ರಾಜ್ಯಾದ್ಯಂತ ಗುಡುಗು ಸಹಿತ ವರುಣನ ಅಬ್ಬರ: 12ರವರೆಗೆ ಮಳೆ ಮುಂದುವರಿಕೆ?

ಬೆಂಗಳೂರು: ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಮೇ 12ರವರೆಗೆ ಸಾಧಾರಣ ಅಥವಾ ಗುಡುಸಹಿತ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳವಾರ ಸಂಜೆ ಬೆಂಗಳೂರು ಸೇರಿ ಚಾಮರಾಜನಗರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಳೆ ಆಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಗುಡುಗು ಸಹಿತ ಭಾರಿ ಮಳೆ ಆಗಿದೆ.

ಮಲೆನಾಡಿನ ಕೆಲವೆಡೆ ಮಂಗಳವಾರ ಚದುರಿದಂತೆ ಮಳೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಒಂದು ತಾಸು ಉತ್ತಮ ಮಳೆಯಾಗಿದೆ. ಮೈಸೂರು ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಧಾರಾಕಾರ ಮಳೆಯಾಗಿದೆ.

ಕೋಲಾರ ಜಿಲ್ಲೆಯಲ್ಲಿ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ಆನೇಕಲ್​ನಲ್ಲಿ ಮಳೆಯಾಗಿದೆ.ಮತ್ತೊಂದೆಡೆ ಉತ್ತರ ಒಳನಾಡಿನಲ್ಲಿ ತಾಪಮಾನದ ಏರಿಕೆ ಕಂಡು ಬಂದಿದೆ. ಕಳೆದ ಕೆಲ ದಿನಗಳಿಂದ ಕಡಿಮೆ ಆಗಿದ್ದ ತಾಪಮಾನ ಇದ್ದಕ್ಕಿದಂತೆ 3 ರಿಂದ 4 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗಿದೆ.

ಮಳೆಗಾಗಿ ಪ್ರಾರ್ಥನೆ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಮೇ 10ರಂದು ಸಾಮೂಹಿಕ ವರ್ಣಮಂತ್ರ ಪಠಣ, ಮಳೆ ಬರಲೆಂದು ಪರ್ಯಾಯ ಪಲಿಮಾರು ಸ್ವಾಮೀಜಿ ನೇತೃತ್ವದಲ್ಲಿ ನಗರಸಭೆ ಸದಸ್ಯರ ಜತೆಗೂಡಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ನಗರದ ಎಲ್ಲ್ಲ ದೇವಸ್ಥಾನ, ಚರ್ಚ್, ಮಸೀದಿಯಲ್ಲಿ ಸಾರ್ವಜನಿಕರು ಮಳೆಗೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಶಾಸಕ ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ವರುಣ ಕೃಪೆಗೆ ಪ್ರಾರ್ಥಿಸಿ ರೈತಸಂಘದ ಪದಾಧಿಕಾರಿಗಳು ಹಾಗೂ ಭಕ್ತರು ಸ್ಥಳೀಯ ಕಾಳಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನೀರಿನ ಅಭಾವಕ್ಕೆ ಸಾಮೂಹಿಕ ವಿವಾಹ

ತೀವ್ರ ಬರ ಇಲ್ಲಿ ಸಾಮೂಹಿಕ ವಿವಾಹಕ್ಕೆ ನಾಂದಿ ಹಾಡಿದೆ. ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದರಿಂದ ಬಸವ ಜಯಂತಿ ದಿನದಂದೇ ಪ್ರತ್ಯೇಕ ವಿವಾಹ ಬದಲು 6 ಜೋಡಿಯ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಈ ಮೂಲಕ ನೀರಿನ ಮಹತ್ವವನ್ನು ಇತರರಿಗೂ ಸಾರಿದ್ದಾರೆ.

ಮುಂಗಾರು ಪೂರ್ವ ಮಳೆ ಆರಂಭ

ಬೆಂಗಳೂರು: ಮುಂಗಾರುಪೂರ್ವ ಮಳೆಯ ಪ್ರಭಾವ ಬೆಂಗಳೂರಿನಲ್ಲಿ ಆರಂಭವಾಗಿದೆ.ಮಂಗಳವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಭಾರಿ ಮಳೆಗೆ ನಗರದ ಜನತೆ ತತ್ತರಿಸಿದರು. ಗಾಳಿ ಸಹಿತ ಭಾರಿ ಮಳೆಗೆ ವಿವಿಧೆಡೆ 15ಕ್ಕೂ ಹೆಚ್ಚಿನ ಮರಗಳು ಬಿದ್ದಿದ್ದು, ಹತ್ತಾರು ವಾಹನಗಳು ಜಖಂಗೊಂಡಿವೆ.

ಫೊನಿ ಚಂಡಮಾರುತದ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಮುಂಗಾರುಪೂರ್ವ ಮಳೆ ಆರಂಭವಾಗಿದೆ. ಕೆಲ ದಿನಗಳಿಂದ ಮಳೆಯಾಗದ ಕಾರಣ ಬಿಸಿಲಿನ ತಾಪ ಹೆಚ್ಚಾಗಿತ್ತು. ಮಂಗಳವಾರ ರಾತ್ರಿ 7 ಗಂಟೆಗೆ ಆರಂಭವಾದ ಮಳೆ 2 ಗಂಟೆಗೂ ಹೆಚ್ಚು ಕಾಲ ಸುರಿಯಿತು. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

ಮರ ಬಿದ್ದು ಅನಾಹುತ: ಮಳೆ ಜತೆಗೆ ಗಾಳಿಯೂ ಜೋರಾಗಿದ್ದ ಪರಿಣಾಮ 15ಕ್ಕೂ ಹೆಚ್ಚಿನ ಮರಗಳು ಬಿದ್ದಿವೆ. ರಾಜಾಜಿನಗರದ ನಳಪಾಕ ಹೋಟೆಲ್ ಬಳಿ ಭಾರಿ ಗಾತ್ರದ ಮರ ಬಿದ್ದು ಎರಡು ಕಾರು, 10ಕ್ಕೂ

ಹೆಚ್ಚಿನ ಬೈಕ್​ಗಳು ಜಖಂಗೊಂಡವು. ಜಕ್ಕಸಂದ್ರ ಕರೆ ರಸ್ತೆ, ಡಾಲರ್ಸ್ ಕಾಲನಿ, ಶಿವಾನಂದ ವೃತ್ತ, ಭದ್ರಪ್ಪ ಲೇಔಟ್, ಎಚ್​ಎಂಟಿ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ, ಬೃಂದಾವನ ಬಸ್​ನಿಲ್ದಾಣ, ರಾಜಾಜಿನಗರ ಸುಗುಣ ಆಸ್ಪತ್ರೆ, ಸುಬ್ರಹ್ಮಣ್ಯನಗರ, ಡಾ. ರಾಜ್​ಕುಮಾರ್ ರಸ್ತೆ, ಬಸವನಗುಡಿ, ಆರ್​ಎಂವಿ 2ನೇ ಹಂತದ 7ನೇ ಅಡ್ಡರಸ್ತೆ, ಮಂಜುನಾಥನಗರ, ಗೊರಗುಂಟೆಪಾಳ್ಯ, ಬಾಗಲಗುಂಟೆ, ಹೆಗ್ಗನಹಳ್ಳಿ, ನವರಂಗ್, ಸೌತ್ ಎಂಡ್ ಸರ್ಕಲ್ ಸೇರಿ ವಿವಿಧೆಡೆ 15ಕ್ಕೂ ಹೆಚ್ಚು ಮರಗಳು ಬಿದ್ದಿವೆ.

ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿಯೇ ನಿಂತಿದ್ದರಿಂದ ಸಮಸ್ಯೆ ಉಲ್ಬಣಿಸಿತ್ತು.

ಬೆಂಗಳೂರು ಉತ್ತರದಲ್ಲಿ ದಾಖಲೆ ಮಳೆ

ಬೆಂಗಳೂರು ಉತ್ತರದಲ್ಲಿ ದಾಖಲೆ ಮಳೆಯಾಗಿದೆ. ದೊಡ್ಡಬಿದರಕಲ್ಲಿನಲ್ಲಿ 12.2 ಸೆಂ.ಮೀ. ಮಳೆ ಸುರಿದಿದೆ. ಚಿಕ್ಕಬಿದರಕಲ್ಲಿನಲ್ಲಿ 8.35 ಸೆಂ.ಮೀ., ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 8.15 ಸೆಂ.ಮೀ., ಹೆಗ್ಗನಹಳ್ಳಿ 4 ಸೆ.ಮೀ., ಹೇರೋಹಳ್ಳಿಯಲ್ಲಿ 2.4 ಸೆಂ.ಮೀ. ಮತ್ತು ಪ್ಯಾಲೆಸ್ ಗುಟ್ಟಹಳ್ಳಿ 2.05 ಸೆ.ಮೀ. ಮಳೆಯಾಗಿದೆ.