 ಹೆ. ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ ಮಾಹಿತಿ ನೀಡಿದರು.
ಕುಂದೂರಲ್ಲಿ ಅಧಿಕ: ಹೊನ್ನಾಳಿ 18.0 ಮಿಮೀ, ಸವಳಂಗ 16.6, ಬೆಳಗುತ್ತಿ 16, ಹರಳಹಳ್ಳಿ 13.2, ಗೋವಿನಕೋವಿ 14.8, ಕುಂದೂರು 19.2, ಸಾಸ್ವೇಹಳ್ಳಿ 14.8 ಮಿ.ಮೀ ಮಳೆಯಾಗಿದೆ.
ರಾಮೇಶ್ವರದಲ್ಲಿ 260 ಬಾಳೆ ಗಿಡಗಳು ನೆಲಕ್ಕೆ: ನ್ಯಾಮತಿ: ಕಳೆದೆರಡು ದಿನಗಳಿಂದ ತಾಲೂಕಿನಾದ್ಯಂತ ಆಗಾಗ್ಗೆ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಭಾನುವಾರ ವಿವಿಧ ಗ್ರಾಮಗಳಲ್ಲಿ ಮನೆಗಳು, ಬೆಳೆ ಹಾನಿ ಸಂಭವಿಸಿದೆ. ತಾಲೂಕಿನ ರಾಮೇಶ್ವರ ಗ್ರಾಮದ ಗುರುಶಾಂತಪ್ಪ ಎಂಬುವವರ ಜಮೀನಿನಲ್ಲಿ 260 ಬಾಳೆ ಗಿಡಗಳು ಹಾನಿಯಾಗಿವೆ. ಸೇವಾಲಾಲ್ ನಗರದ ನಾಗನಾಯ್ಕ ಎಂಬುವವರ ಮನೆ ಭಾಗಶಃ ಬಿದ್ದಿದೆ. ಕಂಚಿಗನಹಳ್ಳಿ ಗ್ರಾಮದ ಅನ್ನಪೂರ್ಣಮ್ಮ ಅವರ ಮನೆ ಬಿದ್ದಿರುವುದಾಗಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ ತಿಳಿಸಿದ್ದಾರೆ. ತಾಲೂಕಿನ ಸವಳಂಗ 16.6ಮಿಮೀ, ಬೆಳಗುತ್ತಿ 16, ಗೋವಿನಕೋವಿ 14.8 ಮಿ.ಮೀ. ಭಾನುವಾರ ಮಳೆಯಾಗಿರುವ ವರದಿಯಾಗಿದೆ.